ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ವಿಶ್ವನಾಥ್


 ಕೆ. ವಿಶ್ವನಾಥ್


ಕೆ. ವಿಶ್ವನಾಥ್ ಎಂದರೆ ಸಂಗೀತದ ಮಾಧುರ್ಯದ ನಾದ ಹೊರಹೊಮ್ಮುತ್ತದೆ.  ಶಂಕರಾಭರಣಂ ಚಿತ್ರದಲ್ಲಿ ಒಬ್ಬ ಪುಟ್ಟ ಹುಡುಗ ಸಂಗೀತದ ಬಗ್ಗೆ ಅಪಾರ ನಿಷ್ಠೆಯಿರುವ ಶಂಕರಶಾಸ್ತ್ರಿಗಳ ಮನೆಗೆ ಬರುತ್ತಾನೆ. ಬಂದು ಅವರ ಮನೆಯ ಒಂದು ಕಂಬ ಮುಟ್ಟಿದಾಗಲೂ ತಂಬೂರಿಯ ಸಂಗೀತದ ಮೀಟುವಿಕೆಯ ಅನುಭಾವ ಆ ಹುಡುಗನಿಗೆ ದೊರಕುತ್ತದೆ.  ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿಮುತ್ಯಂ, ಸಿರಿಸಿರಿಮುವ್ವ, ಸಪ್ತಪದಿ, ಸ್ವರಾಭಿಷೇಕಂ, ಶ್ರುತಿಲಯಲು, ಸ್ವಯಂ ಕೃಷಿ, ಸ್ವರ್ಣ ಕಮಲಂ, ಸ್ವಾತಿ ಕಿರಣಂ, ಸಿರಿವೆನ್ನಲ,  ಸಂಗೀತ ಸಂಗಮಂ, ಅನ್ಬೇ ಶಿವಂ  ಮುಂತಾದ ಚಿತ್ರಗಳ ಹೆಸರನ್ನು ನೆನೆದಾಗ ಸಹಾ ಈ ಆಪ್ತ ಸಂಗೀತದ ಭಾವ ನಮ್ಮಲ್ಲಿ ತೆರೆದುಕೊಳ್ಳುತ್ತದೆ.  ಇಂಥಹ ಮನೋಜ್ಞ ಸಾಂಸ್ಕೃತಿಕ ಚಿತ್ರಗಳನ್ನು ನೀಡಿದವರು ಕೆ. ವಿಶ್ವನಾಥ್. 

ಕೆ. ವಿಶ್ವನಾಥ್ 1930ರ ಫೆಬ್ರುವರಿ 19ರಂದು
ಅಂಧ್ರಪ್ರದೇಶದ ವಿಜಯವಾಡಾದಲ್ಲಿ ಜನಿಸಿದರು.

ಒಂದು ಕಾಲದಲ್ಲಿ ಹಲವು ರೀತಿಯ ಏಕತಾನತೆಯಿಂದ ನರಳುತ್ತಿದ್ದ ತೆಲುಗು ಚಿತ್ರರಂಗಕ್ಕೆ ಸಂಗೀತ, ನೃತ್ಯ, ಸಾಹಿತ್ಯಗಳ ಪುನರುತ್ಥಾನದ ಮೂಲಕ ತಂಗಾಳಿಯನ್ನು ತಂದು ಅಂತಹ ತಂಗಾಳಿಯನ್ನು ಅವರದೇ ಆದ ಮೇಲ್ಕಂಡ ಕೆಲವೊಂದು ಚಿತ್ರಗಳ ರೂಪಕಗಳ ಮೂಲಕ ಹಿಂದೀ, ತಮಿಳು, ಮಲಯಾಳಂ ಚಿತ್ರರಂಗಗಳಲ್ಲಿಯೂ ತಂದುದು ಮಾತ್ರವೇ ಅಲ್ಲದೆ  ಒಂದು ರೀತಿಯಲ್ಲಿ ಪರೋಕ್ಷವಾಗಿ ಇಡೀ ಭಾರತೀಯ ಚಿತ್ರರಂಗದಲ್ಲೇ ಸಂಗೀತ ನೃತ್ಯಗಳ ಪರಂಪರೆಯನ್ನು ಮತ್ತೊಮ್ಮೆ ಪುನರುತ್ಥಾನಗೊಳಿಸಿದವರು ‘ಕಾಶಿನಾಥುನಿ ಕೆ. ವಿಶ್ವನಾಥ್’ ಅವರು.  

ಕೆ. ವಿಶ್ವನಾಥನ್ ಅವರು ಈ ಸಾಂಸ್ಕೃತಿಕ ಉತ್ಥಾನದಲ್ಲಿ ತಾವು ನಿರ್ಮಿಸಿದ ಮೇಲ್ಕಂಡ ಚಿತ್ರಗಳಲ್ಲಿ ಯಶಸ್ಸು ಪಡೆದದ್ದು ಇತರ ಭಾಷಿಗ ಪ್ರಸಿದ್ಧ ನಿರ್ದೇಶಕರಿಗೆ ಕೂಡ ಇಂತಹ ಚಿತ್ರ ನಿರ್ಮಿಸಲು ಪ್ರೇರಣೆ ಒದಗಿಸಿತು.  ತಮಿಳಿನಲ್ಲಿ ಕೆ. ಬಾಲಚಂದರ್ ಅವರು ನಿರ್ಮಿಸಿದ ಸಿಂಧುಭೈರವಿ, ಮಲಯಾಳಂನಲ್ಲಿ ಬಂದ 'ಸ್ವಾತಿ ತಿರುನಾಳ್', ಕನ್ನಡದಲ್ಲಿ ಬಂದ ‘ಮಲಯಮಾರುತ’, ‘ಆನಂದಭೈರವಿ’, ತೆಲುಗಿನಲ್ಲಿ ಇತರ ನಿರ್ದೇಶಕರು ಚಿತ್ರಿಸಿದ ತ್ಯಾಗಯ್ಯ, ಅಣ್ಣಮಯ್ಯ, ಶ್ರೀರಾಮದಾಸು   ಮುಂತಾದ  ಅನೇಕ, ಚಿತ್ರಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.  

1957ರ ಅವಧಿಯಲ್ಲಿ ಸಹಾಯಕರಾಗಿ ಚಿತ್ರರಂಗಕ್ಕೆ ಬಂದ ಕೆ. ವಿಶ್ವನಾಥ್ 1965ರ ವರ್ಷದಲ್ಲಿ ‘ಆತ್ಮಗೌರವಂ’ ಎಂಬ  ಚಿತ್ರದ ಮೂಲಕ ನಿರ್ದೇಶಕರಾಗಿದ್ದರಿಂದ ಪ್ರಾರಂಭಗೊಂಡಂತೆ 2010 ವರ್ಷದಲ್ಲಿ ತೆರೆಕಂಡ  ‘ಶುಭಪ್ರದಂ’ ಚಿತ್ರದವರೆಗೆ ಸುಮಾರು ಎಂಭತ್ತು ಚಿತ್ರಗಳನ್ನು ನಿರ್ದೇಶಿಸಿದ್ದರು. ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದರು. 1979ರ ಅವಧಿಯಿಂದ ಸಿರಿ ಸಿರಿ ಮುವ್ವ, ಶಂಕರಾಭರಣಂ, ಸಾಗರ ಸಂಗಮಂ, ಸ್ವಾತಿಮುತ್ಯಂ, ಸಪ್ತಪದಿ ಮುಂತಾದ  ಚಿತ್ರಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.    ಅಂತಹ ಒಂದಾದ ಚಿತ್ರಗಳ ಮೇಲೆ ಒಂದು ಎಂಬಂತ ಯಶಸ್ವೀ ಚಿತ್ರಗಳು ಚಿತ್ರರಂಗದಲ್ಲಿ ಒಂದು ಹೊಸ ಸಾಂಸ್ಕೃತಿಕ ಕ್ರಾಂತಿಯನ್ನೇ ಹುಟ್ಟುಹಾಕಿದವು. 

ಐದು  ರಾಷ್ಟ್ರ ಪ್ರಶಸ್ತಿಗಳು, ಆರು ರಾಜ್ಯ ಪ್ರಶಸ್ತಿಗಳು, ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳು ಕೆ. ವಿಶ್ವನಾಥರಿಗೆ ಸಂದಿದ್ದವು. ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಚಿತ್ರರಂಗದಲ್ಲಿನ ಶ್ರೇಷ್ಠ ಸಾಧನೆಗಾಗಿನ ದಾದಾ ಸಾಹೇಬ್ ಫಾಲ್ಕೆ ಗೌರವ ಕೂಡಾ ಸಂದಿತ್ತು. ಇವೆಲ್ಲಕ್ಕೂ ಮಿಗಿಲಾಗಿ, ಅವರ ಚಿತ್ರಗಳಲ್ಲಿ ಅವರೇ ಹೇಳುವ ಒಂದು ಮಾತು ನೆನಪಿಗೆ ಬರುತ್ತದೆ.  “ಇಂತಹ ಸಂಗೀತ, ಸಂಸ್ಕೃತಿಗಳ ಪರಂಪರೆಯನ್ನು ಬೆಂಬಲಿಸುವವರಿಗೆ ನನ್ನ ನಮನ.  ಆ ಮಹಾನುಭಾವರಿಗೆ ನನ್ನ ನಮನಗಳು”.  ಇದು ಸಂತ ತ್ಯಾಗರಾಜರ ಕೃತಿಯಾದ “ಎಂದರೋ ಮಹಾನುಭಾವುಲು ಅಂದರೀಕಿ ವಂದನಮುಲು” ಎಂಬ ಮಾತನ್ನು ಒಳಗೊಂಡ ಕೃತಜ್ಞತೆಯದಾಗಿದೆ.  ಅಂತೆಯೇ 2023ರ ಫೆಬ್ರುವರಿ 2ರಂದು ಈ ಲೋಕವನ್ನಗಲಿದ ಕೆ. ವಿಶ್ವನಾಥ್ ಎಂಬ ಮಹಾನುಭಾವರಿಗೆ ಕೂಡಾ ನಮ್ಮ ಭಾರತೀಯ ಸಾಂಸ್ಕೃತಿಕ ಲೋಕ  ವಂದನೆಗಳನ್ನು ಸಲ್ಲಿಸುತ್ತಾ ಕೃತಜ್ಞತಾಪೂರ್ಣವಾಗಿದೆ.

ಈ ಕೆಳಗಿನ ವೇದ ಸಂಸ್ಕೃತಿಯ ಮಾತುಗಳು ಕೂಡಾ ಅವರದೇ ಸಾಗರ ಸಂಗಮಂ ಚಿತ್ರದಲ್ಲಿ ಮೂಡಿದಂತದ್ದು. ಈ ಮಾತು ಕೂಡಾ ಪ್ರಸ್ತುತ:

ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||

“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು  ಇರುವುದೇ ಇಲ್ಲ.” 

On the birth anniversary of great movie maker of amazing cultural values K. Vishwanath Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ