ಸಾಧು ಕೋಕಿಲ
ಸಾಧು ಕೋಕಿಲ
ಸಾಧು ಕೋಕಿಲ ಕನ್ನಡ ಚಿತ್ರರಂಗದ ಉತ್ತಮ ಹಾಸ್ಯ ಕಲಾವಿದರು. ಸಂಗೀತ ಸಂಯೋಜನೆ ಮತ್ತು ಚಲನಚಿತ್ರ ನಿರ್ದೇಶನದಲ್ಲೂ ಅವರು ಯಶ ಸಾಧಿಸಿದವರು. ಹಾಸ್ಯ ಪಾತ್ರಗಳಲ್ಲಂತೂ ಅವರ ಅಭಿನಯ ಲೀಲಾಜಾಲ. ಸನ್ನಿವೇಶಕ್ಕೆ ತಕ್ಕಂತೆ ಭಾವಪೂರ್ಣತೆಯ ಗಾಂಭೀರ್ಯವನ್ನು ತುಂಬುವ ಅವರ ನಟನೆಯ ರೀತಿ, ಅವರು ಯಾವುದೇ ಪಾತ್ರವನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಬಲ್ಲ ಸಾಮರ್ಥ್ಯ ಉಳ್ಳವರು ಎಂಬುದನ್ನು ಸೂಚಿಸುತ್ತದೆ.
ಸಾಧು ಕೋಕಿಲ ಅವರ ಮೂಲ ಹೆಸರು ಸಹಯಾ ಶೀಲನ್ ಷಡ್ರಚ್. ಸಾಧು ಕೋಕಿಲ ಎಂದು ಸಿನಿಮಾ ಹೆಸರಿಟ್ಟವರು ಉಪೇಂದ್ರ.
ಸಾಧು ಕೋಕಿಲ 1966ರ ಮಾರ್ಚ್ 24 ರಂದು ಜನಿಸಿದರು. ತಂದೆ ನಟೇಶ್ ಪೋಲೀಸ್ ವಾದ್ಯ ಗೋಷ್ಠಿಯಲ್ಲಿ ಪಿಟೀಲು ನುಡಿಸುತ್ತಿದ್ದರು. ತಾಯಿ ಮಂಗಳಾ. ತಾಯಿ ಮತ್ತು ಅಕ್ಕ ಹಿನ್ನೆಲೆ ಗಾಯಕಿಯರಾಗಿದ್ದರು. ಅಣ್ಣ ಲಯೇಂದ್ರ ಸಹ ನಟರಾಗಿದ್ದರು. ಸಾಧು ಕೋಕಿಲ ಬೆಂಗಳೂರಿನ ಸೇಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ವ್ಯಾಸಂಗ ನಡೆಸಿದರು. ಪ್ರಸಿದ್ಧ ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್ Kasturi Shankar Shankar ಅವರ ಆಶ್ರಯದಲ್ಲಿ ಸಂಗೀತಲೋಕದಲ್ಲಿ ಕಲಿತರು.
ಸಾಧು ಕೋಕಿಲ ತಮ್ಮ ವೃತ್ತಿ ಜೀವನದಲ್ಲಿ ಕೀಬೋರ್ಡ್ ವಾದಕ, ಸಂಗೀತ ನಿರ್ದೇಶಕ ಹೀಗೆ ಹಲವು ರೀತಿ ಕಾರ್ಯನಿರ್ವಹಿಸಿ ಹಾಸ್ಯ ನಟರಾಗಿ ಜನಪ್ರಿಯರಾಗಿದ್ದಾರೆ. ನಿರ್ಮಾಪಕರಾಗಿ, ನಿರ್ದೇಶಕರಾಗಿ ಸಹಾ ಗಮನ ಸೆಳೆದಿದ್ದಾರೆ.
ಸಾಧು ಕೋಕಿಲ 1992ರಲ್ಲಿ "ಶ್" ಕನ್ನಡ ಚಿತ್ರಕ್ಕೆ ಮೊದಲ ಬಾರಿ ಸಂಗೀತ ನಿರ್ದೇಶನ ಮಾಡಿದರು. ಮುಂದೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿರುವ ಸಾಧು ಕನ್ನಡ ಚಿತ್ರರಂಗದಲ್ಲಿ ಅತಿ ವೇಗವಾಗಿ ಕೀಬೋರ್ಡ್ ನುಡಿಸುವ ಕಲಾವಿದ ಎನಿಸಿಕೊಂಡಿದ್ದಾರೆ. ಒಮ್ಮೆ ಅವರು ಕಾರ್ಯಕ್ರಮವೊಂದರಲ್ಲಿ ನೀವು ಸಂಗೀತಕ್ಕೆ ಮೊದಲು ಹೇಗೆ ಬಂದಿರಿ ಅಂದರೆ “ಅರುಣಾ ಮ್ಯೂಸಿಕಲ್ ಅಲ್ಲಿ ಪ್ರತೀ ವಾದ್ಯವನ್ನೂ ನಿಷ್ಠೆಯಿಂದ ಒರೆಸುತ್ತಾ ಇದ್ದೆ. ಅದರಲ್ಲಿ ನನಗೆ ಪ್ರೀತಿಯಿತ್ತು. ನನ್ನನ್ನು ಕಸ್ತೂರಿ ಶಂಕರ್ ಅಮ್ಮಾ ಬೆಳೆಸಿದರು" ಎಂದು ನುಡಿದದ್ದು ನನ್ನ ಮನಸ್ಸನ್ನು ಮುಟ್ಟಿದೆ. ಸಂಗೀತ ಸಂಯೋಜಕರಾಗಿ ಅವರ ರಾಕ್ಷಸ, ಇಂತೀ ನಿನ್ನ ಪ್ರೀತಿಯ ಚಿತ್ರ ಸಂಗೀತ ಸಂಯೋಜನೆಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಂದಿದೆ. ಹಾಸ್ಯ ನಟನೆಗಾಗಿ ಅವರಿಗೆ ಅನೇಕ ಜನಪ್ರಿಯ ಮಾಧ್ಯಮಗಳ ಪ್ರಶಸ್ತಿ ಸಂದಿದೆ. ಆಗಾಗ ಖುಷಿಯಿಂದ ಅವರ ಹಾಸ್ಯಾಭಿನಯದ ವಿಡಿಯೋ ತುಣುಕುಗಳನ್ನು ನೋಡುವಾಗ ಸಂತಸ ಮೂಡುತ್ತದೆ. ಅವರು ನಿರ್ದೇಶಿಸಿರುವ ಚಿತ್ರಗಳಲ್ಲಿ ರಕ್ತ ಕಣ್ಣೀರು, ರಾಕ್ಷಸ, ಸುಂಟರಗಾಳಿ, ಗಂಗೆ ಬಾರೆ ತುಂಗೆ ಬಾರೆ, ದೇವ್ರು, ಮಿಸ್ಟರ್ ತೀರ್ಥ, ಶೌರ್ಯ, ಪೋಲೀಸ್ ಸ್ಟೋರಿ 3, ಸೂಪರ್ ರಂಗ, ಭಲೇ ಜೋಡಿ ಮುಂತಾದವು ಸೇರಿವೆ.
ಸಾಧು ಕೋಕಿಲ ಅವರು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ
ನೇಮಕಗೊಂಡಿದ್ದಾರೆ.
ನಟರಾಗಿ, ನಿರ್ದೇಶಕರಾಗಿ, ಸಂಗೀತ ಸಂಯೋಜಕರಾಗಿ ಬಹುಮುಖಿ ಪ್ರತಿಭಾನ್ವಿತರಾದ ಸಾಧು ಕೋಕಿಲ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of our talented comedian, music director and director Sadhu Kokila
ಕಾಮೆಂಟ್‌ಗಳು