ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರುಣಾಚಲಪ್ಪ


 ಹಾರ್ಮೊನಿಯಂ ಅರುಣಾಚಲಪ್ಪ


ಮಹಾನ್ ಸಂಗೀತ ವಿದ್ವಾಂಸರಾದ ಅರುಣಾಚಲಪ್ಪನವರು ಕರ್ನಾಟಕ ಸಂಗೀತ ಜಗತ್ತಿನಲ್ಲಿ ಹಾರ್ಮೊನಿಯಂ ವಾದ್ಯಕ್ಕೆ ಅಪೂರ್ವ ಸ್ಥಾನ ಮಾನ ದೊರಕಿಸಿಕೊಟ್ಟವರು. ಇಂದು ಕೂಡಾ ಬಿ. ಎಸ್. ರಾಜಯ್ಯಂಗಾರ್ ಅವರ ಜಗದೋದ್ಧಾರನ ಗೀತೆ ಕೇಳಿದರೆ ಅದರ ಜೊತೆ ಅರುಣಾಚಲಪ್ಪನವರ ಮೆರುಗಿನ ಹಾರ್ಮೋನಿಯಂ ಧ್ವನಿ ಹೃದಯವನ್ನು ಆಪ್ತವಾಗಿ ತಟ್ಟುತ್ತದೆ.

1899ರಲ್ಲಿ ಅರಳೇಪೇಟೆಯ ಆರಂಭದಲ್ಲೇ ಸಿಕ್ಕುವಂತಿದ್ದ ಒಂದು ಮನೆಯಲ್ಲಿ ಅರುಣಾಚಲಪ್ಪನವರು, ಗೌರಮ್ಮ-ವೀರಭದ್ರಯ್ಯ ದಂಪತಿಗಳ ಮಗನಾಗಿ ಜನ್ಮ ತಾಳಿದರು.  ಅರುಣಾಚಲ ಮೂರು ವರ್ಷದ ಹಸುಳೆಯಾಗಿದ್ದಾಗಲೇ ತಾಯಿ ಗೌರಮ್ಮ ವಿಧಿವಶರಾದರು. ತಂದೆ ವೀರಭದ್ರಯ್ಯ ಮಗುವಿನ ಲಾಲನೆ-ಪಾಲನೆಗೆ ಮತ್ತೆ ಮದುವೆಯಾದರು. ಮತ್ತೆ ಮನೆ ತುಂಬಿದಾಕೆ ನಂಜಮ್ಮ. ವೀರಭದ್ರಯ್ಯನವರಿಗೆ ಎರಡನೇ ಹೆಂಡತಿಯಾದರೂ ಅರುಣಾಚಲನಿಗೆ ಮಲತಾಯಿಯಾಗಲಿಲ್ಲ. ಆಕೆಗೆ ಮಕ್ಕಳಾಗಲಿಲ್ಲ. ಅರುಣಾಚಲನನ್ನು ಸ್ವಂತ ಮಗನೆಂದೇ ಭಾವಿಸಿ ಮಮತೆಯಿಂದ ಸಾಕಿದರು. ಅರುಣಾಚಲನಿಗೆ ಆರೇಳು ವರ್ಷಗಳಾಗಿರಬೇಕು.  ಅಷ್ಟರಲ್ಲಿ ಮೂವತ್ತು ವರ್ಷ ವಯಸ್ಸನ್ನೂ ಮುಟ್ಟದ ತಂದೆ ವೀರಭದ್ರಯ್ಯನವರೂ ಅಲ್ಪಾಯಸ್ಸಿನಲ್ಲೇ ತೀರಿಕೊಂಡರು. 

ಅಮ್ಮ ಅಪ್ಪ ಇಬ್ಬರನ್ನೂ ಕಳೆದುಕೊಂಡ ಅರುಣಾಚಲನನ್ನು ಸಾಕಿ ಬೆಳೆಸುವ, ವಿದ್ಯಾಭ್ಯಾಸ ಮಾಡಿಸುವ ಹೊಣೆಯನ್ನು ಅವರ ತಂದೆಯ ತಮ್ಮ ರಕ್ತ ಬಂದು ಪಿಳ್ಳಪ್ಪನವರು ವಹಿಸಿಕೊಂಡರು. ಓದು ಬರಹ ಕಲಿಯಲು ಅರುಣಾಚಲನನ್ನು ಅರಳೇಪೇಟೆಯ ಒಂದು ಕೂಲಿ ಮಠದಲ್ಲಿ ಸೇರಿಸಿದರು. ಕೂಲಿ ಮಠವೆಂದರೆ ಒಂದು ಗುರುಕುಲದಂತಿದ್ದ ಕಾಲ ಅದು. ಅಲ್ಲಿ ಕಲಿಸಲು ಕೂಲಿ ಕಡಿಮೆ. ಆದರೆ ಕಲಿಕೆಯ ದುಡಿಮೆ ಜಾಸ್ತಿ. ಮಕ್ಕಳಿಗೆ ಒಳ್ಳೆಯ ವಿದ್ಯೆ, ಬುದ್ಧಿ, ನೀತಿ, ನಡತೆ ಕಲಿಸುವುದು ಉತ್ತಮ ಧರ್ಮ ಎಂದು ನಂಬಿದ್ದರು ಕೂಲಿಮಠದ ಗುರುಗಳು.

ಅರುಣಾಚಲ ಗುರುಗಳಿಗೆ ಅಚ್ಚುಮೆಚ್ಚಿನ ಶಿಷ್ಯನಾದ. ಕುಲಕಸಬನ್ನು ಕಲಿಸುವ ಇಚ್ಛೆಯಿಂದ ಅರುಣಾಚಲನ ವಿದ್ಯಾಭ್ಯಾಸವನ್ನು ಮಿಡಲ್‌ ಸ್ಕೂಲು ಹತ್ತುವ ಮೊದಲೇ ಮೊಟಕು ಮಾಡಿದರು ಅವರ ಚಿಕ್ಕಪ್ಪನವರು. ಅಷ್ಟು ವಿದ್ಯೆ ಸಾಕೆನ್ನಿಸಿತು, ಅವರಿಗೆ. 

ಅರುಣಾಚಲನಿಗೆ ಕುಲಕಸಬನ್ನು ಕಲಿಯುವುದರ ಜೊತೆಗೆ ಸಂಗೀತ, ಗರಡಿ ಮನೆ, ಬ್ಯಾಡ್‌ ಮಿಂಟನ್‌, ಫುಟ್‌ಬಾಲ್‌ ಆಟ ಇವುಗಳಲ್ಲಿ ಅಪಾರ ಆಸಕ್ತಿ ಬೆಳೆಯಿತು. ಅರುಣಾಚಲನ ಚಿಕ್ಕಪ್ಪನ ಹಿರಿಯ ಮಗನಾದ ವೀರಭದ್ರಯ್ಯನೊಂದಿಗೆ ಗರಡಿಮನೆಯ ಸಾಧನೆ, ಫುಟ್‌ಬಾಲ್‌ ಆಟದಲ್ಲಿ ಚಾತುರ್ಯ ಎರಡೂ ಬೆಳೆಯುತ್ತ ಬಂತು. ಅರುಣಾಚಲ ನೇಯ್ಗೆಯ ಕೆಲಸ, ಗರಡಿಸಾಮು ಆಟ ಎಲ್ಲದರಲ್ಲೂ ಗಣ್ಯನಾಗಿ ಬೆಳೆದು ಬಂದ.  ಆದರೆ ಅವನಲ್ಲಿ ಬಂದ ಸಂಗೀತದ ಹಂಬಲ ಮಾತ್ರ ಇವೆಲ್ಲವನ್ನೂ ಮೆಟ್ಟಿ ನಿಂತಿತು ಸಂಗೀತವೆನ್ನುವ ಹುಚ್ಚು. ಎಂಟು ವರ್ಷದ ಹುಡುಗನಿಂದಲೇ ಭಜನೆ , ಹರಿಕಥೆ  ಕೇಳಲು ಹೋಗುತ್ತಿದ್ದವನಿಗೆ ಹೇಗೋ ಹಾರ್ಮೊನಿಯಂ ಖಯಾಲಿ ಹತ್ತಿತು. ಮನೆಯಲ್ಲಿ ಕೇಳಲು ಹಿಂಜರಿಕೆ. ಪಟ್ಟು ಬಿಡದ ಹುಡುಗ ಖಾಲಿ ಕಡ್ಡಿ ಪೆಟ್ಟಿಗೆಗಳನ್ನು ಕೂಡಿಸಿಕೊಂಡು , ಹಾರ್ಮೊನಿಯಂ ಪೆಟ್ಟಿಗೆಯಂತೆಯೇ ವರಸೆಯಾಗಿ, ಬಿಳಿ ಕರೀಮಣೆಗಳಂತೆ ಜೋಡಿಸಿ, ಅದರ ಮೇಲೇ ಬೆರಳಾಡಿಸಿ ಅಭ್ಯಾಸ ಮಾಡುತ್ತಿದ್ದ.  ಯಾರಿಗೂ ಕೇಳಿಸದ ಆ ಸಂಗೀತ ಅವನಿಗೆ ಕೇಳಿಸುತ್ತಿತ್ತು. ಇದನ್ನು ಕಂಡ ಅರುಣಾಚಲನ ಚಿಕ್ಕಪ್ಪ ಒಂದು ಹೊಸ ಹಾರ್ಮೊನಿಯಂ ಕೊಡಿಸಿದರು.

ಅರುಣಾಚಲನಿಗೆ 14 ಅಥವಾ 15 ವರ್ಷ ವಯಸ್ಸಿರಬಹುದು. ನಾರಾಯಣಸ್ವಾಮಿ  ಇವರ ಶಾಸ್ತ್ರೀಯ ಸಂಗೀತದ ಪ್ರಥಮ ಗುರುಗಳಾದರು. ನಾರಾಯಣಸ್ವಾಮಿ ಬಿಡಾರಂ ಕೃಷ್ಣಪ್ಪನವರ ಶಿಷ್ಯರು. ಗಾನವಿಶಾರದರಾಗಿದ್ದ ಗುರುಗಳಂತೆಯೇ ಬಿಚ್ಚು ಮನಸ್ಸಿನಿಂದ ಪಾಠ ಹೇಳಿದರು. ಅವರು ಪಿಟೀಲಿನಲ್ಲಿ ನುಡಿಸಿ ಸ್ವರ ಹೇಳಿದರೆ,  ಅರುಣಾಚಲನಿಗೆ ಅದನ್ನು ಹಾರ್ಮೊನಿಯಂನಲ್ಲಿ ನುಡಿಸುವಷ್ಟು  ಜ್ಞಾನವುಂಟಾಯಿತು. ಪಿಟೀಲಿನ ಜೊತೆಗೆ ನುಡಿಸಿ ನುಡಿಸಿ, ಹಾರ್ಮೊನಿಯಂನಲ್ಲಿ ನುಡಿಸಿದ ಸಂಗತಿಗಳು ತಂತಿವಾದ್ಯದಲ್ಲಿ ಬರುವಷ್ಟು ಮಧುರವಾಗಿ ನಯವಾದವು. ಒಂದೆರಡು ವರ್ಷಗಳಲ್ಲೇ ಅರುಣಾಚಲ ಹಾರ್ಮೊನಿಯಂ ವಾದನದಲ್ಲಿ ಪಾರಂಗತನಾದ. ಜೊತೆಗೆ ನಾಟಕದ ಹರಿಹರಾನಂದ ಭಾರತಿಯವರು ಹೆಚ್ಚಾಗಿ ಬಳಸುತ್ತಿದ್ದ ಉತ್ತರಾದಿ ರಾಗಗಳ ಪರಿಚಯವಾಗಿ ಹಾರ್ಮೊನಿಯಂ ವಾದನಕ್ಕೆ ಇನ್ನಷ್ಷು ಮೆರುಗು ಬಂದಿತು.
 
ಅರುಣಾಚಲಪ್ಪನವರಿಗೆ 18 ವರ್ಷದ ವೇಳೆಗೆ ರುದ್ರಮ್ಮ ಎಂಬ ಕನ್ಯೆಯ ಜೊತೆಗೆ ವಿವಾಹವಾದರೂ ಎರಡುವರ್ಷ ಕಳೆಯುವಷ್ಟರಲ್ಲಿ, ಅಕೆ ಮೃತಪಟ್ಟರು. ಮತ್ತೆ ವಿವಾಹವಾದ ಅರುಣಾಚಲಪ್ಪನವರ ಪತ್ನಿಯ ಸ್ಥಾನ ತುಂಬಿದ  ಅನ್ನಪೂರ್ಣಮ್ಮ, ನಾಲ್ಕು ಗಂಡುಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿಗೆ ತಾಯಿಯಾದರು. 1923 ರಲ್ಲಿ ಹುಟ್ಟಿದ ಮೊದಲ ಮಗುವೇ ವೀರಭದ್ರಯ್ಯ.  ಇವರು ಪಿಟೀಲು ವಾದಕರಾಗಿ ಖ್ಯಾತಿವಂತರಾಗಿ, ತಂದೆ ಸ್ಥಾಪಿಸಿದ ಅರುಣಾ ಮ್ಯೂಸಿ಼ಕಲ್ ಸಂಸ್ಥೆಯನ್ನು ಮುಂದೆ ಉಳಿಸಿ ಬೆಳೆಸಿದವರು.

ಎಲ್ಲಾ ಸಂಗೀತ ವಿದ್ವಾಂಸರನ್ನೂ  ವಾರಕ್ಕೊಮ್ಮೆಯಾದರೂ ತಮ್ಮ ಮನೆಯಲ್ಲಿ ಸೇರಿಸುವ ನಿರ್ಧಾರ ಮಾಡಿದ ಅರುಣಾಚಲಪ್ಪ ತಮ್ಮ  ಜೊತೆ 55 ವರ್ಷಗಳ ಕಾಲ ಸ್ನೇಹದಿಂದಿದ್ದ ತಬಲಾ ರಂಗಪ್ಪನವರೊಂದಿಗೆ  ಮನೆಯಲ್ಲೇ ಶನಿವಾರದ ಭಜನೆ ಮನೆ ಆರಂಭಿಸಿದರು. ಪಿಟೀಲು ತಾಯಪ್ಪನವರು, ಪುಟ್ಟಪ್ಪನವರಂತಹ ಹಿರಿಯ ವಿದ್ವಾಂಸರು ಇವರ ಸಂಗೀತದ ಬೆಳವಣಿಗೆಯ ಪೋಷಕರಾದರು. ಚಿಂತಲಪಲ್ಲಿ ವೆಂಕಟರಾಯರು, ರಾಮಚಂದ್ರರಾಯರು, ಡಿ. ಸುಬ್ಬರಾಮಯ್ಯನವರು ಇಂತಹ ವಿದ್ವಾಂಸರೆಲ್ಲ ಒಬ್ಬೊಬ್ಬರೂ ಒಂದೊಂದು ವಾರ ಹಾಡುತ್ತಿದ್ದರು.  ಒಂದು ದಿನ ಇದ್ದಕ್ಕಿದಂತೆಯೇ “ಭೈರವಿ ಮತ್ತು ಬೇಗಡೆ” ರಾಗ ಹಾಡುವುದರಲ್ಲಿ ನಿಷ್ಣಾತರಾಗಿದ್ದ  ಭೈರವಿ ಕೆಂಪೇಗೌಡರು  ಅರುಣಾಚಲಪ್ಪನವರ ಮನೆಗೆ ಧಾವಿಸಿ ಬಂದು, "ಅರುಣಾಚಲಪ್ಪ! ನಿಮ್ಮ  ಹಾರ್ಮೊನಿಯಂ ಜೊತೆ ಹಾಡ್ಬೇಕೂಂತ ಬಂದಿದೀನಿ, ನೀವು ನುಡಿಸಿ ಹಾಡ್ತೇನೆ " ಎಂದು  ಭೈರವಿ, ಬೇಗಡೆ ರಾಗಗಳನ್ನು ಹಾಡಿದರು. ಅರುಣಾಚಲಪ್ಪನ ಹಾರ್ಮೋನಿಯಂ ವಾದನ ಕೇಳಿ ಪರಮಾನಂದಪಟ್ಟ ಗೌಡರು ಹರಸಿ “ಅರುಣಾಚಲಪ್ಪನವರೇ ಇಂತಹ ಮಧುರನಾದ ಈ ತಬ್ಬಲಿ ವಾದ್ಯದಲ್ಲಿ ಇಂದೇ ಕೇಳಿದ್ದು” ಎಂದರು. ಇನ್ನು ಮುಂದೆ ನಾವೂ ಅರುಣಾಚಲನನ್ನು "ಅರುಣಾಚಲಪ್ಪನವರೇ” ಎಂದು ಕರೆಯಬಹುದಲ್ಲವೇ? ಎಂದರು.

ಬಿಡಾರಂ ಕೃಷ್ಣಪ್ಪನವರ ಶಿಷ್ಯ ನಾರಾಯಣ ಸ್ವಾಮಿಯವರು ಬೆಂಗಳೂರು ಬಿಟ್ಟು ಹೊರಡಬೇಕಾಯಿತು. ಅನಂತರ ಪಿಟೀಲು ವಾದನದಲ್ಲಿ ಹೆಸರಾಂತ ಹಿರಿಯರಾಗಿದ್ದ ತಾಯಪ್ಪನವರು ಮತ್ತು ಪುಟ್ಟಪ್ಪನವರ ಜೊತೆ ಅರುಣಾಚಲಪ್ಪ ಪಕ್ಕವಾದ್ಯ ನುಡಿಸುತ್ತಿದ್ದರು. ಪಿಟೀಲು ವಾದನದ ಜೊತೆ ಪಕ್ಕವಾದ್ಯ ನುಡಿಸಿ ಅರುಣಾಚಲಪ್ಪನವರ ವಾದನ ಇನ್ನೂ ಹೆಚ್ಚು ಮಧುರವಾಯಿತು. ಪುಟ್ಟಪ್ಪನವರಿಗೆ ಇವರಲ್ಲಿ ಆತ್ಮೀಯತೆ ಹಾಗೂ ವಾತ್ಯಲ್ಯ ಬೆಳೆದು, ತಾವಾಗಿಯೇ ಪ್ರೌಢಪಾಠ ಹೇಳಿಕೊಡಲು ಒಪ್ಪಿದರು. ಅವರ ಸಂಗೀತ ಜ್ಞಾನ ಬಹುದೊಡ್ಡದು. ಮನೋಧರ್ಮ ಅತಿ ಮಧುರ, ಮೈಸೂರು ಟಿ.ಚೌಡಯ್ಯನವರಿಗೆ ಕೀರ್ತಿ ಬರುವ ಮೊದಲು, ತಾಯಪ್ಪ ಮತ್ತು ಪುಟ್ಟಪ್ಪನವರಿಗಿದ್ದ ಹೆಸರು ಖ್ಯಾತಿ ನಮ್ಮ ನಾಡಿನಲ್ಲಿ ಮತ್ಯಾರಿಗೂ ಇರಲಿಲ್ಲವೆನ್ನಬಹುದು. ಪುಟ್ಟಪ್ಪನವರ ಗುಣವೂ ಹಾಗೆಯೇ. ಮಿತಭಾಷಿ. ಆಡಿದ್ದೆಲ್ಲ ಮುತ್ತಿನಂತಹ ಮಾತುಗಳು. ರಾಜಗಂಭೀರ. ಆದರೆ ಎಲ್ಲರಲ್ಲೂ ವಿನಯಶೀಲರು. ಒಟ್ಟಿನಲ್ಲಿ ಬಹುದೊಡ್ಡ ವ್ಯಕ್ತಿ.
ಪುಟ್ಟಪ್ಪನವರಲ್ಲಿ ಅರುಣಾಚಲಪ್ಪನವರಿಗಾದ ಪಾಠ ಅಮೂಲ್ಯವಾದದ್ದು.  ಅವರ ಮನೋಧರ್ಮದಂತೆಯೇ ಇವರೂ ಮೃದುಮಧುರ ಸಂಗೀತದಲ್ಲಿ ಮಹಾಭಾವುಕರಾದರು. ಎರಡು ನಿಮಿಷ ನುಡಿಸಲಿ, ಇಪ್ಪತ್ತು ನಿಮಿಷ ನುಡಿಸಲಿ, ನುಡಿಸಬೇಕಾದ ರಾಗ-ರಸಗಳ ರಸಭಟ್ಟಿಯನ್ನೇ ಇಳಿಸುವಷ್ಟು ಸೂಕ್ಷ್ಮವಾಯಿತು ಅವರ ಸಂಗೀತಜ್ಞಾನ. ಗಾಯಕರೋ, ವಾದಕರೋ, ಯಾರಾದರೂ ಸರಿ, ಅವರ ಸಂಗೀತವನ್ನು ಹಾಗೇ ಅಚ್ಚಳಿಸುತ್ತಿದ್ದರು. ಅಷ್ಟೇ ಅಲ್ಲ, ಬಹುವೇಳೆ ಅವರವರ ಸಂಗತಿಗಳನ್ನು ಅವರ ಜೊತೆಯಲ್ಲೇ ನುಡಿಸುತ್ತಿದ್ದರು.ಇಷ್ಟನ್ನೂ ಸಾಧಿಸಿದಾಗ ಅರುಣಾಚಲಪ್ಪನವರಿಗೆ ವಯಸ್ಸು, ಕೇವಲ ಇಪ್ಪತ್ತು ವರ್ಷ. 

ಮುಂದಿನ ಕೆಲವೇ ವರ್ಷಗಳಲ್ಲಿ ಅರುಣಾಚಲಪ್ಪನವರ ಕೀರ್ತಿ ಮೈಸೂರು ದೇಶದ ಮುಖ್ಯ ಎಡೆಗಳಲ್ಲೆಲ್ಲ ಮುಟ್ಟಿತು. ಕಚೇರಿಗಳ ಕರೆ ಬೇಕಾದಷ್ಟಿತ್ತು. ಸಂಗೀತ ಸುಖಸವಿಯಬಲ್ಲ ರಸಿಕರ ಬಾಯಲ್ಲೆಲ್ಲ, “ಯಾರೋ ಅರುಣಾಚಲಪ್ಪನಂತೆ ಆತ ಕೈ ಇಟ್ಟರೆ ಸಾಕು, ಹಾರ್ಮೊನಿಯಂ ಮಾತಾಡುತ್ತಂತೆ!” ಎಂಬ ಮೆಚ್ಚುಗೆಯ ಮಾತುಗಳೇ!. ನಾಟಕ ಶಿರೋಮಣಿ ವರದಾಚಾರ್ಯರಿಗಂತೂ ಇವರನ್ನು ಕಂಡರೆ ತುಂಬು ವಾತ್ಸಲ್ಯ. ಅವರ ನಾಟಕಗಳಿಗೆ ಹಾರ್ಮೋನಿಯಂ ನುಡಿಸಲು, ಇವರನ್ನು ಪ್ರೀತಿಯಿಂದ ಆಹ್ವಾನಿಸಿದರು.
ಹಿರಿಯರಾದ ತಾಯಪ್ಪ, ಪುಟ್ಟಪ್ಪ, ಕರೂರು ಕೃಷ್ಣರಾಯರು, ಚಿಂತಲಪಲ್ಲಿ ವೆಂಕಟರಾಯರು, ಇವರೆಲ್ಲರ ಕಚೇರಿಗಳಿಗೆ ನುಡಿಸಿ, ತಮ್ಮ ಕಲಾಪ್ರತಿಭೆಯನ್ನು, ಅವರ ವಿದ್ವತ್ತಿಗೆ ಸಮನಾಗಿ ಬೆಳೆಸಿಕೊಂಡರು. “ನಮ್ಮ ಅರುಣಾಚಲಪ್ಪನ ಪಕ್ಕವಾದ್ಯವಿದ್ದಾಗ, ಕಚೇರಿ ಕೊಡೋಣ ಅಂದ್ರೇನು” ಎಂದು ಅವರೆಲ್ಲ ಅಭಿಮಾನಪಟ್ಟರು.

ವರದಾಚಾರ್ಯರ ಶಿಷ್ಯರಾದ, ಬಿ.ಎಸ್‌. ರಾಜಯ್ಯಂಗಾರ್ಯರು ಅರುಣಾಚಲಪ್ಪನವರ ಪರಮ ಸ್ನೇಹಿತರಾದರು. ಬಿ. ಎಸ್‌. ರಾಜಯ್ಯಂಗಾರ್ಯರ ದಿವ್ಯಕಂಠ ಮಾಧುರ್ಯ ಒಂದೆರಡು ವರ್ಷಗಳಲ್ಲಿ ಮನೆಮಾತಾಯ್ತು. ಅವರ ಜೊತೆ ಹಾರ್ಮೋನಿಯಂ ನುಡಿಸುತ್ತಿದ್ದ ಅರುಣಾಚಲಪ್ಪನವರ ಕೀರ್ತಿಯೂ ಹಾಗೆಯೇ ಚಿಗುರಿತು. ಪ್ರಸಿದ್ಧ ರೆಕಾರ್ಡಿಂಗ್‌ ಕಂಪೆನಿಯಿಂದ ಇಬ್ಬರಿಗೂ ಆಹ್ವಾನ ಬಂತು. ಗಾನವಿಶಾರದ ಬಿಡಾರಂ ಕೃಷ್ಣಪ್ಪನವರು ಹಾಡುತ್ತಿದ್ದ ಪುರಂದರ ದಾಸರ “ಜಗದೋದ್ಧಾರನ” ಮೈಸೂರು ದೇಶದಲ್ಲೆಲ್ಲ ಪ್ರಖ್ಯಾತವಾಗಿತ್ತು.
ರಾಜಯ್ಯಂಗಾರ್ ಮತ್ತು ಅರುಣಾಚಲಪ್ಪ ಬಿಡಾರಂ ಅವರ ಆಶೀರ್ವಾದ ಪಡೆಯಲು ಮೈಸೂರಿಗೆ ತೆರಳಿದರು. ಇವರಿಬ್ಬರ ಶ್ಲಾಘನೀಯ ಜೊತೆ ಹಾಗೂ ಸಂಗೀತದ ಹೆಸರು ಅವರ ಕಿವಿಗೂ ಬಿದ್ದಿತ್ತು. ಇಬ್ಬರ ಸಂಗೀತವನ್ನೂ ಕೇಳಿ ಆನಂದಪಟ್ಟು, ತುಂಬು ಹೃದಯದಿಂದ ಆಶೀರ್ವದಿಸುತ್ತ “ಅರುಣಾಚಲಪ್ಪ ಈ ಹಾರ್ಮೋನಿಯಂ ವಾದ್ಯ ನಿನಗಾಗಿಯೇ ನಿರ್ಮಾಣವಾಗಿದೆ. ಅದರ ನಾದ ಸೂಕ್ಷ್ಮತೆಯನ್ನು ನಿನ್ನಂತೆ ಅರಿತವರನ್ನು ನಾನು ನೋಡಿಲ್ಲ! ನಿನಗೆ ಮತ್ತು ಆ ವಾದ್ಯಕ್ಕೆ ಅಮರಕೀರ್ತಿ ಲಭಿಸುತ್ತೆ” ಅವರಿವರ ಮಾತು ಕೇಳಿ ಪಿಟೀಲು-ಗಿಟೀಲು ಅಂತ ಕೈ ಹಾಕಬೇಡ ಎಂದು ಹೇಳಿದರಂತೆ. ಅಲ್ಲದೆ ತಾವು ಹಾಡುತ್ತಿದ್ದ "ಜಗದೋದ್ಧಾರನ ಆಡಿಸಿದಳೆ ಯಶೋದ" ಇದನ್ನೇ ಮೊದಲ ರಿಕಾರ್ಡಿಗೆ ಹಾಡಬೇಕೆಂದು ಹೇಳಿದರು. ಅವರ ಮಾತಿನಂತೆ ಅಂದು ಮೊಟ್ಟಮೊದಲು ಗ್ರಾಮಫೋನ್ ಕಂಪನಿಗೆ  ರಾಜಯ್ಯಂಗಾರರು ಹಾಡಿದ "ಜಗದೋದ್ಧಾರನ " ಗೀತೆಗೆ ಹಾರ್ಮೊನಿಯಂ ನುಡಿಸಿದ ಹಿರಿಮೆ ಅರುಣಾಚಲಪ್ಪನವರದು. ಇದನ್ನು ಯಾವಾಗಲೂ ಅರುಣಾಚಲಪ್ಪ ನೆನೆಯುತ್ತಿದ್ದರು. ಅವರು ಹೆಸರು ಹೇಳಿ ಮನೆ ದೀಪ ಹಚ್ಚಬೇಕು ಎಂದು ಭಕ್ತಿಯಿಂದ ಸ್ಮರಿಸುತ್ತಿದ್ದರು.

ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮ್ಮುಖದಲ್ಲಿ ಇವರಿಬ್ಬರ ಸಂಗೀತ ಏರ್ಪಡಿಸುವ ಅಭಿಮಾನ ಬಿಡಾರಂರವರಿಗೆ ಹುಟ್ಟಿತು. ಮಹಾಸ್ವಾಮಿಯವರಲ್ಲಿ ಅರಿಕೆ ಮಾಡಿದರು. ಮಹಾಸ್ವಾಮಿಗಳು ಹಸನ್ಮುಖರಾಗದೆ “ಏಕೆ, ಈ ತಬ್ಬಲಿ ವಾದ್ಯದ ಸಂಗೀಥ ನಮ್ಮ ಕಿವಿಗೆ ಬೀಳಿಸುತ್ತೀರಿ” ಎಂದರು. ಆ ವಾದ್ಯದ ನುಡಿಸಾಣಿಕೆ ಖಾವಂದರ ಕಿವಿಗೆ ಬೀಳಬೇಕೆಂದು ನನ್ನ ಇಷ್ಟ. ನೀವು ಕೇಳದಿದ್ದರೆ ನಾನು ಕಲಿಸಿರುವ ಸಂಗೀತ ವ್ಯರ್ಥವಲ್ಲವೇ? ಅರ್ಧಗಂಟೆ ಅವಕಾಶಮಾಡಿಕೊಡಬೇಕೆಂದು ಕೋರುತ್ತೇನೆ. ಹಾಗೇನಾದರೂ ಬೇಸರವಾದಲ್ಲಿ, ಅಲ್ಲಿಗೇ ಸಂಗೀತ ಕಚೇರಿ ನಿಲ್ಲಿಸಿಬಿಡಬಹುದಲ್ಲಾ ಎಂದರು. ಪ್ರಭುಗಳು ‘ಸರಿ’ ಎಂದರು.

ಅರುಣಾಚಲಪ್ಪನವರಿಗೆ “ನೋಡು, ಅರುಣಾಚಲಪ್ಪ, ಮಹಾಸ್ವಾಮಿಯವರಿಗೆ ಈ ವಾದ್ಯದ ವಿಷಯದಲ್ಲಿ ಒಳ್ಳೆ ಅಭಿಪ್ರಾಯವಿಲ್ಲ, ಪ್ರಸನ್ನ ಸೀತಾರಾಮನ ಮೇಲೆ ಭಾರಹಾಕಿ ಧೈರ್ಯವಾಗಿ ನುಡಿಸು” ಅಂದರು. ಅರಮನೆಯಲ್ಲಿ ಖಾಸಾ ಸಭೆ ಸೇರಿದೆ. ಘೋಷದಲ್ಲಿ ರಾಣಿವಾಸದವರು ಹಾಗೂ ವಿದ್ವಾಂಸರು ಸೇರಿದ್ದಾರೆ. ರಾಜಯ್ಯಂಗಾರ್ಯರಿಗೂ ಅರುಣಾಚಲಪ್ಪನವರಿಗೂ ಮೈಜುಮ್ಮೆಂದಿತು. ಮಹಾಸ್ವಾಮಿಯವರೇನೂ ಹರ್ಷಚಿತ್ತರಾಗಿದ್ದಂತೆ ಕಂಡುಬರಲಿಲ್ಲ. ಸ್ವಲ್ಪಹೊತ್ತು ಕೇಳಿ ಮೇಲೇಳುವುದು ಅನ್ನುವಂತೆ ಇತ್ತು ಅವರ ಮುಖಭಾವ.
ಸರಿ, ಕಚೇರಿ ಆರಂಭವಾಯಿತು. 

ರಾಜಯ್ಯಂಗಾರ್ಯರ ತುಂಬು ಕಂಠದ ಮಾಧುರ್ಯ ಸಭಾಂಗಣವನ್ನು ತುಂಬಿತು. ಒಂದು ರಾಗವನ್ನು ಚೆನ್ನಾಗಿ ಆಲಾಪನೆ ಮಾಡಿ ಅರುಣಾಚಲಪ್ಪನವರಿಗೆ ಬಿಟ್ಟರು. ಹಾರ್ಮೋನಿಯಂ ವಾದ್ಯದಲ್ಲಿ ರಾಗಾಲಾಪನೆ ಶುರುವಾಯಿತು. ಅತ್ಯುತ್ತಮವಾಗಿ ನುಡಿಸಿದ ಅರುಣಾಚಲಪ್ಪನವರ ಹಾರ್ಮೊನಿಯಂ ವಾದನ ಕೇಳಿದ ಮಹಾಸ್ವಾಮಿಯವರು “ಈ ವಾದ್ಯದಲ್ಲಿ ಇಂತಹ ಮಧುರವಾದ, ಸಂಗೀತ ನಾವು ಕೇಳಿಯೇ ಇರಲಿಲ್ಲ. ಇನ್ನು ಮುಂದೆ ಪ್ರತಿವರ್ಷವೂ ದಸರಾ ಮತ್ತು ನಮ್ಮ ವರ್ಧಂತಿ ಶುಭ ಸಮಯದಲ್ಲಿ ನಿಮ್ಮ ಕಚೇರಿ ನಡೆಯಲಿ. ನಿಮ್ಮಿಂದ ನಮ್ಮ ದೇಶದ ಕೀರ್ತಿ ವರ್ಧಿಸಲಿ” ಎಂದು ಹಾರೈಸಿದರು. 

ಈ ಮಧ್ಯೆ ಬಿ.ಎಸ್‌. ರಾಜಯ್ಯಂಗಾರ್ಯರ, “ಕ್ಷೀರಸಾಗರ ಶಯನ” ಸುಪ್ರಸಿದ್ಧವಾಯಿತು. ಇವರು ಹೋದಲ್ಲೆಲ್ಲಾ ರಾಜೋಪಚಾರ. ಆಗ ಪ್ರಸಿದ್ಧಿಗೆ ಬರುತ್ತಿದ್ದ ಪಾಪಾ ವೆಂಕಟರಾಮಯ್ಯರ್ ಅವರೂ ಇವರಿಗೆ ಪಕ್ಕವಾದ್ಯ ನುಡಿಸುತ್ತಿದ್ದರು. ದಕ್ಷಿಣಾ ಮೂರ್ತಿ ಪಿಳ್ಳೆ (ಕಲಿಯುಗದ ನಂದಿಕೇಶ್ವರ ಎಂದು ಪ್ರಖ್ಯಾತರಾಗಿದ್ದವರು) ಮತ್ತು ನಾಯನಪಿಳ್ಳೆಯವರು ಇವರಿಬ್ಬರನ್ನು ಕಾಂಜೀವರಂನಲ್ಲಿ ನಡೆಸುತ್ತಿದ್ದ ಶ್ರೀತ್ಯಾಗರಾಜರ ಆರಾಧನೆಗೆ ಕರೆಸುತ್ತಿದ್ದರು.
ರಾಜಯ್ಯಂಗಾರ್ಯರಿಗೆ ಅರುಣಾಚಲಪ್ಪನವರೊಂದಿಗೆ ಉತ್ತರಭಾರತದ ಪ್ರವಾಸ ಮಾಡಬೇಕೆಂಬ ಆಕಾಂಕ್ಷೆ ಹುಟ್ಟಿತು. ನಿಶ್ಚಯವೂ ಆಯಿತು. ಪ್ರವಾಸ ಹೊರಟು ಪೂನಾ, ಬೊಂಬಾಯಿ, ಕರಾಚಿ, ಲಾಹೋರ್‌, ದೆಹಲಿ, ಅಹಮದಾಬಾದ್‌, ಕಲ್ಕತ್ತಾ ಹೀಗೆ ಸಂಗೀತಾಪೇಕ್ಷಿಗಳ ಮುಖ್ಯವಾದ ಕೇಂದ್ರಗಳಲ್ಲಿ  ಕಚೇರಿ ಮುಗಿಸಿ, ಕಾಶಿಗೆ ಹೋಗುವ ಯೋಚನೆ ಮಾಡಿದರು. ಎಲ್ಲೆಲ್ಲೂ ಜಯಭೇರಿಯೇ. ಪ್ರವಾಸ ಕಾಲದಲ್ಲೇ ಮತ್ತೊಂದು ಸ್ಮರಣೀಯ ಪ್ರಸಂಗ ಕಾಶಿಯಲ್ಲಿ ನಡೆಯಿತು.

ಕಾಶೀ ಹಿಂದೂವಿಶ್ವವಿದ್ಯಾಲಯದ ಉಪಕುಲಪತಿ ಪಂಡಿತ ಮದನ ಮಾಳವೀಯರಿಗೆ, ಇವರನ್ನು ಕರೆಸಿ ಇವರ ಸಂಗೀತ ಎಲ್ಲರಿಗೂ ಕೇಳಿಸಬೇಕೆಂಬ ಸದ್ಬಯಕೆ. ಅವರನ್ನು ಕಂಡು ಕೇಳಿದರು. ಇಬ್ಬರೂ ಒಪ್ಪಿದರು. ಮಾಳವೀಯರು, ಅರುಣಾಚಲಪ್ಪ-ಹಾರ್ಮೋನಿಯಂ ಎಂದಿದ್ದುದನ್ನು ಕೇಳಿ ಹೌಹಾರಿದರು. ಸಂಗೀತ ಕೇಳುವ ಅವರ ಬಯಕೆಯೇ ಬತ್ತಿದಂತಾಯ್ತು. ಮಾಳವೀಯರು, “ಕ್ಷಮಿಸಬೇಕು ಕರ್ನಾಟಕ ಸಂಗೀತ ಹಿರಿಯ ಸಂಪ್ರದಾಯದ್ದು. ಈ ಕ್ಷುಲ್ಲಕ ವಾದ್ಯದೊಡನೆ ಅದನ್ನು ಕೇಳುವ ಪಾಪ ನಮ್ಮ ತಲೆಗೆ ಕಟ್ಟಬೇಡಿ” ಎಂದರು ತಾತ್ಸಾರದಿಂದ.  ಅಯ್ಯಂಗಾರ್ಯರವರ ಮನೋಧರ್ಮ ಅವರ ಶಾರೀರದಷ್ಟೇ ಪುಷ್ಟವಾದದ್ದು. “ಮಾಳವೀಯಜೀ, ತಾವು ನಮ್ಮ ಭಾರತದ ಜನರಿಗೆಲ್ಲ ಮಾನ್ಯರು. ಅರುಣಾಚಲಪ್ಪನವರ ವಾದನ ಮಹಿಮೆ ಕೇಳದೆಯೇ ಹೀಗೆ ಹೇಳಬಹುದೇ?” ಎಂದರು.

ಯೂನಿವರ್ಸಿಟಿಯ ಮಹಾ ಮೇಧಾವಿಗಳ ಸಭೆ, ಜೊತೆಗೆ ಆಹ್ವಾನಿತ ರಸಿಕರ ಉಪಸ್ಥಿತಿಯಲ್ಲಿ ಅಯ್ಯಂಗಾರ್ಯರು ಸೊಗಸಾಗಿ ರಾಗಾಲಾಪನೆ ಮಾಡಿ ಅರುಣಾಚಲಪ್ಪನವರಿಗೆ “ಭರ್ಜರಿಯಾಗಿ ನುಡಿಸಿ, ಸಾರ್” ಎಂದರು. ಮತ್ತೆ ಅಂತಹುದೇ ಮೋಡಿ ಆ ಬೆರಳುಗಳಲ್ಲಿ! ಕೇಳಿದವರು ನಂಬದಾದರು!. ಮುಂದಿನ ಸಾಲಿನಲ್ಲಿ ಮಂಡಿಸಿದ್ದ ಮಾಳವೀಯರು, ಕಚೇರಿಯ ಮಧ್ಯೆ ಧಿಡೀರನೆ ಆಚೆಗೆ ಹೋಗಿ, ಮತ್ತೆ ಬಂದರು. ಆಗ ಅವರೆಂದ ಮಾತುಗಳಿವು. “ಬಂಧುಗಳೇ, ಜೀವನದಲ್ಲಿ ಆದಷ್ಟೂ ತಪ್ಪು ಮಾಡಬಾರದೆಂದುಕೊಂಡು ಇರುವವನು ನಾನು, ಆದರೆ, ಇಂದು ಬೆಳಿಗ್ಗೆ ನಾನೊಂದು ದೊಡ್ಡ ಅಪಚಾರ ಮಾಡಿದೆ.” “ಕಲಾತಪಸ್ವಿಯೊಬ್ಬರನ್ನು, ಆತನ ಮಹಿಮೆ ಅರಿಯುವ ಮೊದಲೇ ಅವಹೇಳನ ಮಾಡಿದೆ. ಆ ತಪ್ಪನ್ನು ಒಪ್ಪಿಕೊಂಡು ಅರುಣಾಚಲಪ್ಪನವರನ್ನು “ಕ್ಷಮಿಸಿ” ಎಂದು ಕೋರುತ್ತೇನೆ. ಈಗ ತಾನೇ ಅವರಿಗಾಗಿ ತರಿಸಿರುವ “ಸ್ವರ್ಣಪದಕವನ್ನು” ರಾಜಯ್ಯಂಗಾರ್ಯರ ಅನುಮತಿ ಪಡೆದು, ವಿದ್ವತ್‌ ಪುರಸ್ಕಾರ ಅವರಿಗೇ ಮೊದಲು ನೀಡುತ್ತೇನೆ. ಅವರ ಉಪಾಸನೆ ಮತ್ತು ಸಿದ್ಧಿ ಇನ್ನೂ ಹೆಚ್ಚಲಿ” ಎಂದು ಮಹಾಸಭೆಯ ಹರ್ಷದೊಂದಿಗೆ ಹರಸಿದರು. ನಿಜಕ್ಕೂ ಆ ವಾದ್ಯ ಅರುಣಾಚಲಪ್ಪನವರ ಕೈಲಿ ಧನ್ಯವಾಯಿತು.

ಪ್ರವಾಸವನ್ನು ಮುಗಿಸಿ ಬಂದ ಮೇಲೆ ಅರುಣಾಚಲಪ್ಪನವರು 1933ರಲ್ಲಿ ಸಂಗೀತಗಾರರಿಗೆ ಬೇಕಾಗುವ ವಾದ್ಯಗಳು ಮತ್ತು ವಾದ್ಯೋಪಕರಣಗಳನ್ನು ಒದಗಿಸುವ  “ಅರುಣಾ ಮ್ಯೂಸಿಕಲ್ಸ್‌”  ಎಂಬ ಅಂಗಡಿಯನ್ನು ಬಳೇಪೇಟೆಯಲ್ಲಿ ಪ್ರಾರಂಭಿಸಿದರು.  ಅದು ಅರುಣಾಚಲಪ್ಪನವರು ಬದುಕಿರುವವರೆಗೂ ಎಲ್ಲ ವಿದ್ವಾಂಸರೂ ದಿನವೂ ಸೇರುವ ತಾಣವಾಯಿತು. ಎಲ್ಲರಲ್ಲೂ ಒಂದೇ ಅಭಿಮಾನ, ಅವರಲ್ಲಿಗೆ, ಬಂದವರೆಲ್ಲ ವಿನೋದದಿಂದ ಕಾಲಕಳೆದು, ಅವರ ಆತಿಥ್ಯ ಸ್ವೀಕರಿಸಿ ಹೋಗುತ್ತಿದ್ದರು. ಬೆಂಗಳೂರಿಗೆ ಬಂದು ನೆಲೆಸುವ ವಿದ್ವಾಂಸರಿಗೆಲ್ಲ, ಅದೊಂದು ತೌರು ಮನೆ. ಆಲತ್ತೂರು ವೆಂಕಟೇಶಯ್ಯನವರು, ಅರುಣಾಚಲಪ್ಪನವರಿಗೆ ಕಾವ್‌ ಬೆಲ್ಲೋಸ್‌ ಮಹಿಮೆ ತಿಳಿಸಿದರು. ತಮ್ಮ ಕಾರ್ಯಾಗಾರದಲ್ಲಿಯೇ ಅದನ್ನು ತಯಾರು ಮಾಡಿಸಿದರು. ಅದರ ವಿಶೇಷವೆಂದರೆ, ಪಿಟೀಲಿನಲ್ಲಿ ಕಮಾನು ನಿಂತರೆ, ನಾದ ಹೇಗೆ ನಿಲ್ಲುವುದೋ ಹಾಗೆ ಈ ವಾದ್ಯದಲ್ಲೂ ನಿಲ್ಲುತ್ತಿತ್ತು ಅದಕ್ಕೆ ಬೇಕಾದ ಅಭ್ಯಾಸ ಅವ್ಯಾಹತವಾಗಿ ನಡೆಯುತ್ತಿತ್ತು. 

ಅರುಣಾಚಲಪ್ಪನವರು ನುಡಿಸುತ್ತಿದ್ದಾಗ, ಚೌಡಯ್ಯನವರಿಗೆ ಪರಮಾಶ್ಚರ್ಯ. “ಏನಣ್ಣಾ, ನೀವೂ ತಂತಿಗಿಂತಿ ಸೇರಿಸಿದ್ದೀರೊ ಏನು!” ಎನ್ನುತ್ತಿದ್ದರು.  ವೇಣುವಾದನ ಪಟು ಮಹಾಲಿಂಗಂ ಅವರಿಗೂ  ಅಷ್ಟೇ ಆಶ್ಚರ್ಯ. ಬಾಲಮುರಳೀ ಕೃಷ್ಣ ಅವರ  ಜೊತೆ ಹಾರ್ಮೋನಿಯಂ ನುಡಿಸಿದಾಗ, “ಅರುಣಾಚಲಪ್ಪನವರು ಎಲ್ಲ ಕಚೇರಿಗಳಿಗೂ ನುಡಿಸಲು ಸಿಕ್ಕಿದರೆ ನನಗೆ ಪಿಟೀಲು ಪಕ್ಕವಾದ್ಯವೇ ಬೇಡ” ಅಂದರು.
ನಾಯನಾಪಿಳ್ಳೆಯವರ ಶಿಷ್ಯರಾದ ನಾರಾಯಣ ಸ್ವಾಮಿ ಭಾಗವತರೊಂದಿಗೆ ಬೇಕಾದಷ್ಟು ಸಾರಿ ನುಡಿಸಿದರು. ಅರುಣಾಚಲಪ್ಪನವರ ದೊಡ್ಡ  ಮಗ ವೀರಭದ್ರಯ್ಯನಿಗೂ,  ಪ್ರೊ.ಹೆಚ್‌.ವಿ. ಕೃಷ್ಣಮೂರ್ತಿ ಅವರಿಗೂ ಭಾಗವತರೇ ಪಿಟೀಲು ಪಾಠ ಹೇಳಿದ್ದು. ಅರುಣಾಚಲಪ್ಪನವರ ಎರಡನೆಯ ಮಗ ನಾಗರಾಜ್ ಸಹಾ ಪಿಟೀಲು ವಿದ್ವಾಂಸರು . ಮೂರನೆಯ ಮಗ ವಿಶ್ವನಾಥ್. ನಾಲ್ಕನೆಯ ಮಗನೇ ಶಂಕರ.  ಇವರು ನಮ್ಮ ಹೆಸರಾಂತ ಚಲನಚಿತ್ರ ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್ ಅವರ ಪತಿ. 

ಅರುಣಾಚಲಪ್ಪನವರು ತಮ್ಮ ಜೀವಿತದಲ್ಲಿ ಅನೇಕ ಶಿಷ್ಯರನ್ನು ತಯಾರು ಮಾಡಿದ್ದರು. ಅವರಲ್ಲಿ ಚಲನಚಿತ್ರರಂಗದಲ್ಲಿ ಪ್ರಖ್ಯಾತರಾದ, ನಟ ,ನಿರ್ಮಾಪಕ ಗಾಯಕರಾದ ಹೊನ್ನಪ್ಪ ಭಾಗವತರೂ ಒಬ್ಬರು. ಅವರ ಅಳಿಯಂದಿರಾದ ಬಿ. ವಿಶ್ವನಾಥ್ ಅವರೂ ಸಹ ಇವರ ಶಿಷ್ಯರೇ. ಪಾಠ ಹೇಳಲು ಅವರಿಗೆ ಸಿಗುತ್ತಿದ್ದ ಸಮಯ , ರಾತ್ರಿ 12 ಗಂಟೆಯ ಮೇಲೆಯೆ. ಅಂಗಡಿ ಕೆಲಸ ಮುಗಿಸಿ, ಸಂಗೀತ ಕಚೇರಿಯೋ ಹರಿಕಥೆಯೋ, ಮುಗಿಸಿ ಮನೆ ಸೇರುವ ವೇಳೆಗೆ, ಅನ್ನಪೂರ್ಣಮ್ಮನವರು, ಕೈತುತ್ತು ಹಾಕಿ ಮಾಡಿಸಿದ ಊಟವನ್ನುಂಡು, ಗೋಡೆಗೆ ತಲೆ ಕೊಟ್ಟು  ತೂಕಡಿಸುತ್ತಿದ್ದ ಶಿಷ್ಯರಿಗೆ  1 ಘಂಟೆಗೆ ಪಾಠ ಪ್ರಾರಂಭವಾಗಿ, ಬೆಳಗಿನ ಝಾವ 3 ಘಂಟೆಯವರೆಗೂ ಮುಂದುವರಿದು,  ನಂತರ ಅಲ್ಲಲ್ಲೆ ಮುದುರಿ ಕೊಳ್ಳುತ್ತಿದ್ದರು. ನಂತರ ಅರುಣಾಚಲಪ್ಪನವರ ಹಾರ್ಮೊನಿಯಂ ಅಭ್ಯಾಸ. ನಿದ್ದೆ ಬಂದಾಗ ಅದರ ಮೆಲೇಯೇ ತಲೆಯಿಟ್ಟು ನಿದ್ರೆ ಹೋದ ದಿನಗಳೂ ಲೆಕ್ಕವಿಲ್ಲ.

1966ನೇ ಜನವರಿ 21ರಂದು ಪುರಂದರದಾಸರ 402ನೆಯ ಪುಣ್ಯದಿನದಂದು, ಮಾಮೂಲಿನಂತೆ  ಎ.  ಸುಬ್ಬರಾಯರ ಕಚೇರಿಯಲ್ಲಿ  “ರಾಯರೇ ಇವತ್ತು ಮನಸ್ಸು ಬಿಚ್ಚಿ ಹಾಡಿಬಿಡಿ, ಚೆನ್ನಾಗಿ ಕೇಳಬೇಕು, ನುಡಿಸಬೇಕು ಅನ್ನಿಸಿದೆ” ಎಂದರು ಅರುಣಾಚಲಪ್ಪನವರು. ಈ ಹಿಂದೆ ಎಂದೂ “ಕೇಳಬೇಕು” ಎಂದು ಅವರು ಅಂದವರಲ್ಲ. ಹೀಗಾಗಿ ಏನೋ ಕಳವಳ, ಸುಬ್ಬರಾಯರ  ಮನಸ್ಸಿನಲ್ಲಿ. ಕಾಣದ ವೇದನೆ! ಏನೋ ದುರಂತ ಕಾದಿದೆ ಅನ್ನಿಸಿತು ಅವರಿಗೆ. ಅಂದೇ ಟ್ಯೂನ್  ಮಾಡಿದ್ದ, "ಇದು ಭಾಗ್ಯವಿದು ಭಾಗ್ಯ” ದೇವರನಾಮ ಹಾಡಿ, “ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು ಅನ್ನುವ ಭಾಗ, ವಿಸ್ತಾರ‌ ಮಾಡಿದರು”. ಅರುಣಾಚಲಪ್ಪನವರು "ಆಹಾ, ಭಲೇ!" ಎಂದರು. ಅವರು  ಎಂದೂ ಅಷ್ಟು ಜೋರಾಗಿ ಹೇಳಿದವರಲ್ಲ. ಅವರ ಕೆನ್ನೆಯಲ್ಲಿ ಮಿಂಚಿತ್ತು. “ಮಾಧವನನ್ನ ಹಾಗೆಯೇ ಮೆಚ್ಚಿಸಬೇಕು ರಾಯರೇ ಅಂದರು”. 

ಮಾರನೇ ದಿನ ಅಂಗಡಿಯಲ್ಲಿ ಅವರ ಐವತ್ತೈದು ವರ್ಷದ ಸ್ನೇಹ ಭಾಗ್ಯ ಪಡೆದಿದ್ದ ರಂಗಪ್ಪನವರಿಗೂ “ಮಾಧವನನ್ನು ಹಾಗೆಯೇ ಮೆಚ್ಚಿಸಬೇಕು” ಎಂದು ಸುಬ್ಬರಾಯರು ಹಾಡಿದ ರೀತಿಯನ್ನು ಹೇಳಿ ಸವಿದರು.

ಸುಬ್ಬರಾಯರ ಕಳವಳದ ವಿವರ ಸಿಕ್ಕಲು ಕೆಲವೇ ದಿನ ಸಾಕಾಯ್ತು. 1966ರ ಫೆಬ್ರವರಿ 3ರಂದು ಅರುಣಾಚಲಪ್ಪನವರಿಗೆ ಹೃದಯಾಘಾತವಾಯಿತು. "ರಾಮ, ರಾಮ, ರಾಮ” ಎಂದು ಉಚ್ಚರಿಸುತ್ತಾ ಗಿಣಿ ಪಂಜರದಿಂದ ಪಾರಾಯಿತು.

ಮಾಹಿತಿ ಆಧಾರ: ಗಾನಸುಧಾಕರ ಎ.‍ಸುಬ್ಬರಾವ್ ವಿರಚಿತ ಕೃತಿ 'ಹಾರ್ಮೋನಿಯಂ ಅರುಣಾಚಲಪ್ಪ'
ಕೃತಜ್ಞತೆಗಳು: ಅಮ್ಮ ಕಸ್ತೂರಿ ಶಂಕರ್ ಅವರಿಗೆ

Harmonium Arunachalappa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ