ಆರ್. ಲಕ್ಷ್ಮೀನಾರಾಯಣ
ಆರ್. ಲಕ್ಷ್ಮೀನಾರಾಯಣ
ಡಾ. ಆರ್. ಲಕ್ಷ್ಮೀನಾರಾಯಣ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವೂ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾದ ಸಾಹಿತಿಗಳಾಗಿ, ಅನೇಕ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರಾಚಾರ್ಯರಾಗಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ಆರ್. ಲಕ್ಷ್ಮೀನಾರಾಯಣ ಅವರು 1949ರ ಡಿಸೆಂಬರ್ 2ರಂದು ತುಮಕೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿರುವ ಇವರು ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಹಾಗೂ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿ, ಕೆಲಕಾಲ ಧಾರವಾಡದಲ್ಲಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಡಾಕ್ಟರೇಟ್ ಗೌರವ ಸಹಾ ಇವರ ಮಹಾ ಪ್ರಬಂಧಕ್ಕೆ ಸಂದಿದೆ.
ಲಕ್ಷ್ಮೀನಾರಾಯಣ ಅವರ ಕೃತಿಗಳಲ್ಲಿ ಮಾಸ್ತಿ, ಆಹ್ಲಾದ, ಎಸ್.ವಿ. ಪರಮೇಶ್ವರ ಭಟ್ಟ, ಚಿನ್ನದ ಕಳಶ, ಬರ್ಟೋಲ್ಟ್ ಬ್ರೆಕ್ಸ್, ವಾಜಿಯ ವಿವೇಕ, ಇನ್ನೊಬ್ಬ ದ್ರೋಣಾಚಾರ್ಯ, ಅನುರೂಪ, ಬದುಕಿನ ಇನ್ನೊಂದು ಹಾದಿ, ಬೇಗುದಿ, ವಕ್ರೋಕ್ತಿ ಜೀವಿತ, ಕನ್ನಡ ವಕ್ರೋಕ್ತಿ ಜೀವಿತ, ಹಳಗನ್ನಡ ಪ್ರಾಕಾರಗಳು, ಹಾಲು ಮತ್ತು ಹಂಸ-ವಿಮರ್ಶಾ ಬರಹಗಳ ಸಂಕಲನ, ಪ್ರಾತಿನಿಧಿಕ ನೇಪಾಳೀ ಕಥೆಗಳು, ಕುವೆಂಪೂ ಕೇ ಚುನೇ ಹುಯೇ ನಿಬಂಧ್ ಎಂಬ ಕುವೆಂಪು ಲೇಖನಗಳ ಹಿಂದೀ ಅನುವಾದ ಮುಂತಾದವು ಸೇರಿವೆ. ಪ್ರಾಕೃತ-ಕನ್ನಡ ನಿಘಂಟು ಇವರ ಮತ್ತೊಂದು ಮಹತ್ವದ ಕೊಡುಗೆ.
ಲಕ್ಷ್ಮೀನಾರಾಯಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಗೊರೂರು ಸಾಹಿತ್ಯ ಪ್ರಶಸ್ತಿ, ಕನ್ನಡ ಭಾಷಾ ಭಾರತಿ ಗೌರವ ಪುರಸ್ಕಾರ, ಉತ್ತರ ಪ್ರದೇಶ ಸರ್ಕಾರದ ‘ಹಿಂದಿ ಸಂಸ್ಥಾನ’ ನೀಡುವ ‘ಸೌಹಾರ್ದ ಸಮ್ಮಾನ’ ಮತ್ತು ಸಂಸ್ಕೃತ ಕಾವ್ಯಾಧಾರಿತ 'ಕನ್ನಡ ವಕ್ರೋಕ್ತಿಜೀವಿತ'ದ ಅನುವಾದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಪೂಜ್ಯ ಹಿರಿಯರಾದ ಲಕ್ಷ್ಮೀನಾರಾಯಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday DrLakshminarayana Ramanna Sir 🌷🙏🌷
ನಮಸ್ಕಾರ
ಪ್ರತ್ಯುತ್ತರಅಳಿಸಿ