ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೆಕ್ ಚಂದ್


ನೆಕ್ ಚಂದ್


ಒಬ್ಬ ಕಲೆಗಾರ ತನಗರಿವಿಲ್ಲದೆ ಒಂದು ಹೊಸ ಲೋಕವನ್ನೇ ಸೃಷ್ಟಿಸಿಬಿಡಬಲ್ಲ.  ಹೀಗೆಂದರೆ ಇದೊಂದು ಉಪಮೆ ಎಂದುಕೊಳ್ಳಬೇಕಿಲ್ಲ.  ನೆಕ್ ಚಂದ್ ಸೈನಿ ಅಂತಹ ಕೆಲಸ ಮಾಡಿಹೋದವರು.  ನೀವು ಭಾರತದಲ್ಲೇ ಸುವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಚಂಡೀಗಢಕ್ಕೆ ಹೋದರೆ ಅದರ ಹೊರವಲಯದಲ್ಲಿರುವ ಸುಂದರ ಸುಖ್ನಾ ಸರೋವರದ ಬಳಿ ರಾಕ್ ಗಾರ್ಡನ್ ಕಂಡಿರುತ್ತೀರಿ.  ಅದನ್ನು ಸೃಷ್ಟಿಸಿದವರೇ ನೆಕ್ ಚಂದ್.

ನೆಕ್ ಚಂದ್ 1924ರ ಡಿಸೆಂಬರ್ 15ರಂದು ಜನಿಸಿದರು.  ಅವರು ಮೂಲತಃ ಈಗ ಪಾಕಿಸ್ಥಾನದಲ್ಲಿರುವ ಗುರುದಾಸಪುರ ಜಿಲ್ಲೆಯಲ್ಲಿರುವ ಶಂಕರಗಢದವರು. 1947ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ಅವರ ಕುಟುಂಬ ಭಾರತಕ್ಕೆ ವಲಸೆ ಬಂತು. ಆಗಷ್ಟೆ ನಿರ್ಮಾಣದ ಹಂತದಲ್ಲಿದ್ದ ಭಾರತದ ಪ್ರಥಮ ಸಂಪೂರ್ಣ ಯೋಜನಾಬದ್ಧ ನಗರ ಚಂಡೀಗಢದಲ್ಲಿ ಅವರಿಗೆ ಕೆಲಸ ದೊರೆಯಿತು. ನೆಕ್ ಚಂದ್ ಅವರು ಅಲ್ಲಿನ ರಸ್ತೆಗಳ ಉಸ್ತುವಾರಿಯಲ್ಲಿ ಕೆಲಸ ಮಾಡಿದರು. 

ನೆಕ್ ಚಂದ್ ಮೂಲತಃ ಒಬ್ಬ ಶಿಲ್ಪಿಯಾಗಿದ್ದರು. ಅವರೊಳಗಿದ್ದ ಕಲಾವಿದ ನಿರಂತರ ಎಚ್ಚರವಾಗಿದ್ದ.  ಅವರು ತಮ್ಮ ಉದ್ಯೋಗವಾದ ರಸ್ತೆ ಕೆಲಸದ ಉಸ್ತುವಾರಿ ನಡೆಸುತ್ತಿದ್ದಾಗ ಸಾಕಷ್ಟು ಕಸ, ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದರು. ಅವನ್ನೆಲ್ಲ ಪಕ್ಕದ ಸರಕಾರಿ ಕಾಡಿನಲ್ಲಿ ಸುರಿಯುತ್ತಿದ್ದರು. ತಮ್ಮ ಕೆಲಸದ ಅವಧಿ ಮುಗಿಯುತ್ತಿದ್ದಂತೆ ಈ ಕಾಡಿಗೆ ಹೋಗಿ ಅಲ್ಲಿ ಈ ತ್ಯಾಜ್ಯಗಳಿಂದ ಅದ್ಭುತ ಶಿಲ್ಪಗಳನ್ನು ಸೃಷ್ಟಿಸುತ್ತಿದ್ದರು. ಯಾರಿಗೂ ತಿಳಿಯದಂತೆ ಸುಮಾರು 18 ವರ್ಷಗಳ ಕಾಲ ಅವರು ತಮ್ಮ ಗುಟ್ಟಿನ ಕಾಯಕವನ್ನು ಮುಂದುವರಿಸಿ ಒಂದು ಸುಂದರ ಶಿಲ್ಪೋದ್ಯಾನವನ್ನೇ ಸೃಷ್ಟಿಸಿಬಿಟ್ಟಿದ್ದರು. ಅದೂ ಹದಿನೆಂಟು ಎಕರೆಗಳನ್ನು ವ್ಯಾಪಿಸುವಷ್ಟು ವಿಶಾಲವಾಗಿ.

ಎಲ್ಲೋ ಒಂದು ಜಾಗದಲ್ಲಿ ಹೀಗೆ ಒಂದು ಸುಂದರ ಲೋಕ ಸೃಷ್ಟಿಯಾಗುವುದು ಪುರಾಣದಲ್ಲಿ ಓದೋಕೆ ಚೆನ್ನ.  ಆದರೆ ಈಗಿನ ಯುಗದ ವಾಸ್ತವಲೋಕದಲ್ಲಿ ಅದನ್ನು ಕಾನೂನು ಒಪ್ಪುವುದೆಂತು? ಇದೆಲ್ಲ ಕಾನೂನುಬದ್ಧವಾಗಿಲ್ಲ,  ಜಾಗ ಖಾಲಿ ಮಾಡು ಅಂತು ಸರಕಾರಿ ಆಡಳಿತ ವ್ಯವಸ್ಥೆ. ಹೀಗೆ ಸರಕಾರ ಅದನ್ನು ಅಳಿಸಿಹಾಕಲು ಮುಂದಾದಾಗ ನೆಕ್ ಚಂದ್ ಅಲ್ಲಿನ ಸ್ಥಳೀಯ ಜನರ ಸಹಾಯ ಪಡೆದರು. ಅದನ್ನು ಒಡೆದು ಹಾಕದಂತೆ ಜನರು ಸರಕಾರಕ್ಕೆ ಒತ್ತಡ ಹೇರಿದರು. ಜನರ ಒತ್ತಡಕ್ಕೆ ಮಣಿದ ಸರಕಾರ ಆ ಉದ್ಯಾನವನವನ್ನೇ ಅಧಿಕೃತ ಮಾಡಿ, ಅದಕ್ಕೆ ನೆಕ್ ಚಂದ್ ಅವರನ್ನೇ ಅಧಿಕಾರಿಯಾಗಿ ನೇಮಿಸಿ ಅವರ ಕೈಕೆಳಗೆ ಕೆಲಸ ಮಾಡಲು 50 ಜನರ ತಂಡವನ್ನೂ ನೇಮಿಸಿತು. ಹೀಗೆ ಹೊಸ ಉತ್ಸಾಹದಿಂದ ಕೆಲಸ ಮಾಡಿದ ನೆಕ್ ಚಂದ್ ರಾಕ್ ಗಾರ್ಡನ್ಗೆ ವಿಶಿಷ್ಟ ಶೊಭೆ ನೀಡಿದರು. ಈ ರಾಕ್ ಗಾರ್ಡನ್ ಸುಮಾರು 40 ಎಕರೆ ಪ್ರದೇಶವನ್ನು ವ್ಯಾಪಿಸಿದ್ದು ಈಗ ರಾಕ್ ಗಾರ್ಡನ್ ಸೊಸೈಟಿ ನೋಡಿಕೊಳ್ಳುತ್ತಿದೆ. ರಾಕ್ ಗಾರ್ಡನ್ ಅನ್ನು ವೀಕ್ಷಿಸಲು ಪ್ರತಿನಿತ್ಯ ಸಹಸ್ರಾರು ಜನ ಭೇಟಿ ನೀಡುತ್ತಾರೆ. 

ಭಾರತ ಸರಕಾರವು ನೆಕ್ ಚಂದ್ಅವರಿಗೆ 1984ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 

ನೆಕ್ ಚಂದ್ ಅವರು 2015ರ ಜೂನ್ 12ರಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು.

On the birth anniversary of Nek Chand wo created Rock Garden of Chandigarh




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ