ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭೀಮಸೇನ ಜೋಶಿ


 ಪಂಡಿತ್ ಭೀಮಸೇನ ಜೋಶಿ


ಮಹಾನ್ ಸಂಗೀತಗಾರ ಭಾರತರತ್ನ ಪಂಡಿತ್ ಭೀಮಸೇನ ಜೋಶಿ  ಅವರ ಜನ್ಮದಿನವಿದು. ಅವರು ಜನಿಸಿದ್ದು 4ನೆ ಫೆಬ್ರವರಿ 1922ರಂದು.  

ಭೀಮಸೇನ ಜೋಶಿ ಸಂಗೀತಪ್ರಿಯರಿಗೆ ಅಧಿಕ ಸಂಖ್ಯೆಯಲ್ಲಿ ಧ್ವನಿ ಮುದ್ರಿಕೆಗಳನ್ನು ನೀಡಿ ವಿಕ್ರಮ ಸ್ಥಾಪಿಸಿದವರು.  ಅವರ ಧ್ವನಿ ಮುದ್ರಿಕೆಗಳು ಎಷ್ಟು ಜನಪ್ರಿಯವೋ ಅವರ ಕಛೇರಿಗಳೂ ಅದಕ್ಕೆ ಸಮಸಮವಾಗಿಯೇ ಜನಪ್ರಿಯವಾಗಿದ್ದವು.  ಜೋಶಿಯವರು ತಮ್ಮ ಪ್ರಿಯವಾದ ಪೂರಿಯಾ ರಾಗವನ್ನು ಬಡೇ ಖ್ಯಾಲ್ನಲ್ಲಿ ಹೇಳುವಷ್ಟೇ ಶ್ರದ್ಧೆ ಉತ್ಸಾಹಗಳಿಂದ ಭೈರವ್ನಲ್ಲಿ ಬ್ರಹ್ಮಾನಂದರ ಭಜನೆಗಳನ್ನೂ ಹಾಡುತ್ತಿದ್ದರು.  ಪೂರಿಯಾ ರಾಗವನ್ನು ಹಾಡುವಾಗ ಆನಂದದಿಂದ ಭಾವಪರವಶರಾಗುತ್ತಿದ್ದರು.

ಸುಮಧುರ ಧ್ವನಿಯ ಅಪೂರ್ವ ಪುಣ್ಯಪಡೆದ ಸಂಗೀತ ದಿಗ್ಗಜಗಳೆನಿಸಿದ ಅಬ್ದುಲ್ ಕರೀಂ ಖಾನ್ ಮತ್ತು ಜೋಶಿಯವರ ಗುರುಗಳಾದ ಸವಾಯಿ ಗಂಧರ್ವರ ನೆನಪು ತಂದುಕೊಡುತ್ತಿದ್ದ ಹಾಡುಗಾರಿಕೆ ಜೋಶಿಯವರದು.  ಗುರು ಶಿಷ್ಯರಿಬ್ಬರ ಹಾಡುಗಾರಿಕೆಯಲ್ಲಿ ಕಂಡು ಬರುವ ಒಂದೇ ಒಂದು ವೆತ್ಯಾಸವೆಂದರೆ ಸವಾಯಿ ಗಂಧರ್ವರ ಧ್ವನಿ ಪ್ರಾರಂಭದ ದಿನಗಳಲ್ಲಿ ಸ್ವಲ್ಪ ತೊಂದರೆಗೆ ಒಳಗಾದದ್ದರಿಂದ ಕಚೇರಿಗಳಲ್ಲಿ ಅವರ ಧ್ವನಿ ಕುದುರಿ ಕಾವೇರಲು ಗಂಟೆಗಳ ಕಾಲ ಬೇಕಾದರೆ, ಅವರ ಶಿಷ್ಯನ ಧ್ವನಿ ಕ್ಷಣ ಮಾತ್ರದಲ್ಲಿ “ಸ” ಸ್ವರವನ್ನು ಉಚ್ಚರಿಸುವಷ್ಟರಲ್ಲೇ ಇಡೀ ಸಭೆಯನ್ನು ಚಕಿತಗೊಳಿಸುತ್ತಿತ್ತು.

ಜೋಶಿಯವರ ಧ್ವನಿಯ ಪಕ್ವತೆಯೊಂದೇ ಇದಕ್ಕೆ ಕಾರಣವಲ್ಲ.  ಅವರ ಹಿಂದಿನ ಉಸ್ತಾದರಾದ ಅಬ್ದುಲ್ ವಾಹಿದ್ ಖಾನ್ ಮತ್ತು ಅಬ್ದುಲ್ ಕರೀಂ ಖಾನರ ಗಾಯನದ ವಿಶಿಷ್ಟ ಲಕ್ಷಣಗಳೆನಿಸಿದ ಧ್ಯಾನ ಮುದ್ರಿತ ಚಿಂತನಶೀಲತೆ, ಆತ್ಮ ಪರಿಶೀಲನೆ, ಇವುಗಳು ಅವರಲ್ಲಿ ಮೇಳೈಸಿದ್ದವು.  ಇವುಗಳೆಲ್ಲದರ ಜೊತೆಗೆ ಕಿರಾನಾ ಘರಾಣೆ ಪರಂಪರೆಯಿಂದ ನೇರವಾಗಿ ಬಂದ ಇವರ ಮೇಲೆ ಅದರ ವಿಶೇಷ ಗುಣಲಕ್ಷಣಗಳ ಪ್ರಭಾವವೂ ಆಗಿತ್ತು. ಆ ಘರಾಣೆಯ ಒಂದು ವಿಶಿಷ್ಟ ಲಕ್ಷಣವಾದ ಸ್ವರಗಳನ್ನು ಕ್ರಮವಾಗಿ ಬೆಳೆಸಿ ರಾಗವನ್ನು ವಿಸ್ತರಿಸುವುದರಲ್ಲಿ ಜೋಶಿಯವರಿಗೆ ವಿಶೇಷವಾದ ಆಸ್ಥೆ, ನಂಬಿಕೆ.

ಘರಾಣಾಗಳ ಬಗೆಗೂ ಜೋಶಿಯವರದು ಸ್ಪಷ್ಟವಾದ ನಿಲುವು.  ಘರಾಣಾಗಳು ಏನಿದ್ದರೂ ನಮ್ಮ ಅನುಕೂಲಕ್ಕೆ, ಸೌಕರ್ಯಕ್ಕೆ.  ಗುರುವಿನಿಂದ ನಾವು ಏನನ್ನು ಕಲಿಯುತ್ತೆವೆಯೋ ಅದನ್ನು ನಮ್ಮ ಕಲಾಪ್ರತಿಭೆಯಿಂದ ಹೆಚ್ಚಿಸಿಕೊಳ್ಳಬೇಕು, ಗುರುವಿನ ಬಳಿಯ ಕಲಿಕೆಯ ಜೊತೆಗೆ ಶಿಷ್ಯನ ತನ್ನತನವೂ ಒಂದಾಗದಿದ್ದರೆ ಅವನ ಬಗ್ಗೆ ಹೇಳಿಕೊಳ್ಳುವಂತಹದೇನೂ ಸಂಭವಿಸುವುದಿಲ್ಲ.

ಜೋಶಿಯವರ ಕಲಿಕೆ ನಿಂತ ನೀರಲ್ಲ.  ಜುಳು ಜುಳು ಹರಿಯುವ ಸಲಿಲದ ಹಾಗೆ.  ಅವರ ಸಾಧನೆ ಹತ್ತು ದಿಕ್ಕಿನ ಬೆಳಕು. ಹಲವಾರು ಘರಾಣೆಗಳಲ್ಲಿ ಕಂಡು ಬರುವ ವಿಶೇಷಗಳನ್ನು ಗಮನಿಸಿ ಅವನ್ನು ಮುಕ್ತ ಮನಸ್ಸಿನಿಂದ ಪಡೆದುಕೊಳ್ಳಲು ಅವರ ಹಿಂಜರಿದವರಲ್ಲ.  ಶುದ್ಧ ಕಲ್ಯಾಣದಲ್ಲಿನ ಅವರ ಅನೇಕ ತಾನ್ ಮಾದರಿಗಳು ಗ್ವಾಲಿಯರ್ ಘರಾಣಾದ ಕೊಡುಗೆಗಳು.  ಅವರು ಆಗ್ರ ಘರಾನಾದ ಶ್ರೇಷ್ಠ ಗಾಯಕರಾದ ವಿಲಾಯತ್ ಖಾನರ ಅನೇಕ ಬೋಲ್ ತಾನ್ ಮತ್ತು ಬೋಲ್ ಆಲಾಪ್ ಮಾದರಿಗಳನ್ನು ತಮ್ಮದಾಗಿಸಿಕೊಂಡರು.  ಒಮ್ಮೆ ಅವರು ಒಬ್ಬ ಸಂಗೀತ ವಿಮರ್ಶಕರೊಂದಿಗೆ ಮಾತನಾಡುತ್ತಾ “ಹಲವಾರು ಕಡೆಗಳಿಂದ ಆಯ್ದು ತಂದ ವಸ್ತುಗಳನ್ನು ಕಿರಾನಾ ಘರಾಣೆಯ ಕಾರ್ಖಾನೆಯಲ್ಲಿ ಸಂಸ್ಕರಿಸಿ ಅವಕ್ಕೆ ಒಂದು ಬಗೆಯ ಹೊಸ ಭಾವಾತ್ಮಕ ಹಾಗೂ ಚಿಂತನಶೀಲ ಮೆರುಗನ್ನು ಕೊಟ್ಟಿದ್ದೇನೆ” ಎಂದಿದ್ದರು.

ಈ ದೃಷ್ಟಿಯಿಂದ ಕಿರಾನಾ ಘರಾಣೆಗೆ ಜೋಶಿಯವರ ಕೊಡುಗೆ ದೊಡ್ಡದು. ಮೊದಲಿಗೆ ಕಿರಾನಾ ಘರಾಣಾ ಅನೇಕ ವಿಧವಾದ ಕೊರತೆಗಳಿಂದ ಕೂಡಿದ್ದು ಮಂದ ಪ್ರಕಾಶದಲ್ಲಿತ್ತು.  ಜೋಶಿಯವರು ಅದರಲ್ಲಿನ ಕೊರತೆಗಳನ್ನು ಕಂಡುಕೊಂಡು ಅವುಗಳಿಗೆ ಹೊಸ ಆವಿಷ್ಕಾರ ನೀಡಿದರು.  ಕಿರಾನಾ ಘರಾಣೆಗೆ ಜೋಶಿಯವರು ನೀಡಿದ ಈ ಹೊಸ ಕಾಯಕಲ್ಪದಿಂದಲೇ ಅವರನ್ನು “ಕಿರಾನಾ ಘರಾಣಾದ ನವ ನಿರ್ಮಾಪಕರು”, “ಕಿರಾನಾ ಘರಾಣಾ ನವ್ಯತೆಯನ್ನು ಮೂಡಿಸಿದ ದಿವ್ಯ ಶಿಲ್ಪಿ" ಇವೇ ಮುಂತಾದ ವಿಶೇಷಣಗಳಿಂದ  ಅಭಿಮಾನಿಗಳು, ವಿಮರ್ಶಕರು ಅವರನ್ನು ಸಂಭೋದಿಸಿರುವುದು.

ಜೋಶಿಯವರು ಒಂದು ರೀತಿಯಲ್ಲಿ “ತಾನಪ್ರಿಯರು”.  ಅಂದರೆ “ತಾನ್”ಗಳ ಬಗೆಗೆ ಅವರಿಗೆ ತುಂಬಾ ಪ್ರೀತಿ.  ತಾನ್ಗಳ ನವೀಕರಣದಲ್ಲೂ ಜೋಶಿಯವರದು ಗಮನಾರ್ಹ ಸಾಧನೆ.  ಸಾಧನೆ ಅಥವಾ ತಯಾರಿ ಬಗೆಗೂ ಅವರದು ಖಚಿತ ನಿಲುವು.  ಆಗ್ರಾ ಮತ್ತು ಪಟಿಯಾಲ ಘರಾಣಾಗಳ ಕೆಲವು ಕಲಾವಿದರು ಹತ್ತಾರು “ತಾನ್”ಗಳನ್ನು ಭರದಿಂದ ತಯಾರು ಮಾಡುವುದರಲ್ಲಿ ಅಗ್ಗಳಿಕೆಯನ್ನು ಪಡೆದಿದ್ದಾರೆ.  ಆದರೆ ಮಾರುಕಟ್ಟೆ ಸರಕಿನಂತೆ ಈ ಅಗ್ಗದ ಪ್ರತಿಷ್ಠೆಯ ತಾನ್ಗಳು ಯಾವುದೇ ಮೌಲ್ಯವನ್ನು ಹೊಂದಿರುವುದಿಲ್ಲ. ಆತುರದ ಅಡಿಗೆಯಂತೆ ತಯಾರಿಸಿದ ಈ ತಾನ್ ಗಳಿಗೆ ಒಂದು ಅಂದ, ಚೆಂದ, ಮಾಧುರ್ಯಗಳ ವೈವಿಧ್ಯತೆ ಇದೆಯೆ?  ಅದೇ ಜೋಶಿಯವರ ತಾನ್ಗಳಲ್ಲಿ ಹಲವಾರು ರೀತಿಯ ವೈವಿಧ್ಯತೆಯನ್ನು ಕಾಣಬಹುದು.  ಇದಕ್ಕೆ ಕಾರಣ ಜೋಶಿಯವರು ತಮ್ಮ ಉಸಿರಿನ ಮೇಲೆ ಹೊಂದಿರುವ ಹತೋಟಿ.  ಈ ಒಂದು ಸಿದ್ಧಿ ಶ್ರೋತೃಗಳನ್ನು ಆಕರ್ಷಿಸುವ ಅಸಾಧಾರಣ ಶಕ್ತಿಯಾಗಿದೆ.

ಕಛೇರಿಗಳಲ್ಲಿ ಜೋಶಿಯವರು ಗಳಿಸಿದ್ದ ಅಸಾಧಾರಣ ಜನಪ್ರಿಯತೆಗೆ ಅವರು ರೂಢಿಸಿಕೊಂಡಿದ್ದ ಕೆಲವು ಗುಣಗಳೇ ಕಾರಣ.  ಸಾಮಾನ್ಯವಾಗಿ ಅವರು ಕಚೇರಿಗಳಿಗೆ ಆರಿಸಿಕೊಳ್ಳುತ್ತಿದ್ದುದು ಸಂಮಿಶ್ರ ರಾಗಗಳು.  ಕಂಡವರು ಕರುಬುವಷ್ಟರ ಮಟ್ಟಿಗೆ ಪರಿಪಕ್ವತೆಯನ್ನು ಸಾಧಿಸಿದ್ದ ಈ ಸಂಯೋಜಿತ ರಾಗಗಳ ಆಯ್ಕೆ ಅನನ್ಯವಾದುದು.  ಅವರ ಈ  ಯಶಸ್ಸಿನ ಒಂದು ಗುಟ್ಟೆಂದರೆ,   “ಯಮನ್, ಕಲ್ಯಾಣ್, ಪೂರಿಯ, ಪೂರಿಯಾ ಕಲ್ಯಾಣ್, ಮತ್ತು ಪೂರಿಯ ಧನಶ್ರೀ – ರಾಗಗಳನ್ನು ಹೃದ್ಗತ ಮಾಡಿಕೊಂಡು ಅವುಗಳ ಮೇಲೆ ಅವರು ಪ್ರಭುತ್ವವನ್ನು ಸಂಪಾದಿಸಿದ್ದುದೇ ಆಗಿದೆ”.

ಅವರು ಕಾರ್ಯಕ್ರಮ ಸಂಯೋಜನೆಯಲ್ಲೂ ಒಂದು ಹೊಸತನವನ್ನು ಕಾಣಿಸಿದ್ದಾರೆ.  ಸಾಮಾನ್ಯವಾಗಿ ಜೋಶಿಯವರು ತಮ್ಮ ಕಾರ್ಯಕ್ರಮಗಳನ್ನು ಯಮನ್ ಕಲ್ಯಾಣ್ ನಿಂದ ಪ್ರಾರಂಭಿಸುತ್ತಿದ್ದರು.  “ಏರೀ ಸಖಿ ಕೈಸೆ” ಎಂಬ ನಿಧಾನ ಗತಿಯ ಖ್ಯಾಲ್, ಧ್ವನಿಯ ಏರಿಳಿತಗಳ ಮೇಲೆ ಅವರು ಹೊಂದಿದ್ದ ಹತೋಟಿಗೂ, ತಾಳ ಕೌಶಲದ ನಿರ್ವಹಣೆಗೂ ಸಾಕ್ಷಿಯಾಗಿದೆ.  ‘ಜಪ್ ತಾಲ್’ದಲ್ಲಿ ಧ್ವನಿಮುದ್ರಿತವಾಗಿರುವ ಅವರ ಒಂದು ರಚನೆ ಹಿತಮಿತವಾಗಿ ಮೂಡಿ ಬಂದಿರುವ ಅನರ್ಘ್ಯ ರತ್ನ.  ತಮ್ಮ ಧ್ವನಿ ನಿರೂಪಣೆಯಲ್ಲಿನ ಒಂದು ಮುಖ್ಯ ಅಂಶವಾಗಿರುವ “ಲಯಕರಿ”ಯ ಮೇಲೆ ಅವರದು ವಿಶ್ವಾಸದ ಅವಲಂಬನೆ.

ಸಾಮಾನ್ಯ ಮಟ್ಟದ ಶ್ರೋತೃಗಳ ಮೇಲೆ ಒಂದು ರೀತಿಯ ಸಂಘಟನೆಯನ್ನು ತರಲು ಲತಾಮಂಗೇಶ್ಕರ್ ಅಂತಹ ಗಾಯಕಿ ಹಾಡಿ ಜನಪ್ರಿಯತೆಗೊಳಿಸಿದಂತಹ ಒಂದು ಚೀಸ್, “ಏರಿ ಅಲಿಪಿಯ ಬಿನ್” ಎಂಬ ಧ್ರುತ್.   ಕೆಲವು ಹೊಸ ಪ್ರಚೋದಿತ ರಚನೆಗಳಿಗಿಂತ ಜೋಶಿಯವರು ಸಾಂಪ್ರದಾಯಿಕ ರಚನೆಗಳ ಕಡೆಗೆ ಹೆಚ್ಚು ಒಲವು ತೋರಿದ್ದರು.  

ಗಾಯಕನಿಗೆ ತಾನು ಹಾಡಲಿರುವ ರಚನೆ ಕೇವಲ ಒಂದು ಊರುಗೋಲು.  ತನ್ನ ಕಲಾ ಪ್ರತಿಭೆಯಿಂದ ಆತ ಅದನ್ನು ಅಂದಗೊಳಿಸುವುದಕ್ಕೆ ಇರುವ ಒಂದು ಸಾಧನ ಮಾತ್ರ, ಅದು ಸಾಂಪ್ರದಾಯಿಕ ರಚನೆಗಳಲ್ಲಿ ಗಾಯಕನಿಗೆ ಇರುವ ಈ ಒಂದು ನಯಗಾರಿಕೆ, ಕುಸುರಿ ಕೆಲಸಕ್ಕೆ ಅವಕಾಶವಿದೆ ಎಂದು ಜೋಶಿಯವರ ನಂಬಿಕೆ.  ಖ್ಯಾಲ್ ಗಾಯನ, ಸದಾರಂಗ್, ಅದಾರಂಗ್ ಎಂಬುವರಿಂದ ಜನಪ್ರಿಯತೆ ಪಡೆಯಿತು ಎನ್ನುವವರಿದ್ದಾರೆ.  ಇವರು ಅನೇಕ ಖ್ಯಾಲ್ಗಳನ್ನು ರಚಿಸಿದ್ದಾರೆ. ಪ್ರಾಸಂಗಿಕವಾಗಿ ಹೇಳಬಹುದಾದರೆ ಜೋಶಿಯವರ ಬಹುಮಟ್ಟಿನ ಧ್ವನಿಮುದ್ರಿಕೆಗಳೆಲ್ಲ ಅದಾರಂಗ್ ಅಥವಾ ಸದಾರಂಗ್ ಅವರಿಂದ ಅನುಕರಿಸಲ್ಪಟ್ಟವು.  

ಪರಂಪರಾಗತ ರಚನೆಗಳಿದ್ದಾಗ್ಯೂ ಜೋಶಿಯವರ ತೋಡಿ, ಮಾಲಕೌಂಸ್, ಪೂರಿಯಾ ಕಲ್ಯಾಣಿ ಮತ್ತು ದರ್ಬಾರಿಗಳ ನಿರೂಪಣೆಗಳು ಭಾರತೀಯ ಸಂಗೀತದಲ್ಲಿ ಒಂದು ಹೊಸ ಆಯಕಟ್ಟನ್ನು ನೀಡಿವೆ.  ಈ ರಾಗಗಳ ನಿವೇದನೆಯಲ್ಲಿ ಜೋಶಿಯವರು ಅಬ್ದುಲ್ ಕರೀಂಖಾನರ ಅನುಕರಣೀಯ ಶೈಲಿಯನ್ನು ಪ್ರತಿನಿಧಿಸಿದ್ದಾರೆ.  ಮಿಯಾನ್-ಕಿ-ಮಲ್ಹಾರ್ ರಾಗದ ಧೃತ್, ಖ್ಯಾಲ್ ನ ನಿರೂಪಣೆಯಲ್ಲಿ ಜೋಶಿಯವರು “ಧೂಮ್”  ಎಂಬ ಪದದ ಮೂಲಕ ಚಮತ್ಕಾರವಾಗಿ ಸುರಿಯುವ ಮಳೆಯ ಧ್ವನಿಯನ್ನು ಅನುಸರಿಸಿ ಶ್ರೋತೃಗಳಿಗೆ ವಿಜ್ಞಾನದ ಅರಿವನ್ನುಂಟುಮಾಡಿದ್ದಾರೆ.

‘ಜೋಶಿಯವರು ತಮ್ಮ ಕೆಲವು ವಿಶೇಷ ರಚನೆಗಳನ್ನು ಹಾಡಿದಾಗ, ಟೇಪ್ ರಿಕಾರ್ಡರ್ ಜೀವಂತವಾಗಿ ಬಂದು ಹಾಡುತ್ತಿದೆಯೇನೋ ಅನಿಸುತ್ತದೆ.”  ಜೋಶಿಯವರ ಸಂಗೀತದಲ್ಲಿ ಒಂದು ರೀತಿಯ ಸೀಮಿತತೆಯನ್ನು ಕಂಡವರು ಕೂಡ “ಜೋಶಿಯವರ ಸಂಗೀತದ ರಸನಿಮಿಷಗಳು ನಿಜಕ್ಕೂ ಅನಿರ್ವಚನೀಯ” ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

ಕನ್ನಡದ ವಿಚಾರಕ್ಕೆ ಬಂದಾಗ ಹಿಂದೂಸ್ಥಾನಿ ಸಂಗೀತದಲ್ಲಿ ದಾಸಶ್ರೆಷ್ಟರ ಹಾಡುಗಳನ್ನು ಭೀಮಸೇನ ಜೋಶಿ ಅವರಷ್ಟು ಹಾಡಿ ಜನಪ್ರಿಯಗೊಳಿಸಿದವರು ಕಡಿಮೆಯೇ ಎಂದರೆ ತಪ್ಪಾಗಲಾರದು.  ಅವರ ಒಂದೊಂದು ಕನ್ನಡದ ಭಜನೆಯೂ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದು ಹಿಂದೂಸ್ಥಾನಿ ಸಂಗೀತದ ಅರಿವಿಲ್ಲದ ಕರ್ನಾಟಕ ಸಂಗೀತದ ಅಭಿಮಾನಿಗಳನ್ನೂ ಮತ್ತು ಯಾವುದೇ ಶಾಸ್ತ್ರೀಯ ಸಂಗೀತದ ಅರಿವಿಲ್ಲದ ಲಘು ಸಂಗೀತ ಆಸಕ್ತರನ್ನು ಹಿಂದೂಸ್ಥಾನಿ ಸಂಗೀತದ ಬಾಗಿಲಿಗೆ ಕರೆತರುವಲ್ಲಿ ಸಾಕಷ್ಟು ಮೋಡಿ ಹಾಕಿದೆ.  ಅವರ ಗಾಯನದಲ್ಲಿ ಮೂಡಿ ಬಂದ “ಭಾಗ್ಯದ ಲಕ್ಷ್ಮಿ ಬಾರಮ್ಮ”, “ಕನ್ನಡತಿ ತಾಯೆ ಬಾ”, “ನಂಬಿದೆ ನಿನ್ನ ನಾದ ದೇವತೆಯೆ”, “ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ” ಗೀತೆಗಳು ಈ ನಾಡಿನ ಪ್ರತಿ ಚಿತ್ರಗೀತೆಗಳ ಆಸಕ್ತನ ಹೃದಯಲ್ಲೂ ಸ್ಥಿರವಾಗಿ ನೆಲೆ ನಿಂತಿವೆ.  ಅವರ “ದೇವ ಬಂದ ನಮ್ಮ ಸ್ವಾಮಿ ಬಂದಾನೋ”, “ತೇಲಿಸೋ ಇಲ್ಲ ಮುಳುಗಿಸೋ”, “ಕರುಣಾಕರ ನೀ ಎಂಬುವುದ್ಯಾತಕೋ”, “ತಪ್ಪು ನೋಡದೆ ಬಂದೆಯಾ, ಎನ್ನಯ ತಂದೆ”, “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”  ಇವು ಈ ಕ್ಷಣದಲ್ಲಿ ಮೂಡುವ ಕೆಲವು ಸುಮಧುರ ನೆನಪುಗಳು.  ಅವರ ಪ್ರತಿಯೊಂದು ಗೀತೆಯೂ ಹೊಸ ಅನುಭವ.  ಹೃದಯಾಂತರಾಳದಲ್ಲಿ ಅಮರ.

ಎಲ್ಲ ಬದುಕಿಗೂ ಒಂದು ಕೊನೆ ಇದೆ.  ಸಂಗೀತ ರತ್ನ, ಭಾರತ ರತ್ನ ಪಂಡಿತ ಭೀಮಸೇನ ಜೋಶಿಯವರು 2011ರ ಜನವರಿ 24ರಂದು ಈ ಲೋಕವನ್ನಗಲಿ ಮತ್ತೊಂದು ದಿವ್ಯಲೋಕವನ್ನು ಪ್ರವೇಶಿಸಿದ್ದಾರೆ.  ಅವರು ಸೃಷ್ಟಿಸಿದ ಸಂಗೀತ ಲೋಕದಲ್ಲಿ ಅವರೆಂದಿಗೂ ಚಿರಸ್ಥಾಯಿಗಳು.  ಆ ಸಾಮ್ರಾಜ್ಯದ ನಂದನವನದಲ್ಲಿ ವಿಹರಿಸುವ ಸೌಭಾಗ್ಯವನ್ನು ನಮಗೆಲ್ಲ ನೀಡಿ ಹೋಗಿದ್ದಾರೆ.”

(ಆಧಾರ:  ಶಾಸ್ತ್ರೀಯ ಸಂಗೀತ ವಿಚಾರಗಳಿಗೆ ಡಾ. ಕೆ. ಶ್ರೀಕಂಠಯ್ಯ ಅವರ ಭಾರತೀಯ ಸಂಗೀತ ಮುಕುಟಮಣಿಗಳು ಕೃತಿಯನ್ನು ಆಧರಿಸಿದ್ದೇನೆ)

On the birth anniversary of Bharata Ratna Pandit Bhimsen Joshi 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ