ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಕ್ಷ್ಮೀಶ


 ಲಕ್ಷ್ಮೀಶ


ಲಕ್ಷ್ಮೀಶನು 16ನೆಯ ಶತಮಾನದಲ್ಲಿದ್ದ ಕವಿ ಎಂದು ಭಾವಿಸಲಾಗಿದೆ. ಈತನ ಊರು ದೇವನೂರು.  ಈತನಿಗೆ 'ಕರ್ನಾಟಕ ಕವಿಚೂತವನ ಚೈತ್ರ' ಎಂಬ ಬಿರುದಿತ್ತು.

ಜೈಮಿನಿ ಭಾರತ ಲಕ್ಷ್ಮೀಶನ ಪ್ರಸಿದ್ಧ ಕಾವ್ಯ. ಇದು ಸಂಸ್ಕೃತ ಜೈಮಿನಿ ಭಾರತದ ಕನ್ನಡ ರೂಪವಾಗಿದ್ದು ವಾರ್ಧಕ ಷಟ್ಪದಿಯಲ್ಲಿದೆ. ಲಕ್ಷ್ಮೀಶನು ತನ್ನ ಕೃತಿಯಲ್ಲಿ ತನ್ನ ಕುರಿತು ಹೀಗೆ ಹೇಳಿದ್ದಾನೆ:

"ವಿದ್ವತ್ಸಭಾವಲಯಮರಿಯೆ ವಿರಚಿಸಿದಂ ಭ|
ರದ್ವಾಜಗೋತ್ರ ಭವನಣ್ಣಮಾಂಕನ ಸುತಂ|
ಸದ್ವಿನುತ ಕರ್ನಾಟಕವಿಚೂತವನಚೈತ್ರ ಲಕ್ಷ್ಮೀಶನೆಂಬೋರ್ವನು||

ಅವನ ಕಾವ್ಯದಿಂದ ನಮಗೆ ತಿಳಿಯುವುದು, ಅವನು ಭಾರದ್ವಾಜ ಗೋತ್ರದ ಅಣ್ಣಮಾಂಕನ ಮಗ ಎಂದು ಮಾತ್ರಾ.

ವರಕವಿಯಾದ ಲಕ್ಷ್ಮೀಶನು ಕುಮಾರವ್ಯಾಸನ ನಂತರದ ಹೆಚ್ಚು ಜನಪ್ರಿಯ ಕವಿ. ಸಂಸ್ಕೃತ, ಹಳಗನ್ನಡ ಮತ್ತು ಹೊಸಗನ್ನಡ ಇವುಗಳಲ್ಲಿ ಸಂಪೂರ್ಣ ಪಾಂಡಿತ್ಯ ಪಡೆದವನು. ರಸಗರ್ಭಿತವಾದ ಜೈಮಿನಿ ಭಾರತ ಉದ್ಗ್ರಂಥವನ್ನು ಮೂವತ್ನಾಲ್ಕು ಸಂಧಿಗಳಾಗಿ ವಿಭಾಗಿಸಿ ಜನರ ಮನಮೆಚ್ಚುವಂತೆ ವಾರ್ಧಿಕ ಷಟ್ಪದಿಯಲ್ಲಿ ಬರೆದಿದ್ದಾನೆ. ಮಹಾನ್ ವಿದ್ವಾಂಸರಾದ ಆರ್. ನರಸಿಂಹಾಚಾರ್ಯರು ತಮ್ಮ 'ಕರ್ನಾಟಕ ಕವಿಚರಿತೆ'ಯಲ್ಲಿ, ಈ ಬಗೆಯ ಷಟ್ಪದಿಯ ಅತ್ಯುತ್ತಮ ಮಾದರಿಯನ್ನು ಈ ಕಾವ್ಯದಲ್ಲಿ ಕಾಣಬಹುದು ಎಂದು ಬರೆದಿದ್ದಾರೆ.

ವ್ಯಾಸಭಾರತದಲ್ಲಿ ಅಶ್ವಮೇಧ ಪರ್ವವು ಅಷ್ಟು ವಿಸ್ತಾರವಾಗಿಲ್ಲ. ವ್ಯಾಸಮುನಿಯ ಪ್ರಿಯ ಶಿಷ್ಯನಾದ ಜೈಮಿನಿ ಮುನಿಯು ಅಶ್ವಮೇಧ ಪರ್ವವನ್ನು ವಿಸ್ತಾರವಾದ ಕಥಾ ಸಂವಿಧಾನದೊಡನೆ ಸಂಸ್ಕೃತದಲ್ಲಿ ರಚಿಸಿದ್ದಾನೆ. ಲಕ್ಷ್ಮೀಶನು ಅದನ್ನು ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಕನ್ನಡಕ್ಕೆ ಸ್ವಂತ ಕಾವ್ಯವೋ ಎನ್ನುವಂತೆ ಅಲಂಕಾರ, ನವರಸಭರಿತವಾಗಿ ರಚಿಸಿರುವುದೇ ಕನ್ನಡ ಜೈಮಿನಿ ಭಾರತ. ಈ ಕಾವ್ಯದಲ್ಲಿ ಭಾಗವತ ದೃಷ್ಟಿಯಾದ  ಕೃಷ್ಣನ ಮಹಿಮೆಯೇ ವಿಶೇಷವಾಗಿದೆ. ವ್ಯಾಸ ಭಾರತದ ಮೊದಲ 10 ಪರ್ವಗಳನ್ನು ಕುಮಾರವ್ಯಾಸನು ಕನ್ನಡಕ್ಕೆ ತಂದರೆ ಉಳಿದ ಎಂಟು ಪರ್ವಗಳನ್ನು ತಿಮ್ಮಣ್ಣ ಕವಿಯು ಕನ್ನಡದಲ್ಲಿ ಮೂಡಿಸಿದ್ದಾನೆ. ಲಕ್ಷ್ಮೀಶನು ಮಹಾಭಾರತದ ಅಶ್ವಮೇಧ ಪರ್ವವನ್ನು ಮಾತ್ರಾ ವಿಸ್ತರಿಸಿ ಬರೆದಿದ್ದಾನೆ.

ದೇವನೂರಿನ ಲಕ್ಷ್ಮೀಕಾಂತ ದೇವಾಲಯದಲ್ಲಿ ಲಕ್ಷ್ಮೀಶನ ವಿಗ್ರಹವನ್ನು ಸ್ಥಾಪಿಸಲಾಗಿದೆ.  ಇಂದೂ ದೇವನೂರಿನಲ್ಲಿ ಲಕ್ಷ್ಮೀಶನಿಗೆ ಅಲ್ಲಿನ ವಿಶೇಷ ಪೂಜೆಗಳಲ್ಲಿ ಪರಂಪರಾಗತವಾಗಿ ಬಂದ 'ತಾಂಬೂಲ ಗೌರವ'ವಿದೆ. ವಿಶೇಷವೆಂದರೆ ಅಲ್ಲಿ 'ಲಕ್ಷ್ಮೀಶನ ಮನೆದಳ'ವಿದೆ. ಲಕ್ಷ್ಮೀಶನ ಜಯಂತಿ ಉತ್ಸವ, ಅವನ ಕಾವ್ಯ ವಾಚನಗಳು ಅಲ್ಲಿ ನಡೆಯುತ್ತ ಬಂದಿವೆ.

ಪಾವನಕೆ ಪಾವನಂ ಮಂಗಳಕೆ ಮಂಗಳಂ
ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಬಿರುಗಾಳಿ ಪೊಡೆಯಲ್ಕೆ ಫಲಿತ ಕದಳಿ ಮುರಿದು ಇಳೆಗೆ ಒರಗುವಂತೆ
ತೆರೆ ತೆರೆದ ಅಲ್ಲೋಲ ಕಲ್ಲೋಲ ಮಾಲೆಗಳ ಲೀಲೆಗಳ
ಹಿಂದೆ ಪ್ರಹ್ಲಾದನ o ಪಾಲಿಸಿದೆ ಗಡ 
ತೊಳಪ ಸಾಲಗ್ರಾಮದುಪಲದ ತಿ ಮಹಿಮೆಯಿಂದ
ತಾತ ನಿನಗಿಂತಾಗ ಬಹುದೇ
ವರ ಸುಪ್ರಸನ್ನ ವದನದ 
ಒಂಭತ್ತು ಸಾಸಿರ ವರುಷ o ಓಲೈಸಿದುದು ರಾಘವನ ನಿಖಿಲ ಭೂಪತಿಚಯಂ ಪ್ರೀತಿಯಿಂದೆ 
ಪುಣ್ಯಮಿದು ಕೃಷ್ಣ ಚರಿತಾಮೃತಮ್ (ಹೀಗೆ ಲಕ್ಷ್ಮೀಶನ ಕಾವ್ಯಧಾರೆಯನು ನೆನಪಿಸಿದವರು ವಿದ್ವಾಂಸರೂ ಗಮಕಿಗಳೂ ಆದ ಎಂ. ಆರ್. ಸತ್ಯನಾರಾಯಣ Sathyanarayana M R 🌷🙏🌷)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ