ಎಂ.ಮಹಾದೇವಪ್ಪ
ಕೃಷಿ ವಿಜ್ಞಾನಿ ಎಂ.ಮಹಾದೇವಪ್ಪ ನಮನ 🌷🙏🌷
ಭಾರತದಲ್ಲಿ ಹೈಬ್ರಿಡ್ ಭತ್ತದ ಯೋಜನೆಯ ಪಿತಾಮಹ, ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಎಂ.ಮಹಾದೇವಪ್ಪ ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.
ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ್ದ ಮಹಾದೇವಪ್ಪ ಅವರು 1937ರ ಆಗಸ್ಟ್ 4ರಂದು
ಚಾಮರಾಜನಗರ ಜಿಲ್ಲೆಯ ಮಾದಾಪುರದಲ್ಲಿ ಜನಿಸಿದರು. ತಂದೆ ಮಾದಪ್ಪ. ತಾಯಿ ಪುಟ್ಟಬಸಮ್ಮ. ಸ್ಥಳೀಯ ಶಾಲೆಯಲ್ಲಿಯೇ ಕಲಿತ ಇವರು ನಂತರ ಮೈಸೂರು, ಕೊಯಮತ್ತೂರಿನಲ್ಲಿ ಉನ್ನತ ವ್ಯಾಸಂಗ ನಡೆಸಿದರು.
ಮಹಾದೇವಪ್ಪನವರು ಮೈಸೂರಿನ ಸಿ.ಎಫ್.ಟಿ.ಆರ್.ಐ ನಲ್ಲಿ ಹಿರಿಯ ಸಂಶೋಧಕರಾಗಿ ಸೇವೆ ಸಲ್ಲಿಸಿ, ಬೆಂಗಳೂರಿನ ಕೃಷಿ ವಿವಿಯಲ್ಲಿ ಜೋಳ ಅಭಿವೃದ್ಧಿ ತಜ್ಞರಾಗಿ (ಬ್ರೀಡರ್) ಹಾಗೂ ಮಂಡ್ಯದ ವಿ.ಸಿ ಫಾರ್ಮನಲ್ಲಿ ಭತ್ತ ಸಸ್ಯ ವಿಜ್ಞಾನಿಯಾಗೆ ಸೇವೆ ಸಲ್ಲಿಸಿದರು.
ಪಿಲಿಪೈನ್ಸ್ ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನೆ (1977-1980) ನಡೆಸಿದ ಮಹಾದೇವಪ್ಪನವರು ಮತ್ತೆ ಕರ್ನಾಟಕಕ್ಕೆ ಬಂದು ಹಲವು ಕಡೆ ಸೇವೆ ಸಲ್ಲಿಸಿ 1994 -2000 ಅವಧಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲತದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
ಮಹಾದೇವಪ್ಪನವರು ಫಿಲಿಪೈನ್ಸ್ ಅಲ್ಲದೆ ಜಪಾನ್, ತೈವಾನ್, ಥೈಲ್ಯಾಂಡ್, ಮಲೇಷಿಯಾ, ಚೈನಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕಾ, ಕ್ಯೂಬಾ, ರಷ್ಯಾ, ಕೀನ್ಯಾ ದೇಶಗಳಲ್ಲಿ ಸಂಚರಿಸಿ ತಮ್ಮ ಸಂಶೋಧನೆ ಹಾಗೂ ಕಾರ್ಯವ್ಯಾಪ್ತಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದ್ದರು.
ಡಾ. ಎಂ. ಮಹಾದೇವಪ್ಪನವರು
ಕೆಆರ್‌ಎಚ್-1 ಹಾಗೂ 2 ಎನ್ನುವ ಹೆಸರಿನ ಭತ್ತದ ತಳಿಗಳನ್ನು ರೂಪಿಸಲು ರಾಷ್ಟ್ರಮಟ್ಟದಲ್ಲಿ ಮುಂದಾಳತ್ವ ವಹಿಸಿದವರು. ಭತ್ತದ ಬೆಳೆಯಲ್ಲಿ ಕಟಾವು ಹಾಗೂ ಕಟಾವಿನ ನಂತರ ಆಗುವ ನಷ್ಟವನ್ನು ತಗ್ಗಿಸಲು ಅವರು ವಿಶಿಷ್ಟವಾದ ತಂತ್ರಜ್ಞಾನ ರೂಪಿಸಿದರು. ನೀರಿನ ಕೊರತೆ ನಡುವೆಯೂ ಅತ್ಯುತ್ತಮವಾಗಿ ಭತ್ತ ಬೆಳೆಯುವ ಮಾರ್ಗೋಪಾಯಗಳನ್ನು ಹಾಕಿಕೊಟ್ಟರು.
ಡಾ. ಮಹಾದೇವಪ್ಪನವರಿಗೆ ಪದ್ಮಶ್ರೀ, ಪದ್ಮಭೂಷಣ, ಹೂಕರ್ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಭಾರತ ರತ್ನ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಜೀವಮಾನ ಸಾಧನೆಗಾಗಿ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಕೃಷಿಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ ಮಹಾನ್ ಚೇತನ ಡಾ. ಎಂ. ಮಹಾದೇವಪ್ಪ ಅವರ ನಿಧನದ ನಷ್ಟ ಸುಲಭವಾಗಿ ತುಂಬುವಂತದಲ್ಲ. ಈ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮನ.
Respects to departed soul great agricultural scientist Dr. Mahadevappa
ಕಾಮೆಂಟ್‌ಗಳು