ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸತೀಶ್ ಆಚಾರ್ಯ



 ಸತೀಶ್ ಆಚಾರ್ಯ


ಸತೀಶ್ ಆಚಾರ್ಯ ನಮ್ಮ ನಾಡಿನ ಉತ್ತಮ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು.

ಸತೀಶ್ ಆಚಾರ್ಯ ಅವರ ಹುಟ್ಟಿದ ಹಬ್ಬ ಮಾರ್ಚ್ 24ರಂದು.

ಶಾಲೆಯ ದಿನದಲ್ಲೇ ಅಮರ ಚಿತ್ರಕಥಾದಂತಹ ವಿವಿಧ ಚಿತ್ರ ರೂಪಕಗಳಿಗೆ ಮನಸೋತಿದ್ದವರು ಸತೀಶ್.  ನಮ್ಮ ಕನ್ನಡದ ನಟ ವಿಷ್ಣುವರ್ಧನರು ಅವರಿಗೆ ಪ್ರಿಯವಾದ ಹೀರೋ.  ಒಮ್ಮೆ ಶಾಲೆಯಲ್ಲಿ ಅವರ ಚಿತ್ರವೊಂದನ್ನು ಕಾರ್ಬನ್ ಕಾಗದದಲ್ಲಿ ಟ್ರೇಸ್ ಮಾಡಿ ಗೆಳೆಯರ ಮೇಲೆ ಮೋಡಿ ಮಾಡಿದ್ದರು.  ಮತ್ತೊಬ್ಬರ ಹೃದಯದಲ್ಲಿ ನಾವು ಉಕ್ಕಿಸುವ ಆಸ್ಥೆ, ಬೆರಗುಗಳು ನಮಗರಿವಿಲ್ಲದಂತೆ ನಮ್ಮೊಳಗೊಂದು ವಿಶಿಷ್ಟ ಲೋಕವನ್ನು ಸೃಷ್ಟಿಸುತ್ತಿರುತ್ತವೇನೋ.  ಸತೀಶ್ ಆಚಾರ್ಯರು ಓದಿನಲ್ಲಿ ಎಂದೂ ಹಿಂದೆ ಬೀಳದೆ ಹಣಕಾಸಿನ ವಿಚಾರದಲ್ಲಿ ಎಂ ಬಿ ಎ ಪಡೆದರೂ, ಅವರ ಮನ ಅವರ ಆಪ್ತ ಕಲಾ ಪ್ರವೃತ್ತಿಯಲ್ಲೇ ಓಡುತ್ತಿತ್ತು.  ಹೀಗಾಗಿ ಸುಲಭವಾಗಿ ಕಚೇರಿಯಲ್ಲಿ ಕುಳಿತು ದೊಡ್ಡ ಸಂಬಳ ಎಣಿಸಬಹುದಾದ ಕೆಲಸಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಆಚಾರ್ಯ, ತಮ್ಮ ಹೃದಯಾಶಯಗಳಿಗೆ ಸಿಂಚನ ನೀಡುವ ಅವಕಾಶಗಳತ್ತ ದೃಷ್ಟಿ ಹಾಯಿಸತೊಡಗಿದರು.  ಇದು ಸುಲಭದ ನಿರ್ಧಾರವಲ್ಲ.  ಆದರೆ, ಧೈರ್ಯವಂತ ಅಭಿಲಾಷಿಗರು ಮಾತ್ರ ತಾವು ಬಯಸಿದ ಬದುಕನ್ನು ತಮ್ಮದಾಗಿಸಿಕೊಳ್ಳುತ್ತಾರೆ. 

ಮುಂಬೈನ ಪತ್ರಿಕೆಗಳಲ್ಲಿ ಅದರಲ್ಲೂ ‘ಮಿಡ್- ಡೇ ' ಪತ್ರಿಕೆಯಲ್ಲಿ ಸತೀಶ್ ಆಚಾರ್ಯ ಹಲವಾರು ವರ್ಷಗಳಿಂದ  ಕಾರ್ಟೂನ್ ಬಿಡಿಸುತ್ತಿದ್ದಾರೆ.  “ಒಂದು ಕಾಲದಲ್ಲಿ ಮರಿಯಾ, ಲಕ್ಷ್ಮಣ್, ನಿನಾನ್ ಮುಂತಾದವರ ಕಾರ್ಟೂನ್‌ಗಳಿಂದ ನಾನು ಪ್ರೇರಿತನಾಗಿದ್ದೆ. ಬಾಲಕನಾಗಿದ್ದಾಗಲೇ ಕಾರ್ಟೂನ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೆ. ಇಲ್ಲಸ್ಟ್ರೇಟೆಡ್ ವಾರಪತ್ರಿಕೆಯ ಮರಿಯಾ ಮಿರಾಂಡ ನನಗೆ ಸ್ಫೂರ್ತಿಯಾಗಿದ್ದರು. ನನ್ನ ಪ್ರತಿಭೆ ಗುರುತಿಸಿಕೊಳ್ಳಲು ‘ಮಿಡ್-ಡೆ’ ಒಂದು ವೇದಿಕೆಯಾಯಿತು” ಎಂದು ಸತೀಶ್ ಹೇಳುತ್ತಾರೆ. 

ಕಾರ್ಟೂನ್ ಬರಹಗಳಲ್ಲಿ ಸತೀಶ್ ಆಚಾರ್ಯ ಅವರಿಗೆ ಪ್ರತಿನಿತ್ಯವೂ ಹೊಸ ಹೊಸತನದ ಸವಾಲುಗಳು, ಒಬ್ಬ ಮನಮೋಹನ್ ಸಿಂಗ್ ಪೇಟ ಬಿದ್ದು ಹೋಗುವಂತೆ ಚಿತ್ರಿಸಿ ನಮ್ಮ ಸಿಖ್ ಸಮುದಾಯಕ್ಕೆ ಅವಮಾನ ಮಾಡುತ್ತೀರಿ ಎನ್ನುತ್ತಾನೆ, ಮತ್ತೊಬ್ಬರು ನಮ್ಮ ಸಂಘ ಪರಿವಾರಕ್ಕೆ ಅವಮಾನ ಮಾಡಿದಿರಿ ಎನ್ನುತ್ತಾರೆ, ಸೊಟ್ಟ ಮೂತಿಯ ಮಂತ್ರಿಯೊಬ್ಬರು ತಮ್ಮ ಮೇಲೆ ಬಂದ ಕಾರ್ಟೂನ್ ನೋಡಿ ಮತ್ತಷ್ಟು ಕೆಟ್ಟ ಮೂತಿ ಮಾಡಿಕೊಂಡು ಸೈಬರ್ ಕ್ರೈಂ ವಿಭಾಗದಿಂದ ಒತ್ತಡ ತಂದದ್ದಿದೆ, ಕೆಲವೊಮ್ಮೆ ಎಷ್ಟು ಚೆನ್ನಾಗಿ ಬರೆದಿದ್ದೀರಿ ನಮಗೊಂದು ಪ್ರತಿ ಕೊಡಿ ಕಟ್ಟು ಹಾಕಿಸಿಟ್ಟುಕೊಳ್ಳುತ್ತೇವೆ ಎಂದದ್ದೂ ಇದೆ.

ಈ ಕಾರ್ಟೂನಿನವರು ರಾಮರಾಜ್ಯ ಇದ್ದರೆ ಎಲ್ಲವೂ ಪರ್ಫೆಕ್ಟ್ ಇದ್ದರೆ ಏನು ಮಾಡುತ್ತಾರೆ ಎಂಬುದು ಒಂದು ಅಚ್ಚರಿಯ ವಿಷಯ.  ಸತೀಶ್ ಆಚಾರ್ಯ ಅಂತಹವರಿಗೆ ಅಂತಹ ಯಾವುದೇ ಹೆದರಿಕೆಗಳೂ ಇಲ್ಲ.  ನಮ್ಮ ಪ್ರಜಾಪ್ರಭುತ್ವದಲ್ಲಿ ದಿನನಿತ್ಯ ಹೊಸ ಸುದ್ದಿಗಳಿವೆ.  ಬದುಕಿನ ಸಮಸ್ಯೆ, ವಿನೋದಗಳಿವೆ. ದೊಡ್ಡ ಉತ್ಸವ ಮಾಡ ಹೊರಟು  ಹಿಂದಿನ  ದಿನ  ಕಾಲಿಗೆ ಬೀಳಿಸಿಕೊಂಡು   ಮಾರನೆ  ದಿನ  ಕಾಲೆಳಿಸಿಕೊಳ್ಳುವ  ಗುರುಶ್ರೀಗಳಿದ್ದಾರೆ. ಆಗಾಗ ಸರ್ಪ್ರೈಸ್ ನೀಡುತ್ತಿರುವ ನಮೋ ಇದ್ದಾರೆ. ‘ಕ್ರೇಸಿ’ವಾಲ್ಗಳೂ ಇದ್ದಾರೆ.  ಸಮಾಜವಾದದ ಹೆಸರಿನಲ್ಲಿ  ಭಟ್ಟಂಗಿತನ  ಮಾಡುವ  ಮಾಧ್ಯಮಗಳಿವೆ.  ಇದರಲ್ಲಿ ಹೆದರಿಕೆಯ ಮಾತೇನು ಬಂತು?  ಅದರಲ್ಲೂ ನಮ್ಮ ಸತೀಶ್ ಆಚಾರ್ಯ ಬಹಳ ಧೈರ್ಯವಂತರು.  ಎಂಬಿಎ ಪದವಿ ಇದ್ದೂ, ಚಿತ್ರ ಬರೀತೀನಿ ಸಾಕು ಅಂತಾರೆ, ಮುಂಬೈನಲ್ಲಿ ಹದಿನೇಳು  ವರ್ಷ ಅಲ್ಲಿನ ಬಿರುಸಿನ ಜೀವನಕ್ಕೆ ಹೊಂದಿಕೊಂಡನಂತರವೂ, ಅಲ್ಲಿ ತುಂಬಾ ಧೂಳು ಕುಂದಾಪುರದಲ್ಲಿ ಮನೇಲಿ ಕೂತು ಚಿತ್ರ ಬರೀತೀನಿ ಅಂತಾರೆ; ಅಷ್ಟೆ ಅಲ್ಲ.  ಏನು ರಾಮ ರಾಜ್ಯ ಬರುತ್ತೆ ಅಂತ ಹೆದರಿಸ್ತೀರಾ ನನ್ನ ಹತ್ರ ಕ್ರಿಕೆಟ್ ಇದೆ, ಸಿನಿಮಾ ಇದೆ ಅಂತಾರೆ!  ಅಂದ ಹಾಗೇ ಅವರು ಬರೆಯುತ್ತಿರುವ ಕ್ರಿಕೆಟ್ ಕಾರ್ಟೂನುಗಳು ‘ಕ್ರಿಕ್ ಇನ್ಫೋ’ದಂತಹ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಿತ್ತರಗೊಳ್ಳುತ್ತಿವೆ.  ಬಿಬಿಸಿಯಂತಹ ವಾರ್ತಾ ಸಂಸ್ಥೆ, ವೈಟ್ ಹೌಸಿನ ಒಬಾಮರಿಗೆ ಮೋಡಿ ಹಾಕಿದಂತಹ  ಕಾರ್ಟೂನ್ ಬರೆಯುತ್ತಿರುವ ಸತೀಶ್ ಆಚಾರ್ಯ, ಒಂದು ದಿನ ಹಾಲಿವುಡ್ಡಿನ ಜನರನೂ ಆಕರ್ಷಿಸಿಯಾರು.  ಇಷ್ಟೆಲ್ಲಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋಡಿ ಹಾಕುವವರು ಕನ್ನಡದ ಕಂಪನ್ನು ಮರೆಯದೆ ಕನ್ನಡದ್ದೂ ಕಾರ್ಟೂನು ಹಚ್ಚುತ್ತಾರೆ.  ಹಲವಾರು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಓದುಗರನ್ನು ನಿರಂತರವಾಗಿ ಆಕರ್ಷಿಸುತ್ತಿವೆ.   

ಸತೀಶ್ ಆಚಾರ್ಯರ ಹಲವಾರು ಕಾರ್ಟೂನು ಪ್ರದರ್ಶನಗಳೂ ನಡೆದು ಸಮಾಜದ ಗಮನವನ್ನು ಸೆಳೆದಿವೆ.  ನೊಂದ  ಹೃದಯಗಳ ಕಣ್ಣೀರೊರೆಸಿ ಅವರಿಗೊಂದು  ಉತ್ತಮ ನೆಲೆ  ಕಲ್ಪಿಸಲು  ‘ಚಿತ್ರನಿಧಿ’ಯಂತಹ  ಸಮಾಜಮುಖಿ  ಕಾರ್ಯಕ್ರಮಗಳನ್ನೂ  ಮಾಡುತ್ತಿದ್ದಾರೆ.  ಮಕ್ಕಳಿಗೆ  ಮತ್ತು  ಆಸಕ್ತರಿಗೆ  ಕಲಿಕಾ ಶಿಬಿರಗಳನ್ನೂ  ಮಾಡಿದ್ದಾರೆ.    ಅವರು ಕುಂದಾಪುರದಲ್ಲಿ ವರ್ಷಕ್ಕೊಮ್ಮೆ ಆಯೋಜಿಸುವ ಕಾರ್ಟೂನ್ ಹಬ್ಬ ವೈಶಿಷ್ಟ್ಯ ಪೂರ್ಣ, ಎಲ್ಲರಿಗೂ ಅವಕಾಶ ಕೊಡುವ ಹಬ್ಬ.

ಸತೀಶ್ ಆಚಾರ್ಯರ ಕಾರ್ಟೂನ್‌ಗಳ  ಮೆಚ್ಚುಗರಲ್ಲಿ  ಪ್ರಿತೀಶ್ ನಂದಿ, ಆಕಾರ್ ಪಟೇಲ್, ಗೋವಿಂದ್ ನಿಹಲಾನಿ, ಅಭಿಜಿತ್ ಮಜುಂದಾರ್, ಅರುಂಧತಿ ನಾಗ್,  ಸೇರಿದಂತೆ ಇಂಗ್ಲಿಷ್ ಪತ್ರಿಕೆಯ ಹಿರಿಯ ಪತ್ರಕರ್ತರು, ಲೇಖಕರು ಹಾಗೂ ಬಾಲಿವುಡ್ ನಿರ್ದೇಶಕರು ಹೀಗೆ ಅತೀ ದೊಡ್ಡ ಪಟ್ಟಿಯೇ ಇದೆ.  ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.   ಅವರ ಹೆಸರು  ಅಸಾಧಾರಣ  ಭಾರತೀಯ  ಚಿಂತಕರ  ಸಾಲಿನಲ್ಲಿ  ಫೋರ್ಬ್ಸ್  ಪತ್ರಿಕೆಯಲ್ಲಿ  ಕೂಡಾ  ನಮೂದಿತಗೊಂಡಿದೆ.

ನಮ್ಮ ಆತ್ಮೀಯರೊಬ್ಬರು, ನಮ್ಮ ಕನ್ನಡಿಗರೊಬ್ಬರು ವಿಶ್ವದ ಆಸಕ್ತಿಗಳನ್ನೆಲ್ಲಾ ತಮ್ಮ ಓರೆ ಕೋರೆ ಗೆರೆಗಳಲ್ಲಿ ಪ್ರತಿನಿಧಿಸುತ್ತಾರೆ, ಎಲ್ಲರೂ ಅವಕ್ಕಾಗಿ ಕಾಯುವಂತೆ ಮಾಡುತ್ತಾರೆ ಎಂಬುದು ನಮಗೆಲ್ಲ ಸಂತಸಕೊಡುವ ವಿಚಾರ.  ಈ ಆತ್ಮೀಯ ಗೆಳೆಯ ಸತೀಶ್ ಆಚಾರ್ಯರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಾ ಅವರ ಬದುಕು, ವೃತ್ತಿ, ಪ್ರವೃತ್ತಿಗಳಲ್ಲಿ ನಿರಂತರ ಯಶಸ್ಸು ಮಿನುಗುತ್ತಿರಲಿ ಎಂದು ಹಾರೈಸೋಣ.

On the birth day of our cartoonist and friend Satish Acharya


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ