ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಾ. ಶಿ. ಮರುಳಯ್ಯ


 ಸಾ. ಶಿ. ಮರುಳಯ್ಯ 


ನಮ್ಮ ಕನ್ನಡ ನಾಡನ್ನು ಕುರಿತು ಬಣ್ಣಿತವಾಗಿರುವ ಪ್ರಮುಖ ಗೀತೆಗಳಲ್ಲಿ ‘ ಲಿ ‘ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ’ ಇನ್ನಿಲ್ಲದಂತೆ ನಮ್ಮ ಮನಗಳನ್ನು ಸೂರೆಗೊಳ್ಳುತ್ತದೆ.  ಈ ಗೀತೆಯ ಚರಣಗಳನ್ನು ನೋಡಿ ಎಷ್ಟು ಸುಂದರವಾಗಿದೆ

ಕಾವೇರಿ ಗೋದಾವರಿ ಗಂಗೆ ಯಮುನೆ ಸಿಂಧುವೆ
ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಬೋಧ ಚಂದ್ರೋದಯ ರಾಗಾರುಣ ಜಾಲೆ
ಗಿರಿ ಸಿರಿ ವನ ಸಂಚಾರಿಣಿ ತುಂಗಾ ಜಲ ನೀಲೆ
ಕಲ ಕಲ ಕಲ ಮೆದುಹಾಸಲಿ ಗಾನ ಸುಪ್ತ ಲೋಲೆ

ಮಲೆನಾಡಿನ ಕೋಗಿಲೆಯೆ ಬಯಲುನಾಡ ಮಲ್ಲಿಗೆಯೆ
ವನ್ಯ ವಿಷಯ ಭೃಂಗವೆ ಧವಳ ಗಿರಿಯ ಶೃಂಗವೆ
ನಸು ನಸುರಿನ ಹಿಮ ಮಣಿಯೆ ಎಳೆ ಬಿಸಿಲಿನ ಮೇಲುದವೆ
ಬಿರಿದ ಮುಗುಳ ಬಿಂಕವೆ ತೆರೆದ ಸೋಗೆ ನರ್ತನವೆ
ನಿರ್ಭರಾ ನಿರ್ಜರಣಿಯ ಜಲಪಾತದ ಗಿರಿಗರ್ಜನೆಯೆ

ಈ ಸುಂದರ ಗೀತೆಯನ್ನು ಸೃಜಿಸಿದವರು ಕನ್ನಡ ನಾಡಿನ ಪ್ರಸಿದ್ಧ ವಿದ್ವಾಂಸರಾದ ಡಾ. ಸಾ. ಶಿ. ಮರುಳಯ್ಯನವರು.

ಕನ್ನಡ ಸಾಹಿತ್ಯಲೋಕದ ಪ್ರಮುಖ ಬರಹಗಾರ, ವಿದ್ವಾಂಸ, ಶಿಕ್ಷಣ ತಜ್ಞ, ಉತ್ತಮ ವಾಗ್ಮಿ ಹಾಗೂ ಆಡಳಿತಗಾರರೆಂದು ಹೆಸರಾಗಿದ್ದ ಸಾ. ಶಿ. ಮರುಳಯ್ಯನವರು 1931ರ ಜನವರಿ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಎಂಬ ಗ್ರಾಮದಲ್ಲಿ ಜನಿಸಿದರು.  ಅವರ ಪೂರ್ಣ ಹೆಸರು ಸಾಸಲು ಶಿವರುದ್ರಯ್ಯ ಮರುಳಯ್ಯ ಎಂದು.  ತಂದೆ ಶಿವರುದ್ರಯ್ಯನವರು  ಮತ್ತು ತಾಯಿ ಸಿದ್ಧಮ್ಮನವರು.

ಸಾ. ಶಿ. ಮರುಳಯ್ಯನವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ್ ಪದವಿಯನ್ನೂ, ಎಂ.ಎ ಪದವಿಯನ್ನೂ ಪಡೆದು ರಾಜ್ಯದ ವಿವಿದೆಡೆಗಳಲ್ಲಿ ಕಾಲೇಜು ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಶಿಕ್ಷಣದಲ್ಲಿ ತಮ್ಮ ಕಾರ್ಯನಿರ್ವಹಣೆಯಲ್ಲದೆ ಕನ್ನಡ ವಿಶ್ವಕೋಶದ ಪ್ರಧಾನ ಸಂಪಾದಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಹಾಗೂ 1995-98ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಹಾ ಅವರು ಕಾರ್ಯ ನಿರ್ವಹಿಸಿದ್ದರು.   ಅವರ ಕಾರ್ಯಾವಧಿಯಲ್ಲಿ ಕನ್ನಡ ನಿಘಂಟು ಕೆಲಸ ಪೂರ್ಣಗೊಂಡಿತು. 

ಸಾಹಿತ್ಯ ಕ್ಷೇತ್ರದಲ್ಲಿ ಕೂಡ ಮರುಳಯ್ಯನವರ ವಿಶಾಲವ್ಯಾಪ್ತಿಯ ಸಾಹಿತ್ಯ ಹಾಗೂ ಸಂಬಂಧಿತ ಸಂಶೋಧನಾ ಕಾರ್ಯಗಳನ್ನು ಗಮನಿಸಬಹುದಾಗಿದೆ.  ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಎಂಬ ಅವರ ಗ್ರಂಥಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಪ್ರಧಾನವಾಯಿತು.  ‘ಭಾಸನ ಮಕ್ಕಳು’ ಎಂಬುದು ವಿಮರ್ಶಾ ಗ್ರಂಥವಾಗಿದೆ.  ಕೆಂಗನ ಕಲ್ಲು, ಮನಿಷಾ, ನನ್ನ ಕವನಗಳು, ಸುರಭಿ ಇವು ಅವರ ಕವನ ಸಂಕಲನಗಳು.

ಸಾ. ಶಿ. ಮರುಳಯ್ಯನವರು ಸಣ್ಣಕಥೆಗಳ ಲೋಕದಲ್ಲಿ ‘ಶಿವತಾಂಡವ’, ‘ವಿಪರ್ಯಾಸ’, ‘ಘೋಷವತಿ’, ‘ಬೃಂದಾವನ ಲೀಲೆ’, ‘ರಾಸಲೀಲೆ’, ‘ರೂಪಸಿ’, ‘ಚೈತ್ರಜ್ಯೋತಿ’, ‘ಬಾರೋಮೈಲಾರಕೆ’, ‘ಮರೀಬೇಡಿ’, ‘ವಿಜಯ ವಾತಾಪಿ’, ಶಿವಲೀಲೆ’ ಮುಂತಾದ ಕಥೆಗಳನ್ನು ರಚಿಸಿದ್ದಾರೆ.  

‘ಶ್ರೀ ಮರುಳಸಿದ್ಧೇಶ್ವರ ವಚನವೈಭವ’ ಮರುಳಯ್ಯನವರ ಕಥನಕವನವಾಗಿದೆ.  

ಕಾದಂಬರಿಗಳ ಲೋಕದಲ್ಲಿ  ‘ನೂಪುರಾಲಸ’, ‘ಪುರುಷಸಿಂಹ’, ‘ಹೇಮಕೂಟ’, ‘ಸಾಮರಸ್ಯ ಶಿಲ್ಪ’, ‘ಅನುಶೀಲನೆ’ ಅವರ ಕೊಡುಗೆಗಳಾಗಿವೆ.  ಅವರ ಹಲವಾರು ಗೀತೆಗಳು ಭಾವಗೀತೆಗಳ ಲೋಕದಲ್ಲಿ ಸಹಾ ಪ್ರಸಿದ್ಧವಾಗಿವೆ.  

ಹೀಗೆ ವಿವಿಧ ರೂಪಗಳಲ್ಲಿ ಕನ್ನಡ ತಾಯಿಯ ಸೇವೆಯನ್ನು ನಡೆಸಿರುವ ಡಾ. ಸಾ. ಶಿ. ಮರುಳಯ್ಯನವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿದ್ದವು. 

ಡಾ. ಸಾ. ಶಿ. ಮರುಳಯ್ಯನವರು 2016ರ ಫೆಬ್ರವರಿ 5 ರಂದು ಈ ಲೋಕವನ್ನಗಲಿದರು.

On the birth anniversary of our poet Dr. Sa Shi Marulaiah

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ