ಪ್ರೀತಿ ಝಿಂಟಾ
ಪ್ರೀತಿ ಝಿಂಟಾ
ಗುಳಿ ಕೆನ್ನೆಯ ನಗೆಮೊಗದ ಚೆಲುವೆ ಪ್ರೀತಿ ಝಿಂಟಾ ಅವರ ನಗೆ ನಿಜಕ್ಕೂ ಪ್ರೀತಿ ಹುಟ್ಟಿಸುವಂತದ್ದು. ಪ್ರೀತಿ ಝಿಂಟಾ ಹುಟ್ಟಿದ್ದು 1975 ವರ್ಷದ ಜನವರಿ 31ರಂದು. ಹಿಂದಿನ ವರ್ಷಗಳಲ್ಲಿ ನಟಿಯರ ವಯಸ್ಸು ಬಯಲಾಗುತ್ತಿರಲಿಲ್ಲ. ಬಹುಕಾಲದವರೆಗೆ ಚಿತ್ರರಂಗದಲ್ಲಿ ಉಳಿಯುವ ಅವರ ಅನಿವಾರ್ಯತೆ ಹಾಗಿತ್ತೇನೋ. ಈಗಿನ ನಟಿಯರು ಕೆಲವೇ ವರ್ಷಗಳಲ್ಲಿ ಪ್ರಸಿದ್ಧಿಯ ಏಣಿ ಹತ್ತಿ ಇಳಿದು ಉದ್ಯಮಿಗಳಾಗಿ ಸುದ್ಧಿ ಮಾಡುತ್ತಾರೆ.
ಪ್ರೀತಿ ಝಿಂಟಾ ಇಂಗ್ಲಿಷ್ ಆನರ್ಸ್ ಮತ್ತು ಕ್ರಿಮಿನಾಲಜಿ ವ್ಯಾಸಂಗ ಮಾಡಿದ ಬುದ್ಧಿವಂತೆ. ಆಕೆ ಬಿಬಿಸಿಗಾಗಿ ಅನೇಕ ಲೇಖನಗಳನ್ನು ಬರೆದವರು ಕೂಡ.
ಪ್ರೀತಿ ಝಿಂಟಾ ಟಿವಿ ಜಾಹಿರಾತಿನೊಂದಿಗೆ ಉದ್ಯಮಕ್ಕೆ ಬಂದು ನಂತರ ಚಿತ್ರರಂಗಕ್ಕೆ ಕಾಲಿಟ್ಟವರು. ಅವರು 'ದಿಲ್ ಸೇ' ಚಿತ್ರದ ಮೂಲಕ ಚಲನಚಿತ್ರಗಳಲ್ಲಿ ಪಾದಾರ್ಪಣೆ ಮಾಡಿದರು. 1999 ರಲ್ಲಿ ಸೋಲ್ಜರ್ ಅವರ ಮೊದಲ ದೊಡ್ಡ ಯಶಸ್ಸು. ಕಲ್ ಹೋ ನಾ ಹೋ, ಕೊಯಿ ಮಿಲ್ ಗಾ, ವೀರ್ ಜ಼ರಾ, ಲಕ್ಷ್ಯ, ಸಲಾಮ್ ನಮಸ್ತೆ, ಕಭಿ ಅಲ್ವಿದ ನ ಕೆಹೆನಾ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಅವರು ನಟಿಸಿದರು. ಅನೇಕ ಚಿತ್ರಗಳ ಅಭಿನಯಕ್ಕೆ ಅವರಿಗೆ ಫಿಲಂಫೇರ್ ಪ್ರಶಸ್ತಿ ಸಂದಿದೆ. ಹಲವಾರು ವಿದೇಶಿ ಚಿತ್ರಗಳಗಲ್ಲಿಯೂ ಅಭಿನಯಿಸಿರುವ ಅವರಿಗೆ 'ಹೆವೆನ್ ಆನ್ ಅರ್ಥ್' ಚಿತ್ರದ ಅಭಿನಯಕ್ಕಾಗಿ ಚಿಕಾಗೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ ಸಿಲ್ವರ್ ಹ್ಯೂಗೋ ಪ್ರಶಸ್ತಿ ಕೂಡಾ ಲಭಿಸಿತು.
ಇತ್ತೀಚಿನ ವರ್ಷಗಳಲ್ಲಿ ಅವರು ಸಿನೆಮಾದಲ್ಲಿ ಹೆಚ್ಚು ಕಾಣಿಸದಿದ್ದರೂ, ಬಾಲಿವುಡ್ ನ ಹಲವು ಶ್ರೀಮಂತ ನಟಿಯರ ಪೈಕಿ ಒಬ್ಬರೆನಿಸಿದ್ದಾರೆ. ವ್ಯಾಪಾರೋದ್ಯಮದಲ್ಲಿ ತೊಡಗಿಕೊಂಡಿರುವ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ ತಂಡ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಒಂದು ತಂಡದ ಸಹಮಾಲೀಕರಾಗಿದ್ದು ಆಟಗಾರರಿಗಿಂತ ಹೆಚ್ಚು ಮಾಧ್ಯಮಗಳ ಕ್ಯಾಮರಾಕಣ್ಣಿಗೆ ಪ್ರಿಯರು.
ಪ್ರೀತಿ ಝಿಂಟಾ ಅನೇಕ ಸಮಾಜಪರ ಚಟುವಟಿಕೆಗಳಿಗೆ ಸಹಾ ಹೆಸರಾಗಿದ್ದಾರೆ.
On the birthday of actress and entrepreneur Preity Zinta
ಕಾಮೆಂಟ್‌ಗಳು