ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿತ್ರ­ವೀ­ಣಾ ರವಿ­ಕಿ­ರಣ


 ಚಿತ್ರ­ವೀ­ಣಾ  ರವಿ­ಕಿ­ರಣ


ನಾನೀಗ ಸಂಗೀತಲೋಕದಲ್ಲಿ ಪ್ರಸಿದ್ಧ ಹೆಸರಾದ ಎನ್. ರವಿಕಿರಣರ ಬಗ್ಗೆ ಹೇಳಲಿದ್ದೇನೆ. ಇದಕ್ಕೆ ಮುಂಚೆ ಕೆಲವು ನೆನಪುಗಳನ್ನು ಹೇಳುತ್ತೇನೆ.

ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಪ್ರಸಿದ್ಧರಾದ ಜಿ.ಟಿ. ನಾರಾಯಣರಾಯರು ಪ್ರಸಿದ್ಧ ಸಂಗೀತ ವಿಮರ್ಶಕರೂ ಆಗಿದ್ದವರು.  ಹೀಗಾಗಿ ಅವರಿಗೆ ತುಂಬಾ ಜನ ಸಂಗೀತಗಾರರ ನಿಕಟ ಪರಿಚಯವಿತ್ತು.

ಐವತ್ತರ ದಶಕದಲ್ಲಿ ಮಂಗಳೂರಿನಲ್ಲಿ ಜಿ.ಟಿ.ಎನ್. ಪ್ರಾಧ್ಯಾಪಕರಾಗಿದ್ದಾಗ ಒಂದು ದಿನ ಅವರ ಕಾಲೇಜಿಗೆ ಒಬ್ಬ ತೇಜಸ್ವಿ ತರುಣರೊಬ್ಬರು ಕಾಣಲು ಬಂದರು. ತನ್ನ ಹೆಸರು ನರಸಿಂಹನ್ ಎಂದೂ, ತಾನು ಗೋಟುವಾದ್ಯ ವಿದ್ವಾಂಸ ಮೈಸೂರು ನಾರಾಯಣ ಅಯ್ಯಂಗಾರ್ಯರ ಪುತ್ರನೆಂದೂ ಪರಿಚಯ ಮಾಡಿಕೊಂಡರು. ತನ್ನ ತಂದೆ ಅವರನ್ನು ಭೇಟಿಮಾಡಲು ಇಚ್ಛಿಸಿರುವುದಾಗಿಯೂ, ಈಗ ಸಧ್ಯಕ್ಕೆ ಅವರು ಛತ್ರದಲ್ಲಿದ್ದಾರೆಂದೂ, ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಒದಗಿದೆಯೆಂದು ಹೇಳಿದಾಗ, 'ಇಂಥ ದೊಡ್ಡ ವಿದ್ವಾಂಸರ ಸ್ಥಿತಿ ಹೀಗಾಯಿತೆ?' ಎಂದು ದುಃಖವಾಗಿ ಜಿಟಿಎನ್ ಅವರಿದ್ದಲ್ಲಿಗೆ ಹೋದರು. ಹರಕು ಚಾಪೆಯ ಮೇಲೆ ಕುಳಿತಿದ್ದ ಗೋಟುವಾದ್ಯ ಭೀಷ್ಮರನ್ನು ನೋಡಿ ಅವರಿಗೆ ವೇದನೆಯಾಯಿತು. ಅವರಿಂದ ಒಂದು ಕಚೇರಿ ನಡೆಸಿ ಸಾಕಷ್ಟು ಹಣ ಸಂಗ್ರಹಿಸಿ ಕೊಡುವ  ನಿರ್ಧಾರ ಮಾಡಿದರು. ಆದರೆ ಮಂಗಳೂರಿನಲ್ಲಿ ಅಂದಿನ ದಿನದಲ್ಲಿ ಕರ್ನಾಟಕ ಸಂಗೀತದ ಅಭಿಮಾನಿಗಳು ಕಡಿಮೆ. ಆದರೂ ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಸಹಕಾರದಿಂದ ಅಂತೂ ಒಂದು ಗೋಟುವಾದ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಯ್ತು. ಪತ್ರಿಕೆಗಳಲ್ಲಿ ಸಾಕಷ್ಟು ಪ್ರಚಾರವನ್ನೂ ಮಾಡಲಾಯ್ತು. ಅಂತೂ ಸುಮಾರು ಮುನ್ನೂರು ರುಪಾಯಿಯಷ್ಟು ಹಣ ಸಂಗ್ರಹವೂ ಆಯಿತು.

ಆ ವಿದ್ವಾಂಸರು ಮೂರುಗಂಟೆಗಳ ಕಾಲ ಅಪೂರ್ವವಾದ ಕಾರ್ಯಕ್ರಮ ನಡೆಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರರಾದರು. ನಂತರ ಅವರಿಗೆ ಶ್ರೀಮಂತರೊಬ್ಬರು ಗೌರವಧನ ನೀಡಿ ಮದ್ರಾಸಿಗೆ ಕಳುಹಿಸಿಕೊಡುವ ಏರ್ಪಾಟೂ ಆಯಿತು. ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ಎನ್.ರವಿಕಿರಣ್ ಎಂಬ ಬಾಲಪ್ರತಿಭೆ ಗೋಟುವಾದ್ಯದಲ್ಲಿ ಅಪ್ರತಿಮ ಸಾಧನೆ ಮಾಡಿದ ವಿಷಯ ಎಲ್ಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿ ಆತನ ಸಭಾ ಕಾರ್ಯಕ್ರಮ ವೀಕ್ಷಿಸಲು ಜನಸಾಗರವೇ ಸೇರುತ್ತಿತ್ತು. ಅಂತಹ ಒಂದು ಕಾರ್ಯಕ್ರಮ ಮೈಸೂರಿನಲ್ಲಿಯೂ ಏರ್ಪಾಟಾಗಿತ್ತು. ಅಲ್ಲಿ ಜಿಟಿಎನ್ ಅವರೂ ಶ್ರೋತೃಗಳಾಗಿದ್ದರು. ಬೈಠಕ್ಕು ಮುಗಿದಮೇಲೆ ಅಪರಿಚಿತರೊಬ್ಬರು ಜಿಟಿಎನ್ ಅವರ ಬಳಿ ಬಂದು ತಾನು ನರಸಿಂಹನ್ ಎಂದೂ, ಈಗ ಕಚೇರಿ ನಡೆಸಿದ ಬಾಲಕ ತನ್ನ ಮಗನೆಂದೂ ಇಪ್ಪತ್ತು ವರ್ಷಗಳ ಹಿಂದೆ ತಾನು ಮಂಗಳೂರಿಗೆ ಬಂದಿದ್ದೂ, ಆಗ ಜಿಟಿಎನ್ ಅವರು ಮಾಡಿದ ಸಹಾಯ ಎಲ್ಲವನ್ನೂ ಬಿಚ್ಚಿಟ್ಟಾಗ ಆ ಪುಟ್ಟ ಬಾಲಮಾಂತ್ರಿಕ ನಾರಾಯಣ ಅಯ್ಯಂಗಾರ್ಯರ ಮೊಮ್ಮಗನೆಂದೂ ತಿಳಿದು ಬಂತು. ತಮ್ಮ ತಂದೆಯೇ ರವಿಕಿರಣನಲ್ಲಿ ಮರುಹುಟ್ಟು ಪಡೆದಿರುವಂತೆ ತೋರುತ್ತದೆ ಎಂದಾಗ ಜಿಟಿಎನ್ ಪುಳಕಿತಗೊಂಡರು. ಈ ಪ್ರಸಂಗವನ್ನು ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಎಂ.ಎನ್. ಸುಂದರರಾಜ್ ಎಂಬುವರು ಕನ್ನಡಪ್ರಭದಲ್ಲಿ ಹಂಚಿಕೊಂಡದ್ದನ್ನು ನಾನು ಓದಿದ್ದು.

ಈಗ ನಾನು ಹೇಳುತ್ತಿರುವುದು ನಾನೇ ಸ್ವಯಂ ಚಿಕ್ಕವನಿದ್ದಾಗ ಕೇಳಿದ್ದು.  ನಾನು ಮೈಸೂರಿನಲ್ಲಿ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ನನಗಿಂತ ಆರು ವರ್ಷ ಹಿರಿಯಳಾಗಿದ್ದ ನನ್ನ ಅಕ್ಕ ಕಾಲೇಜು ಓದುತ್ತಿದ್ದಳು.  ಆಕೆಯ ಸಹಪಾಠಿ ಸರಸ್ವತಿ ಎಂಬುವರು ಮೈಸೂರಿನ ಚಾಮರಾಜಾ ಜೋಡಿ ರಸ್ತೆಯ ಲಕ್ಷ್ಮೀ ಚಿತ್ರಮಂದಿರದ ಹಿಂಬಾಗದ ಸೊಪ್ಪಿನ ಕೊಳದ ಬೀದಿಯಲ್ಲಿ ಒಂದು ಕಿರುಕೋಣೆಯಂತಹ ಮನೆಯಲ್ಲಿ ತಮ್ಮ ತಾಯಿಯವರೊಂದಿಗೆ ವಾಸವಿದ್ದರು.  ನನ್ನ ಅಕ್ಕನೊಂದಿಗೆ ನಾನು ಕೂಡ ಬಹಳ ಸಲ ಸರಸ್ವತಿ ಅವರ ಮನೆಗೆ ಹೋಗುತ್ತಿದ್ದೆ.  ಸರಸ್ವತಿ ಅವರು ಹೇಳಿದ ಸುದ್ದಿಯೆಂದರೆ ಅವರ "ಅಕ್ಕನಿಗೆ ಜನಿಸಿದ ಮಗು ಅಂಬೆಗಾಲಿಡುವ ಸಂದರ್ಭದಲ್ಲಿಯೇ, ತನ್ನ ದಿವಂಗತ ತಾತ ನುಡಿಸುತ್ತಿದ್ದ ವಾದ್ಯವನ್ನು   ಮೀಟಲು ಮುಂದಾಗುತ್ತಿತಂತೆ.  ಆ ಹಿರಿಯರೆ ಆ ಮಗುವಾಗಿ ಜನಿಸಿರಬಹುದೆ ಎಂದು ಎಲ್ಲರೂ ಹೇಳುತಿದ್ದಾರಂತೆ." 

"ನಿ­ಮಗೆ ದೇವ­ರಲ್ಲಿ ನಂಬಿಕೆ ಇಲ್ಲ­ದಿ­ದ್ದರೆ ನೀವು ಎನ್‌. ರವಿ­ಕಿ­ರಣ್‌ ಅವ­ರನ್ನು ನೋಡಿ" ಎಂದು ಒಮ್ಮೆ ಹೇಳಿದವರು ಮತ್ಯಾರೂ ಅಲ್ಲ ವಿಶ್ವ ಪ್ರಸಿದ್ಧ  ಸಿತಾರ್ ವಾದಕರಾದ ಪಂಡಿತ್ ರವಿಶಂಕರ್.

ರವಿಕಿರಣ್ ಅವರು 5 ನೇ ವರ್ಷದಲ್ಲಿದ್ದಾಗ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಸಂಗೀತ ವಿದ್ವಾಂಸರು ಬರೆದ ಅಭಿಪ್ರಾಯವೆಂದರೆ "ಐದು ವರ್ಷದ ಮಗು ಹೀಗೆ ಹಾಡುವುದನ್ನು ವ್ಯಾಖ್ಯಾನಿಸುವುದಾದರೂ ಹೇಗೆ.  ಅದನ್ನು ಪಾರಾಮಾರ್ಥಿಕ ಆಳದಲ್ಲಿಯೇ ಚಿಂತಿಸಬೇಕಾದದ್ದು!"

ಎನ್. ರವಿಕಿರಣ್ ಜನಿಸಿದ್ದು 1967 ವರ್ಷದ ಫೆಬ್ರವರಿ 12 ರಂದು. ತಮ್ಮ ಎರ­ಡನೇ ವಯಸ್ಸಿನಲ್ಲೇ ಸಂಗೀತ ಕಚೇರಿ ನೀಡಿದ ರವಿಕಿರಣ್‌ ರಸಿ­ಕರ ಬೆರಗು ಮೂಡಿ­ಸಿ­ದರು. 1969ರಲ್ಲಿ ಬೆಂಗ­ಳೂ­ರಿನ ಮಲ್ಲೇ­ಶ್ವರಂ ಸಂಗೀತ ಸಭಾ­ದಲ್ಲಿ ಮಗುವಾಗಿ ಚೊಚ್ಚಲ ಕಚೇರಿ ನೀಡಿದರು. ಬಹಳ  ಚಿಕ್ಕ ವಯಸ್ಸಿನಲ್ಲೇ ಮದ್ರಾಸ್‌ ಸಂಗೀತ ಅಕಾ­ಡೆಮಿ ಆಯೋ­ಜಿ­ಸಿದ್ದ ಸಂಗೀತ ಕ್ವಿಜ್‌­ನಲ್ಲಿ ಕಷ್ಟದ ತಾಂತ್ರಿಕ ಪ್ರಶ್ನೆ­ಗ­ಳಿಗೆ ಉತ್ತ­ರಿಸಿ ಸ್ಕಾಲ­ರ್‌­ಶಿಪ್‌ ಪಡೆ­ದರು. ಆ ಸಂದರ್ಭ­ದಲ್ಲಿ ಸಂಗೀತ ದಿಗ್ಗಜ­ರಾದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಪಂಡಿತ್‌ ರವಿ­ಶಂ­ಕರ್‌, ಎಂ.ಎಸ್‌. ಸುಬ್ಬು­ಲಕ್ಷ್ಮಿ , ಟಿ. ಆರ್. ಮಹಾಲಿಂಗಂ ಮುಂತಾದ ಮಹನೀಯರು ರವಿ­ಕಿ­ರಣ್‌ ಅವರ ಸಂಗೀತ ವಿದ್ಯೆಗೆ ಮಾರು­ಹೋ­ದರು.

ಹತ್ತನೇ ವಯ­ಸ್ಸಿ­ನ­ವ­ರೆಗೆ ಗಾಯನ ಕಚೇರಿ ನೀಡು­ತಿದ್ದ ರವಿ­ಕಿ­ರಣ್‌ ನಂತರ ಚಿತ್ರವೀಣೆಯ ಕಡೆ ಹೊರ­ಳಿ­ದರು. ಗೋಟು­ವಾದ್ಯ ಸ್ವರೂ­ಪದ ವಾದ್ಯಕ್ಕೆ ಚಿತ್ರ­ವೀಣೆ ಎಂದು ನಾಮ­ಕ­ರಣ ಮಾಡಿ­ದರು. ಈಗ ರವಿ­ಕಿ­ರಣ್‌ ಜಗ­ತ್ತಿನ ಪ್ರಸಿದ್ಧ  ಸಂಗೀ­ತ­ಗಾರರೆನಿಸಿದ್ದಾರೆ.

ಅತ್ಯಂತ ಹಳೆಯ ಸಂಗೀತ ವಾದ್ಯ ಚಿತ್ರವೀಣೆ. 21 ತಂತಿ ಹೊಂದಿ­ರುವ ಚಿತ್ರವೀಣೆಯ ಮೇಲೆ ಹಿಡಿತ ಸಾಧಿ­ಸಿದ ಸಂಗೀತ ಸಾಧ­ಕರು ಬೆರ­ಳೆ­ಣಿ­ಕೆ­ಯಷ್ಟು. ಹಾಗಾಗಿ ಈ ವಾದ್ಯ ತೆರೆ­ಮ­ರೆ­ಯಲ್ಲೇ ಉಳಿ­ಯಬೇ­ಕಾ­ಯಿತು. ಮರೆ­ಯ­ಲ್ಲಿದ್ದ ಈ ಪ್ರಾಚೀನ ವಾದ್ಯಕ್ಕೆ ಹೊಸ ಆಯಾ­ಮ­ಕೊಟ್ಟ­ವರು ರವಿಕಿರಣ್‌. ಅವರ ಅನೇಕ ಸಾಧನೆಗಳಲ್ಲಿ, ಸತತ 24 ಗಂಟೆ ಚಿತ್ರ­ವೀಣೆ ನುಡಿಸಿ ವಿಶ್ವದ ಗಮನ ಸೆಳೆ­ದಿ­ದ್ದೂ ಒಂದು. 325 ರಾಗ­ಗಳು, 175 ತಾಳಗ­ಳಲ್ಲಿ ರವಿಕಿರಣ್‌ ಪ್ರಭುತ್ವ ಸಾಧಿಸಿದ್ದಾರೆ.

ಚಿತ್ರವೀಣಾ ರವಿ­ಕಿ­ರಣ್‌ ವಿಶ್ವದ  ಬೇರೆ ಬೇರೆ ನಗ­ರ­ಗ­ಳಲ್ಲಿ ವಿವಿಧ ರೀತಿಯ ಸಂಗೀತ ಪ್ರಬೇಧಗಳನ್ನು ಅನುಸರಿಸುತ್ತಿರುವ ಅನೇಕ ಖ್ಯಾತ­ನಾಮ ಸಂಗೀತಗಾ­ರರ ಜತೆ­ಗೂಡಿ ಸಂಗೀತ ಸಾಧ್ಯ­ತೆ­ಗ­ಳನ್ನು ತೋರಿಸಿಕೊಟ್ಡಿದ್ದಾರೆ. 'ಇಂ­ಟ­ರ್‌­ನ್ಯಾ­ಷ­ನಲ್‌ ಪೌಂಡೇ­ಶನ್‌ ಆಫ್‌ ಕರ್ನಾ­ಟಿಕ್‌ ಮ್ಯೂಸಿಕ್‌' ಸಂಸ್ಥೆ ಸ್ಥಾಪಿಸಿ ಆ ಮೂಲಕ ಹಲವು ದೇಶಗಳ ನಡು­ವಿನ ಸಾಂಸ್ಕೃ­ತಿಕ ಬೆಸುಗೆ ಆಗಿ­ದ್ದಾರೆ. 

ರವಿ­ಕಿ­ರಣ್‌ ಹಲವು ಪುಸ್ತಕ ಬರೆ­ದಿ­ದ್ದಾರೆ. 'ಅಪ್ರಿ­ಷಿ­ಯೇ­ಟಿಂಗ್‌ ಕರ್ನಾ­ಟಿಕ್‌ ಮ್ಯೂಸಿಕ್‌', `ಪ­ರ್ಪೆ­ಕ್ಟಿಂಗ್‌ ಕರ್ನಾ­ಟಿಕ್‌ ಮ್ಯೂಸಿಕ್‌' ಕೃತಿ­ಗಳು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ ಮೈಲು­ಗ­ಲ್ಲು­ಗಳೆನಿಸಿವೆ. 'ಟೆಲಿ ಟೀಚಿಂಗ್‌' ಕಂಪ್ಯೂ­ಟರ್‌ ಕಾರ್ಯ­ಕ್ರ­ಮದ ಮೂಲದ ವಿಶ್ವ­ದಾ­ದ್ಯಂತ ಸಾವಿ­ರಾರು ವಿದ್ಯಾ­ರ್ಥಿ­ಗ­ಳನ್ನು ಹೊಂದಿ­ರುವ ಅವರು ಸಂಗೀ­ತದ ಬಗ್ಗೆ ಯಾವುದೇ ಅನು­ಮಾ­ನಗಳಿಗೆ ಉತ್ತ­ರಿ­ಸು­ತ್ತಾರೆ.

ಅಪಾರ ಅಂತಾ­ರಾ­ಷ್ಟ್ರೀಯ, ರಾಷ್ಟ್ರೀಯ ಪ್ರಶ­ಸ್ತಿ­ಗಳು ರವಿ­ಕಿ­ರಣ್‌ ಅವ­ರಿಗೆ ಸಂದಿವೆ. ತಮ್ಮ ಆರನೇ ವಯ­ಸ್ಸಿ­ನಲ್ಲೇ ಅವ­ರಿಗೆ ಪ್ರತಿಷ್ಠಿತ 'ಅ­ರುಲ್‌ ಇಸ್ಕ್ರೆ ಸೆಲ್ವನ್‌' ಬಿರುದು ಲಭಿ­ಸಿತು. ಕಲಾಕ್ಷೇತ್ರದಲ್ಲಿನ ಮಹತ್ವದ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಅತ್ಯಂತ ಕಿರಿಯ (39 ನೆಯ ವಯಸ್ಸಿನಲ್ಲಿ) ಎಂಬ ಹೆಗ್ಗಳಿಕೆ ಅವರದ್ದು. ಇದಲ್ಲದೆ ಅಂತಾ­ರಾ­ಷ್ಟ್ರೀಯ ಪ್ರಶ­ಸ್ತಿ­ಗ­ಳಾದ ರಷ್ಯಾದ 'ಮಿ­ಲೇ­ನಿಯಂ' ಪ್ರಶಸ್ತಿ, ಅಮೆ­ರಿ­ಕಾದ 'ನ್ಯೂ ಏಜ್‌ ವಾಯ್ಸ್ ಅವಾರ್ಡ್‌', 'ಕಲೈ­ಮಾ­ಮಣಿ' ಪ್ರಶಸ್ತಿ, 'ವಿ­ಸ್‌­ಡಮ್‌ ಇಂಟರ್‌­ನ್ಯಾ­ಷ­ನಲ್‌', `ಕು­ಮಾರ ಗಂಧರ್ವ', `ಸಂ­ಸ್ಕೃತಿ ಸಮ್ಮಾನ', 'ಸಂಗೀತ ಕಲಾನಿಧಿ' ಮುಂತಾದ ಅನೇಕ ಪ್ರತಿಷ್ಟಿತ  ಪ್ರಶ­ಸ್ತಿ­ಗಳು ರವಿಕಿರಣ್ ಅವರನ್ನು ಅರಸಿಬಂದಿವೆ.

Musician N. Ravikiran 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ