ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ವಿ. ಕಾಮತ್


 ಕೆ. ವಿ.  ಕಾಮತ್


ಕೆ. ವಿ. ಕಾಮತ್ ಭಾರತೀಯ ಮತ್ತು ವಿಶ್ವಬ್ಯಾಂಕಿಂಗ್  ಕ್ಷೇತ್ರಕ್ಕೆ ಕನ್ನಡ ನಾಡಿನ ಹೆಮ್ಮೆಯ ಕೊಡುಗೆ.  ಬ್ರಿಕ್ಸ್ ದೇಶಗಳ ಒಕ್ಕೂಟದ ನ್ಯೂ ಡೆವಲಪ್ಮೆಂಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷರಾಗಿದ್ದ ಕಾಮತ್ ಅವರು ಐಸಿಐಸಿಐ ಬ್ಯಾಂಕಿನ ಆಧುನಿಕ ರೀತಿಯ ಗ್ರಾಹಕ ಸೇವೆಗಳ ಸೃಜನೆಯ ಮೂಲಕ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಧುನಿಕತೆಯ ಹೊಸಗಾಳಿಯನ್ನು ತಂದವರು.

ಕುಂದಾಪುರ ವಾಮನ ಕಾಮತರು 1947ರ ಡಿಸೆಂಬರ್ 2ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ವಿಶ್ವನಾಥ ಕಾಮತ್ ಕುಂದಾಪುರದ ಮೂಲದವರು.  ಮಂಗಳೂರಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ವಾಮನ ಕಾಮತ್ ಅವರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಓದಿ ಸುರತ್ಕಲ್ನಲ್ಲಿ  1969ರಲ್ಲಿ ಮೆಕಾನಿಕಲ್ ಇಂಜನಿಯರಿಂಗ್ ಪದವಿ ಪಡೆದರು. 1971ರಲ್ಲಿ ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಸ್ನಾತಕೋತ್ತರ ಡಿಪ್ಲೋಮಾ ಪಡೆದರು.

ಕಾಮತರು ಇಂಡಸ್ಟ್ರಿಯಲ್ ಕ್ರೆಡಿಟ್ ಅಂಡ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ರೂಪದಲ್ಲಿದ್ದ  ಅಂದಿನ ಐಸಿಐಸಿಐ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದರು. ಈ  ಸಂಸ್ಥೆಯ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸಮಾಡಿ ಐಸಿಐಸಿಐನ ಗಣಿಕೀಕರಣ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಇವರ ಆ ಕಾಲದ ಈ ಸಾಧನೆ ಇಂದೂ ಐಸಿಐಸಿಐಯನ್ನು ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ. ಈ ಮೂಲಕ ಆ ಸಂಸ್ಥೆಗೆ ಸ್ಪರ್ಧಾತ್ಮಕ ವಿಶಿಷ್ಟ ಅನುಕೂಲತೆಗಳನ್ನು ಸೃಜಿಸಿಕೊಟ್ಟರು.

1988ರಲ್ಲಿ ಕಾಮತರು ಮನಿಲಾದಲ್ಲಿರುವ ಏಷಿಯನ್ ಡೆವೆಲಪ್‍ಮೆಂಟ್ ಬ್ಯಾಂಕನ್ನು (ಎಡಿಬಿ) ಸೇರಿ ಭಾರತವಲ್ಲದೆ, ಚೀನಾ, ಬಾಂಗ್ಲಾದೇಶ, ಇಂಡೋನೇಷ್ಯಾ, ಫಿಲಿಪೈನ್ಸ್,  ವಿಯೆಟ್ನಾಂ ದೇಶಗಳಲ್ಲಿ ಹಲವಾರು ಯೋಜನೆಗಳಲ್ಲಿ ಕೆಲಸಮಾಡಿ ಅಪಾರ ಅನುಭವ ಪಡೆದುಕೊಂಡರು.

1996ರ ಮೇ ತಿಂಗಳಿನಲ್ಲಿ ಕಾಮತ್‍ ಐಸಿಐಸಿಐ'ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಾಧಿಕಾರಿಗಳಾಗಿ ಮರಳಿದರು. ಹಲವಾರು ಗ್ರಾಹಕಸ್ನೇಹಿ ಕ್ರಮಗಳು, ಸೇವಾ ವಿಸ್ತರಣೆ ಮತ್ತು ಹಲವಾರು ವಿತ್ತೀಯ ಸಂಸ್ಥೆಗಳ ವಿಲೀನ ಪ್ರಕ್ರಿಯೆಗಳಿಂದ  ಒಟ್ಟು ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಪಾತ್ರವಹಿಸಿದರು. ಹೀಗೆ ಬೃಹತ್ ಐಸಿಐಸಿಐ ಬ್ಯಾಂಕ್‍  ಉದಯಿಸಿ ಬೆಳೆಯಿತು.

2011ರ ಮೇ ಮಾಸದಲ್ಲಿ ಕೆ. ವಿ. ಕಾಮತ್ ಆಡಳಿತ ಬದಲಾವಣೆಯ ಗೊಂದಲಗಳಲ್ಲಿದ್ದ  ಇನ್ಫೋಸಿಸ್‍ ಸಂಸ್ಥೆಯ ನಾನ್-ಎಕ್ಸಿಕ್ಯೂಟಿವ್ ಚೇರ್ಮನ್ನರಾಗಿ ಅಧಿಕಾರವಹಿಸಿಕೊಂಡು ಅದಕ್ಕೆ ಗಣನೀಯ ಸಮತೋಲನ ತಂದುಕೊಟ್ಟರು.  ಕೆಲಕಾಲದ ನಂತರ ಪುನಃ ನಾರಾಯಣಮೂರ್ತಿಯವರ ಆಗಮನಕ್ಕೆ ಎಡೆಮಾಡಿಕೊಟ್ಟು ಮುಂದೆ ಆ ಸಂಸ್ಥೆಯ ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ಇನ್ಫೋಸಿಸ್ ಆಡಳಿತ ಮಂಡಲಿಯಲ್ಲಿದ್ದಾರೆ.

ಕಾಮತ್‍ರವರು ಹಲವಾರು ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವುಗಳಲ್ಲಿ  ಅಹಮದಾಬಾದ್ ಮತ್ತು ಇಂದೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಇಂಡಿಯನ್ ಸ್ಕೂಲ್ ಆಫ್ ಬುಸಿನೆಸ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮೆನೇಜ್‍ಮೆಂಟ್, ಪಂಡಿತ್ ದೀನದಯಾಳ್ ಪೆಟ್ರೋಲಿಯಮ್ ವಿಶ್ವವಿದ್ಯಾಲಯ, ಗಾಂಧೀನಗರ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ನ್ಯಾಷನಲ್ ಕೌನ್ಸಿಲ್ ಆಫ್  ಕನ್ಪಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಸ್ (ಸಿಐಐ) ಸೇರಿವೆ.‍

ಕೆ. ವಿ. ಕಾಮತ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯೇ ಅಲ್ಲದೆ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆಗಳು, ಫೋರ್ಬ್ಸ್, ಸಿಎನ್‍ಬಿಸಿ, ಎಕನಾಮಿಕ್ ಟೈಮ್ಸ್ ಮುಂತಾದವುಗಳ ಪ್ರತಿಷ್ಟಿತ ಗೌರವಗಳೂ ಸಂದಿವೆ.

ಮಹಾನ್ ಸಾಧಕರಾದ ನಮ್ಮ ಕನ್ನಡಿಗರಾದ ಕೆ. ವಿ. ಕಾಮತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಹೇಳೋಣ.

On the birthday of our great name in International Banking,  Kundapura Vaman Kamath Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ