ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏಕನಾಥ್ ಸೋಲ್ಕರ್


 ಏಕನಾಥ್ ಸೋಲ್ಕರ್


ಭಾರತದ ಕ್ರಿಕೆಟ್ ಲೋಕದಲ್ಲಿ ಏಕನಾಥ ಸೋಲ್ಕರ್ ಅಮರ ಹೆಸರು.  

ಒಳ್ಳೆಯ ಕ್ಷೇತ್ರ ರಕ್ಷಣೆ ಪಂದ್ಯಗಳನ್ನು ಗೆಲಿಸುತ್ತೆ ಎಂಬುದು ಆಧುನಿಕ ಕ್ರಿಕೆಟ್ನಲ್ಲಿ ಕೇಳಿಬರುವ ಮಾತು.‍‍ ಆದರೆ ನಾವು ರೇಡಿಯೋದಲ್ಲಿ ಕೇಳಿ ಮಾರನೆ ದಿನ ಪೇಪರಲ್ಲಿ ಓದುತ್ತಿದ್ದ  70-80ರ ದಶಕದ ಕ್ರಿಕೆಟ್ನಲ್ಲಿ ಕ್ಷೇತ್ರ ರಕ್ಷಣೆ ಉನ್ನತ ಮಟ್ಟದ್ದಾಗಿರಲಿಲ್ಲವೇನೋ ಎಂದು ನನ್ನ ಸಂದೇಹ.  ಆಗ ತುಂಬಾ ಧಡೂತಿಗಳು ಮತ್ತು ತುಂಬಾ ದೂರದಿಂದ ಒಂದೇ ಸರ್ತಿ ಸರಿಯಾಗಿ ವಿಕೆಟ್ ಕೀಪರ್ ಬಳಿ ಚೆಂಡು ಬರುವಂತೆ ಎಸೆಯಲು ಸಾಧ್ಯವಿಲ್ಲದವರು ಮತ್ತು ಹಲವು ತೂತು ಕೈನ ಅನೇಕ ಆಟಗಾರರು ತಂಡದಲ್ಲಿ ಬೋಲಿಂಗ್ ಇಲ್ಲವೇ ಬ್ಯಾಟಿಂಗ್ ಸಾಮರ್ಥ್ಯದಿಂದ ಇರುವುದು ಸಾಮಾನ್ಯವಿತ್ತು.  

ಅಂದರೆ ಅಂದಿನ ದಿನದಲ್ಲಿ ಉತ್ತಮ ಕ್ಷೇತ್ರರಕ್ಷಣೆ ಮಾಡುವವರೇ ಇರಲಿಲ್ಲ ಅಂತ ಅಲ್ಲ. ಪಟೌಡಿ,ಫರೂಕ್ ಇಂಜಿನಿಯರ್, ಬ್ರಿಜೇಶ್ ಪಟೇಲ್ ಮುಂತಾದ ಸಮರ್ಥ ಕ್ಷೇತ್ರ ರಕ್ಷಕರಿದ್ದುದನ್ನು ಮರೆಯುವಂತಿಲ್ಲ.  ಆದರೆ ಸಾರ್ವಕಾಲಿಕ ಶ್ರೇಷ್ಠ ಕ್ಷೇತ್ರ ರಕ್ಷಣೆಯ ಮಾತು ಬಂದಾಗ ಮೊದಲು ಏಕನಾಥ ಸೋಲ್ಕರ್ ನೆನಪಿಗೆ ಬರುತ್ತಾರೆ. 

1971ರಿಂದ  1976 ಅವಧಿ, ಭಾರತೀಯ ಕ್ರಿಕೆಟ್ ಅನ್ನು ಅಜರಾಮರಗೊಳಿಸಿದ ಭವ್ಯ ವರ್ಷಗಳು ಎಂದು ನನ್ನ ಮಧುರ ನೆನಪು. ಆ ಯುಗದಲ್ಲಿನ ಏಕನಾಥ್ ಸೋಲ್ಕರ್ ಭಾರತದ ಕ್ರಿಕೆಟ್ನಲ್ಲಿನ ಒಬ್ಬ ಅಪ್ರತಿಮ ಧ್ರುವ ತಾರೆ. ಚಂದ್ರ ಇದಾನೆ, ಪ್ರಸನ್ನ ಇದಾನೆ, ವಿಶಿ ಇದ್ದಾನೆ ಅನ್ನುವಷ್ಟೇ ಕೇವಲ ಕ್ಷೇತ್ರರಕ್ಷಣೆಯ ಅಸಾಮಾನ್ಯ ಸಾಮರ್ಥ್ಯದಿಂದ ಅಜರಾಮರರಂತೆ ಉಳಿದವರು ಏಕನಾಥ ಸೋಲ್ಕರ್.

ಏಕನಾಥ್ ಸೋಲ್ಕರ್ ಒಬ್ಬ ಆಲ್ ರೌಂಡರ್. ಬ್ಯಾಟಿಂಗ್, ಬೌಲಿಂಗ್ ಮತ್ತು ಉತ್ತಮ ಕ್ಷೇತ್ರರಕ್ಷಣೆ ಸಾಮರ್ಥ್ಯ ಇವರದಿತ್ತು. ಬಡವರ 'ಸೋಬರ್ಸ್'ಎಂಬುದು ಇವರಿಗಿದ್ದ ಖ್ಯಾತಿ.
ಬ್ಯಾಟುದಾರನ ಅತಿ ಸಮೀಪದಲ್ಲಿ ನಿಂತು ಶಿರಸ್ತ್ರಾಣವೇ ಆಗಲಿ, ಇನ್ಯಾವುದೇ ರಕ್ಷಾ ಕವಚಗಳೇ ಬಳಕೆಯಿಲ್ಲದ ಕಾಲದಲ್ಲಿ, ಭಾರತದ ಮೈದಾನಗಳ ಅಂದಿನ ಒರಟು ನೆಲದಲ್ಲಿ ಹಾಗೆ ಕ್ಷೇತ್ರರಕ್ಷಣೆ ಮಾಡುವುದು ಸೋಲ್ಕರ್ ಅವರಿಗೆ ಹೇಗೆ ತಾನೇ ಸಾಧ್ಯವಿದ್ದಿರಬಹುದು.  

ಕಳೆದ ಶತಮಾನದಲ್ಲಿ ಇತರ ದೇಶದವರು ಎದ್ದು ಬಿದ್ದು ಕ್ಯಾಚ್ ಹಿಡಿದು ಪಂದ್ಯ ಬದಲಿಸುತ್ತಿದ್ದಾಗ ಒಬ್ಬ ಕ್ರಿಕೆಟ್ ವಿದ್ವಾಂಸರು, ಭಾರತೀಯ ಉಪಖಂಡದ ಒರಟು ಕ್ರಿಕೆಟ್ ನೆಲದಲ್ಲಿ ನೆಲಕ್ಕೆ ಬಿದ್ದು ಕ್ಯಾಚ್ ಹಿಡಿಯುವವರನ್ನು ಸೃಷ್ಟಿಸುವುದು ಸುಲಭವಲ್ಲ ಎಂದು ಹೇಳಿದ್ದು ನೆನಪಾಗುತ್ತೆ. (ಈಗ ಬಿಡಿ ಶ್ರೀಮಂತ ಭಾರತ ಕ್ರಿಕೆಟ್ ಮಂಡಲಿ ಯಾವ ಬರಡು ನೆಲವನ್ನೂ ಕ್ರಿಕೆಟ್ ಫಲವತ್ತತೆಗೆ ಬದಲಿಸುವಷ್ಟು ಶಕ್ತಿ ಪಡೆದಿದೆ).  ಅದಕ್ಕೆ ನಾಲ್ಕು ದಶಕಗಳ ಮುಂಚೆ ದೊಡ್ಡ ಬಲವಾಗಿ ಬ್ಯಾಟನ್ನೇ ಎಸೆಯುತ್ತಿದ್ದ 😊 ದಾಂಢಿಗರ ಮುಂದೆ ಒರಟು ನೆಲದಲ್ಲಿ  ಧೈರ್ಯದಿ ನಿಂತು ಸೋಲ್ಕರ್ ಹಿಡಿಯುತ್ತಿದ್ದ ಕ್ಯಾಚ್ಗಳು ಕ್ರಿಕೆಟ್ ಲೋಕದ ವಿಸ್ಮಯ ಅಂದರೆ ತಪ್ಪಾಗಲಾರದು. “I only watch the ball” ಎಂದು ಹೇಳುತ್ತಿದ್ದ ಅವರ ಮಾತು ಇಂದಿಗೂ ವಿಶ್ವಪ್ರಸಿದ್ಧಿ.

ಭಾರತವು 1971ರಲ್ಲಿ ಇಂಗ್ಲೆಂಡಿನ ನೆಲದಲ್ಲಿ ವಿಜಯ ಸಾಧಿಸಲು ಅಮೂಲ್ಯ ಕೊಡುಗೆದಾರರಾದ ಏಕನಾಥ್ ಸೋಲ್ಕರ್ ಕುರಿತು,  ಆ ಯುಗದ ಶ್ರೇಷ್ಠ ಕ್ರಿಕೆಟ್ ಪಟು ಟೋನಿ ಗ್ರೆಗ್ "ಸೋಲ್ಕರ್ ನಾನು ಕಂಡ ಅನನ್ಯ ಶ್ರೇಷ್ಠ ಫಾರ್ವರ್ಡ್ ಶಾರ್ಟ್ಲೆಗ್ ಕ್ಷೇತ್ರರಕ್ಷಕ" ಎಂದು ಬಣ್ಣಿಸಿದ್ದರು.

ತಾವು ಆಡಿದ ಕೇವಲ 27 ಟೆಸ್ಟ್ ಪಂದ್ಯಗಳಲ್ಲಿ 53 ಕ್ಯಾಚ್ ಹಿಡಿದ ಸಾಧನೆ ಮಾಡಿದವರು ಸೋಲ್ಕರ್.  ವಿಕೆಟ್ ಕೀಪರ್ಗಳನ್ನು ಹೊರತು ಪಡಿಸಿ,  ಇಪ್ಪತ್ತಕ್ಕೂ ಹೆಚ್ಚು  ಟೆಸ್ಟ್ ಪಂದ್ಯಗಳಲ್ಲಿ ಆಡಿದ ಯಾವುದೇ ಕ್ಷೇತ್ರ ರಕ್ಷಕನ ಶ್ರೇಷ್ಠ ಕ್ಯಾಚಿಂಗ್ ಅನುಪಾತದ ಸಾಧನೆಯಿದು. ಆ ಕಾಲದ ಅಲುಗದ ಗೋಡೆಯಂತಿದ್ದ ಜೆಫ್ ಬಾಯ್ಕಾಟ್ ಅವರನ್ನು ಮೂರು ಪ್ರಥಮ ದರ್ಜೆ ಪಂದ್ಯದಲ್ಲಿ ಸತತ ಮೂರು ಇನ್ನಿಂಗ್ಸ್ಗಳಲ್ಲಿ ಔಟ್ ಮಾಡಿದ ಕೀರ್ತಿ ಸೋಲ್ಕರ್ ಅವರದು. 'ಐ ವಿಲ್ ಔಟ್ ಯು ಬಾಯ್ಕಾಟ್' ಎಂದು ಹೇಳುವ ಸೋಲ್ಕರ್ ಮಾತು ಎಲ್ಲೆಡೆ ಪ್ರಖ್ಯಾತವಿತ್ತು. 

ಏಕನಾಥ ಸೋಲ್ಕರ್ ಅವರ ತಂದೆ  ಕ್ರಿಕೆಟ್ ಮೈದಾನದ ಪ್ರಧಾನ ನಿರ್ವಾಹಕರಾಗಿದ್ದರು.  ಆ ಸಮಯದಲ್ಲಿ ಬಾಲಕರಾಗಿದ್ದ ಏಕನಾಥ ಸೋಲ್ಕರ್ ಸ್ಕೋರ್ ಬೋರ್ಡ್ ನಿರ್ವಹಿಸುವ  ಕೆಲಸವನ್ನು ಒಲವಿನಿಂದ  ಮಾಡುತ್ತಿದ್ದರು. ಶಾಲಾ ದಿನಗಳಲ್ಲಿ ಅವರು ಸುನಿಲ್ ಗಾವಸ್ಕರ್, ಮೊಹಿಂದರ್ ಅಮರ್ನಾಥ್ ಅಂತಹ ಬಾಲಕರಿದ್ದ ತಂಡಕ್ಕೆ ನಾಯಕರಾಗಿದ್ದರು. ಇಂಗ್ಲೆಂಡಿನ ಸಸೆಕ್ಸ್ ಪರವಾಗಿ ಒಂದು ಪಂದ್ಯ ಕೂಡಾ ಆಡಿದ್ದರು.

1969-70 ಅವಧಿಯಲ್ಲಿ ಹೈದರಾಬಾದಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲು ಟೆಸ್ಟ್ ಪಂದ್ಯ ಆಡಿದರು.‍ ಸ್ವಾತಂತ್ರ್ಯದ ನಂತರ ಜನಿಸಿದ ದೇಶದ ಮೊದಲ ಟೆಸ್ಟ್ ಕ್ರಿಕೆಟಿಗರೆಂಬ ಹೆಗ್ಗಳಿಕೆ ಕೂಡಾ ಇವರದು. ಆಸ್ಟ್ರೇಲಿಯಾ ವಿರುದ್ಧ ಉತ್ತಮವಾಗಿ ಆಡಿದ ಅವರು 1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೂಡಾ ಆಡಿದರು.‍ ಅಬಿದ್ ಅಲಿ ಅವರ ಜೊತೆ ಪ್ರಾರಂಭಿಕ ಬೌಲರ್ ಆಗಿ ಅವರು ಆಯ್ಕೆ ಅಗಿದ್ದರು. 1971 ಇಂಗ್ಲೆಂಡ್ ಸರಣಿ ಮೊದಲ ಪಂದ್ಯದಲ್ಲಿ 67 ರನ್ ಬಾರಿಸಿ ಗುಂಡಪ್ಪ ವಿಶ್ವನಾಥರೊಂದಿಗೆ 92 ರನ್ ಜೊತೆಯಾಟದಲ್ಲಿ  ಪಾಲ್ಗೊಂಡಿದ್ದರು. ಮೂರನೆ ಟೆಸ್ಟ್ ಪಂದ್ಯದಲ್ಲಿ  28 ರನ್ಗೆ ಮೂರು ವಿಕೆಟ್ ಪಡೆದು 44 ರನ್ಗಳನ್ನೂ ಗಳಿಸಿ ಎರಡು ಕ್ಯಾಚ್ ಹಿಡಿದು ಭಾರತದ ಗೆಲುವಿಗೆ ಕಾರಣರಾದರು. 1972-73 ಸರಣಿಯಲ್ಲಿ ದೆಹಲಿಯಲ್ಲಿ 75 ರನ್ ಗಳಿಸಿದ್ದರು.  ಸರಣಿಯಲ್ಲಿ 12 ಕ್ಯಾಚ್ ಹಿಡಿದರು. 1975 ವರ್ಷ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದರು. 1976ರ ಬಲಾಢ್ಯ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೂಡಾ ಅವರದ್ದು ಅಪ್ರತಿಮ ಕ್ಷೇತ್ರ ರಕ್ಷಣೆ. 

27 ಟೆಸ್ಟ್ ಪಂದ್ಯಗಳಲ್ಲಿ 53 ಕ್ಯಾಚ್ಗಳಲ್ಲದೆ, 1068 ರನ್ ಮತ್ತು 18 ವಿಕೆಟ್ ಗಳಿಸಿದ್ದ ಸೋಲ್ಕರ್ ಹದಿನಾರು ವರ್ಷಗಳ ಕ್ರಿಕೆಟ್ ಜೀವನದಲ್ಲಿ 6851 ಪಂದ್ಯಗಳ ರನ್ ಮತ್ತು 276 ವಿಕೆಟ್ ಸಾಧನೆಯನ್ನು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮಾಡಿದ್ದರು. 

ಭಾರತದ ಪರ ಏಳು ಒಂದು ದಿನದ ಪಂದ್ಯಗಳನ್ನೂ ಆಡಿದ್ದ ಏಕನಾಥ ಸೋಲ್ಕರ್ 2005ರ ಜೂನ್ 26 ರಂದು ನಿಧನರಾದರು.

On the birth anniversary  of a ‘wonder in cricket fielding’ called Eknath Solkar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ