ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜಶೇಖರ ಮನ್ಸೂರ


 ರಾಜಶೇಖರ ಮನ್ಸೂರ

ಪಂಡಿತ್ ರಾಜಶೇಖರ ಮನ್ಸೂರ ಅವರು ಹಿಂದುಸ್ಥಾನಿ ಸಂಗೀತದ ಮೇರು ಗಾಯಕ, ಅಪ್ರಚಲಿತ ರಾಗಗಳನ್ನು ಪ್ರಸ್ತುತಪಡಿಸುತ್ತಿದ್ದ ದೇಶದ ಕೆಲವೇ ಮಹಾನ್ ಗಾಯಕರಲ್ಲಿ ಒಬ್ಬರಾಗಿದ್ದವರು. 

ರಾಜಶೇಖರ ಮನ್ಸೂರ  1942ರ ಡಿಸೆಂಬರ್ 16ರಂದು ಜನಿಸಿದರು.   ತಂದೆ ಜೈಪುರ-ಅತ್ರೌಲಿ ಘರಾನಾದ ಮೇರು ಗಾಯಕ ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರು.  ತಂದೆಯೇ ಇವರಿಗೆ  ಗುರುವೂ ಆದರು. 

ರಾಜಶೇಖರ ಮನ್ಸೂರ ಅವರು ತಮ್ಮ 18ನೇ ವಯಸ್ಸಿನಲ್ಲಿ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಚಿನ್ನದ ಪದಕ ಹಾಗೂ ಆಕಾಶವಾಣಿ ಯುವ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು. ರಾಜಶೇಖರ ಮನ್ಸೂರ ಅವರು ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ವೇಲ್ಸ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದರು.

ತಂದೆ ದಿವಂಗತ ಡಾ.ಮಲ್ಲಿಕಾರ್ಜುನ ಮನ್ಸೂರ ಅವರಂತೆಯೇ ಹಿಂದೂಸ್ಥಾನೀ ಸಂಗೀತದ ಜೈಪುರ-ಅತ್ರೌಲಿ ಘರಾಣೆಯ ಅಗ್ರ ಗಾಯಕರಾಗಿದ್ದ ರಾಜಶೇಖರ ಮನ್ಸೂರ ಅವರು ದುರ್ಲಭ ಹಾಗೂ ವಿರಳಾತಿ ವಿರಳ ರಾಗಗಳನ್ನು ಪ್ರಸ್ತುತಪಡಿಸುವಲ್ಲಿ ಸಿದ್ಧ ಹಸ್ತರಾಗಿದ್ದರು. 

ರಾಜಶೇಖರ ಮನ್ಸೂರ ಅವರು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲೂ ಬೋಧಿಸಿದ್ದರು. 

ರಾಜಶೇಖರ ಮನ್ಸೂರ ಅವರು ತಂದೆಯ ಗರಡಿಯಲ್ಲೇ ಸಂಗೀತವನ್ನು ಗುರು-ಶಿಷ್ಯ ಪರಂಪರೆಯಲ್ಲಿ ಅಭ್ಯಾಸ ಮಾಡಿದವರು. ತಂದೆ ಮಲ್ಲಿಕಾರ್ಜುನ ಮನ್ಸೂರ ಅವರಂತೆಯೇ ದೇಶದ ಅಗ್ರಪಂಕ್ತಿ ಶ್ರೇಷ್ಠ ಗಾಯಕರಲ್ಲಿ ಒಬ್ಬರೆನಿಸಿದ್ದರು.  ತಮ್ಮ ತಂದೆಯವರ ಜೊತೆಯಲ್ಲೇ ಅನೇಕ ಕಚೇರಿಗಳನ್ನು ನೀಡಿ ಮುಂದೆ ಸ್ವತಂತ್ರವಾಗಿ ಕಚೇರಿ ನೀಡುತ್ತ ಬೆಳೆದರು.

ಪಂಡಿತ್ ರಾಜಶೇಖರ ಮನಸೂರರು 2005-2008 ಅವಧಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಗೌರವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್‍ಸೇನ್ ಅಕಾಡೆಮಿ ಗೌರವಗಳೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. 

ಪಂಡಿತ್ ರಾಜಶೇಖರ ಮನ್ಸೂರ ಅವರು 2022ರ ಮೇ 1ರಂದು ಈ ಲೋಕವನ್ನಗಲಿದರು. 


On the birth anniversary of great musician Pandit Rajashekhara Mansoor 🌷🙏🌷




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ