ಊರ್ವಶಿ
ಊರ್ವಶಿ
ಊರ್ವಶಿ ದಕ್ಷಿಣ ಭಾರತೀಯ ಚಲನಚಿತ್ರರಂಗದ ಉತ್ತಮ ಕಲಾವಿದೆಯರಲ್ಲಿ ಒಬ್ಬರು. ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳ ಹಲವು ನೂರು ಚಿತ್ರಗಳಲ್ಲದೆ ಕಿರುತೆರೆಯ ಅನೇಕ ರೀತಿಯ ಕಾರ್ಯಕ್ರಮಗಳಲ್ಲೂ ಅವರು ವ್ಯಾಪಿಸಿದ್ದಾರೆ.
ಊರ್ವಶಿ ಅವರು ಕವಿತಾ ರಂಜನಿ ಎಂಬ ಹೆಸರಿನಿಂದ 1969ರ ಜನವರಿ 25ರಂದು ತಿರುವನಂತಪುರದಲ್ಲಿ ಜನಿಸಿದರು. ಅವರ ತಂದೆ ಚವರ ವಿ. ಪಿ. ನಾಯರ್ ಮತ್ತು ತಾಯಿ ವಿಜಯಲಕ್ಷ್ಮೀ ಇಬ್ಬರೂ ರಂಗ ಕಲಾವಿದರಾಗಿ ಪ್ರಸಿದ್ಧರಾಗಿದ್ದರು. ಅವರ ಒಡಹುಟ್ಟಿದ ಸಹೋದರ ಸಹೋದರಿಯರೂ ಚಿತ್ರರಂಗದಲ್ಲಿ ಕೆಲಸ ಮಾಡಿದವರು. ತಿರುವನಂತಪುರದಲ್ಲಿ ನಾಲ್ಕನೇ ತರಗತಿಯವರೆಗೆ ಮತ್ತು ಚೆನ್ನೈನಲ್ಲಿ 9ನೆಯ ತರಗತಿಯವರೆಗೆ ಓದಿದ ಊರ್ವಶಿ ಚಿತ್ರರಂಗದಲ್ಲಿ ದೊರೆತ ನಿರಂತರ ಅವಕಾಶಗಳ ಕಾರಣದಿಂದ ಓದಿಗೆ ಮುಕ್ತಾಯ ಹೇಳಿದರು.
ತಮ್ಮ 8ನೇ ವಯಸ್ಸಿನಲ್ಲಿ 'ವಿದುರುನ್ನ ಮೊಟ್ಟುಕಲ್' ಎಂಬ ಮಲಯಳಂ ಚಿತ್ರದಿಂದ ಬಾಲನಟಿಯಾಗಿ ಅಭಿನಯಿಸತೊಡಗಿದ ಊರ್ವಶಿ ಮುಂದೆ 1983ರಲ್ಲಿ ಕೆ. ಭಾಗ್ಯರಾಜ್ ಅವರ ಯಶಸ್ವೀ ತಮಿಳು ಚಿತ್ರ 'ಮುಂದಾನೈ ಮುಡಿಚ್ಚು' ಚಿತ್ರದಲ್ಲಿ ನಾಯಕಿಯಾದರು.
ಮುಂದೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ನಟಿಸಿದ ಊರ್ವಶಿ ಕನ್ನಡದಲ್ಲಿ ರಾಜ್‍ಕುಮಾರ್ ಅವರೊಂದಿಗೆ ಶ್ರಾವಣ ಬಂತು, ವಿಷ್ಣುವರ್ಧನ್ ಜೊತೆ 'ಈ ಜೀವ ನಿನಗಾಗಿ', ರವಿಚಂದ್ರನ್ ಜೊತೆ 'ನಾನು ನನ್ನ ಹೆಂಡ್ತಿ', ರಮೇಶ್ ಅರವಿಂದ್ ಅವರ 'ರಾಮ ಶಾಮ ಭಾಮ', ಅಂಬರೀಷ್ ಜೋಡಿಯಾಗಿ 'ಹಬ್ಬ' ಚಿತ್ರ ಸೇರಿದಂತೆ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ.
ಊರ್ವಶಿ ಅವರಿಗೆ 'ಅಚುವಂತೆ ಅಮ್ಮಾ' ಚಿತ್ರದ ಪೋಷಕ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅಲ್ಲದೆ 5 ಕೇರಳ ರಾಜ್ಯದ ಚಲನಚಿತ್ರ ಪ್ರಶಸ್ತಿ, ಎರಡು ತಮಿಳುನಾಡಿನ ರಾಜ್ಯದ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಕಣ್ಣುಗಳಲ್ಲೇ ಭಾವಪೂರ್ಣತೆ ತುಂಬಿ ಅಭಿನಯಿಸುವ ಊರ್ವಶಿ ನವರಸ ಭಾವಗಳನ್ನೂ ಅತ್ಯುತ್ತಮವಾಗಿ ಅಭಿವ್ಯಕ್ತಿಸುವ ಉತ್ತಮ ಕಲಾವಿದೆ. ಅವರು ಕನ್ನಡದಲ್ಲಿ ಅಭಿನಯಿಸಿರುವ ಶ್ರಾವಣ ಬಂತು, ಈ ಜೀವ ನಿನಗಾಗಿ, ರಾಮ ಶಾಮ ಭಾಮ ಅಲ್ಲದೆ ತಮಿಳಿನ 'ಮೈಕೆಲ್ ಮದನ ಕಾಮರಾಜನ್', ಮಲಯಾಳದ 'ಭರತಂ' ಅಂತಹ ಚಿತ್ರಗಳಲ್ಲಿನ ಅವರ ಅಭಿನಯ ನಿಜಕ್ಕೂ ನನಗೆ ಮೆಚ್ಚುಗೆಯಾಗಿದೆ.
ಊರ್ವಶಿ ಅವರ ಬದುಕು ಸುಂದರವಾಗಿರಲಿ.
On the birthday of actress Urvashi
ಕಾಮೆಂಟ್‌ಗಳು