ನಾ. ಕಸ್ತೂರಿ
ನಾ. ಕಸ್ತೂರಿ
ಕಳೆದ ಶತಮಾನದಲ್ಲಿ ಕನ್ನಡ ನಾಡು ಕಂಡ ದಿವ್ಯ ಹೃದಯಗಳಲ್ಲಿ ನಾ. ಕಸ್ತೂರಿ ಪ್ರಮುಖರು. ‘Humour’ ಎಂಬ ಲ್ಯಾಟಿನ್ ಶಬ್ಧದ ಮೂಲ ಅರ್ಥ ‘ಕಂಪು-ರುಚಿ’ ಎಂದು. ಈ ಎರಡೂ ಗುಣಗಳನ್ನು ಕಸ್ತೂರಿ ಅವರ ನಾಟಕ-ಕಾದಂಬರಿ-ಅಣಕವಾಡು ಇತ್ಯಾದಿಗಳಲ್ಲಿ ಕಾಣಬಹುದು.
1943ರಲ್ಲಿ ಪ್ರಕಟವಾದ ‘ಪಾತಾಳದಲ್ಲಿ ಪಾಪಚ್ಚಿ’ ಎಂಬ ಶಿಶುಸಾಹಿತ್ಯ ಕಸ್ತೂರಿ ಅವರ ಮೊದಲ ಪ್ರಕಟಣೆ. ಇಂಗ್ಲೆಂಡಿನ ಚಾರಲ್ಸ್ ಲುಡ್ವಿಗ್ ಡಾಡ್ಜ್ ಸನ್ ಅವರ ಲೋಕಪ್ರಸಿದ್ಧ ‘Alice in Wonder Land’ ಗ್ರಂಥದ ಆಧಾರದ ಮೇಲೆ ರಚಿತವಾದ ಕೃತಿ. ಕನ್ನಡದ ಸ್ವಂತ ಕೃತಿಯಂತೆ ಪಾಪಚ್ಚಿ ನಮ್ಮ ಮನೆಯ ಅಂಗಳದ್ದೇ ಮಗು ಎಂಬಂತೆ ಕಸ್ತೂರಿ ಚಿತ್ರಿಸಿದ್ದಾರೆ. ನೀರಸ ಬದುಕಿನ ಬಿಗಿಯಾದ ಬಂಧನದಿಂದ ಬಿಡುಗಡೆ ಹೊಂದಲು, ಮುಕ್ತ ಆಗಸದಲ್ಲಿ ಹಕ್ಕಿಯಂತೆ ಹಾರಲು ಜೀವದ ಮನಸ್ಸು ಒಂದೊಂದು ಕ್ಷಣವಾದರೂ ಬಯಸುತ್ತದಷ್ಟೇ? ಈ ಹಂಬಲದ ಮಗುಮನಸ್ಸಿನ ಪ್ರತೀಕವಾಗಿದ್ದಾಳೆ ಪುಟ್ಟ ಪಾಪಚ್ಚಿ. ಸ್ವಭಾವತಃ ತಮ್ಮನ್ನು ಸೋಮಾರಿ ಎಂದು ಭಾವಿಸುವ ಕಸ್ತೂರಿ, ತಮಗೆ ಇದನ್ನು ಮೂಡಿಸಲು ಆಗಾಗ ತಿವಿದು ಎಚ್ಚರಿಸಿದವರು ಅವರ ಆಪ್ತ ಗೆಳೆಯ ಕುವೆಂಪು ಎನ್ನುತ್ತಾರೆ. ಕಸ್ತೂರಿ ಮತ್ತು ರಾಷ್ಟ್ರಕವಿ ಕುವೆಂಪು ಆಪ್ತ ಗೆಳೆಯರು. ಅಂತೆಯೇ ಅವರ ಕಿರಿಯ ಕನ್ನಡದ ಮತ್ತೊಬ್ಬ ರಾಷ್ಟ್ರ ಕವಿ ಜಿ. ಎಸ್. ಶಿವರುದ್ರಪ್ಪ ಕೂಡ ಕಸ್ತೂರಿ ಅವರ ಪರಮಾಪ್ತರಾಗಿದ್ದರು.
ಕಸ್ತೂರಿಯವರ ಕನ್ನಡದ ಸೊಗಸನ್ನು ಇಲ್ಲಿ ಉದಾಹರಿಸಬೇಕು. “ಪಾಪ! ಪಾಪಚ್ಚಿ. ಅಕ್ಕನ ಪಕ್ಕ ಹುಲ್ಲಿನ ಮೇಲೆ ಎಷ್ಟು ಹೊತ್ತು ಸುಮ್ಮನೆ ಒರಗಿದ್ದಾಳು! ಒಂದೆರಡು ಸಲ, ಬೇಸರವಾಗಿ ಅಕ್ಕನ ಕೈಯಲ್ಲಿದ್ದ ಪುಸ್ತಕದ ಮೇಲೆ ಕಣ್ಣೋಡಿಸಿದಳು. ಆದರೆ ಅದರಲ್ಲಿ ಚಿತ್ರಗಳೇ ಇರಲಿಲ್ಲ. ‘ಥೂ, ಚಿತ್ರಗಳಿಲ್ಲದ ಪುಸ್ತಕಗಳನ್ನು ಏಕೆ ಅಚ್ಚು ಹಾಕುತ್ತಾರೆಯೋ’ ಎಂದು ಗೊಣಗಿಕೊಂಡಳು. ‘ಹೂವಿಲ್ಲದ ಗಿಡ’ ಎಂದುಕೊಂಡಳು.”
“ಮೇಜಿನ ಮೇಲೆ ಒಂದು ಸಣ್ಣ ಶೀಷೆ. ಒಂದು ಪಾವು ನೀರು ಹಿಡಿಯಬಹುದು. ಅದರ ಕತ್ತಿಗೊಂದು ಪಟ್ಟಿ. ಅದರಲ್ಲಿ “ಕುಡಿಯಿರಿ” ಎಂದು ದಪ್ಪ ದಪ್ಪ ಅಕ್ಷರಗಳಲ್ಲಿ ಅಚ್ಚುಹಾಕಿತ್ತು. ಆದರೆ ಅದನ್ನು ಓದಿದ ತಕ್ಷಣ ದಡ್ಡ ಹುಡುಗಿಯ ಹಾಗೆ ಪಾಪಚ್ಚಿ ತೆಗೆದುಕೊಂಡು ಕುಡಿದುಬಿಟ್ಟಳೆಂದು ತಿಳಿಯಬೇಡಿ... ಇಲ್ಲ ಪಾಪಚ್ಚಿ ಅಷ್ಟು ಪೆಚ್ಚು ಹುಡುಗಿಯೇನೂ ಅಲ್ಲ. ಶಾಮುವಾಗಿದ್ದರೆ ಗಬಕ್ ಎಂದು ಕುಡಿದರೂ ಕುಡಿಯುತ್ತಿದ್ದನೇನೋ?’
ಎಂತಹ ಕಂಪು-ಬನಿ ಈ ಮಾತುಗಳಲ್ಲಿ!
ಇಷ್ಟು ಸೊಗಸಾದ ಕನ್ನಡವನ್ನು ಬರೆದ ಕಸ್ತೂರಿ ಕನ್ನಡಿಗರಲ್ಲ. ಶ್ರದ್ಧೆ-ಪ್ರಾಮಾಣಿಕ ಪ್ರಯತ್ನಗಳಿದ್ದರೆ ಅನ್ಯಭಾಷೆಯೊಂದರ ಮೇಲೆ ಎಂತಹ ಪ್ರಭುತ್ವ ಸಂಪಾದಿಸಬಹುದು ಎಂಬುದಕ್ಕೆ ಮಲೆಯಾಳಂ ಭಾಷೆಯಾಡುತ್ತಿದ್ದ ಕಸ್ತೂರಿ ಅವರೇ ಸಾಕ್ಷಿ. ಕಸ್ತೂರಿ ಅವರ ಶಕ್ತಿಯನ್ನು ಕುವೆಂಪು ಅವರ ಮಾತುಗಳಲ್ಲೇ ಕೇಳಬೇಕು. “ಮೊದಲು ನನ್ನ ಕವನಗಳ ಯೋಗ್ಯತೆಯನ್ನು ಕಂಡುಹಿಡಿದು ನನಗೆ ಉತ್ತೇಜನ ಕೊಟ್ಟವರೇ ಕಸ್ತೂರಿ ಮತ್ತು ಸಿದ್ಧೇಶ್ವರಾನಂದರು” ಎಂದು ಕುವೆಂಪು ಬರೆಯುತ್ತಾರೆ. ಅಂದರೆ ನಾವು ಕಸ್ತೂರಿ ಅವರ ಶಕ್ತಿ ಎಷ್ಟು ಎಂಬುದನ್ನು ಊಹಿಸಬಹುದು.
‘ಕಸ್ತೂರಿ ರಂಗನಾಥ ನಾರಾಯಣ ಶರ್ಮ’ ಎಂಬುದು ಕಸ್ತೂರಿ ಅವರ ಪೂರ್ಣ ಹೆಸರು. ಅವರು ಜನಿಸಿದ್ದು 1897 ಡಿಸೆಂಬರ್ 25 – ಕ್ರಿಸ್ಮಸ್ ದಿನದಂದು. ಕೇರಳದ ಪುಟ್ಟ ಗ್ರಾಮ ತ್ರಿಪುನಿತ್ತೂರ್ ಎಂಬಲ್ಲಿ. ಹುಟ್ಟಿದ ಮಗು ತೀರಾ ದುರ್ಬಲ. ಅಲ್ಲದೆ ಎರಡೂ ಕೈಗಳಲ್ಲೂ ಆರಾರು ಬೆರಳುಗಳು ಇದ್ದವಂತೆ! ಅಜ್ಜಿಗೆ ಇದೆಲ್ಲ ಅನಿಷ್ಟ ಎನಿಸಿ ಚಕಚಕನೆ ಕತ್ತರಿಯಿಂದ ಕತ್ತರಿಸಿ ಹಾಕಿಬಿಟ್ಟಳಂತೆ – ಸಿಸೇರಿಯನ್ ಆಪರೇಷನ್ ಎಂದು ಕಸ್ತೂರಿ ಆ ನೋವನ್ನು ನಗೆಯಾಡುತ್ತಿದ್ದರು. ಅದರಿಂದ ದೊಡ್ಡ ರಾಮಾಯಣ ಆಗಿ ಮಗು ಉಳಿದ್ದದ್ದು ಒಂದು ದೊಡ್ಡ ಕಥೆ. ಚಿಕ್ಕವಯಸ್ಸಿನಲ್ಲೇ ತಂದೆ ಸಾವಿಗೀಡಾದರು. ಇಪ್ಪತ್ತೆರಡು ವರ್ಷದ ಎಳೆಯ ವಿಧವೆ ತಾಯಿ ಬಡತನದಲ್ಲಿದ್ದರೂ ತನ್ನ ಒಡವೆಗಳನ್ನೆಲ್ಲಾ ಮಾರಿ ಮಗನನ್ನು ವಿದ್ಯಾವಂತನನ್ನಾಗಿಸುವ ಛಲ ತೊಟ್ಟರು. ಮಗ ಕಸ್ತೂರಿ ತಾಯಿಗೆ ನಿರಾಶೆ ಮಾಡಲಿಲ್ಲ. ಎಂ.ಎ ವರೆಗೆ ಓದಿದರು. ಪ್ರತೀ ಬಾರಿ ಪದಕಗಳು ಬಂದರೂ ಪ್ರಥಮ ಶ್ರೇಣಿ ತಪ್ಪಿಹೋಗುತ್ತಿತ್ತು. ‘ಆರು ಬೆರಳಿದ್ದವರು ಅದೃಷ್ಟವಂತರು ಅಂತ ಪಾಪ ಅಜ್ಜಿಗೆ ಗೊತ್ತಿರಲಿಲ್ಲ’ ಅಂತ ಕಳೆದು ಹೋದ ಬೆರಳುಗಳ ಬಗ್ಗೆ ಮತ್ತೊಂದು ರೀತಿಯಲ್ಲಿ ಹಾಸ್ಯ ಮಾಡುತ್ತಿದ್ದರು. ಮುಂದೆ ಕೇರಳದ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದುಕೊಂಡು ಬಿ.ಎಲ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರಿಗೆ ವಕೀಲಿ ವೃತ್ತಿ ಮಾಡಲು ಇಷ್ಟವಾಗಲಿಲ್ಲ.
ನಂತರ ಮೈಸೂರಿನ ಆಕರ್ಷಣೆಗೆ ಒಳಗಾಗಿ ಇತ್ತ ಕಡೆ ಬಂದರು. ಅಷ್ಟು ಸುಲಭವಾಗಿ ಕೆಲಸ ಸಿಗಲಿಲ್ಲ. ಬನುಮಯ್ಯ ಶಾಲೆ ನಂತರ, ಮಹಾರಾಜಾ ಕಾಲೇಜು ಅವರ ಜೀವನದ ರಂಗಶಾಲೆಯಾಯಿತು. 32 ವರ್ಷಗಳ ಕಾಲ ಜನಪ್ರಿಯ ಅಧ್ಯಾಪಕರಾಗಿದ್ದರು. ಒಮ್ಮೆ ಬಾಲ್ಯದ ಗೆಳೆಯ ಗೋಪಾಲ ಮಾರಾರ್ ರಾಮಕೃಷ್ಣಾಶ್ರಮದ ಸಿದ್ಧೇಶ್ವರಾನಂದರಾಗಿ ಮನೆ ಬಾಗಿಲು ತಟ್ಟಿದರು. ಈ ಗೆಳೆಯರಿಬ್ಬರೂ ಒಟ್ಟುಗೂಡಿ ಮೈಸೂರಿನ ರಾಮಕೃಷ್ಣಾಶ್ರಮ ಕಟ್ಟಿದರು. ಅದರ ಫಲ ಮೈಸೂರಿಗರಿಗೆ ಅಧ್ಯಾತ್ಮ ಮತ್ತು ಉತ್ತಮ ಶಿಕ್ಷಣದ ವ್ಯವಸ್ಥೆಗಳು ಒದಗಿದವು. ಮಹಾರಾಜಾ ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ವಿದ್ಯಾರ್ಥಿಗಳನ್ನು ರಮಿಸಲು ಆಶುನಾಟಕಗಳನ್ನು ಆಡುತ್ತಿದ್ದ ಅವರ ಸಾಮರ್ಥ್ಯ ಅಪಾರ. ಮುಂದೆ ಅವು ‘ಕಾಡಾನೆ’, ‘ಗಗ್ಗಯ್ಯನ ಗಡಿಬಿಡಿ’, ‘ವರ ಪರೀಕ್ಷೆ’, ಅಂತಹ ನಾಟಕಗಳನ್ನು ಹುಟ್ಟುಹಾಕಿತು. ಅವು ರಾಜ್ಯಾದ್ಯಂತ ಪ್ರಸಿದ್ಧವಾದವು. ಶಿವಮೊಗ್ಗ, ದಾವಣಗೆರೆ ಮುಂತಾದ ಕಡೆ ಈ ನಾಟಕಗಳಲ್ಲಿ ಅವರು ಸ್ವತಃ ಪಾತ್ರ ವಹಿಸಿ ಕಳೆ ಕಟ್ಟಿಸಿದರು. ಪ್ರೊ. ಎ. ಎನ್. ಮೂರ್ತಿರಾಯರು ಗುರುತಿಸುವಂತೆ ಈ ನಾಟಕ – ಉಪನ್ಯಾಸಗಳ ಮೂಲಕ “ಕಸ್ತೂರಿ ವಿಜಯಧ್ವಜ ಹಾರಿಸಿಬಿಟ್ಟರು. ಯಾವ ಯಾವುದಕ್ಕೋ ಅಧ್ಯಕ್ಷರಾದರು”.
ಕನ್ನಡ-ಇಂಗ್ಲಿಷುಗಳನ್ನು ಕಸಿ ಮಾಡಿ ಮೂಡಿಸಿದ ನಾಟಕಗಳಲ್ಲಿ ಪಿ. ಜಿ. ವುಡ್ ಹೌಸ್ ಅವರ ‘ಔರಂಗಜೇಬ್’ ಕನ್ನಡದಲ್ಲಿ ‘ಷಹಜಹಾನ್’ ಆಯಿತು. ‘ಹೆಡ್ ಮಾಸ್ತರ ಮಗಳು’ ಕಸ್ತೂರಿ ಅವರದೇ ರಚನೆ. ನಾಕ ಎಂದರೆ ನಾಟಕದ ಕಸ್ತೂರಿ ಎಂಬ ಎ. ಆರ್. ಕೃಷ್ಣಶಾಸ್ತಿಗಳ ಪ್ರಶಂಸೆಯ ಉದ್ಘಾರ ಅಕ್ಷರಶಃ ನಿಜ. 1930-40ರ ದಶಕಗಳು ಕಾಲೇಜು ರಂಗಭೂಮಿಯ ದೃಷ್ಟಿಯಿಂದ ‘ಕಸ್ತೂರಿಯುಗ’ ಎಂದೆನಿಸಿದೆ.
ವಯಸ್ಕರ ಶಿಕ್ಷಣದ ಅಗತ್ಯಗಳನ್ನು ಮನಗಂಡ ಕಸ್ತೂರಿ ಅವರು ಆಚಾರ್ಯ ಬಿ.ಎಂ. ಶ್ರೀ ಅವರ ಮಾರ್ಗದರ್ಶನದಲ್ಲಿ ಬಹಳಷ್ಟು ಕೆಲಸ ಮಾಡಿದರು. 1930ರಷ್ಟು ಹಿಂದೆಯೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಯಸ್ಕ ಶಿಕ್ಷಣ ತರಗತಿಗಳನ್ನು ಅವರು ನಡೆಸಿದರು. ‘ಕೆಂಪ ಮೈಸೂರಿಗೆ ಹೋದದ್ದು’ ಎಂಬ ನಗೆ ಸಾಹಿತ್ಯವನ್ನು ವಯಸ್ಕರರಿಗಾಗಿ ಸೃಷ್ಟಿಸಿದರು.
ಕಸ್ತೂರಿಯವರ ಶಬ್ದ ಸೃಷ್ಟಿ ಗಮನಾರ್ಹ. ‘ಅನರ್ಥಕೋಶ’ದಂತಹ ನಗೆ ನಿಘಂಟಿನಲ್ಲೂ ಅದರ ಸೊಬಗನ್ನು ಕಾಣಬಹುದು. ರಾಶಿ ಅವರ ಕೊರವಂಜಿ, ಶಂಕರ್ ಅವರ Shanakr’s Weekly ಮುಂತಾದ ನಿಯತಕಾಲಿಕಗಳಲ್ಲಿ ಕಸ್ತೂರಿ ಅವರ ನಗೆ ಲೇಖನಗಳನ್ನೂ, ಹೊಸಗಾದೆಗಳನ್ನೂ ಹೊಸಶಬ್ದಸೃಷ್ಟಿಯಲ್ಲಿ ಅವರು ಪಡೆದ ಸಿದ್ಧಿಯನ್ನೂ ಕಾಣಬಹುದಾಗಿದೆ.
ನಗೆಗಾರರೆಂದೇ ಖ್ಯಾತರಾದ ಕಸ್ತೂರಿಯವರು ‘ಗಗ್ಗಯ್ಯನ ಗಡಿಬಿಡಿ’, ‘ವರ ಪರೀಕ್ಷೆ’, ‘ಕಾಡಾನೆ’, ‘ತಾಪತ್ರಯ ತಪ್ಪಿತು’, ‘ಬ್ಯಾಂಕಿನ ದಿವಾಳಿ’, ‘ರಾಮಕೃಷ್ಣನ ದರ್ಬಾರು’ ಎಂಬ ಆರು ನಾಟಕಗಳನ್ನು ಬರೆದರು. ‘ಗಾಳಿಗೋಪುರ’, ‘ಶಂಖವಾದ್ಯ’, ರಂಗನಾಯಕಿ’, ‘ಅಲ್ಲೋಲ ಕಲ್ಲೋಲ’, ‘ಉಪಾಯ ವೇದಾಂತ’, ‘ಅನರ್ಥ ಕೋಶ’, ‘ಯದ್ವಾತದ್ವಾ’ , ‘ಚಿತ್ರ ವಿಚಿತ್ರ’ ಇವು ಅವರ ಹಾಸ್ಯಪ್ರಧಾನ ಕೃತಿಗಳು. ಅವರ ‘ಅನರ್ಥಕೋಶ’ ವಿಶ್ವಸಾಹಿತ್ಯದಲ್ಲಿಯೇ ಆ ಮಾದರಿಯಲ್ಲಿ ಆದಿಕೃತಿ, ಆದ್ಯಕೃತಿ. ಗಂಭೀರ ಚಿಂತನೆಗೆ ಸಾಕ್ಷಿಯಾಗಿ ನಿಲ್ಲುವಂತಹ ‘ಮದುವೆ’, ‘ದಿಲ್ಲೀಶ್ವರನ ದಿನಚರಿ’, ‘ಅಶೋಕ’ ಮುಂತಾದ ಕೃತಿಗಳನ್ನೂ ಕಸ್ತೂರಿ ಬರೆದಿದ್ದಾರೆ.
‘ಸಂಪತ್ತು’, ‘ಚೆಂಗೂಲಿ ಚೆಲುವ’, ‘ಚಕ್ರದೃಷ್ಟಿ’, ‘ನೊಂದಜೀವಿ’, ‘ಡೊಂಕು ಬಾಲ’, ಗೃಹದಾರಣ್ಯಕ’ ಇವು ಕಸ್ತೂರಿ ಅವರ ಕಾದಂಬರಿಗಳು. ಇವಲ್ಲದೆ ‘ಚೇರ್ಮನ್ ಪೆರುಮಾಳ್’, ‘ಚೈನಾ ಜಪಾನ್ ಕಥೆಗಳು’, ‘ಕೋಹಂ ಸೋಹಂ’, ‘ಅಣುಕು ಮಿಣುಕು’ ಕವನಗಳು, ‘ಸತ್ಯಂ ಶಿವಂ ಸುಂದರಂ’ ಮುಂತಾದ ಕೃತಿಗಳನ್ನು ಕಸ್ತೂರಿ ಬರೆದಿದ್ದಾರೆ. ‘ಚಕ್ರದೃಷ್ಟಿ’ ಕಾದಂಬರಿ ತನ್ನ ವಿಶಿಷ್ಟ ಕಥಾತಂತ್ರದಿಂದಲೇ ಗಮನ ಸೆಳೆಯುತ್ತದೆ. ಭೈರಪ್ಪನವರ ‘ಅನ್ವೇಷಣ’, ಪ್ರಭುಶಂಕರರ ‘ಬೆರಗು’ ಮುಂದೆ ಇದೇ ತಂತ್ರವನ್ನು ಬೆಳೆಸಿದವು. ಹಲವಾರು ಪಾತ್ರಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ಈ ಕಥೆಯ ನಾಯಕ ಗುಂಡಪ್ಪನನ್ನು ವಿಶ್ಲೇಷಿಸುತ್ತಾ ಸಾಗುತ್ತವೆ. ಕಸ್ತೂರಿ ಅವರು ವಿಕ್ಟರ್ ಹ್ಯೂಗೋನ ‘ಲೆಸ್ ಮಿಸರಬಲ್ಸ್’ ಕೃತಿಯನ್ನು ಕನ್ನಡಕ್ಕೆ ತಂದುಕೊಟ್ಟದ್ದು ಅಚ್ಚರಿ ಎನಿಸೀತು. ಕಾರಣ ಅದೊಂದು ಮಹಾ ದುಃಖದ ಕಥೆ. ಕಾದಂಬರಿಯ ನಾಯಕ ಜೀನ್ ವಾಲ್ಜೀನ್. ಬಡತನದ ಬೇಗೆಯನ್ನು ತಾಳಲಾರದೆ ಸಣ್ಣ ರೊಟ್ಟಿಯ ತುಣುಕೊಂದನ್ನು ಕದ್ದ ಮಹಾಪರಾಧಕ್ಕಾಗಿಆತ ಬದುಕಿನ ಉದ್ದಕ್ಕೂ ಪಟ್ಟ ಸಂಕಟದ ಚರಿತ್ರೆ. ಅವನ ಎಲ್ಲ ಸದ್ಗುಣಗಳನ್ನೂ ನುಂಗಿಹಾಕಿದ, ಈ ಒಂದು ಅಪರಾಧ, ಅದಕ್ಕಾಗಿ ವರುಷಗಟ್ಟಲೆ ಜೈಲುವಾಸ, ಇತ್ಯಾದಿಗಳು ಮನಸ್ಸನ್ನು ಕಲಕಿಬಿಡುತ್ತವೆ. ಪಾಪಕಾರ್ಯದಿಂದ ಹೆಜ್ಜೆ ಹೆಜ್ಜೆಗೂ ಜೀನ್ ವಾಲ್ ಜೀನನನ್ನು ರಕ್ಷಿಸಿದ ಬಿಶಪ್ಪನ ಮಹಾಕರುಣೆ ಸ್ವತಂತ್ರ ಕಥೆಯಂತೆ ಜನಪ್ರಿಯವಾಗಿದೆ. ವಿಶ್ವದಾದ್ಯಂತ ಜನಪ್ರಿಯವಾದ ಈ ಕಾದಂಬರಿಯ ಸೊಗಸಾದ ಸಂಗ್ರಹಾನುವಾದವನ್ನು ಕಸ್ತೂರಿ ‘ನೊಂದ ಜೀವಿ’ ಎಂಬ ಸಾರ್ಥಕ ಹೆಸರಿನಿಂದ ಕರೆದಿದ್ದಾರೆ. ನಗೆಲೇಖಕ ಕಸ್ತೂರಿಗೇಕೆ ಈ ಗೋಳಿನ ಕತೆ ಹೊಳೆಯಿತು ಎನಿಸಬಹುದು. ಆದರೆ ನಗೆ ನವಿರು ಮುಖವಾಡದ ಹಿಂದೆ ಎಷ್ಟೆಷ್ಟೋ ನೋವು-ಸಂಕಟಗಳನ್ನು ತಮ್ಮ ವೈಯಕ್ತಿಕ ಬದುಕಿನಲ್ಲಿ ಕಸ್ತೂರಿ ಅನುಭವಿಸಿದವರು.
ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳು, ನಂತರ ಓದಿನ ದಿನಗಳಲ್ಲಿ, ಮುಂದೆ ಜೀವನ ಕಂಡುಕೊಳ್ಳಲು ಕಷ್ಟಗಳು ಒಂದೆಡೆ ಹೀಗೆ ಅವರಿಗೆ ಕಷ್ಟಗಳು ಜೊತೆಗಾತಿಯಾಗಿದ್ದವು. 1947ರಲ್ಲಿ ಬೆಂಗಳೂರಿನ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಅವರು ಉಪನ್ಯಾಸಕರಾಗಿದ್ದಾಗ ಪ್ರತಿಭಾವಂತ ಮಗನನ್ನು ವಿಧಿ ಸೆಳೆದುಕೊಂಡುಬಿಟ್ಟಿತು. ಮಗನಷ್ಟೇ ಎಳೆಯ ಪ್ರಾಯದ ಪುಟ್ಟಪರ್ತಿ ಸಾಯಿಬಾಬಾ ಅವರ ಹೃದಯವನ್ನು ಹಿಡಿದರು. 1948ರಿಂದಲೇ ಪುಟ್ಟಪರ್ತಿಯ ಶ್ರದ್ಧೆ ಬೆಳೆದು, ಬದುಕಿನ ಕೊನೆಯುಸಿರು ಎಳೆಯುವವರೆಗೂ ಸಾಯಿಬಾಬಾ ಅವರ ನಿಕಟವರ್ತಿ ಎನಿಸಿದ್ದರು. ಆಶ್ರಮದ “ಸನಾತನ ಸಾರಥಿ” ಎಂಬ ಹೆಸರಿನಲ್ಲಿ ಬಾಬಾರ ಉಪನ್ಯಾಸ ಪ್ರವಚನಗಳನ್ನು ಸಂಗ್ರಹಿಸಿದರು. ಇಂಗ್ಲೀಷ್ ಕನ್ನಡಗಳಿಗೆ ಅನುವಾದಿಸಿದರು. ತಮ್ಮ ಬದುಕಿನ ಕಡೆಯಲ್ಲಿ “Loving God” ಎಂಬ ಶೀರ್ಷಿಕೆಯಲ್ಲಿ ಸತ್ಯಸಾಯಿ ಜೀವನ ಚರಿತ್ರೆಯನ್ನೂ ಅದರ ಹಾಸುಹೊಕ್ಕಾಗಿ ತಮ್ಮ ಆತ್ಮಚರಿತ್ರೆಯನ್ನೂ ಬರೆದರು. ಅವರ ಸಹಭಾಗಿನಿ ಎಂಬತ್ತು ವರ್ಷದ ವೃದ್ಧಾಪ್ಯದವರೆಗೂ ಆಶ್ರಮವಾಸಿಯಾಗಿಯೇ ಆಗಿದ್ದರು. ವೃದ್ಧ ತಾಯಿ ಅಲ್ಲೇ ಕೊನೆಯುಸಿರೆಳೆದರು.
ಮತ್ತೊಂದು ಮುಖ್ಯ ಅಂಶವೆಂದರೆ ಅವರ ಈ ಬರಹಗಳಲ್ಲೂ ಪಸರಿಸಿರುವ ಮೃದುವಾದ ಹಾಸ್ಯಲೇಪನ. ಅವರ ಆತ್ಮಕಥೆಯ ಉದ್ದಕ್ಕೂ ಈ ಸಂಗತಿಯನ್ನು ಕಾಣಬಹುದು. ಹಿಂದಿನ ಕೃತಿಗಳಲ್ಲಿ ಸುತ್ತಲ ಬದುಕನ್ನು ಹಾಸ್ಯಕ್ಕೆ ವಸ್ತುವಾಗಿಸಿಕೊಂಡಂತೆ ಕಸ್ತೂರಿ ತಮ್ಮನ್ನೇ ಲೇವಡಿ ಮಾಡಿಕೊಳ್ಳುತ್ತಾರೆ. ನಗು ನಗುತ್ತಲೇ ತಮ್ಮನ್ನು ಚಿತ್ರಿಸಿಕೊಳ್ಳುತ್ತಾರೆ. ಅವರ ಬದುಕಿನ ಸಂದೇಶವನ್ನು ಅಲ್ಲಿಯೇ ಕಾಣಬೇಕು. ಅವರ ಬರಹಗಳಲ್ಲಿ ಬದುಕಿನಲ್ಲಿ ಈ ‘ಪರಿಹಾಸ’ವೇ ಸ್ಥಾಯಿ.
ತಮ್ಮ ಆತ್ಮಕಥೆಯನ್ನು ಅವರು ಪ್ರಾರಂಭಿಸುವ ಮೋಹಕ ಮಾತುಗಳನ್ನು ಸ್ಮರಿಸುವುದು ಬಹಳ ಮಹತ್ವದ್ದು ಎನಿಸುತ್ತದೆ. “ಈ ಬಾರಿ, 1897 ಕ್ರಿಸ್ಮಸ್ ದಿನ, ನಾನು ಭಗವಂತನ ಉಸಿರನ್ನು ಒಳಗೆ ಸೆಳೆದುಕೊಂಡೆ. ಬಾಬಾ ಹೇಳುತ್ತಾರೆ: “ಮನುಷ್ಯ ಹುಟ್ಟುವುದು, ಮತ್ತೊಮ್ಮೆ ಹುಟ್ಟದಿರುವುದು ಹೇಗೆ ಎಂದು ಕಲಿಯುವುದಕ್ಕೆ”. ನನ್ನ ಹಿಂದಿನ ಎಲ್ಲ ಜನ್ಮಗಳಲ್ಲೂ ಈ ರಹಸ್ಯ ನನಗೆ ದಕ್ಕದೆ ನಾನು ವಂಚಿತನಾಗಿದ್ದೆ. ಆದುದರಿಂದಲೇ ನಾನು ಮತ್ತೆ ಶಾಲೆಗೆ ಮಣ್ಣು ಹೊತ್ತೆ. ಅಮೀಬಾದಿಂದ - ಆಂಥ್ರೋಪೋಸಿನವರೆಗಿನ ನನ್ನ ಉದ್ದನೆಯ ಈ ಯಾತ್ರೆಯಲ್ಲಿ ಮುಕ್ತಿಯ ವರ್ಣನೆಯನ್ನು ಏನೂ ಕಲಿಯಲಿಲ್ಲ. – ‘ಎ’ ಫಾರ್ ಆತ್ಮ ಎಂಬುದನ್ನೂ ತಿಳಿಯಲಿಲ್ಲ. ಅದಕ್ಕೆಂದೇ ನಾನು ಅರೇಬಿಯನ್ ಸಮುದ್ರದ ತೀರದ ಒಂದು ಹಿಂದೂ ಕುಟುಂಬದಲ್ಲಿ ಈ ಭೂಮಿಯ ಮತ್ತೊಂದು ಯಾತ್ರೆ ಪ್ರಾರಂಭಿಸಲೆಂದೇ ಅಸಹಾಯಕ ಶಿಶುವಾಗಿ ಜನಿಸಿದೆ – ಅಂದಿನ ಕ್ರಿಸ್ಮಸ್ ರಾತ್ರಿಯಲ್ಲಿ”
ಇಂಥ ‘ಆತ್ಮ’ ಕಥೆ ಓದಿದ್ದೀರಾ? ಅದು ಕಸ್ತೂರಿಯ ಕಂಪು. ಅವರ ಪ್ರಹಸನಗಳಲ್ಲೂ, ಕಾದಂಬರಿಗಳಲ್ಲೂ, ಅಣಕುವಾಡುಗಳಲ್ಲೂ ಮಾತ್ರವಲ್ಲ, ಧಾರ್ಮಿಕ ಸಾಹಿತ್ಯದಲ್ಲೂ ಕಾಣುವ ಪ್ರಸನ್ನ ಮಧುರತೆ. ಕೆಲವೊಮ್ಮೆ ಅದು ಕೆಂಡಸಂಪಿಗೆ – ಮುಖ್ಯವಾಗಿ ಮಲ್ಲಿಗೆ. ಅಲ್ಲಿಯೇ ಕಸ್ತೂರಿಯನ್ನು ಹುಡುಕಬೇಕು. ಅಥವಾ ಹುಡುಕುವ ಆಯಾಸವಾದರೂ ಏಕೆ – ಆಘ್ರಾಣಿಸಿದರೂ ಸಾಕು!
‘Loving God’ ಅಲ್ಲದೆ, ‘Kerala in Karnataka’, ‘The Last Rajas of Coorg’ ಕಸ್ತೂರಿ ಅವರು ಬರೆದ ಇತರ ಇಂಗ್ಲೀಷ್ ಬರಹಗಳು.
ಕಸ್ತೂರಿ ಅವರು 1987ರ ಆಗಸ್ಟ್ 14ರಂದು ನಿಧನರಾದರು. ಇಂತಹ ಮಹಾನ್ ವ್ಯಕ್ತಿಯ ಕಾಲಮಾನದಲ್ಲಿ ಈ ಭೂಮಿಯಲ್ಲಿದ್ದ ನಮ್ಮ ಭಾಗ್ಯವೂ ಮಹತ್ತಿನದೇ.
(ಆಧಾರ: ಎ.ಎಸ್. ವೇಣುಗೋಪಾಲರಾವ್ ಅವರು ಬರೆದ ನಾ. ಕಸ್ತೂರಿ ಅವರ ಕುರಿತ ಬರಹ.)
On the birth anniversary of great scholar and writer Na Kasturi
ಕಾಮೆಂಟ್‌ಗಳು