ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಂಗಭೂಮಿ ದಿನ


 ವಿಶ್ವ ರಂಗಭೂಮಿ ದಿನ


ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣಕ್ಕೆ 1962ರಿಂದ ‘ವಿಶ್ವರಂಗಭೂಮಿ ದಿನ’ವನ್ನು ಮಾರ್ಚ್ 27ರಂದು ಆಚರಿಸಿಕೊಂಡು ಬರಲಾಗುತ್ತಿದೆ. 

ಪ್ಯಾರಿಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ರಂಗಸಂಸ್ಥೆಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ. ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ‘ವಿಶ್ವರಂಗಭೂಮಿ ದಿನ’ದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು. ಕಾರ್ನಾಡರು ಈಗ ಭಾರತೀಯ ಅಂತರರಾಷ್ಟ್ರೀಯ ಸಂಸ್ಥೆಯ ರಾಯಭಾರಿಯೂ ಆಗಿದ್ದರು.  ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಅಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವ ಆಚರಿಸುತ್ತಾರೆ.  ನಮ್ಮ ನಾಡಿನಲ್ಲೂ ವಿವಿಧ ರಂಗ ಸಂಸ್ಥೆಗಳು ವಿಶೇಷ ರಂಗಪ್ರಯೋಗಗಳೊಂದಿಗೆ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಿವೆ. 

ವಿಶ್ವ ರಂಗಭೂಮಿ ದಿನಾಚರಣೆಗೆ ಒಮ್ಮೆ  ಸಂದೇಶ ನೀಡಿದ್ದ  ರಷ್ಯಾದ  ಮಹಾನ್ ನಾಟಕಕಾರ ಅನಾತೊಲಿ ವಾಸ್ಸಿಲಿಯೆವ್  ಅವರ ಸಂದೇಶ, ಈ ಕೆಳಗಿನ ಹಲವು ಪ್ರಶ್ನೆಗಳಿಗೆ ಉತ್ತರದೋಪಾದಿಯಲ್ಲಿದೆ:

ನಮಗೆ ರಂಗಭೂಮಿಯ ಅವಶ್ಯಕತೆ ಇದೆಯೇ?

ರಂಗಭೂಮಿಯಲ್ಲಿ ನಿರಾಶೆಗೊಂಡ ಸಾವಿರಾರು ವೃತ್ತಿಪರರು ಮತ್ತು ಅದರಿಂದ ಬೇಸರಗೊಂಡ  ಮಿಲಿಯಾಂತರ ಜನರು ತಮ್ಮನ್ನು ತಾವೇ ಕೇಳಿಕೊಳ್ಳುತ್ತಿರುವ ಪ್ರಶ್ನೆ ಇದು.

ಅದು ನಮಗೆ ಏಕೆ ಬೇಕು?

ನಗರದ ಚೌಕಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ನಡೆಯುತ್ತಿರುವ ನಿಜ ಬದುಕಿನ ದುರಂತಗಳಿಗೆ ಹೋಲಿಸಿದಾಗ ರಂಗದ ಮೇಲಿನ ದೃಶ್ಯ ಅರ್ಥಹೀನವೆನಿಸುತ್ತದೆ.

ಅದರಿಂದ ನಮಗೇನು?

ರಂಗಮಂದಿರದಲ್ಲಿ ಸುವರ್ಣ ವೇದಿಕೆ ಮತ್ತು ಕೈಸಾಲೆ, ಮಖಮಲ್ಲಿನ ಆರಾಮ ಕುರ್ಚಿಗಳು ವೇದಿಕೆಯ ಕೊಳಕಾದ ಪಾರ್ಶ್ವಗಳು ಸಂಸ್ಕರಣಗೊಂಡ ನಟರ ಶಾರೀರ ಅಥವಾ ಆ ಎಲ್ಲದರ ತಿರುಗು ಮುರುಗು, ಒಂದಿಷ್ಟು ವಿಭಿನ್ನವಾಗಿ ಕಾಣುವಂತಹುದು.  ಒಳಗೆ ಮಣ್ಣು ಮತ್ತು ರಕ್ತಲೇಪಿತ ಕಪ್ಪುಪೆಟ್ಟಿಗೆ, ಆವೇಶಪೂರಿತ ನಗ್ನ ದೇಹಗಳ ಗುಂಪು.

ಅದು ನಮಗೆ ಏನು ಹೇಳಬಲ್ಲುದು?

ಎಲ್ಲವೂ!  ರಂಗಭೂಮಿ  ಎಲ್ಲವನೂ  ಹೇಳಬಲ್ಲುದು.

ಸ್ವರ್ಗದಲ್ಲಿ ದೇವತೆಗಳ ವಾಸ ಹೇಗೆ?  ಭೂಗತ ಗುಹೆಗಳಲ್ಲಿ ಮರೆತ ಬಂಧಿಗಳು ಸೊರಗುತ್ತಿರುವುದು ಹೇಗೆ?  ಆಕಾಂಕ್ಷೆ ಉನ್ನತಿಯ ಕಡೆಗೆ ಕೊಂಡೊಯ್ಯುವುದು ಹೇಗೆ?  ಪ್ರೀತಿಯಿಂದ ನಾಶವಾಗುವುದು ಹೇಗೆ?  ಜಗತ್ತಿನಲ್ಲಿ ಒಳ್ಳೆಯವರನ್ನು ಬಯಸದಿರುವುದು ಹೇಗೆ? ವಂಚನೆ ಪ್ರಾಬಲ್ಯಕ್ಕೆ  ಬರುವುದು ಹೇಗೆ?  ಕಂದಮ್ಮಗಳು ನಿರಾಶ್ರಿತ ಶಿಬಿರಗಳಲ್ಲಿ ಸೊರಗುತ್ತಿರುವಾಗ ಬಹು ಅಂತಸ್ತಿನ ಕಟ್ಟಡಗಳಲ್ಲಿ ಜನ ಹೇಗೆ ವಾಸಿಸುತ್ತಾರೆ?  ಮತ್ತೆ  ಅವರೆಲ್ಲರೂ ಹೇಗೆ ಮರುಭೂಮಿಗೆ ಮರಳಿ ಹೋಗುತ್ತಾರೆ.  ದಿನಕಳೆದಂತೆ ಆಪ್ತರನ್ನು ಒತ್ತಾಯ ಪೂರ್ವಕವಾಗಿ ಹೇಗೆ ಅಗಲಬೇಕಾಗುತ್ತದೆ – ರಂಗಭೂಮಿ ಎಲ್ಲವನ್ನೂ ಹೇಳುತ್ತದೆ.

ರಂಗಭೂಮಿ ಎಂದೂ ಇತ್ತು ಮತ್ತು ಎಂದೆಂದೂ ನಿರಂತರವಾಗಿರುತ್ತದೆ.

ಕಳೆದ 50-70 ವರ್ಷಗಳಿಂದೀಚೆಗೆ ರಂಗಭೂಮಿಯ ಅಗತ್ಯ ವಿಶೇಷವಾಗಿದೆ.  ಯಾಕೆಂದರೆ ಸಾರ್ವಜನಿಕ ಕಲೆಗಳಲ್ಲಿ ನೋಡಿದಾಗ ನಿಮಗೆ ತಕ್ಷಣ ಗೋಚರಿಸುವುದು ರಂಗಭೂಮಿಯೆ.  ಬಾಯಿಂದ ಬಾಯಿಗೆ ಆಡುವ ಮಾತು, ಕಣ್ಣಿಂದ ಕಣ್ಣಿಗೆ ನೋಡುವ ಇಣುಕು ನೋಟ, ಕೈಯಿಂದ ಕೈ, ದೇಹದಿಂದ ದೇಹಕ್ಕೆ ಮಾಡುವ ಸಂಜ್ಞೆ, ಮಧ್ಯವರ್ತಿಯ ಅವಶ್ಯಕತೆಯೇ ಇಲ್ಲದೆ – ಮನುಷ್ಯರ ನಡುವೆ ಪಾರದರ್ಶಕ ಬೆಳಕನ್ನು ಸ್ಥಾಪಿಸುತ್ತದೆ.  ಅದು ದಕ್ಷಿಣಕ್ಕೆ ಅಥವಾ ಉತ್ತರಕ್ಕೆ, ಪಶ್ಚಿಮಕ್ಕೆ ಅಥವಾ  ಪೂರ್ವಕ್ಕಷ್ಟೇ ಸಂಬಂಧಿಸಿದ್ದಲ್ಲ.

ಜಗತ್ತಿನ  ನಾಲ್ಕೂ ಮೂಲೆಗಳಿಂದಲೂ ಪ್ರಕಾಶಿಸುವ ಅದು ಮೂಲತಃ ಸ್ವಯಂಪ್ರಭೆ.  ವಿರೋಧಿಸುವವರಿರಲಿ, ಆಪ್ತರಿರಲಿ, ಯಾರೊಬ್ಬರೂ ತಕ್ಷಣ ಅದನ್ನು ಗುರುತಿಸಬಹುದಾಗಿದೆ.  ಮತ್ತು ಸದಾ ವಿಶಿಷ್ಟವಾಗುಳಿಯುವ ರಂಗಭೂಮಿಯ ಅಗತ್ಯ ನಮಗಿದೆ.  ಹಲವು ನಮೂನೆಯ ರಂಗಭೂಮಿ ನಮಗೆ ಬೇಕು.

ಈಗಲೂ ನಾನು ಯೋಚಿಸುತ್ತೇನೆ.  ಎಲ್ಲಾ ನಮೂನೆಗಳ, ಎಲ್ಲಾ ರೂಪಗಳ ರಂಗಭೂಮಿ ಪೈಕಿ, ಪುರಾತನ ರಂಗಭೂಮಿಗೆ ಬಹು ಬೇಡಿಕೆ ಇದೆ.  ರೂಢಿಗತ ರಂಗಭೂಮಿಯನ್ನು “ನಾಗರೀಕ”’ ರಾಷ್ಟ್ರಗಳ ರಂಗಭೂಮಿ ಅಸ್ವಾಭಾವಿಕವಾಗಿ ವಿರೋಧಿಸಬೇಕಾಗಿಲ್ಲ.  ಜಾತ್ಯಾತೀತ ಸಂಸ್ಕೃತಿ ಎನ್ನುವುದು ಈಗ ಹೆಚ್ಚು ಹೆಚ್ಚು ಶಕ್ತಿಗುಂದುತ್ತಿದೆ.  ಸರಳ ಅಸ್ತಿತ್ವಗಳನ್ನೂ ಮತ್ತು ಒಂದಲ್ಲ  ಒಂದು ದಿನ ಅವುಗಳನ್ನೂ ಸಂಧಿಸುತ್ತೇವೆ ಎನ್ನುವ ನಮ್ಮ ಭರವಸೆಯನ್ನು ಕ್ರಮೇಣ ಸರಿಸಿ ಅದರ ಬದಲಾಗಿ “ಸಾಂಸ್ಕೃತಿಕ ಮಾಹಿತಿ” ಎಂದು ಕರೆಸಿಕೊಳ್ಳುವಂತಹದ್ದೇನೋ ಪುನರ್ಸ್ಥಾಪಿತಗೊಳ್ಳುತ್ತದೆ.

ಆದರೆ ನನಗೀಗ ಸ್ಪಷ್ಟವಾಗಿ ಕಾಣುತ್ತಿದೆ.  ರಂಗಭೂಮಿ ತನ್ನ ಬಾಗಿಲುಗಳನ್ನು ತೆರೆದುಕೊಳ್ಳುತ್ತಿದೆ.  ಸಮಸ್ತರಿಗೂ ಮತ್ತು ಪ್ರತಿಯೊಬ್ಬರಿಗೂ ಅಲ್ಲಿ ಪ್ರವೇಶ ಉಚಿತ.

ಉಪಕರಣಗಳನ್ನು, ಗಣಕಯಂತ್ರಗಳನ್ನು ದೂರತಳ್ಳಿ ರಂಗ ಮಂದಿರಕ್ಕೆ ನಡೆಯಿರಿ.  ಸಾಲಾದ ಆಸನಗಳಲ್ಲಿ, ಕೈಸಾಲೆಯಲ್ಲಿ  ಕುಳಿತುಕೊಳ್ಳಿ.  ಮಾತುಗಳನ್ನು ಆಲಿಸಿ ಮತ್ತು ಜೀವಂತ ಆಕಾರಗಳನ್ನು ನೋಡಿ! – ನಿಮ್ಮೆದುರುಗಿದೆ ರಂಗಭೂಮಿ – ಅಲಕ್ಷ ಮಾಡದಿರಿ.  ಭಾಗಿಯಾಗುವ ಒಂದೇ ಒಂದು ಅವಕಾಶ ತಪ್ಪಿಸಿಕೊಳ್ಳದಿರಿ.  ಪ್ರಾಯಶಃ ವ್ಯರ್ಥ ಮತ್ತು ಒತ್ತಡದ ಬದುಕಿನಲ್ಲಿ ಹಂಚಿಕೊಳ್ಳಲು ಇರುವ ಅತ್ಯಮೂಲ್ಯ ಅವಕಾಶ ಇದು.

ನಮಗೆ ಎಲ್ಲಾ ಬಗೆಯ ರಂಗಭೂಮಿಯ ಅವಶ್ಯಕತೆ ಇದೆ.  

ಖಚಿತವಾಗಿ ಯಾರಿಗೂ ಬೇಡವಾದ ಒಂದೇ ಒಂದು ರಂಗಭೂಮಿ ಎಂದರೆ – ನನ್ನ ಅರ್ಥದಲ್ಲಿ ರಾಜಕೀಯದ ರಂಗಾಟ.  ರಾಜಕೀಯದ “ಇಲಿಬೋನು”ಗಳ ರಂಗಭೂಮಿ, ಪುಡಾರಿಗಳ ವ್ಯರ್ಥ ರಂಗಭೂಮಿ.  ಭೀತಿ ಹುಟ್ಟಿಸುವ ದಿನನಿತ್ಯದ  ವೈಯಕ್ತಿಕ ಅಥವಾ ಸಾಮೂಹಿಕ ರಂಗಭೂಮಿ ಖಂಡಿತ ನಮಗೆ ಬೇಡ.  ಬೀದಿಗಳಲ್ಲಿ ಚೌಕಗಳಲ್ಲಿ ಶವಗಳ ಮತ್ತು ರಕ್ತಸಿಕ್ತ ದೃಶ್ಯಗಳ ರಂಗಭೂಮಿ ನಮಗೆ ಬೇಡ.  ರಾಜಧಾನಿಯಲ್ಲಾಗಲಿ, ನಾಡಿನ ಭಾಗಗಳಲ್ಲಾಗಲಿ, ಧರ್ಮನಿಷ್ಠರ ಅಥವ ಜನಾಂಗೀಯ ಗುಂಪುಗಳ ನಡುವಿನ ಸಂಘರ್ಷದ ಪೊಳ್ಳು ರಂಗಭೂಮಿಯೂ ಬೇಡ.  

ಪ್ರತಿವರ್ಷ ಈ ಸಂದೇಶ ಅಂತರ್ಜಾಲದಲ್ಲಿ ಪ್ರಕಟವಾದ ಕೂಡಲೇ ಅದನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದ ಹಲವು ರಂಗತಂಡಗಳಿಗೆ, ಮಾಧ್ಯಮದವರಿಗೆ ರಂಗಾಸಕ್ತರಿಗೆ ಕಳಿಸಿಕೊಡುವ ಪರಿಪಾಠವನ್ನು ಕಳೆದ 2 ದಶಕಗಳಿಂದ ಮೈಸೂರಿನ ರಂಗಕರ್ಮಿ ಶ್ರೀಕಂಠ ಗುಂಡಪ್ಪ ಅವರು ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದಾರೆ.  (ಮೇಲಿರುವ ಅನಾತೊಲಿ ವಾಸ್ಸಿಲಿಯೆವ್ ಅವರ ಸಂದೇಶದ  ಕನ್ನಡ ರೂಪ ಕೂಡಾ ಅವರದ್ದೇ.)

ಇದುವರೆಗಿನ ಸಂದೇಶಗಳನ್ನು ಸಂಗ್ರಹಿಸಿ ‘ರಂಗ ಸಂದೇಶ’ ಎಂಬ ಪುಸ್ತಕವೊಂದನ್ನು ಅವರು ಹೊರತಂದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅದನ್ನು ಪ್ರಕಟಿಸಿದೆ. ವಿಶ್ವ ರಂಗಭೂಮಿಯ ದಿನ ರಾಜ್ಯದ ಬಹುತೇಕ ನಾಟಕ ತಂಡಗಳು ನಾಟಕ ಪ್ರದರ್ಶನ, ಉತ್ಸವ, ಸಂಕಿರಣ ಮುಂತಾದ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅಂದು ವಿಶ್ವರಂಗಭೂಮಿಯ ಸಂದೇಶವನ್ನು ಓದಲಾಗುತ್ತದೆ.

2012 ವರ್ಷದ ವಿಶ್ವರಂಗಭೂಮಿ ದಿನಕ್ಕೆ ಪ್ರಖ್ಯಾತ ರಂಗತಜ್ಞ ಜಾನ್ ಮಾಲ್ಕೋವಿಕ್ ಅವರು ತಾವು ಭಾಷಣ ನನ್ನನ್ನು ಒಂದಷ್ಟು ಚಿಂತನೆಗೆ ಹಚ್ಚಿತು. ಅದು ಹೀಗಿದೆ:

“And may the best of you - for it will only be the best of you, and even then only in the rarest and briefest moments - succeed in framing that most basic of questions, "how do we live?"

ಅದರ ಅರ್ಥ ನನಗೆ ಹೀಗೆ ಗೋಚರಿಸಿತು: “ನಾವು ನಮಗೆ ಸಾಧ್ಯವಿರುವ ಉತ್ಕೃಷ್ಟತೆ ಎಂಬುದನ್ನು ಕೆಲವೊಂದೇ ಕ್ಷಣಗಳಲ್ಲಿ, ತುಂಬಾ ತುಂಬಾ ಅಪರೂಪವಾಗಿಯೋ ಎಂಬಂತೆ ಹೊರತಂದಿದ್ದೇ ಆದರೂ ಸಹಾ, ಆ ಕ್ರಿಯೆ “ನಾವು ಹೇಗೆ ಬದುಕುತ್ತಿದ್ದೇವೆ” ಎಂಬ ಮಹತ್ವಪೂರ್ಣ ಪ್ರಶ್ನೆಯನ್ನು ಸೃಜಿಸುವಲ್ಲಿ ಪರಿಣಾಮಕಾರಿಯಾದ  ಪಾತ್ರವನ್ನು ನಿರ್ವಹಿಸುತ್ತದೆಯೇನೊ!”   

ಇದರ ಸಾರಾಂಶ “ನಮಗೆ ಉತ್ಕೃಷ್ಟ ಎಂಬುದನ್ನು ಸಾಧಿಸಲಾಗುತ್ತದೋ ಇಲ್ಲವೋ ಬೇರೆಯ ಮಾತು. ಆದರೆ ಆ ಹಸಿವನ್ನು ಮಾತ್ರ ನಿರಂತರ ಪೋಷಿಸುತ್ತಿರಬೇಕು” ಎಂದಿರಬಹುದು ಎನಿಸಿತು.  

ನಮ್ಮ ರಂಗಭೂಮಿಯಲ್ಲಿ, ಜಾನಪದದಲ್ಲಿ, ಯಕ್ಷಗಾನ, ನಾಟ್ಯದಂತಹ ಅಪೂರ್ವ ಕಲೆಗಳಲ್ಲಿ ನಮ್ಮ ಸಂಸ್ಕೃತಿಯ ಆಳ ನಿರಂತರ ಪ್ರವಹಿನಿಯಾಗಿ ಸಹಸ್ರಾರು ವರ್ಷಗಳಿಂದ ಹರಿದು ಸಾಗುತ್ತಿದೆ.  ಮುಂದೂ ಹಲವು ವಿಭಿನ್ನ ನೆಲೆಗಳಲ್ಲಿ, ವಿಧ ವಿಧರೂಪುಗಳಲ್ಲಿ ಇದು ಮುಂದುವರೆಯುತ್ತಲೇ ಇರುತ್ತದೆ.  ಒಂದು ರೀತಿಯಲ್ಲಿ  "ಈ ಜಗವೆಲ್ಲಾ ಒಂದು ನಾಟಕದಂತೆ” ಎಂಬ ವಿಚಾರವೂ ಮನನೀಯವೆ!  ಈ ಕಲೆಯನ್ನು ಉಳಿಸಿ, ಬೆಳೆಸಿ, ಪೋಷಿಸಿ ಮುಂದೆ ಕೊಂಡೊಯ್ದ ಹಿಂದಿನ ತಲೆಮಾರುಗಳು, ಈಗಿನ ಕಲಾವಿದರು ಮತ್ತು ಮುಂದೆಯೂ ಇದನ್ನು ಮುಂದುವರೆಸುವ ಆದರ್ಶ ಹೊಂದಿರುವ ರಂಗಕರ್ಮಿಗಳಿಗೆ ನಮಿಸುತ್ತಾ ಈ ‘ವಿಶ್ವರಂಗಭೂಮಿ ದಿನದಂದು’ ರಂಗಭೂಮಿಗಾಗಿ  ಶ್ರಮಿಸುತ್ತಿರುವ ಎಲ್ಲರಿಗೂ ಶುಭ ಹಾರೈಕೆಗಳನ್ನು ಹೇಳೋಣ.

On World Theatre Day 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ