ಕಾರ್ಲ್ ಪಿಯರ್ಸನ್
ಕಾರ್ಲ್ ಪಿಯರ್ಸನ್
ಕಾರ್ಲ್ ಪಿಯರ್ಸನ್ ಅವರು ಅನ್ವಿತ ಗಣಿತ ಶಾಸ್ತ್ರವಿದ, ಜೀವಮಾಪನ ತಜ್ಞ ಹಾಗೂ ಸಂಖ್ಯಾಕಲನಶಾಸ್ತ್ರವಿದರಾಗಿ ಮಹಾನ್ ಕೊಡುಗೆ ನೀಡಿದವರಾಗಿದ್ದಾರೆ. ಆಧುನಿಕ ಸಂಖ್ಯಾಕಲನವಿಜ್ಞಾನದ (ಸ್ಟ್ಯಾಟಿಸ್ಟಿಕ್ಸ್) ಮೂಲಪುರುಷರಿವರು.
ಕಾರ್ಲ್ ಪಿಯರ್ಸನ್ ಅವರು 1857ರ ಮಾರ್ಚ್ 27ರಂದು ಲಂಡನ್ನಿನಲ್ಲಿ ಜನಿಸಿದರು. ಕೇಂಬ್ರಿಜಿನ ಕಿಂಗ್ಸ್ ಕಾಲೇಜಿನಲ್ಲಿ ಗಣಿತವನ್ನು ಅಭ್ಯಸಿಸಿ 1879ರಲ್ಲಿ ರ್ಯಾಂಗ್ಲರ್ ಪದವಿ ಪಡೆದರು. ಇವರದ್ದು ಬಹುಮುಖಿ ಪ್ರತಿಭೆ. ಜರ್ಮನಿಯಲ್ಲಿ ತತ್ವಶಾಸ್ತ್ರ ಮತ್ತು ರೋಮನರ ಕಾಯಿದೆ ಕಲಿತರು. ಕಾರ್ಲ್ ಮಾರ್ಕ್ಸ್ ಅವರ ಬರಹಗಳಿಂದ ಪ್ರಭಾವಿತರಾಗಿ ಮುಕ್ತ ಸಮಾಜ, ಮುಕ್ತ ವಿಚಾರಗಳನ್ನು ಪ್ರತಿಪಾದಿಸಿ ಪುಸ್ತಕ ಬರೆದರು. 1884ರಲ್ಲಿ, ಇನ್ನೂ ತಮ್ಮ 27ರ ಹರೆಯದಲ್ಲೇ, ಅನ್ವಿತ ಗಣಿತ ಮತ್ತು ಬಲವಿಜ್ಞಾನ (ಅಪ್ಲೈಡ್ ಮ್ಯಾತ್‍ಮ್ಯಾಟಿಕ್ಸ್ ಆಂಡ್ ಮೆಕ್ಯಾನಿಕ್ಸ್) ವಿಷಯದ ಪ್ರಾಚಾರ್ಯರಾಗಿ ಲಂಡನ್ನಿನ ಯುನಿವರ್ಸಿಟಿ ಕಾಲೇಜಿನಲ್ಲಿ ನೇಮಕಗೊಂಡರು. ಹೀಗಿದ್ದರೂ ತತ್ವಶಾಸ್ತ್ರ, ವಿಜ್ಞಾನ, ಲಲಿತ ಕಲೆ ಮುಂತಾದ ವಿವಿಧ ವಿಷಯಗಳ ಬಗ್ಗೆ ಲೇಖನ ಬರೆದರು. ಲೆನಿನ್ ಕೂಡ ತಮ್ಮ ಬರಹಗಳಲ್ಲಿ ಪಿಯರ್ಸನ್ ಅವರನ್ನು ಉಲ್ಲೇಖಿಸಿದ್ದಾರೆ.
1890ರಲ್ಲಿ ಗಾಲ್ಟನ್, ವೆಲ್ಡನ್ ಇವರುಗಳಿಂದ ಪ್ರಭಾವಿತರಾದ ಪಿಯರ್ಸನ್ ಅವರ ಒಲವು ಜೀವಶಾಸ್ತ್ರದತ್ತ ತಿರುಗಿತು. ವಸ್ತುಗಳ ಮತ್ತು ಪ್ರಾಣಿಗಳ ವಿವಿಧ ಅಂಗ ಮತ್ತು ಗುಣಗಳ ಅಳತೆಗಳಿಗೆ ಹೊಂದುವಂತೆ ಸಂಖ್ಯಾಕಲನಾತ್ಮಕ ವಿತರಣೆಗಳನ್ನು ಶೋಧಿಸಲು ತೊಡಗಿದರು. ಯಾವ ನ್ಯಾಸಕ್ಕೆ ಯಾವ ಗಣಿತ ರೇಖೆಯನ್ನು ಪೊರ್ದಿಸಬೇಕೆಂಬುದರ ಬಗ್ಗೆ ಲೇಖನಗಳನ್ನು ಬರೆದರು. ಈ ರೇಖೆಗಳ ಪರಿವಾರಕ್ಕೆ ಪಿಯರ್ಸನ್ ವ್ಯವಸ್ಥೆ (ಸಿಸ್ಟಮ್) ಎಂಬ ಹೆಸರಿದೆ. ದತ್ತನ್ಯಾಸವನ್ನು ಪ್ರತಿನಿಧಿಸಲು ಯಾವ ಗಣಿತ ರೇಖೆಯನ್ನು ಉಪಯೋಗಿಸಬೇಕೆಂದು ನಿರ್ಧರಿಸಲು ಹೊಂದಾಣಿಕೆ ಮಾಪವನವನ್ನು (ಗುಡ್‍ನೆಸ್ ಆಫ್ ಫಿಟ್) ಉಪಜ್ಞಿಸಿದರು. ಈ ಮಾಪನವನ್ನು ಈಗ ಜೀವಶಾಸ್ತ್ರ, ಸಮಾಜಶಾಸ್ತ್ರ, ಭೌತಶಾಸ್ತಗಳಲ್ಲಿಯೂ ಹೊಂದಾಣಿಕೆ ಮಾಪನವಾಗಿ ಉಪಯೋಗಿಸಲಾಗುತ್ತಿದೆ. ದತ್ತನ್ಯಾಸ ಒಂದು ನಿರ್ದಿಷ್ಟ ವಿತರಣೆಯಿಂದ ಆಯಲ್ಪಟ್ಟದ್ದೇ, ಎರಡು ಅಥವಾ ಹೆಚ್ಚು ವಿಶೇಷಣಗಳು (ಅಟ್ರಿಬ್ಯೂಟ್ಸ್) ಪರಸ್ಪರ ಸ್ವತಂತ್ರಗಳಾಗಿರುವುವೇ ಮುಂತಾದವನ್ನು ನಿರ್ಧರಿಸುವುದಕ್ಕೂ ಇದು ಬಳಸಲ್ಪಡುತ್ತಿದೆ.
1893ರಿಂದ 1900 ಅವಧಿಯಲ್ಲಿ ಪಿಯರ್ಸನ್ ಮಾನವವಿಕಾಸದ ಬಗ್ಗೆ ಲೇಖನ ಸರಣಿಯನ್ನು ಬರೆದರು. ತಳಿವಿಜ್ಞಾನವನ್ನೂ ಅನುವಂಶಿಕತೆಯನ್ನೂ ಗಣಿತಶಾಸ್ತ್ರದ ಭದ್ರ ತಳಹದಿಯ ಮೇಲೆ ನಿಲ್ಲಿಸಿದರು. ಜೀವಮಾಪನದ (ಬಯೊಮೆಟ್ರಿ) ಲೇಖನಗಳಿಗೆ ಮೀಸಲಾದ ಬಯೋಮೆಟ್ರಿಕ ಎಂಬ ನಿಯತಕಾಲಿಕವನ್ನು ಪ್ರಕಾಶಿಸಲು ಆರಂಭಿಸಿದರು. ತಲೆಬುರುಡೆ, ಇತರ ಎಲುಬುಗಳು ಮತ್ತು ಅಂಗಗಳನ್ನು ಅಳೆದು ಅಭ್ಯಸಿಸುವ, ಮೆದುಳಿನ ಗುಣಗಳನ್ನು ಶೋಧಿಸುವ, ಬುದ್ಧಿವಂತಿಕೆ ಸೂಚ್ಯಂಕವನ್ನು (ಇಂಟಲಿಜನ್ಸ್ ಕೋಎಫಿಶಂಟ್) ಅಳೆಯುವ ಬಗ್ಗೆ ಇದರಲ್ಲಿ ಅವರು ಲೇಖನಗಳನ್ನು ಪ್ರಕಟಿಸುತ್ತಿದ್ದರು. ದತ್ತನ್ಯಾಸಕ್ಕೆ ವಿವಿಧ ರೇಖೆಗಳನ್ನು ಪೊರ್ದಿಸಲು ಅನುಕೂಲವಾಗುವ ಗಣಿತಸಾರಣಿಗಳನ್ನು (ಟೇಬಲ್ಸ್) ಇದರಲ್ಲಿ ಪ್ರಕಟಿಸುತ್ತಿದ್ದರು. ಎರಡು ಅಥವಾ ಹೆಚ್ಚು ಗುಣಗಳ ಸಹಸಂಬಂಧವನ್ನು ಅಳೆಯುವ ಸಹಸಂಬಂಧ ಸೂಚ್ಯಂಕಗಳನ್ನು ಸಹಾ ಬಳಕೆಗೆ ತಂದರು.
ಪಿಯರ್ಸನ್ ಪ್ರತಿಪಾದಿಸಿದ ತತ್ತ್ವಗಳಲ್ಲಿ ಕೆಲವೊಂದು ಲೋಪದೋಷಗಳನ್ನು ಮುಂದೆ ಬಂದ ಸಂಶೋಧಕರು ಕಂಡುಕೊಂಡಿರುವುದು ನಿಜವಾದರೂ ಪಿಯರ್ಸನ್ ಅವರು ಅನುಸರಿಸಿದ ಸಂಖ್ಯಾಕಲನಾತ್ಮಕ ವಿಧಾನಗಳು, ಜೀವಸಂಖ್ಯಾಕಲನಾತ್ಮಕ ಅಧ್ಯಯನದಲ್ಲಿ ಮಾತ್ರವಲ್ಲದೆ, ಔಷಧ ಶಾಸ್ತ್ರ (ಫಾರ್ಮಕಾಲಜಿ), ತಂತ್ರವಿದ್ಯೆ (ಟೆಕ್ನಾಲಜಿ) ಮತ್ತಿತರ ಶಾಸ್ತ್ರಾಧ್ಯಯನಗಳಲ್ಲೂ ಉಪಯುಕ್ತವಾಗಿವೆ.
1911ರಲ್ಲಿ ಪಿಯರ್ಸನ್ ಯೂನಿವರ್ಸಿಟಿ ಕಾಲೇಜಿನ ಸುಜನವಿಜ್ಞಾನದ (ಯೂಜೆನಿಕ್ಸ್) ಪ್ರಾಚಾರ್ಯರಾಗಿ ನೇಮಕಗೊಂಡು 1933ರ ತನಕ ಮಾನವ ಜೀವಶಾಸ್ತ್ರದ ಅಧ್ಯಯನಕ್ಕೆ ಅಮೋಘ ಕೊಡುಗೆ ಸಲ್ಲಿಸಿದರು.
ಈ ಮಹಾನ್ ಜೀವಿ 1936ರ ಏಪ್ರಿಲ್ 27 ರಂದು ಕಾರ್ಯನಿರತರಾಗಿರುವಾಗಲೇ ತಮ್ಮ ಕೊನೆಯ ಉಸಿರನ್ನೆಳೆದರು. ಒಬ್ಬ ವ್ಯಕ್ತಿ ಏನೆಲ್ಲ ಮಾಡಲು ಸಾಧ್ಯ ಎಂಬುದು ಮಾತ್ರಾ ಇಂತಹವರ ಬದುಕಿನ ಮೂಲಕ ಅಚ್ಚರಿ ಹುಟ್ಟಿಸುತ್ತೆ. ವ್ಯಥೆ ಆಗುವುದು ನಾವು ಏನೂ ಮಾಡದಿದ್ದೇವಲ್ಲ ಎಂದು.
On the birth anniversary of great mathematician and biostatistician Karl Pearson
ಕಾಮೆಂಟ್‌ಗಳು