ನಾಗನಾಥ್ ಗೌರೀಪುರ
ನಾಗನಾಥ್ ಗೌರೀಪುರ
ನಾಗನಾಥ್ ಗೌರೀಪುರ ನಮ್ಮ ನಡುವಿನ ಮಹಾನ್ ಕಲಾವಿದರಲ್ಲೊಬ್ಬರು.
ಡಿಸೆಂಬರ್ 17 ನಾಗನಾಥ್ ಅವರ ಜನ್ಮದಿನ. ಇವರು ಹುಟ್ಟಿದ್ದು ಚಳ್ಳಕೆರೆಯಲ್ಲಿ. ಇವರ ಊರು ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಗೌರಿಪುರ ಗ್ರಾಮ. ತಂದೆಯವರ ಕೆಲಸದ ನಿಮಿತ್ತ ಶಿವಮೊಗ್ಗ ಜಿಲ್ಲೆಯಲ್ಲಿ ಇವರ ಬಾಲ್ಯ, ವಿದ್ಯಾಭ್ಯಾಸ ಕಳೆಯಿತು. ಇವರು ಪ್ರಸಿದ್ಧ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕಲಾವಿನ್ಯಾಸದ ಕಾಯಕ ನಿರ್ವಹಿಸುತ್ತಲೇ ಹವ್ಯಾಸಿ ಕಲಾವಿದರಾಗಿಯೂ ಹೆಸರಾಗಿದ್ದಾರೆ.
ನಾಗನಾಥ್ ಪಿಯುಸಿ ಓದುವಾಗಲೇ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿದ್ದರು. ರೇಖಾಚಿತ್ರಗಳಲ್ಲೂ ಪರಿಣತಿ ಪಡೆದು ಸ್ಪಾಟ್ ಕ್ಯಾರಿಕೇಚರ್ ರಚನೆಯನ್ನೂ ರೂಡಿಸಿಕೊಂಡರು. 1985ರಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ಇವರ ಮೊದಲ ವ್ಯಂಗ್ಯಚಿತ್ರ ಪ್ರಕಟವಾಗಿತ್ತು. ಅಲ್ಲಿಂದ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆರ್ ಕೆ ಲಕ್ಷ್ಮಣ್ ಅವರ ಮುಂದಾಳತ್ವದಲ್ಲಿ 1996ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಗಾರದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ನಾಗನಾಥ್ ಅವರು ಜಲವರ್ಣಕಲೆ, ಕಥಾಚಿತ್ರ ಕಲೆ, ವ್ಯಂಗ್ಯಚಿತ್ರ ಕಲೆ, ಆನಿಮೇಷನ್ ಸೇರಿದಂತೆ ವಿವಿಧ ಡಿಜಿಟಲ್ ಕಲೆ, ಹೀಗೆ ಎಲ್ಲ ರೀತಿಯ ಚಿತ್ರ ಕಲೆಗಳಲ್ಲಿ ತಮ್ಮ ಕೈಚಳಕವನ್ನು ಬೆಳಗಿದ್ದಾರೆ. ಅನೇಕ ನಿಯತಕಾಲಿಕಗಳಲ್ಲಿ ಇವರ ವ್ಯಂಗ್ಯಚಿತ್ರಗಳು ನಗು ಮತ್ತು ಚಿಂತನಗಳನ್ನು ಒಮ್ಮಲೆ ಮೂಡಿಸುವಂತಿರುತ್ತಿವೆ. ಪುಸ್ತಕಗಳಲ್ಲಿನ ಕಥಾಚಿತ್ರಗಳಿಗೆ ಹೆಸರಾಗಿರುವ ಇವರ ಚಿತ್ರಗಳು ಎಲ್ಲ ರೀತಿಯ ಪುಸ್ತಕಗಳಿಗೆ ಸಂದಿದ್ದು ಕಿರಿಯರಿಂದ ಹಿರಿಯರವರೆಗೆ ಎಲ್ಲರ ಮನವನ್ನೂ ತಣಿಸುತ್ತ ಬಂದಿವೆ. ಅನೇಕ ಕಿರಿಯರಿಗೆ ಇವರ ಅಕ್ಕರೆಯ ಮಾರ್ಗದರ್ಶನವೂ ಸಲ್ಲುತ್ತಿದೆ. ರಾಜ್ಯಾದ್ಯಂತ ಸಂಚರಿಸಿ ಅನೇಕ ಶಿಬಿರಗಳಲ್ಲಿ ಮಾರ್ಗದರ್ಶಿ ಪ್ರಾತ್ಯಕ್ಷಿಗೆಗಳನ್ನು ನೀಡಿದ್ದಾರೆ. ವ್ಯಂಗ್ಯಚಿತ್ರಕಾರರ ಸಂಘದಲ್ಲಿ ಎಲ್ಲ ಕಲಾವಿದರನ್ನೊಳಗೊಂಡ ಕೃತಿಗೆ ಚಿತ್ರಗಳನ್ನು ಮೂಡಿಸಿ ಎಲ್ಲ ಕಲಾವಿದರ ಪರಿಚಯ ಸಿಗುವಲ್ಲಿ ಸೊಗಸಾದ ಪರಿಶ್ರಮ ನೀಡಿದ್ದಾರೆ.
ನಾಗನಾಥ್ ಹೈ ಸ್ಕೂಲು, ಕಾಲೇಜು ದಿನಗಳಲ್ಲಿ ಪತ್ರಿಕೆಗಳಿಗೆ ಕಥೆ, ಕವನ ಬರೆಯುತ್ತಿದ್ದರು. ಮಯೂರದಲ್ಲಿ ಬರೆದ ವಿದ್ಯಾರ್ಥಿ ಕಥೆಗೆ ಬಹುಮಾನವೂ ಬಂದಿತ್ತು. ಚಿತ್ರಕಲೆಗೆ ಬಂದ ಮೇಲೆ ಬರವಣಿಗೆ ಕಡಿಮೆಯಾದರೂ ಅವರಲ್ಲಿರುವ ಬರಹಗಾರ ಆಗಾಗ ಮೇಲೇಳುತ್ತಿರುವುದಿದೆ. ಪ್ರವಾಸೀ ಸ್ವಾನುಭವ ಕಥೆಗಳನ್ನು ಆತ್ಮೀಯ ವಲಯದಲ್ಲಿ ಹಂಚಿಕೊಂಡು ಖುಷಿ ಪಡುತ್ತಾರೆ. ಮುಂದೆ ಕೃತಿಯೂ ಬರುತ್ತದೆಂದು ಅವರ ಬರಹದ ರುಚಿ ಅನುಭವಿಸಿದವರ ಆಶಯವಾಗಿದೆ.
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದಲ್ಲಿ ಪದಾಧಿಕಾರಿಗಳಾಗಿ ಮತ್ತ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ಟ್ರಸ್ಟಿಯಾಗಿಯೂ ನಾಗನಾಥ್ ಅವರ ಸೇವೆ ಸಂದಿದೆ. ದೇಶವಿದೇಶದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಹಾಗೂ ಪ್ರದರ್ಶನಗಳಲ್ಲಿ ನಿರಂತರವಾಗಿ ಭಾಗವಹಿಸುತ್ತ ಬಂದಿದ್ದಾರೆ.
ನಾಗನಾಥ್ ಅನೇಕ ಕಲಾಕೃತಿಗಾಗಿನ ಬಹುಮಾನಗಳು, ರಾಷ್ಟ್ರೀಯ ಪತ್ರಿಕೆ 'ಕಾರ್ಟೂನ್ ವಾಚ್' ನೀಡಿದ ಜೀವಮಾನ ಸಾಧನಾ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಸತ್ಪಾತ್ರರಾಗಿದ್ದಾರೆ. ಎಲ್ಲಕ್ಕಿಂತ ದೊಡ್ಡ ಪ್ರಶಸ್ತಿಯಾದ ಕಲಾರಸಿಕರ ಮೆಚ್ಚುಗೆ ಅವರೊಡನೆ ನಿರಂತರವಾಗಿದೆ.
ಪ್ರತಿಭೆ, ಸರಳತೆ, ಸಹೃದಯತೆ, ಆತ್ಮೀಯ ಗುಣಸಂಗಮರಾದ ನಾಗನಾಥ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Naganath
ಕಾಮೆಂಟ್‌ಗಳು