ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೇತೋವನ್


 ಲುಡ್ವಿಗ್ ವಾನ್ ಬೇತೋವನ್


ಲುಡ್ವಿಗ್ ವಾನ್ ಬೇತೋವನ್ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ಕಲಾವಿದರಲ್ಲೊಬ್ಬನೆಂದು ಹೆಸರಾಗಿದ್ದಾನೆ. ಆತನೊಬ್ಬ ಮಹಾನ್ ಪ್ರತಿಭಾನ್ವಿತ ವಾದ್ಯಗಾರ, ಕೃತಿ ರಚನಕಾರ ಮತ್ತಿ ಸಂಗೀತ ಸಂಯೋಜಕ.

ಬೇತೋವನ್ನನ ಶ್ರೇಷ್ಠ ಕೃತಿಗಳ ರಚನೆ ಆದದ್ದು ಆತ ಪೂರ್ತಿ ಕಿವುಡನಾದ ಮೇಲೆ.  ಪರಮಭವ್ಯ ಸಂಗೀತವೊಂದು ಅದನ್ನು ಆಲಿಸಿ ಆನಂದಿಸಲಾಗದವನ ಕೊಡುಗೆ ಎಂದರೆ ತುಸು ವಿಚಿತ್ರವೆನಿಸುತ್ತದೆ. ಬೇತೋವನ್ನನ ಭೌತ ಶ್ರವಣೇಂದ್ರಿಯ ನಿಷ್ಕ್ರಿಯವಾದರೂ ಆತನ ಅಂತರಿಕ ಸಂವೇದನೆಗಳು ಸದಾ ಜಾಗೃತವಾಗಿದ್ದು,  ಕೋಮಲ ಮತ್ತು ಸುಕುಮಾರ ರಚನೆಗಳು ಆತನಿಂದ ನಿರಂತರವಾಗಿ ಪ್ರಕಟವಾಗುತ್ತಲೇ ಇದ್ದುವು.

ಪಶ್ಚಿಮ ಜರ್ಮನಿಯ ಬಾನ್ ನಗರದಲ್ಲಿ ಲುಡ್ವಿಗ್ ವಾನ್ ಬೇತೋವನ್ 1770ರ ಡಿಸೆಂಬರ್ 17ರಂದು ಜನಿಸಿದ.  ಇವರದು ವೃತ್ತಿ ಸಂಗೀತಗಾರರ ಮನೆತನ. ಅಜ್ಜ (ಹಿರಿಯ) ಲುಡ್ವಿಗ್ ಹೆಸರಾಂತ ಪಿಟೀಲುವಾದಕ ಮತ್ತು ಗಾಯಕ. ತಂದೆ ಯೋಹನ್ ಪಿಟೀಲು ವಾದಕ. ನಗರದ ವಾದ್ಯ ಮೇಳಗಳಲ್ಲಿ ಇವನ ಹುದ್ದೆ. ಯೋಹನ್ನನ ಹೆಂಡತಿ ಮೇರಿಯಾ. ಇವರದು ವಿಷಮ ವಿವಾಹ. ಗಂಡ ಕುಡುಕ ಮತ್ತು ಕಡು ಕೋಪಿಷ್ಠ, ದುಂದುಗಾರ, ಎಷ್ಟು ಹಣವಿದ್ದರೂ ಸಾಲದು. ಹೆಂಡತಿ ಸರಳೆ ಮತ್ತು ಸಂಕೋಚಶೀಲೆ, ಬಡತನದ ಬವಣೆಯಲ್ಲೂ  ಮನೆಯ ಐಕ್ಯ ಮತ್ತು ಓರಣ ಕಾಯ್ದುಕೊಂಡಿದ್ದ ಜಾಣೆ. ಇವರ ಮಗನೇ (ಕಿರಿಯ) ಲುಡ್ವಿಗ್ ವಾನ್ ಬೇತೋವನ್. ಇವನಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅಜ್ಜ (ಹಿರಿಯ) ಲುಡ್ವಿಗ್ ತೀರಿಕೊಂಡ (1773).  ಕುಡುಕ ತಂದೆ ಯೋಹನ್ನನು,  ಮಗನನ್ನು ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧನಾಗಿಸಬೇಕೆಂದು ಸಂಗೀತ ಶಿಕ್ಷಣಕ್ಕಿಂತಲೂ ಹೆಚ್ಚಾಗಿ ದೈಹಿಕ ಶಿಕ್ಷೆ ನೀಡುತ್ತಿದ್ದ. ವಾಸ್ತವವಾಗಿ ಬೇತೋವನ್ ಯಾಂತ್ರಿಕ ರೀತಿಯ ಶಿಕ್ಷಣದಿಂದ ರೂಪುಗೊಂಡ ಕಲಾವಿದನಲ್ಲ. ಜನ್ಮತಃ ಪರಿಪೂರ್ಣವಾಗಿದ್ದ ಬಾಲಪ್ರತಿಭೆ. ಯೋಹನ್ನನಿಗೆ ತನ್ನ ಮಗನ ಸುಪ್ತ ಸಾಮಥ್ರ್ಯದ ಅರಿವು ಇತ್ತು. 

ಬೆತೋವನ್ ಅಂತರ್ಮುಖಿ, ಶೀಘ್ರಕೋಪಿ, ಜನರಿಂದ ದೂರ ಇರುವ ಪ್ರವೃತ್ತಿಯವ. ಹೀಗಾಗಿ ಹಿಂಡು ಸೇರಲೊಪ್ಪದ ಈ ಬಾಲಪ್ರತಿಭೆ ತನ್ನ ಸ್ವಭಾವ ತೋರಿದ ಹಾದಿಯಲ್ಲಿ ಒಂಟಿಯಾಗಿಯೇ ಸಾಗುವುದು ಅನಿವಾರ್ಯವಾಯಿತು. ಐದನೆಯ ವರ್ಷದಿಂದ ಇವನಿಗೆ ಪಿಯಾನೊ ಮತ್ತು ಪಿಟೀಲು ಶಿಕ್ಷಣ ಆರಂಭವಾಯಿತು. ತಂದೆಯೇ ಮೊದಲ ಗುರು. ಆದರೆ ಇಬ್ಬರದೂ ಸಾಂಪ್ರದಾಯಿಕವಾಗಿ ಯಾವುದನ್ನೂ ನಡೆಯಗೊಡದ ಸ್ವಭಾವ. ಮಗನಿಗೆ ವಯಸ್ಸು ಎಂಟಾಗಿದ್ದಾಗ (1778) ಇವನನ್ನು ರಂಗ ಪ್ರವೇಶಗೊಳಿಸಲು ಯೋಹನ್ ಪ್ರಯತ್ನಿಸಿದ. ಯಶಸ್ಸು ಗಳಿಸಲಿಲ್ಲ. ಏತನ್ಮಧ್ಯೆ ಬೇರೆ ಶಿಕ್ಷಕರ ಜೊತೆ ಪಿಟೀಲು, ವಯೊಲಾ ಮತ್ತು ಪಿಯಾನೊ ವಾದ್ಯಗಳಲ್ಲಿ ಪಾಠ ಮುಂದುವರಿಯಿತು. ಎಳೆವಯಸ್ಸಿನಲ್ಲೇ ಸಂಗೀತಕೃತಿ ರಚಿಸಿದ. ಸಾಂಪ್ರದಾಯಿಕ ಶಿಕ್ಷಣ ಇವನಿಗೆ ಅಪಥ್ಯವಾಗಿತ್ತು. ಶಾಲೆಯಲ್ಲಿ ಕಲಿತದ್ದು ಅತ್ಯಲ್ಪ-ಇಟಾಲಿಯನ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಒಂದಿಷ್ಟು ಪ್ರವೇಶ ಮಾತ್ರವಿತ್ತು. ಬೆತೋವನ್ ಆರ್ಗನ್ ವಾದ್ಯದಿಂದ ಆಕರ್ಷಿತನಾದ. ಇವನಿಗೆ ಆರ್ಗನ್ ವಾದ್ಯ ಕಲಿಸಿದ ಗುರು ಕ್ರಿಶ್ಚಿಯನ್ ಗಾಟ್‍ಲೊಬ್ ನೀಫೆ.

ನೀಫೆಯ ಗುರುತ್ವದಲ್ಲಿ ಬೇತೋವನ್ನನಿಗೆ ಲೆಸ್ಸಿಂಗ್, ಶಿಲ್ಲರ್ ಮೊದಲಾದ ಸಮಕಾಲೀನ ಜರ್ಮನ್ ಕಲಾವಿದರ ಕೃತಿಗಳಿಗೆ ಪ್ರವೇಶ ದೊರೆಯಿತು. ಆಗ ಅಷ್ಟೇನೂ ಪ್ರಸಿದ್ಧಿಗೆ ಬಂದಿರದಿದ್ದ ಬಾಖ್ ಎಂಬಾತನ ಕೃತಿಗಳಲ್ಲಿ ಅಂತರ್ಗತವಾಗಿದ್ದ ಅಭಿಜಾತ ಸೌಂದರ್ಯವನ್ನು ನೀಫೆ ಶಿಷ್ಯನ ಮನಸ್ಸಿನಲ್ಲಿ ಚೆನ್ನಾಗಿ ಪಡಿಮೂಡಿಸಿದ. ಅನೇಕ ಸಂದರ್ಭಗಳಲ್ಲಿ ಗುರುವಿನ ಗೈರುಹಾಜರಿಯಲ್ಲಿ ಆರ್ಗನ್ ವಾದಕನ ಪಾತ್ರವನ್ನು ಇವನೇ ಸಮರ್ಥವಾಗಿ ನಿರ್ವಹಿಸುವುದಿತ್ತು. 1783ರಲ್ಲಿ ಬೇತೋವನ್ನನಿಗೆ ನೀಫೆ ನೇತೃತ್ವದ ವಾದ್ಯಮೇಳದಲ್ಲಿ ಪ್ರಮುಖ ಸ್ಥಾನ ದೊರೆತಿತ್ತು. 1784ರ ವೇಳೆಗೆ ಇವನೊಬ್ಬ ವೃತ್ತಿ ಆರ್ಗನ್ ವಾದಕ ಮತ್ತು ವೃತ್ತಿ ಸಂಗೀತವಿದ ಎಂಬ ಖ್ಯಾತಿ ಗಳಿಸಿದ.

ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಕೆಳವರ್ಗದಿಂದ ಬಂದಿದ್ದ ಬೇತೋವನ್ನನಿಗೆ ಸಂಗೀತವ್ಯಕ್ತಿತ್ವದ ಕಾರಣವಾಗಿ ಬುದ್ಧಿವಂತ ಜನಾಂಗಗಳೊಂದಿಗೆ ಬೆರೆಯುವ ಅವಕಾಶ ದೊರೆತಿತ್ತು. ಜರ್ಮನ್ ಸಾಹಿತ್ಯ, ತತ್ತ್ವಶಾಸ್ತ್ರ,  ಷೇಕ್‍ಸ್ಪಿಯರ್ ಕೃತಿಗಳು ಮುಂತಾದ ಪ್ರಮುಖ ಪ್ರಕಾರಗಳನ್ನು ಆಳವಾಗಿ ಅಭ್ಯಸಿಸಿದ. ಇದರಿಂದ ಇವನ ಸಹಜ ಪ್ರತಿಭೆಗೆ ಟಿಸಿಲೊಡೆದು ವಿಕಾಸವಾಗಲು ವಿಸ್ತಾರ ಕ್ಷೇತ್ರ ದೊರೆಯಿತು.  ಬುದ್ದಿವಂತರು ಇವನ ಸಂಗೀತವನ್ನು ಮೆಚ್ಚಿ ತಲೆದೂಗಿ ಪುರಸ್ಕರಿಸುತ್ತಿದ್ದಾಗಲೇ ಇವನ ವ್ಯಕ್ತಿತ್ವವನ್ನು ಕಡೆಗಣಿಸಿ ಮೂದಲಿಸಿ ತಿರಸ್ಕರಿಸುತ್ತಿದ್ದರು. ಈತ ಒರಟ. ಉಡುಪಿನಲ್ಲಿ ಓರಣವಿಲ್ಲ. ಮುಂಗೋಪಿ, ಅತಿ ಸ್ವಾಭಿಮಾನಿ, ಉನ್ನತ ಸ್ತರದ ಗೋಳೆ ಮಂದಿಯ ಕೃತಕ ವರ್ತನೆಗೆ ಎಂದೂ ಮಣಿಯದ ಸ್ವಚ್ಛಂದ ಜೀವ. ಮನೆಯಲ್ಲಿ ಅಶಾಂತಿ. ಪ್ರೇಮಪ್ರಕರಣದಲ್ಲಿ ವೈಫಲ್ಯ, ಅನಾರೋಗ್ಯ ಮುಂತಾದವುಗಳ ಜೊತೆ ಆತನ ಬದುಕು ಸಾಗಿತು.

1787ರಲ್ಲಿ ಬೇತೋವನ್ ಮೊದಲಬಾರಿಗೆ ವಿಯೆನ್ನಾಕ್ಕೆ ಹೋದ. ಅಲ್ಲಿ ಸಮಕಾಲೀನ ಐರೋಪ್ಯ ಸಂಗೀತವಿದರ ರಾಜನೆಂದು ಖ್ಯಾತನಾಗಿದ್ದ ಮೊಝಾರ್ಟನ ಭೇಟಿ ಆಯಿತು. ಬೇತೋವನ್ನನನ್ನು ಮೊಝಾರ್ಟ್ ತನ್ನ ಶಿಷ್ಯನಾಗಿ ಅಂಗೀಕರಿಸಲು ಸಮ್ಮತಿಸಿದ. ಆದರೆ ಬೆತೋವನ್ನರ ಪ್ರೀತಿಯ ತಾಯಿ ಮರಣೋನ್ಮಖಳಾಗಿದ್ದದರಿಂದ ಈತ ಬಾನ್‍ಗೆ ಧಾವಿಸುವುದು ಅನಿವಾರ್ಯವಾಯಿತು. ತಾಯಿ ಸತ್ತಳು. ಕುಡುಕ ತಂದೆಯ ಹಿಡಿತದಿಂದ ತಮ್ಮಂದಿರನ್ನು ರಕ್ಷಿಸಲು ಅವರ ಪೋಷಕತ್ವದ ಹೊಣೆಯನ್ನು ನ್ಯಾಯಾಲಯದ ಮೂಲಕ ಪಡೆದುಕೊಂಡ.

ಈ ಎಲ್ಲ ಕಷ್ಟ ಕೋಟಲೆಗಳನ್ನೂ ಮೀರಿ ಬೇತೋವನ್ನನನ ಸೃಷ್ಟಿ ಶೀಲ ಸಾಮಥ್ರ್ಯ ಮತ್ತು ವಾದನ ಕೌಶಲ ವರ್ಧಿಸಿದವು. ಆಸ್ಟ್ರಿಯಾದ ಪ್ರಸಿದ್ಧ ವಾಗ್ಗೇಯಕಾರ ಫ್ರಾನ್‍ಝ ಜೋಸೆಫ್ ಹೇಯ್ಡನ್ ಬೇತೋವನ್ನನ ಸಂಗೀತ ಪ್ರತಿಭೆ ಗಮನಿಸಿ ವಿಯೆನ್ನಾಗೆ ಬೇತೋವನ್ ಬಂದುದಾದರೆ ಪ್ರೌಢಶಿಕ್ಷಣವೀಯುವುದಾಗಿ  ಹೇಳಿದರು. 1792ರಲ್ಲಿ ಬೇತೋವನ್ ಬಾನ್‍ನಿಂದ ವಿಯೆನ್ನಾಕ್ಕೆ ಹೋದ. ಬೇತೋವನ್ ದೈತ್ಯ ಪ್ರತಿಭೆಯನ್ನು ಶಾಸ್ತ್ರದ ಸಂಕೋಲೆಯಲ್ಲಿ ಬಂಧಿಸಲು ಹೇಯ್ಡನ್ ಮಾಡಿದ ಪ್ರಯತ್ನ ವಿಫಲವಾಯಿತು. ಯಾರಿಗೂ ಶಿರಬಾಗದ ಆತ್ಮಪ್ರತ್ಯಯ ಬೇತೋವನ್ನನದು. ಹೀಗೆ ಇಬ್ಬರೂ ಸಮಾಂತರ ಹಳಿಗಳ ಮೇಲೆ ಸಾಗುತ್ತ ಎಲ್ಲಿಯೂ ಸಂಧಿಸಲಾರದೆ ಕಾಲ ಸಾಗಿತು.

ವಿಯೆನ್ನಾದಲ್ಲಿ ಬೇತೋವನ್ನನು ವಿದ್ವಾಂಸರ ಜೊತೆ ಆಧ್ಯಯನ, ಸಂಗೀತ ಪ್ರದರ್ಶನ, ಕೃತಿ ರಚನೆ ಮಾಡುತ್ತಾ ಪಿಯಾನೊ ವಾದ್ಯಕ್ಕೆ ಹೊಸ ಆಯಾಮ ನೀಡಿ ಅದರ ಸಾಧ್ಯತೆಗಳನ್ನು ವಿಶಾಲವಾಗಿಸಿದ. ಆಶು ಸಂಗೀತ ರಚನೆ ಇವನಿಗೆ ಲೀಲಾಜಾಲವಾಗಿತ್ತು. ಈ ಕ್ಷೇತ್ರದಲ್ಲಿ ಇವನಿಗೆ ಸರಿಸಮಾನನಾದ  ಇನ್ನೊಬ್ಬ ಕಲಾವಿದನಿರಲಿಲ್ಲ. 1800ರ ಸುಮಾರಿಗೆ ಈತ ಸಂಗೀತಯಾತ್ರೆ ಹೊರಟು ಪ್ರೇಗ್, ಡ್ರೆಸ್ಡನ್, ಬರ್ಲಿನ್, ಲೈಪ್ಜಿಗ್ ಮತ್ತು ಬುದಾಪೆಸ್ಟ್ ನಗರಗಳಲ್ಲಿ ಕಚೇರಿ ನೀಡಿದ. ತನ್ನ ಕೃತಿಗಳ ಹಾಗೂ ಶೈಲಿಯ ಪ್ರಚಾರ ಮತ್ತು ಕೃತಿರಚನೆಗಾಗಿ ನೂತನ ವಸ್ತು ಮತ್ತು ಭಾವನೆಗಳ ಅನ್ವೇಷಣೆ ಇವನ ಉದ್ದೇಶವಾಗಿತ್ತು. ಪ್ರಶ್ಯಾದ ದೊರೆ ಈತನ ಸಂಗೀತ ವೈಖರಿಗೆ ಮಾರುಹೋಗಿ ಸ್ವರ್ಣನಾಣ್ಯಭರಿತ ಚಿನ್ನದ ನಸ್ಯ ಕರಡಿಗೆಯನ್ನು ಉಡುಗೊರೆ ನೀಡಿ ಗೌರವಿಸಿದ.

ಬೇತೋವನ್ನನ ಪ್ರತಿಭೆ ಉಜ್ಜ್ವಲವಾಗುತ್ತದ್ದಂತೆ ಆತನ ಒರಟುತನವೂ ಅನಾಗರಿಕ ನಡವಳಿಕೆಯೂ ಜಾಸ್ತಿ ಆದುವು. ಆದರೂ ವಿಯೆನ್ನಾದ ಗಣ್ಯ ಸಂಗೀತ ಪ್ರಿಯರು ಈ ಎಲ್ಲ ವೈಯಕ್ತಿಕ ವೈಪರೀತ್ಯಗಳನ್ನೂ ಉಪೇಕ್ಷಿಸುತ್ತ ಇವನ ಸಂಗೀತ ಕೇಳಲು ತವಕಿಸುತ್ತಿದ್ದರು.  ಅವನ ಸೃಷ್ಟಿಶೀಲ ಸಾಮರ್ಥ್ಯ ಗರಿಗೆದರಿ ಚಿರಂತನ ಮೌಲ್ಯದ ಮಹಾ ಕೃತಿಗಳನ್ನು ರಚಿಸಿತು. ಅದೇ ಅವಧಿಯಲ್ಲಿ ಅವನ ಆರೋಗ್ಯ ಕ್ರಮೇಣ ಹದಗೆಡುತ್ತ ಹೋಗಿ ದೈಹಿಕವೇದನೆ ಮತ್ತು ಮಾನಸಿಕ ಮ್ಲಾನತೆ ಅಸಹನೀಯವಾದುವು. ಒಂಟಿಬಾಳ್ವೆ, ಕಿವುಡುತನ ಜಾಸ್ತಿ ಆಗುತ್ತ ಹೋಗಿ ಕೊನೆಯ ಹತ್ತು ವರ್ಷಗಳಲ್ಲಿ ಪೂರ್ಣ ಕಿವುಡನಾದ. ಹೀಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ವಿರಳವಾಗಿ ಆರ್ಥಿಕ ಅಭದ್ರತೆ ನಿತ್ಯಸಂಗಾತಿಯಾಯಿತು. ನೆಮ್ಮದಿ ಏನಿದ್ದರೂ ಕಲೆಯಿಂದ ಮಾತ್ರ. ನಿಸರ್ಗದ ರಾಗವೈವಿಧ್ಯವನ್ನು ಎಳವೆಯಲ್ಲಿಯೇ ಕೇಳಿ ಸಂಗೀತ ಸ್ವರಗಳ ವಿವಿಧ ಛಾಯೆ ಠಾಯಿ ಪಲುಕು ಬಲುಕುಗಳನ್ನು ಚೆನ್ನಾಗಿ ರೂಢಿಸಿಕೊಂಡಿದ್ದ ಬೇತೋವನ್ ತನ್ನ ಅಂತರಿಕ ಶ್ರವಣೇಂದ್ರಿಯಗಳು ತೋರಿದ ಹಾದಿಯಲ್ಲಿ ಕೃತಿರಚನೆ ಮಾಡುತ್ತ ಸಂಗೀತ ಸುಖಿಯಾಗುತ್ತಿದ್ದ. ವ್ಯಾಧಿ ಉಲ್ಬಣಿಸಿ 1827 ಮಾರ್ಚಿ 14 ರಂದು ಮರಣಹೊಂದಿದ.

ಬೇತೋವನ್ ಯಾವುದೇ ನೂತನ ಸಂಗೀತ ರೂಪಕ ಅಥವಾ ಪ್ರಕಾರದ ಸೃಷ್ಟಿಕರ್ತನಲ್ಲ. ಇವನು ಪ್ರವರ್ತಿಸಿದ  ಸಿಂಘನಿ-ಪಾಶ್ಚಾತ್ಯ ವಾದ್ಯಮೇಳದ ರೂಪವನ್ನು ಮೊದಲು ಸಿದ್ಧಪಡಿಸಿದವನು ಹೇಯ್ಡನ್.  ಆದರೆ ಈ ಲಭ್ಯ ರೂಪಕ್ಕೆ ಜೀವ ತುಂಬಿ ಉನ್ನತ ಸ್ಥಿತಿಗೇರಿಸಿದ್ದು ಬೇತೋವನ್ನನ ಪ್ರತಿಭೆ. ಇವು ಬೇತೋವನ್ನನ ನವವಾದ್ಯಮೇಳಕೃತಿಗಳೆಂದೇ ಪ್ರಸಿದ್ಧವಾಗಿವೆ. ಪಿಯಾನೊ ಸೊನಾಟಾಗಳಲ್ಲಿ ಮತ್ತು ತಂತ್ರೀ ಚತುಷ್ಕಗಳಲ್ಲಿ (ಸ್ಪ್ರಿಂಗ್ ಕ್ವಾರ್ಟೆಟ್) ಬೇತೋವನ್ ಪರಮೋನ್ನತ ಸಿದ್ಧಿಪಡೆದಿದ್ದ. ಹೀಗಾಗಿ ಈತ ಪಾಶ್ಚಾತ್ಯ ಸಂಗೀತಕ್ಕೆ ಹೊಸತಿರುವು ಕೊಟ್ಟ ಯುಗಪುರುಷ.

On the birth anniversary great music composer and pianist Ludwig Van Beethoven


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ