ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಧೀಂದ್ರ ಶರ್ಮ


 ಸುಧೀಂದ್ರ ಶರ್ಮ


ಡಾ. ಕೆ. ಆರ್. ಸುಧೀಂದ್ರ ಶರ್ಮ ಕನ್ನಡ ರಂಗಭೂಮಿ ಮತ್ತು ಸಾಂಸ್ಕೃತಿಕ ಲೋಕದ ಪ್ರಖ್ಯಾತರು. ಕಳೆದ ಐದು ದಶಗಳಲ್ಲಿ ಅವರು ವಿದ್ಯಾರ್ಥಿಯಾಗಿ, ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ಪ್ರಾಧ್ಯಾಪಕರಾಗಿ, ಸಂಘಟನಕಾರರಾಗಿ, ಆಡಳಿತಗಾರರಾಗಿ ಹೀಗೆ ಸರ್ವರೂಪಿಗಳಾಗಿ ವ್ಯಾಪಿಸಿರುವ ರೀತಿ ವಿಶಿಷ್ಟವಾದದ್ದು. ಇವರ ಪತ್ನಿ ಮಾಲತಿ ಶರ್ಮ ರಂಗಭೂಮಿ, ಸುಗಮ ಸಂಗೀತ ಮತ್ತು ಬಾನುಲಿ ಲೋಕದ  ದೊಡ್ಡ ಹೆಸರು. 

ಸುಧೀಂದ್ರ ಶರ್ಮ ಮಂಡ್ಯಜಿಲ್ಲೆಯ ಮದ್ದೂರಿನಲ್ಲಿ 1951ರ ಜನವರಿ 25ರಂದು ಜನಿಸಿದರು. ಮೈಸೂರಿನಲ್ಲಿ ರಂಗ ಶಿಕ್ಷಣದಲ್ಲಿ ಡಿಪ್ಲೊಮಾ, ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಬ್ರೂಕ್ಲಿನ್ ಕಾಲೇಜಿನಿಂದ ರಂಗಕಲೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು “1965-1985 ಕನ್ನಡ ಹವ್ಯಾಸಿ ರಂಗಭೂಮಿಯ ಸುವರ್ಣಯುಗ" ಎಂಬ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ ಗಳಿಕೆ ಇವರ ಶೈಕ್ಷಣಿಕ ಸಾಧನೆಗಳು. 

ಸುಧೀಂದ್ರ ಶರ್ಮ 1969ರಲ್ಲಿ ಮೈಸೂರಿನಲ್ಲಿ ರಂಗಭೂಮಿ ಪ್ರವೇಶ ಮಾಡಿದರು.  ಪಿ. ಲಂಕೇಶರ ನನ್ನ ತಂಗಿಗೊಂದು ಗಂಡುಕೊಡಿ, ಅನಂತಕಲ್ಲೋಳ ಅವರ ಅದೇ ದಾರಿ, ಚಂದ್ರಕಾಂತ ಕುಸುನೂರ್ ಅವರ ಇದಕೆ ಸಂಶಯವಿಲ್ಲ, ಪರ್ವತವಾಣಿ ಅವರ ಹಗ್ಗದ ಕೊನೆ ಮುಂತಾದವು ಇವರು ಅಂದು ಭಾಗವಹಿಸಿದ ಪ್ರಮುಖ ನಾಟಕಗಳು.  ಇವಲ್ಲದೆ ಮೈಸೂರಿನ ಪ್ರಖ್ಯಾತ ಚೇತನ ಕನ್ನಡ ಸಂಘದ ಕಲಾ ವಿಭಾಗದ ಸಂಚಾಲಕರಾಗಿ ಇವರು ಅಭಿನಯಿಸಿದ ನಾಟಕಗಳು ಅನೇಕ.  ಮೈಸೂರಿನ ಪ್ರಸಿದ್ಧ ರಂಗತಂಡವಾದ  ಸಮತೆಂತೋನಲ್ಲಿ  ಇವರು ಅಭಿನಯಿಸಿದ ಪ್ರಮುಖ ನಾಟಕಗಳಲ್ಲಿ ಎಲ್ಲರಂಥವನಲ್ಲ ನನ್ನ ಗಂಡ, ವಿಗಡ ವಿಕ್ರಮರಾಯ, ಸತ್ತವರ ನರಳು, ಕದಡಿದ ನೀರು ಮುಂತಾದವು ಸೇರಿವೆ.  ಮೈಸೂರಿನ ಪ್ರಚೋದನ ಕಲಾವಿದರು ಸಂಸ್ಥೆಗಾಗಿ ಅಭಿನಯಿಸಿದ ನಾಟಕಗಳಲ್ಲಿ ಟಿ. ಎನ್. ನರಸಿಂಹನ್ ನಿರ್ದೇಶನದ ಗಿಳಿಯು ಪಂಜರದೊಳಿಲ್ಲ, ಪಂಚಭೂತ, ಗಗ್ಗಯ್ಯನ ಗಡಿಬಿಡಿ, ಅಳಿಯ ದೇವರು ಇತ್ಯಾದಿ ಇವೆ. ಇದಲ್ಲದೆ ಸ್ನೇಹ ಸಂಪದ, ಕಲಾಗಂಗೋತ್ರಿ, ಪ್ರಯೋಗ ರಂಗ ಮುಂತಾದ ಪ್ರಮುಖ ತಂಡಗಳ ಅಂದಿನ ಪ್ರಸಿದ್ಧ ನಾಟಕಗಳಾದ ಕತ್ತಲೆ ಬೆಳಕು, ಈಡಿಪಸ್, ಸಿರಿಪುರಂದರ, ಕೇಳು ಜನಮೇಜಯ, ಮಿಸ್ ಜೂಲಿ, ಹೆಜ್ಜೆಗಳು, ಮೌನಿ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದ್ದಲ್ಲದೆ, ಮೈಸೂರಿನ ಪ್ರಖ್ಯಾತ ಹವ್ಯಾಸಿ ರಂಗತಂಡ ಕಲಾಪ್ರಿಯದ ಸ್ಥಾಪಕ ಸದಸ್ಯರಲ್ಲೊಬ್ಬರಾಗಿಯೂ  ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಮೈಸೂರಿನಲ್ಲಿ ಮೊದಲ ಮಕ್ಕಳ ರಂಗಭೂಮಿ ಅಭಿವ್ಯಕ್ತಿಯಲ್ಲಿ ಸ್ನೋವೈಟ್, ಕಾಡಿನಲ್ಲಿ ಕಥೆ, ಕಿಟ್ಟಿ ಕಥೆ ಮುಂತಾದ ನಾಟಕಗಳನ್ನು ನಿರ್ದೇಶಿಸಿದರು. ಮೈಸೂರಿನ ಲಲಿತ ಕಲಾ ಕಾಲೇಜಿನಲ್ಲಿ ಗಾಜಿನ ಗೊಂಬೆ, ಆಷಾಢಭೂತಿ, ನಂ ಕಂಪ್ನಿ, ಸಾಯೋ ಆಟ, ಕೇಳು ಜನಮೇಜಯ, ಅಶ್ವತ್ಥಾಮನ್ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. 

ಸುಧೀಂದ್ರ ಶರ್ಮ  1975ರಲ್ಲಿ ಬೆಂಗಳೂರಿಗೆ ಬಂದರು.  1976-77ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ-ನಾಟಕ ಮತ್ತು ಸಂಗೀತ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇರ್ಪಡೆಯಾದರು.  1977ರಿಂದ 1979ರವರೆಗೆ ಅಮೇರಿಕಾದ ಬ್ರೂಕ್ಲಿನ್ ಕಾಲೇಜ್ ಲಮಾಮ ಎಕ್ಸ್ಪೆರಿಮೆಂಟಲ್ ಥಿಯೇಟರ್ ಕ್ಲಬ್ನಲ್ಲಿ ರಂಗಭೂಮಿ ಅಧ್ಯಯನ ಮತ್ತು ಭಾರತೀಯ ರಂಗಭೂಮಿಯ ಬಗ್ಗೆ ಭೋದನೆ ಮಾಡಿದರು. ಜರ್ಮನಿಯ ಗೊಯತೆ  ಅಂತರರಾಷ್ಟ್ರೀಯ ರಂಗಭೂಮಿ ಕೇಂದ್ರದ ವತಿಯಿಂದ ಜರ್ಮನಿಯ ಬರ್ಲಿನ್ ಹಾಗೂ ಹ್ಯಾಂಬರ್ಗ್ ನಗರಗಳಲ್ಲಿನ ರಂಗಭೂಮಿಯ ಅಧ್ಯಯನ,  ವಿಶೇಷವಾಗಿ ಬರ್ಲಿನ್‌ನ ಸುಪ್ರಸಿದ್ದ ಮಕ್ಕಳ ರಂಗಭೂಮಿ ಕೇಂದ್ರವಾದ ಗ್ರಿಪ್ಸ್  ಥಿಯೇಟರಿನ ಅಧ್ಯಯನ ಮಾಡಿದರು.  ನ್ಯೂಯಾರ್ಕಿನ ಅನೇಕ ಕೇಂದ್ರಗಳಲ್ಲಿ ಭಾರತೀಯ ರಂಗಭೂಮಿಯ ಬೋಧನೆ ಮಾಡಿದರು.  ಈ ಮೇಲಿನ ವಿದೇಶದಲ್ಲಿನ ರಂಗಭೂಮಿ ಅಧ್ಯಯನ ಹಾಗೂ ಬೋಧನೆಗೆ ಇವರಿಗೆ  ಜೆಡಿಆರ್ ಫಂಡ್ ಮತ್ತು ರಾಕ್ಫೆಲರ್ ಪ್ರತಿಷ್ಠಾನದ ವ್ಯಾಸಂಗ ವೇತನ ಲಭಿಸಿತ್ತು.  

1979ರಲ್ಲಿ ವಿದೇಶದಿಂದ ಮರಳಿದ  ಸುಧೀಂದ್ರ ಶರ್ಮ ಬೆಂಗಳೂರಿನ ನೃತ್ಯ ನಾಟಕ ವಿಭಾಗದಲ್ಲಿ ಗೌರವ ರಂಗ ಅಧ್ಯಾಪಕರಾಗಿ ಸೇರ್ಪಡೆಗೊಂಡರು.  ಅಲ್ಲಿಂದ ಮೊದಲುಗೊಂಡು 2013 ರಲ್ಲಿ ನಿವೃತ್ತಿ ಹೊಂದುವವರೆಗೆ ಸುಮಾರು 34 ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾವಿಭಾಗದ ನಾಟಕ ವಿಭಾಗದಲ್ಲಿ ಉಪನ್ಯಾಸಕ, ರೀಡರ್,  ಪ್ರಾಧ್ಯಾಪಕರಾಗಿ,  ಹಾಗೂ ಮೂರು ವಿಭಿನ್ನ ವಿಭಾಗಳ  ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅನೇಕ ಶೈಕ್ಷಣಿಕ ಮಂಡಳಿಗಳ ಮುಖ್ಯಸ್ಥರಾಗಿ, ಪ್ರದರ್ಶನ ಕಲಾವಿಭಾಗದ ಮುಖ್ಯ ಆಯೋಜಕರಾಗಿ ಅನೇಕ ಯೋಜನೆಗಳನ್ನು ಮೂಡಿಸಿದರು.  ಕಲಾಧ್ವನಿ ಮಾಸ ಪತ್ರಿಕೆ, ಕಲಾ ಚಿಂತನ ವಿಭಾಗ ಬೆಳೆದ ಬಂದ ಹಾದಿಯನ್ನು ದಾಖಲಿಸುವ ಕಿರುಚಿತ್ರ, ಕಥೆ ಹೇಳುವೆ ಮಾಸಿಕ ಏಕವ್ಯಕ್ತಿ ಪ್ರದರ್ಶನಗಳು, ಪ್ರತಿ ಗುರುವಾರದ ರಂಗ ಚಿಂತನ, ಇತ್ಯಾದಿ ಅನೇಕ ಕಾರ್ಯಕ್ರಮಗಳು ಈ ಪರಿಧಿಯಲ್ಲಿ ಮೂಡಿದವು.

ಸುಧೀಂದ್ರ ಶರ್ಮ  ಅವರು ನಿರ್ದೇಶಿಸಿದ ಪ್ರಮುಖ ನಾಟಕಗಳಲ್ಲಿ ಆಷಾಢದ ಒಂದು ದಿನ, ಹೆಜ್ಜೆಗಳು, ಬೆರಳ್ಗೆ-ಕೊರಳ್, ಸಿರಿ ಪುರಂದರ, ಆನಿ ಬಂತಾನಿ, ಅಂಧಯುಗ, 'ಸದ್ದು' ವಿಚಾರಣೆ ನಡೆಯುತ್ತಿದೆ, ಇದಿತಾಯಿ, ಸುಯೋಧನ, ಯಯಾತಿ ಮುಂತಾದವು ಸೇರಿವೆ.

ಸುಧೀಂದ್ರ ಶರ್ಮ  ನಾಟಕಕಾರರಾಗಿ ರಚಿಸಿದ ನಾಟಕಗಳಲ್ಲಿ ಆರ್ಟಿಸ್ಟ್ ಕಾಲೋನಿ, ಕಂತು ಗೃಹ, ಹೀಗೊಂದು ಪ್ರಸಂಗ, ಉದಯರಾಗ (ರಂಗರೂಪ-ಆಕಾಶವಾಣಿಗಾಗಿ), ಮಾಡಿದುಣ್ಣೋ ಮಹರಾಯ (ರಂಗರೂಪ-ಆಕಾಶವಾಣಿಗಾಗಿ), ಪಂಥ, ಗೂಸ್ ಬೆರಿಸ್, ಒಂದು ಹಳ್ಳಿಯ ವ್ಯಥೆ (ರಂಗರೂಪ-ಆಕಾಶವಾಣಿಗಾಗಿ) ಮುಂತಾದವು ಇವೆ. ಇವರು 2 ವರ್ಷದ ನಾಟಕ ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ರಚಿಸಿದ ಕೃತಿ 'ಕರ್ನಾಟಕ ಜಾನಪದ ರಂಗಭೂಮಿ”. 

ಸುಧೀಂದ್ರ ಶರ್ಮ ಅವರು  ಅಭಿನಯಿಸಿರುವ ಕಿರುತೆರೆಯ ಧಾರಾವಾಹಿಗಳಲ್ಲಿ ಸುಖದ ಸೋಪಾನಗಳು, ಜ್ವಾಲಾಮುಖಿ, ಪತ್ತೇದಾರಿ ಪ್ರಭಾಕರ್, ಕಥೆಗಾರ, ಮಾಯಾಮೃಗ, ಮನ್ವಂತರ, ಮಂಥನ, ದುಬ್ಬರ, ಮುಕ್ತ ಮುಕ್ತ, ಮಲಗಬೇಕು,  ಮಹಾಪರ್ವ, ದೇವತೆ, ಗಾಂಧಾರಿ ಮುಂತಾದ 50 ಕ್ಕೂ ಹೆಚ್ಚು ಧಾರವಾಹಿಗಳು ಸೇರಿವೆ. 

ಸುಧೀಂದ್ರ ಶರ್ಮ ಅವರು ಭಾರತ ಯಾತ್ರಾ ಕೇಂದ್ರದ ಕಾಲೇಜು ವಿದ್ಯಾರ್ಥಿ ರಂಗಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ರಂಗಭೂಮಿಗೆ ಸಂಬಂಧಿಸಿದ ಅನೇಕ ರಾಜ್ಯಮಟ್ಟದ ರಾಷ್ಟ್ರಮಟ್ಟದ ವಿಚಾರ
ಸಂಕಿರಣಗಳಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ  ಪ್ರಬಂಧ ಮಂಡನೆ ಮಾಡಿದ್ದಾರೆ.  

ಡಾ. ಸುಧೀಂದ್ರ ಶರ್ಮ ಅವರಿಗೆ ದುಬೈ ಕನ್ನಡ ಸಂಘದಿಂದ  ಪುರಸ್ಕಾರ, ‍  ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಂಗಾಯಣ ಮೈಸೂರು ಪುರಸ್ಕಾರ , ಕರ್ನಾಟಕ ನಾಟಕ ಅಕಾಡೆಮಿ ವಿಶ್ವರಂಗ ದಿನಾಚರಣೆ ಪುರಸ್ಕಾರ, ಭಾರತ ಯಾತ್ರಾ ಕೇಂದ್ರ ಗೌರವ ಸನ್ಮಾನ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ಡಾ. ಸುಧೀಂದ್ರ ಶರ್ಮ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


On the birthday of great theatre personality Dr. K. R. Sudheendra Sharma Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ