ಯಂಡಮೂರಿ
ಯಂಡಮೂರಿ ವೀರೇಂದ್ರನಾಥ್
ಯಂಡಮೂರಿ ವೀರೇಂದ್ರನಾಥ್ ಬಹುಜನಪ್ರಿಯ ಬರಹಗಾರರು. ಮೂಲತಃ ತೆಲುಗಿನ ಬರಹಗಾರರಾದರೂ ಅವರ ಕಾದಂಬರಿಗಳು ಅನೇಕ ಭಾಷಾಂತರಕಾರರ ಮೂಲಕ ಕನ್ನಡಿಗರ ಮನೆ ಮಾತಾಗಿವೆ. ಅವರ ಜನಪ್ರಿಯ ಬರಹದ ಶೈಲಿ ಜನಸಾಮಾನ್ಯರಿಗೆ ಅಚ್ಚುಮೆಚ್ಚು.
ಯಂಡಮೂರಿ ವೀರೇಂದ್ರನಾಥ್ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯವರು. 1948ರ ನವೆಂಬರ್ 14ರಂದು ರಜೋಲ್ ಎಂಬಲ್ಲಿ ಜನಿಸಿದರು. ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯವರಾದ ಅವರು ಆಂಧ್ರಪ್ರದೇಶ ರಾಜ್ಯ ಹಣಕಾಸು ನಿಗಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 5 ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ ನಂತರ ಆಂಧ್ರ ಬ್ಯಾಂಕ್‍ನಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಹೀಗೆ ಹಿರಿಯ ಕಾರ್ಯನಿರ್ವಾಹಕರಾಗಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅವರು 15 ವರ್ಷಗಳ ಕಾಲ ಕೆಲಸ ಮಾಡಿದರು.
ಯಂಡಮೂರಿ ವೀರೇಂದ್ರನಾಥ್ ಪ್ರಸಿದ್ಧರಾಗಿದ್ದು ಕಾದಂಬರಿಕಾರರಾಗಿ. ಅವರ ಕೃತಿಗಳು ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯಗೊಂಡಿವೆ. ಅವರು ಪ್ರೇರಣಾತ್ಮಕ ಭಾಷಣಕಾರರಾಗಿದ್ದು ವಿಶ್ಚದಾದ್ಯಂತ ಸಾವಿರಾರು ಭಾಷಣಗಳನ್ನೂ ಮಾಡಿದ್ದಾರೆ. ಇವರು ರಚಿಸಿದ ‘ವಿಜಯಕ್ಕೆ ಐದು ಮೆಟ್ಟಿಲು’ ಎಂದು ಕನ್ನಡದಲ್ಲಿ ಮೂಡಿಬಂದಿರುವ ತೆಲುಗಿನ ಮೂಲಕೃತಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಮಾಡಿದ್ದು ತೆಲುಗು ಸಾಹಿತ್ಯದಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ. ಕನ್ನಡವನ್ನೊಳಗೊಂಡಂತೆ ವಿವಿಧ ಭಾಷೆಗಳಲ್ಲೂ ಅದು ಯಶಸ್ಸು ಗಳಿಸಿತು. ಅವರು ಕಾಕಿನಾಡದಲ್ಲಿ ಆಶ್ರಮವನ್ನು ನಿರ್ಮಿಸಿದರು. ಬುಡಕಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣದ ಉಚಿತವಾಗಿ ಕಲ್ಪಿಸಲು ಬೃಹತ್ ಯೋಜನೆ ಮೂಡಿಸಿದರು. 13 ಜಿಲ್ಲಾ ಕೇಂದ್ರಗಳಲ್ಲಿ ಆಂಧ್ರಪ್ರದೇಶದಾದ್ಯಂತ ಸುಮಾರು 40000 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲವಾಗಿದ್ದಾರೆ.
ಯಂಡಮೂರಿ ವೀರೇಂದ್ರನಾಥರ ಅನೇಕ ಕಾದಂಬರಿಗಳು ತೆಲುಗಿನಲ್ಲಿ ಚಲನಚಿತ್ರಗಳಾಗಿ ರೂಪುಗೊಂಡಿವೆ. ಅವರು ತೆಲುಗಿನಲ್ಲಿ ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದರು, ಮೊದಲನೆಯದು ಯಮುನಾ ನಟಿಸಿದ ಅಗ್ನಿಪ್ರವೇಶಂ, ಮತ್ತು ಚಿರಂಜೀವಿಯವರೊಂದಿಗೆ ಸ್ಟುವರ್ಟ್‌ಪುರಂ ಪೊಲೀಸ್ ಠಾಣೆ. ಎರಡೂ ಕಥೆಗಳು ಅವರ ಸ್ವಂತ ಕಾದಂಬರಿಗಳನ್ನು ಆಧರಿಸಿದ್ದವು. ಈ ಚಿತ್ರಗಳು ಆರ್ಥಿಕ ಯಶಸ್ಸು ಗಳಿಸಲಿಲ್ಲ. ಅವರು 'ಅಭಿಲಾಷ', 'ಚಾಲೆಂಜ್' ಮತ್ತು 'ಜಗದೇಕ ವೀರುಡು ಅತಿಲೋಕ ಸುಂದರಿ' ಸೇರಿದಂತೆ 30 ಕ್ಕೂ ಹೆಚ್ಚು ಚಲನಚಿತ್ರಗಳೊಂದಿಗೆ ಬೆಸೆದಿದ್ದಾರೆ. ಅವರ ಕಿರುತೆರೆಯ ಧಾರಾವಾಹಿಗಳು ಅತ್ಯುತ್ತಮ ನಿರ್ದೇಶನ ಮತ್ತು ನಿರ್ಮಾಣಕ್ಕಾಗಿ ಗೋಲ್ಡನ್ ನಂದಿ ಪ್ರಶಸ್ತಿಗಳನ್ನು ಗೆದ್ದಿವೆ. ಮೃಣಾಲ್ ಸೇನ್ ನಿರ್ದೇಶನದ ಯಂಡಮೂರಿ ಅವರ ಕಥೆಯಾಧಾರಿತ ಚಿತ್ರ, 'ಒಕಾ ಊರಿ ಕಥಾ (ಒಂದು ಊರಿನ ಕಥೆ)' ಭಾರತದ ರಾಷ್ಟ್ರಪತಿಗಳಿಂದ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅವರ ಚಲನಚಿತ್ರ ವೆನ್ನೆಲ್ಲೋ ಆಡಪಿಳ್ಳ (ವೆನ್ನೆಲ್ಲೋ ಆಡಪಿಳ್ಳ) ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 1982ರಲ್ಲಿ ಆಂಧ್ರಜ್ಯೋತಿ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ಅವರು ರಾಜ್ಯದ "4 ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ" ಒಬ್ಬರಾಗಿದ್ದರು. ಅವರ ಕಥೆಯಾಧಾರಿತ ಚಿತ್ರ 'ಬೆಳದಿಂಗಳ ಬಾಲೆ' ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿತು.
ಯಂಡಮೂರಿ ವೀರೇಂದ್ರನಾಥರ ಅನೇಕ ಕಾದಂಬರಿಗಳನ್ನು ನಾನು ತುಂಬಾ ಇಷ್ಟಪಟ್ಟು ಓದಿದ್ದೇನೆ. ಮರಣ ಮೃದಂಗ ಓದಿ ಮುಗಿಸಿ ಅದರಲ್ಲಿನ ರೋಚಕತೆ ಜೊತೆಗೆ ಅವರು ಆ ಕೃತಿಯಲ್ಲಿ ನೀಡಿರುವ ನಿಜ ಭೂಗತ ದೊರೆಗಳ ಕುರಿತಾದ ವಿವರ ವಿಸ್ಮಯ ಹುಟ್ಟಿಸಿತ್ತು. ಅವರ ಆನಂದೋಬ್ರಹ್ಮ, ತುಳಸಿದಳ, ಲೇಡೀಸ್ ಹಾಸ್ಟೆಲ್, ದುಡ್ಡು ದುಡ್ಡು, ಪ್ರಣಯ ಪ್ರಬಂಧ, ಬೆಳದಿಂಗಳ ಬಾಲೆ ಹೀಗೆ ಅವರ ಅನೇಕಾನೇಕ ಕಾದಂಬರಿಗಳ ಹೆಸರು ನೆನಪಾಗುತ್ತೆ.
ಅತಿ ಹೆಚ್ಚು ಬರೆಯುವವರು ಸ್ವಲ್ಪ ಯಾಂತ್ರಿಕತೆಗೆ ತಲುಪುತ್ತಾರೆ ಎಂಬುದನ್ನು ಅಲ್ಲಗೆಳೆಯಲಾಗದು. ಆದರೆ, ಯಂಡಮೂರಿ ವೀರೇಂದ್ರನಾಥರ ಅನೇಕ ಕಥೆಗಳು ಹೊಸ ಹೊಸ ಚಿಂತನೆಗಳತ್ತ ಮನವನ್ನು ಹರಿಸುವುದು, ಒಂದಷ್ಟು ಲಾವಣ್ಯಕರ ಲೇಪನದ ಆಕರ್ಷಣೆ ಮತ್ತು ಸುಲಲಿತ ಓದಿನ ಆಕರ್ಷಣೆ ಮುಂತಾದವುಗಳಿಂದ ನಮಗೆ ಒಂದಷ್ಟು ಕಾಲ ಹುಚ್ಚು ಹಿಡಿಸಿತ್ತು ಎಂಬುದಂತೂ ನಿಜ.
On the birthday of popular novelist Yandamuri Veerendranath
ಕಾಮೆಂಟ್‌ಗಳು