ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುವೆಂಪು


 ಕುವೆಂಪು


ಕರ್ನಾಟಕದಲ್ಲಿ ಮಹಾನ್ ಪಂಡಿತರಿಂದ ಸಾಮಾನ್ಯ ಜನಗಳವರೆಗೆ ಗೊತ್ತಿರುವ ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಹೆಸರು ಕುವೆಂಪು.  ಒಂದು ರೀತಿಯಲ್ಲಿ ಎಲ್ಲರೂ ಒಪ್ಪುವ ಹಿರಿಮೆಯ ಹೆಸರು ಕುವೆಂಪು.  

ಇಪ್ಪತ್ತನೆಯ ಶತಮಾನದಿಂದ ಈಚೆಗಿನ ಕನ್ನಡ ಸಾಹಿತ್ಯ ಚರಿತ್ರೆ ಕುವೆಂಪು ಅವರ ಸಾಹಿತ್ಯಕ ಬೆಳವಣಿಗೆ, ಸಾಧನೆ, ಸಿದ್ಧಿಗಳಿಂದ, ಅವರು ಇತರ ಕವಿಗಳ ಮೇಲೆ ಬೀರಿದ ಪ್ರಭಾವದಿಂದ ಕಂಗೊಳಿಸುತ್ತಿದೆ.  ಕಾವ್ಯ, ನಾಟಕ, ಸಣ್ಣ ಕಥೆ, ಕಾದಂಬರಿ, ವಚನ, ಕವನ, ಮಹಾಕಾವ್ಯ, ಸಾಹಿತ್ಯ ವಿಮರ್ಶೆ – ಈ ಒಂದೊಂದು ಪ್ರಕಾರದಲ್ಲೂ ಗಣನೀಯವಾದ ಕೊಡುಗೆಯನ್ನು ಕುವೆಂಪು ನೀಡಿದ್ದಾರೆ.  ಕನ್ನಡಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟ ಮೊದಲಿಗರಲ್ಲಿ ಅವರೂ ಒಬ್ಬರು.  

ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ.  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಹರಿಯುತ್ತಿರುವ ತುಂಗಾ ನದಿಯನ್ನು ದಾಟಿ ಒಂಬತ್ತು ಮೈಲು ಹೋದರೆ ಕಾಡಿನ ನಡುವೆ ಬೆಟ್ಟಕ್ಕೆ ಅಂಟಿಕೊಂಡಂತೆ ಇರುವ ಮನೆ ಕುಪ್ಪಳ್ಳಿ.  ಅದೇ ಅವರ ಊರು.  ಅವರು ಹುಟ್ಟಿದ್ದು ಮಾತ್ರ ಕೊಪ್ಪಕ್ಕೆ ಸಮೀಪವಾದ ಹಿರೇಕೊಡಿಗೆಯಲ್ಲಿದ್ದ ತಮ್ಮ ತಾಯಿಯ ತವರುಮನೆಯಲ್ಲಿ.  1904ರ ಡಿಸೆಂಬರ್ 29ನೇ ತಾರೀಖು.  ಕುವೆಂಪು ಬೆಳೆದದ್ದು ಕುಪ್ಪಳ್ಳಿಯಲ್ಲಿ.  ಮನೆಯ ಸುತ್ತಲಿನ ಸುಂದರ ಪರಿಸರ, ಪ್ರಕೃತಿ ಸಂಪತ್ತು, ಹಿರಿಯರ ಜೊತೆ ಪಾಲ್ಗೊಳ್ಳುತ್ತಿದ್ದ ಶಿಕಾರಿಯಂತಹ ಸಾಹಸ ಯಾತ್ರೆಗಳು, ಈ ಎಲ್ಲವೂ ಕವಿ ಶಿಶುವಿನ, ಕವಿ ಬಾಲಕನ, ಕವಿ ತರುಣನ ಚೇತನದ ಆಳಕ್ಕೆ ನದಿಯಾಗಿ, ಜಲಪಾತವಾಗಿ ಧುಮ್ಮಿಕ್ಕಿ ಮಡುಗಟ್ಟಿನಿಂತುವು. 

ಕವಿ ಬಾಲಕನಿಗೆ ಚಿಕ್ಕಂದಿನಿಂದಲೇ ಸಾಹಿತ್ಯ ಸಂಸ್ಕಾರವೂ ದೊರಕಿತು.  ಮನೆಯಲ್ಲಿ ತಂದೆ, ಚಿಕ್ಕಪ್ಪ ಇಬ್ಬರೂ ಸಾಹಿತ್ಯಾಸಕ್ತರು.  ಜೈಮಿನಿ ಭಾರತ, ತೊರವೆ ರಾಮಾಯಣಗಳ ವಾಚನ ಮನೆಯಲ್ಲಿ ನಡೆಯುತ್ತಿತ್ತು.  ಬಾಲಕ ಅದನ್ನು ಆಸಕ್ತಿಯಿಂದ ಕೇಳುತ್ತಿದ್ದ.  ಹುಡುಗನಿಗೆ ಜೊತೆಯ ಇತರ ಬಾಲಕರೊಡನೆ ಮನೆಯೇ ಶಾಲೆಯೂ ಆಯಿತು.  ಅನೇಕ ‘ಐಗಳು’ ಬಂದು ಹೋಗಿ ಮಾಡಿ ವಿದ್ಯಾಭ್ಯಾಸ ಕುಂಟುತ್ತಾ ನಡೆಯಿತು.  ಕಡೆಗೆ ರೋಮನ್ ಕ್ಯಾಥೊಲಿಕ್ ‘ಐಗಳು’ ಒಬ್ಬರು  ಇಂಗ್ಲೀಷ್ ಬಾಷಾ ಸಾಹಿತ್ಯಗಳ ಪರಿಚಯ ನೀಡಿದರು.  ಎಂಟನೇ ವಯಸ್ಸಿನಲ್ಲಿ ಅವರನ್ನು ತೀರ್ಥಹಳ್ಳಿಯ ಶಾಲೆಗೆ ಸೇರಿಸಲಾಯಿತು.  ಮೊದಲನೆಯ ಮಹಾಯುದ್ದದಲ್ಲಿ ಅವರ ಕುಟುಂಬಕ್ಕೆ ಆದ ನಷ್ಟಗಳಿಂದ  ಅವರ ಕುಟುಂಬ ಸಹಾ ತೀರ್ಥಹಳ್ಳಿಗೆ ವಾಸ್ತವ್ಯ ಬದಲಾಯಿಸಿತು.  ಚಿಕ್ಕವರಾದ ಪುಟ್ಟಪ್ಪ, ಅವರ ತಾಯಿ ಮತ್ತು ಪುಟ್ಟಪ್ಪನವರಿಗಿಂತಲೂ ಕಿರಿಯರಾದ ಎರಡು ಹೆಣ್ಣು ಮಕ್ಕಳನ್ನು ಅವರ ತಂದೆ ಅಗಲಿದರು.  

ಮುಂದೆ ಪುಟ್ಟಪ್ಪನವರ ವಿದ್ಯಾಭ್ಯಾಸ ಮೈಸೂರಿನ ಹಾರ್ಡ್ವಿಕ್  ಹೈಸ್ಕೊಲಿನಲ್ಲಿ ಮುಂದುವರೆಯಿತು.  ಷೆಲ್ಲಿ, ವರ್ಡ್ಸ್ ವರ್ತ್, ಕೀಟ್ಸ್ ಮುಂತಾದ ಆಂಗ್ಲ ಕವಿಗಳ ಕವನಗಳನ್ನು ಸ್ವತಂತ್ರವಾಗಿ ಓದುವ ಶಕ್ತಿ ಅವರಿಗೆ ಬಂದಿತ್ತು.  ಟಾಲ್ಸ್ ಟಾಯ್ ಕಾದಂಬರಿಗಳು, ಪೌರಾತ್ಯ, ಪಾಶ್ಚಾತ್ಯ ತತ್ವಜ್ಞರ ಬರವಣಿಗೆಗಳು ಅವರ ಭಾವ ಬುದ್ಧಿಗಳಿಗೆ ಪುಷ್ಟಿ ನೀಡಿದವು.  ಶ್ರೀರಾಮಕೃಷ್ಣಾಶ್ರಮದ ಮೈಸೂರು ಶಾಖೆಯ ಅಧ್ಯಕ್ಷರಾದ ಶ್ರೀ ಸ್ವಾಮಿ ಸಿದ್ದೇಶ್ವರಾನಂದರು ಬಾಲಕನಿಗೆ ತುಂಬ ಪ್ರಿಯರಾಗಿ ಅವನ ಸಕಲ ಯೋಗಕ್ಷೇಮವನ್ನೂ ವಹಿಸಿಕೊಂಡರು.  ಸರ್ವಧರ್ಮ ಸಮನ್ವಯಾಚಾರ್ಯರಾದ ಶ್ರೀರಾಮಕೃಷ್ಣ ಪರಮಹಂಸರೂ ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರೂ ಪುಟ್ಟಪ್ಪನವರಿಗೆ ಆದರ್ಶವ್ಯಕ್ತಿಗಳಾದರು.  

ಇಂಗ್ಲೀಷ್ ಕವಿಗಳ ಸಂಮೋಹನ, ಇಂಗ್ಲೀಷ್ ಭಾಷೆ ಛಂದಸ್ಸುಗಳ ಮೇಲಣ ಪ್ರಭುತ್ವ ಇವು ಬಾಲಕ ಪುಟ್ಟಪ್ಪನಲ್ಲಿ ಹೊಸ ಆಸೆ ಆಕಾಂಕ್ಷೆಗಳನ್ನು ಅರಳಿಸಿದವು.  ಹದಿನೆಂಟರ ಹರೆಯದ ಪುಟ್ಟಪ್ಪ 1922ರಲ್ಲಿ ತಮ್ಮ ಇಂಗ್ಲೀಷ್ ಕವನಗಳ ಪುಟ್ಟ ಸಂಕಲನವೊಂದನ್ನು ‘ಬಿಗಿನರ್ಸ್ ಮ್ಯೂಸ್’ ಎಂಬ ಹೆಸರಿನಲ್ಲಿ ಪ್ರಕಟಿಸಿದರು.  ಆಗಿನ್ನೂ ಅವರು ಹೈಸ್ಕೂಲು ಮೂರನೆಯ ತರಗತಿಯ ವಿದ್ಯಾರ್ಥಿ.  ಕವನಗಳನ್ನು ಓದಿದ ಮಿತ್ರರೂ, ಹಿರಿಯರೂ ಕವನಗಳ ಭಾಷೆಗೆ, ಉಪಮೆ ರೂಪಕಗಳಿಗೆ, ವಸ್ತು ವೈವಿಧ್ಯಕ್ಕೆ, ಕಲ್ಪನಾ ಚಾತುರ್ಯಕ್ಕೆ ಮಾರುಹೋದರು.  ಆಕಸ್ಮಿಕ ಎಂಬಂತೆ ಮೈಸೂರಿಗೆ ಬಂದಿದ್ದ ಐರಿಷ್ ಕವಿ ಜೇಮ್ಸ್ ಕಸಿನ್ಸ್ ಅವರಿಗೆ ಪುಟ್ಟಪ್ಪನವರು ತಮ್ಮ ಕವನಗಳನ್ನು ತೋರಿಸಿದರು.  ಕವನಗಳನ್ನು ಓದಿದ ಜೇಮ್ಸ್ ಕಸಿನ್ಸ್ ಮೆಚ್ಚಿ ಪ್ರೋತ್ಸಾಹಿಸುವುದರ ಬದಲು ‘ರವೀಂದ್ರರು ತಮ್ಮ ತಾಯಿನುಡಿಯಾದ ಬಂಗಾಳಿಯಲ್ಲಿ ಬರೆದಂತೆ, ನೀನು ನಿನ್ನ ತಾಯಿನುಡಿಯಾದ ಕನ್ನಡದಲ್ಲಿ ಬರೆ, ಉತ್ತಮ ಕವಿಯಾಗುತ್ತೀಯ’ ಎಂದರು.  ಆ ಕ್ಷಣದಲ್ಲಿ ಪುಟ್ಟಪ್ಪನವರಿಗೆ ಅದನ್ನು ಒಪ್ಪುವ ಮನಸ್ಸು ಮೂಡಲಿಲ್ಲವಾದರೂ ಮುಂದೆ ತಮ್ಮ ‘ಎಪ್ರಿಲ್’ ಎಂಬ ಆಂಗ್ಲಕವನವನ್ನು ‘ಚೈತ್ರ-ವೈಶಾಖ’ ಎಂದು ಅನುವಾದಿಸಿ ಪ್ರಕಟಿಸಿದರು. ಕವಿಯ ಜೀವನವಾಹಿನಿ ಇಂಗ್ಲೀಷಿನಿಂದ ಕನ್ನಡದ ಕಡೆಗೆ ತಿರುಗಿ ಹರಿಯತೊಡಗಿತು.

ಕೆ. ವಿ. ಪುಟ್ಟಪ್ಪನವರ ವಿದ್ಯಾಭ್ಯಾಸ ಮುಂದುವರೆಯಿತು.  ಬಿ.ಎ. ಓದುವ  ಸಮಯದಲ್ಲಿ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೂ ದಾಖಲಾಗಿ ನಂತರದಲ್ಲಿ ನಾ. ಕಸ್ತೂರಿ ಮತ್ತು ಸ್ವಾಮೀ ಸಿದ್ದೇಶ್ವರಾನಂದರ ಒತ್ತಾಸೆಯಲ್ಲಿ ರಾಮಕೃಷ್ಣಾಶ್ರಮಕ್ಕೆ ವಾಸ್ತವ್ಯ ಬದಲಾಯಿಸಿದರು.  ಅವರ ಓದು ಮುಗಿದು ಅಧ್ಯಾಪಕ ವೃತ್ತಿಯಲ್ಲಿದ್ದಾಗಿನ ದಿನದಲ್ಲಿ ಕೂಡ ಶ್ರೀರಾಮಕೃಷ್ಣಾಶ್ರಮವೇ ಅವರ ಮನೆಯಾಯಿತು.

ಪುಟ್ಟಪ್ಪನವರ ಕನ್ನಡ ಕವನಗಳು ಜನಪ್ರಿಯವಾದವು.  ವಿದ್ಯಾರ್ಥಿಗಳು ಮಾತ್ರವಲ್ಲದೆ ಅಧ್ಯಾಪಕ  ವರ್ಗದಲ್ಲಿದ್ದ ಪ್ರೊ. ಟಿ. ಎಸ್. ವೆಂಕಣ್ಣಯ್ಯ, ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಪ್ರೊ. ಬಿ. ಎಂ. ಶ್ರೀಕಂಠಯ್ಯ ಅವರುಗಳು  ಕವಿಯನ್ನು ಮೆಚ್ಚಿ ಪ್ರಶಂಸಿಸಿದರು.  1942ರಲ್ಲಿ ಪುಟ್ಟಪ್ಪನವರು ಮಹಾತ್ಮಾ ಗಾಂಧೀಜಿಯವರ ದರ್ಶನ ಪಡೆದರು.  ಆದರೆ ರಾಜಕೀಯ ಅವರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.  ಅಧ್ಯಾತ್ಮ-ಕಾವ್ಯ ಇವೇ ಅವರ ಎರಡು ಕಣ್ಣುಗಳಾದವು.

ಎಂ. ಎ. ತರಗತಿಯಲ್ಲಿ  ಪುಟ್ಟಪ್ಪ ತತ್ವಶಾಸ್ತ್ರ ಆರಿಸಿಕೊಂಡಿದ್ದರು.  ಆದರೆ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಯವರ ಒಲುಮೆಯ ಒತ್ತಾಯದಿಂದ ಅದೇ ವರ್ಷ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಕನ್ನಡ ಎಂ.ಎ.ಗೆ ಸೇರಿದರು.  ಆ ಕ್ಷಣವನ್ನು ಕುವೆಂಪು “ಅಮೃತ ಕ್ಷಣ” ಎಂದು ಕರೆದಿದ್ದಾರೆ.  ವಿದ್ಯಾರ್ಥಿಯಾಗಿಯೇ ಪುಟ್ಟಪ್ಪನವರು ಅನೇಕ ಕವನಗಳನ್ನು ರಚಿಸುತ್ತಾ ಹೋದರು. ಎ. ಆರ್. ಕೃಷ್ಣಶಾಸ್ತ್ರಿಗಳ ಒತ್ತಾಯದಿಂದ ಅವರು ಏರ್ಪಡಿಸಿದ್ದ ಕವಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.  ಅವರನ್ನು ನೋಡುವುದಕ್ಕೆ ಜನ ಸೇರುತ್ತಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ.  ಏಕೆಂದರೆ ಕೃಷ್ಣಶಾಸ್ತ್ರಿಗಳು ವರ್ಣಿಸಿರುವಂತೆ ವಿದ್ಯಾರ್ಥಿಯಾಗಿದ್ದಾಗ ಅವರು “ಬೇಲೂರು ಗುಡಿಯ ಗೋಡೆಯ ಮೇಲೆ ಕೆತ್ತಿದ ದೇವತಾ ವಿಗ್ರಹದಂತೆ” ಇದ್ದರು.  

ಎಂ. ಎ. ತರಗತಿಯಲ್ಲಿ ಸೇರಿದ ಮೊದಲಲ್ಲಿ ‘ಜಲಗಾರ’, ಅನಂತರ ‘ಯಮನ ಸೋಲು’ ನಾಟಕಗಳನ್ನು ಪುಟ್ಟಪ್ಪನವರು ರಚಿಸಿದರು.  ಅವೆರಡೂ ಭಾರೀ ಯಶಸ್ಸನ್ನು ಗಳಿಸಿದ್ದವು.  ಆ ವೇಳೆಗಾಗಲೇ ಅವರು ‘ಅಮಲನ ಕಥೆ’ ಎಂಬ ತಮ್ಮ ಪ್ರಥಮ ಕನ್ನಡ ಪುಸ್ತಕದಿಂದಲೂ, ‘ಬೊಮ್ಮನಹಳ್ಳಿ ಕಿಂದರಜೋಗಿ’ ನೀಳ್ಗವನದಿಂದಲೂ ಕನ್ನಡ ನಾಡಿನ ಕಾವ್ಯ-ಪ್ರಿಯರ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಂಡಿದ್ದರು.  1929 ಅವರ ಮಹತ್ವದ ವರ್ಷ.  ಅವರು ಎಂ.ಎ ಪದವಿ ಪಡೆದದ್ದು, ಕನ್ನಡ ಅಧ್ಯಾಪಕರಾಗಿ ನೇಮಕವಾದದ್ದು, ಮತ್ತು ಬಂಗಾಳದ ಬೇಲೂರು ಮಠದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರೂ ಸ್ವಯಂ ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರೂ ಆದ ಶೀ ಸ್ವಾಮಿ ಶಿವಾನಂದರಿಂದ ಮಂತ್ರದೀಕ್ಷೆ ಸ್ವೀಕಾರ ಮಾಡಿದ್ದು ಇವು ಮೂರೂ ಘಟನೆಗಳೂ ನಡೆದವು.  

1930ರಲ್ಲಿ ಕುವೆಂಪುರವರ ಕವನ ಸಂಕಲನ ‘ಕೊಳಲು’ ಪ್ರಕಟವಾಯಿತು.  ಮುನ್ನುಡಿ ಬರೆದ ಆಚಾರ್ಯ ಬಿ.ಎಂ.ಶ್ರೀ  ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.   ಕೊಳಲಿನ ಅತ್ಯುತ್ಕೃಷ್ಟವಾದ ಕವನಗಳಲ್ಲಿ ಒಂದಾದ ‘ಸುಗ್ಗಿ ಬರುತಿದೆ’ ಎಂಬುದರ ಮೊದಲ ಚರಣ ಹೀಗಿದೆ:

ಅಡಿಯ ಗೆಜ್ಜೆ ನಡುಗೆ, ಹೆಜ್ಜೆಯಿಡುತ ಸುಗ್ಗಿ ಬರುತಿದೆ
ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗ ಸೊಗವ ತರುತಿದೆ
ಕಣಿವೆಯಿಳಿದು ತೆಮರನೇರಿ,
ತರುಗಳಲ್ಲಿ ತಳಿರ ಹೇರಿ,
ಹೊಸತು ಜೀವಕಳೆಯ ಬೀರಿ,
ಸುಗ್ಗಿ ಮೂಡುತಿರುವುದು
ಬನದ ಬಿನದದಿನಿದು ನಿನದ ಮನದೊಳಾಡುತಿರುವುದು

ಡಿ. ವಿ. ಗುಂಡಪ್ಪನವರು ಈ ಪಂಕ್ತಿಗಳನ್ನು ಉದಹರಿಸಿ ಹೇಳಿ “ಇದನ್ನು ಬರೆಯುವ ಕವಿಗಳಿದ್ದಾರೆ.  ಇನ್ನು ಕನ್ನಡಕ್ಕೆ ಭಯವಿಲ್ಲ” ಎಂದು ಉದ್ಗರಿಸಿದರಂತೆ!  1936ರಲ್ಲಿ ಅವರ ಖಂಡಕಾವ್ಯ ‘ಚಿತ್ರಾಂಗದಾ’ ಪ್ರಕಟವಾಯಿತು.  ಇದು ಕನ್ನಡದ ಮೊದಲ ಖಂಡಕಾವ್ಯ.  1937ರಲ್ಲಿ ಅವರ ಮದುವೆಯಾಯಿತು.  ಸಂಸಾರ ಅವರಿಗೆ ಪೂಜೆಯಾಯಿತು.    

1933ರಿಂದ 36ರವರೆಗೆ ಅವರು ಕಾದಂಬರಿಯ ರಚನೆಯಲ್ಲಿ ತೊಡಗಿದರು.  1938ರಲ್ಲಿ ‘ಕಾನೂರು ಹೆಗ್ಗಡಿತಿ’ ಪ್ರಕಟವಾಯಿತು. ಕನ್ನಡದಲ್ಲಿ ಆ ಪ್ರಮಾಣದಲ್ಲಿ ರಚಿತವಾದ ಪ್ರಪ್ರಥಮ ಸಾಮಾಜಿಕ ಕಾದಂಬರಿ ಅದೇ.  ಅದರ ವೈಶಿಷ್ಟ್ಯಗಳು ಅನೇಕ.  ಅಂದಿನ ದಿನ ಮಲೆನಾಡಿನ ಕಾಡು ಬೆಟ್ಟಗಳ ಚಿತ್ರಣ; ವಿವಿಧ ರೀತಿಯ ಭೇಟೆಗಳ ವಾಸ್ತವಿಕ ವರ್ಣನೆ;  ಕನ್ನಡ ನಾಡಿನ ಇತರ ಭಾಗಗಳಿಗಿಂತ ತೀರ ಭಿನ್ನವಾಗಿದ್ದ ಪ್ರದೇಶವೊಂದರ ಆತ್ಮೀಯವಾದ ಪರಿಚಯ;  ಆಳವಾದ ಜೀವನಾನುಭವದ ರಮ್ಯ ನಿರೂಪಣೆ; ರಾಗದ್ವೇಷಗಳ ವರ್ಣರಂಜಿತ ವ್ಯಾಖ್ಯಾನ; ಸಮಯೋಚಿತ ಹಾಸ್ಯ; ಮಲೆನಾಡಿಗೇ ವಿಶಿಷ್ಟವಾದ ಕನ್ನಡ ಭಾಷೆಯ ಸೊಗಸು; ಸಾಮಾಜಿಕ ಪ್ರಜ್ಞೆ; ಮಣ್ಣನ್ನು ನಿಜವಾಗಿ ಬಲ್ಲ ವಿರಳ ಲೇಖಕರಲ್ಲಿ ಒಬ್ಬರಾದ ಈ ಕವಿ ಸಹಜವಾಗಿ, ಅಪ್ರಯತ್ನ ಪೂರ್ವಕವಾಗಿ, ವ್ಯಾಪಕವಾಗಿ ಹೊಮ್ಮಿಸಿರುವ ಮಣ್ಣಿನ ವಾಸನೆ; ಇನ್ನೂ ಅನೇಕ.  
 
ಕುವೆಂಪು ಅವರ ಮತ್ತೊಂದು ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕಾನೂರು ಹೆಗ್ಗಡತಿ ಪ್ರಕಟವಾದ ಮೂವತ್ತು ವರ್ಷಗಳ ಬಳಿಕ ಪ್ರಕಟವಾಯಿತು.  ಇದರ ವಸ್ತು ಶುದ್ಧ ಕಾಮ.  ಇಲ್ಲಿ ಕಾಮಕ್ಕೆ ಉದಾತ್ತತೆಯ ದರ್ಬಾರು ಪೋಷಾಕನ್ನಾಗಲಿ, ನಮ್ಮ ಇತರ ಅನೇಕ ಲೇಖಕರು ಆರೋಪಿಸುವ ಬಡತನದ ಚಿಂದಿಯನ್ನಾಗಲಿ ಉಡಿಸಿಲ್ಲ.  ಕಾಮ ಮತ್ತು ಅದರ ಸಹಚರಿಯಾದ ಜೀವ ಕಾಮಗಳು ಇಲ್ಲಿ ಸಹಜ ಸ್ಥಿತಿಯಲ್ಲಿ, ಸ್ವಚ್ಚಂದವಾಗಿ ವಿಹರಿಸಿವೆ.  ಕನ್ನಡದ ಅತ್ಯುತ್ತಮ ಕಾದಂಬರಿಗಳು ‘ಕಾನೂರು ಹೆಗ್ಗಡತಿ ಮತ್ತು ‘ಮಲೆಗಳಲ್ಲಿ ಮದುಮಗಳು’.

1945ರಲ್ಲಿ ಕುವೆಂಪು ಕನ್ನಡ ಪ್ರಾಧ್ಯಾಪಕರೂ ಇಲಾಖೆಯ ಮುಖ್ಯಸ್ಥರೂ ಆದರು.  1949ರಲ್ಲಿ ಅವರ ಮೇರುಕೃತಿ ‘ಶ್ರೀರಾಮಾಯಣ ದರ್ಶನಂ’ ಪ್ರಕಟವಾಯಿತು.  25,000 ಪಂಕ್ತಿಗಳ ಮಹಾಕಾವ್ಯವಿದು.  ಕುವೆಂಪು ವಾಲ್ಮೀಕಿ ರಾಮಾಯಣವನ್ನು ಉತ್ತಮ ಪಡಿಸುತ್ತೇನೆ ಎಂದು ಈ ಕಾರ್ಯಕ್ಕೆ ಹೋಗಿಲ್ಲ.  ಈ ಯುಗದ ಹೊಸ ಕಾಣ್ಕೆಯ ಹಿನ್ನಲೆಯಲ್ಲಿ ಹೊಸ ರೀತಿಯಿಂದ ಹೇಳುತ್ತೇನೆ ಎಂದರು.  ಅವರ ಕಣ್ಣಿನಲ್ಲಿ ರಾಮಾಯಣ ಬರಿಯ ಕಥೆಯಲ್ಲ.  ಇತಿಹಾಸವೂ ಅಲ್ಲ.  ಅಲೌಕಿಕ ಸತ್ಯಗಳನ್ನು ಪ್ರತಿಮಿಸುವ ಸತ್ಯಸ್ಯ ಸತ್ಯ ಘಟನೆ.  ಶ್ರೀರಾಮ ಆ ಲೋಕದಿಂದ ಅವತರಿಸಿ ಬಂದು ಈ ಲೋಕ ಸಂಭವೆಯಾದ ಸೀತೆಯನ್ನು ವರಿಸುತ್ತಾನೆ.  ಆ ನೆಪದಿಂದ ಮೃತ್ ಶಕ್ತಿಯನ್ನು – ಎಂದರೆ ಬರೀ ಇಂದ್ರಿಯ ಜಗತ್ತೇ ಸತ್ಯ ಎಂಬುದನ್ನು ಮರ್ದಿಸಿ ಚೈತನ್ಯ ಶಕ್ತಿಯನ್ನು ಎಂದರೆ ಆತ್ಮದ ಶಕ್ತಿಯನ್ನು ಬೆಳಗುತ್ತಾನೆ.

 ಕುವೆಂಪು ಷೇಕ್ಸ್ ಪಿಯರನ ನಾಟಕಗಳ ರೂಪಾಂತರವಾದ ‘ಬಿರುಗಾಳಿ’(ದಿ ಟೆಂಪೆಸ್ಟ್) ಮತ್ತು ‘ರಕ್ತಾಕ್ಷಿ’(ಹ್ಯಾಮ್ಲೆಟ್)ಗಳನ್ನು ನೀಡಿದ್ದಾರೆ.  ‘ವಾಲ್ಮೀಕಿಯ ಭಾಗ್ಯ’, ‘ನನ್ನ ಗೋಪಾಲ’ (ಮಕ್ಕಳಿಗಾಗಿ ಬರೆದದ್ದು), ‘ಸ್ಮಶಾನ ಕುರುಕ್ಷೇತ್ರ’ ನಾಟಕಗಳನ್ನೂ ಬರೆದರು.  ‘ಸ್ಮಶಾನ ಕುರುಕ್ಷೇತ್ರ’ ನಾಟಕ ರಚಿಸಿದಾಗ ಅವರಿಗೆ ಕೇವಲ ಇಪ್ಪತ್ತಾರು ವರ್ಷ.  ಆ ತಾರುಣ್ಯದಲ್ಲೇ ಜೀವನವನ್ನು ಸಮಗ್ರವಾಗಿ ನೋಡಿ, ಬದುಕಿಗೆ ಏನೇನೂ ಅರ್ಥವಿಲ್ಲ ಎಂಬುದನ್ನೂ, ಅಥವ ಬದುಕಿನ ಅರ್ಥ ಇಷ್ಟೇ ಎಂಬುದನ್ನು ನಿರ್ಣಯಿಸಿ ಕಾವ್ಯವಾಣಿಯಲ್ಲಿ ಮಹಾದೇವ ಮಹಾರುದ್ರನ ಬಾಯಲ್ಲಿ  ಹೀಗೆ ಹಾಡಿಸಿರುವುದು ಆಶ್ಚರ್ಯದ ಸಂಗತಿಗಳಲ್ಲಿ ಒಂದಾಗಿದೆ:

ಎಲ್ಲ ದಾನಗಳು, ಎಲ್ಲ ಧರ್ಮಗಳು
ಕಡೆಗಿಲ್ಲಿಗೇ – ಎನ್ನ ಬಳಿಗೆ!
ಎಲ್ಲ ಪಾಪಗಳು, ಎಲ್ಲ ಎಲ್ಲ ಪುಣ್ಯಗಳು
ಕಡೆಗೊಂದು ನಗೆಗೇ – ಭಸ್ಮಮೆನಗೆ!

ಅವರ ನಾಟಕಗಳ ಪಂಕ್ತಿಯಲ್ಲಿ ಕಲೆಯ ದೃಷ್ಟಿಯಿಂದಲೂ, ದರ್ಶನ ದೃಷ್ಟಿಯಿಂದಲೂ ಅತ್ಯಂತ ಉತ್ತಮವಾದದ್ದು ‘ಬೆರಳ್ ಗೆ-ಕೊರಳ್’.  ಅಲ್ಲಿನ ಮೂರು ದೃಶ್ಯಗಳನ್ನು ಕವಿ ‘ಗುರು’, ‘ಕರ್ಮ’ ಮತ್ತು ‘ಯಜ್ಞ’ ಎಂದು ಕರೆದಿದ್ದಾರೆ.  ಏಕಲವ್ಯನ ಬೆರಳನ್ನು ದಕ್ಷಿಣೆಯಾಗಿ ಕೇಳಿ, ಅವನ ಮಾತೃ ಶಾಪಕ್ಕೆ ತುತ್ತಾಗಿ ದ್ರೋಣರು ತಮ್ಮ ಕೊರಳನ್ನೇ ಬಲಿಯಾಗಿ ತೆತ್ತರು ಎಂಬುದು ಕುವೆಂಪು ಅವರ ಕಾಣ್ಕೆ.   

ಕುವೆಂಪು ಸಾವಿರಾರು ಕವನಗಳನ್ನು ರಚಿಸಿದ್ದಾರೆ.  ಕಾವ್ಯ ಮೀಮಾಂಸೆಯ ಕ್ಷೇತ್ರಕ್ಕಂತೂ ಅವರು ನೀಡಿರುವ ಕೊಡುಗೆ ಅಪೂರ್ವವಾದುದು ಎಂದು ಎಲ್ಲ ಪಂಡಿತರ ಅಭಿಪ್ರಾಯ.  ಅವರದು ‘ದರ್ಶನ ವಿಮರ್ಶೆ’.

ಕುವೆಂಪು ಅವರದು ಪ್ರಧಾನತಃ ವಿಚಾರಶೀಲ ವ್ಯಕ್ತಿತ್ವ, ಕ್ರಾಂತಿಕಾರಕ ಮನೋಭಾವ.  ಸಮಾಜದಲ್ಲಿನ ಎಲ್ಲ ವಿಧವಾದ ಅಸಮಾನತೆಗಳೂ ಹೋಗಬೇಕು ಎಂದು ಉಗ್ರವಾಗಿ ಗದ್ಯದಲ್ಲಿ, ಹೃದಯಂಗಮವಾಗಿ ಪದ್ಯದಲ್ಲಿ ವಾದಿಸಿದ್ದಾರೆ.  ಅವರು ಮೌಢ್ಯಕ್ಕೆ ಪರಮ ಶತ್ರು.  ಜಾತಿಪದ್ಧತಿ ನಿರ್ಮೂಲಗೊಳ್ಳದೆ ಈ ದೇಶದ ಜನರ ಉದ್ಧಾರ ಅಸಾಧ್ಯ ಎಂದು ಒತ್ತಿ ಒತ್ತಿ ಹೇಳಿದ್ದಾರೆ.  ಅವರು ಸದಾ ಜಪಿಸುತ್ತಿದುದು “ವಿಶ್ವಮಾನವ ಮಂತ್ರ”.  “ಜಾತಿ, ದೇಶ, ಭಾಷೆ ಇವುಗಳ ಕಿರು ಪ್ರಪಂಚದಿಂದ ಮನುಷ್ಯ ಒಂದಲ್ಲ ಒಂದು ದಿನ ಹೊರಬಂದು ವಿಶಾಲವಾದ ವಿಶ್ವಮಾನವನಾಗುತ್ತಾನೆ” ಎಂಬ ವಿಶ್ವಾಸ ಅವರಲ್ಲಿ ಅಚಲವಾಗಿತ್ತು.  “ಯಾವ ವ್ಯಕ್ತಿಯೂ ಯಾವುದೇ ಜಾತಿಯ ಶಿಶುವಲ್ಲ; ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲೂ ಅವನದೇ ಆದ ಧರ್ಮ ಇದೆ.  ಈ ಜಗತ್ತಿನಲ್ಲಿ ಎಷ್ಟು ಜನ ವ್ಯಕ್ತಿಗಳಿದ್ದಾರೆಯೋ ಅಷ್ಟು ಧರ್ಮಗಳಿರಲಿ” ಎಂಬ ಸ್ವಾಮಿ ವಿವೇಕಾನಂದರ ವಾಣಿ ಮಾನವತೆಯ ಜೀವನ ಧರ್ಮವಾಗಲಿ ಎಂಬ ಹಾರೈಕೆ ಅವರದು.  

ತನ್ನ ಮೆಚ್ಚಿನ ಕವಿಗೆ ಕನ್ನಡದ ಜನತೆ, ಸರ್ಕಾರ, ವಿಶ್ವವಿದ್ಯಾನಿಲಯಗಳು, ಕೇಂದ್ರ ಸರ್ಕಾರ, ರಾಜ್ಯ – ಕೇಂದ್ರ ಸಾಹಿತ್ಯ ಅಕಾಡೆಮಿಗಳು – ಎಲ್ಲ ಬಗೆಯ ಅತ್ಯುನ್ನತ ಗೌರವಗಳನ್ನೂ ನೀಡಿವೆ.  1956ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.  1968ರಲ್ಲಿ ‘ಜ್ಞಾನಪೀಠ’ ಪ್ರಶಸ್ತಿ ‘ಶ್ರೀರಾಮಾಯಣದರ್ಶನಂ’ ಕೃತಿಗೆ ದೊರಕಿತು.  1988ರಲ್ಲಿ ಪಂಪ ಪ್ರಶಸ್ತಿ ಕೂಡ ಆ ಕೃತಿಗೆ ನೀಡಲಾಯಿತು. ರಾಷ್ಟ್ರಕವಿ ಗೌರವವನ್ನು ಅರ್ಪಿಸಲಾಯಿತು.   ಈ ಎಲ್ಲಾ ಗೌರವಗಳೂ ಹಿಮಾಚಲ ಭಾರವಾಗಬಹುದಾದವು.  ಆದರೆ ಹೂ ಹಗುರವಾಗಿ ಅವರನ್ನು ಅಲಂಕರಿಸಿದವು.  ಹಲವು ವರ್ಷಗಳ ‘ಉದಯರವಿ’ಯಲ್ಲಿನ ಅವರ ತಪೋಜೀವನವನ್ನು ಅಂತ್ಯಗೊಳಿಸಿದ ಈ ಮಹಾನ್ ವಿಶ್ವಮಾನವರು 1994ರ ನವೆಂಬರ್ 10ರಂದುಈ ಲೋಕವನ್ನಗಲಿದರು.

(ಆಧಾರ: ಪ್ರಭುಶಂಕರ ಅವರು ಕುವೆಂಪು ಕುರಿತು ಬರೆದಿರುವ ‘ಸಾಲು ದೀಪಗಳು’ ಕೃತಿಯಲ್ಲಿನ ಬರಹ)

On the birth anniversary of our great poet Dr. K.V. Puttappa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ