ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾಮಂತ್ರಗಳು


 ಎರಡು ಮಹಾಮಂತ್ರಗಳು 


‘ಮನನಾತ್ ತ್ರಾಯತೆ ಇತಿ ಮಂತ್ರಃ’ - ಮನನ ಮಾಡಿದರೆ ನಮ್ಮೆಲ್ಲರನ್ನೂ ಕಾಯುತ್ತದಲ್ಲ  ಅದೇ ಮಂತ್ರ.  ನಮ್ಮ ಭಾರತೀಯ ಪರಂಪರೆಯ  ಶ್ರೇಷ್ಠ ಮಂತ್ರಗಳಲ್ಲಿ  ಗಾಯತ್ರಿ ಮಂತ್ರ ಮತ್ತು ಮೃತ್ಯುಂಜಯ ಮಂತ್ರ ಮಹತ್ವವಾದವು.  ಇದನ್ನು ನಮ್ಮ ದೈನಂದಿನ ಬದುಕಿನಲ್ಲಿ ತಂದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.

ಗಾಯತ್ರೀ ಮಂತ್ರ:  

ಗಾಯತ್ರೀ ಮಂತ್ರದ ಉದ್ಧೇಶ ನಮ್ಮ ನಮ್ಮ ಮನಸ್ಸು ಮತ್ತು ಬುದ್ಧಿಗಳನ್ನು ಉತ್ತಮತೆಗೆ ಪ್ರಚೋದಿಸಿಕೊಳ್ಳುವುದಾಗಿದೆ.

ಓಂ ಭೂರ್ಭುವಸ್ಸುವಃ,
ಓಂ ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ,
ಧಿಯೋ ಯೋ ನಃ ಪ್ರಚೋದಯಾತ್

ಈ ಮಂತ್ರದ ಪ್ರಾಥಮಿಕ ಅರ್ಥ ಹೀಗಿದೆ:

“ನಾವು ಭೂಮಿ, ಆಕಾಶ, ಅಂತರಿಕ್ಷಗಳೆಂಬ ನೆಲೆಗಳನ್ನೂ,  ಆಧ್ಯಾತ್ಮಿಕ ಸಮತೋಲನದ ನೆಲೆಯನ್ನೂ, ಮಾನವನ ಅಧ್ಯಾತ್ಮ  ಜ್ಞಾನದ ನೆಲೆಯನ್ನೂ , ಸಕಲ ಬಂಧನಗಳಿಂದ ಮುಕ್ತವಾದ ಭಾವದ ನೆಲೆಯನ್ನೂ, ಪರಿಪೂರ್ಣವಾದ ಸತ್ಯವೆಂಬ ನೆಲೆಯನ್ನೂ ಆವಾಹಿಸುತ್ತಿದ್ದೇವೆ.  ಎಲ್ಲಾ ದಿವ್ಯತೆಗಳಲ್ಲಿಯೂ ಶ್ರೇಷ್ಠವಾದ “ಓ, ಅಧ್ಯಾತ್ಮದ ಬೆಳಕೆ, ನಾವು ನಿನ್ನನ್ನು ಧ್ಯಾನಿಸುತ್ತಿದ್ದೇವೆ.  ನಮ್ಮ ಬುದ್ಧಿ ಮನಸ್ಸುಗಳನ್ನು ಪ್ರಕಾಶಗೊಳಿಸಿ ಉತ್ತಮತೆಗೆ ದಾರಿ ತೋರಿಸು”.    

ಮೃತ್ಯುಂಜಯ ಮಂತ್ರ

ಮೃತ್ಯು ಎಂಬುದು ಸಾಮಾನ್ಯ ನಿಟ್ಟಿನಲ್ಲಿ ನಮಗೆ ಸಾವಿನ ಭಯದ ಸೂಚಕವಾಗಿ ಕಾಣುವುದಾದರೂ, ಪ್ರತೀಕ್ಷಣದಲ್ಲಿ ಆರೋಗ್ಯದ ವಿಚಾರದಲ್ಲಿ, ಬದುಕೆಂಬ ಸಮಸ್ಥಿತಿಯನ್ನು ಕಾಪಾಡಿಕೊಳ್ಳುವಲ್ಲಿ ನಿರಂತರವಾಗಿ ಒಂದಿಲ್ಲೊಂದು ಭಯವನ್ನೇ ಬದುಕನ್ನಾಗಿ ಮಾಡಿಕೊಂಡು ಕಾಲ ತಳ್ಳುತ್ತೇವೆ.  ಈ ಭಯದಿಂದ ಮುಕ್ತತೆ ಹೊಂದಿ ಅರ್ಥಪೂರ್ಣ ಬದುಕನ್ನು ಬಾಳುವುದೇ ಮೃತ್ಯುಂಜಯ ಮಂತ್ರದ ಆಶಯ:

ಓಂ ತ್ರ್ಯಯಂಬಂಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ
ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮೋಕ್ಷೀಯ ಅಮೃತಾತ್

ಕುಂಬಳಕಾಯಿಯ ಬಳ್ಳಿ ಅತೀ ಸಣ್ಣಗಿರುತ್ತದೆ.  ಕುಂಬಳದಂತಹ ಬೃಹತ್ ಸೃಷ್ಟಿ ಈ ಬಳ್ಳಿಯನ್ನು ತಾಗಿಕೊಂಡಿರುತ್ತವಷ್ಟೇ.  ಆತ್ಮವೆಂಬುವ ನಾವೂ ಅಷ್ಟೇ,  ಈ ದೇಹವೆಂಬ ಬಳ್ಳಿಗೆ ಅಂಟಿಕೊಂಡಿದ್ದೇವೆ ಅಷ್ಟೇ.  ಇದನ್ನು ಅರ್ಥ ಮಾಡಿಕೊಂಡಾಗ ನಮ್ಮ ಬದುಕು ಬಂಧನವಲ್ಲ.  ಆ ಅರ್ಥೈಕೆ ನಮ್ಮನ್ನು ಮೃತ್ಯುವೆಂಬ ಎಲ್ಲಾ ತರಹದ ಭಯಗಳಿಂದ  ಹೊರಕ್ಕೆ ತಂದು ಅಮೃತಕ್ಕೆ ಸಮಾನವಾದ ಮೋಕ್ಷವೆಂಬ ಬಿಡುಗಡೆಯ ಸ್ವಾತಂತ್ರ್ಯವನ್ನು ನಿರಂತರವಾಗಿ  ಅನುಭಾವಿಸುವುದಕ್ಕೆ ಸಹಾಯ ಮಾಡುತ್ತದೆ.  ಅಂತಹ ಅಮೃತತ್ವವನ್ನು ನಮಗೆ ದಯಪಾಲಿಸು ಎಂದು,  ಕೃಪೆಯೆಂಬ ಸುಗಂಧ ವೃಷ್ಟಿಯನ್ನು ನಿರಂತರ ಹರಿಸುವವನಾದ ಮೂರುಕಣ್ಣುಳ್ಳ ಪರಮೇಶ್ವರನನ್ನು ಪ್ರಾರ್ಥಿಸುತ್ತೇವೆ.

ನಮ್ಮನ್ನು ಎಲ್ಲ ರೀತಿಯ ಆರೋಗ್ಯ ಭಯ, ಸಾವಿನ ಭಯವಲ್ಲದೆ  ವೈಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಇತ್ಯಾದಿ ಎಲ್ಲ ಭಯಗಳಿಂದ ಮುಕ್ತಿಗೊಳಿಸಲು ಆ ಪರಮೇಶ್ವರನನ್ನು ಮೃತ್ಯುಂಜಯ ಮಂತ್ರದ ಮೂಲಕ ಪ್ರಾರ್ಥಿಸೋಣ.  ಜೊತೆಗೆ ನಮ್ಮ ದೇಹ ಮನಸ್ಸು ಬುದ್ಧಿಗಳನ್ನು ಉತ್ತಮತೆಗಾಗಿ ಪ್ರಚೋದಿಸಿ ಈ ಬದುಕನ್ನು ಸುಂದರಗೊಳಿಸಿಕೊಳ್ಳುವುದಕ್ಕಾಗಿ ಗಾಯತ್ರೀ ಮಂತ್ರವನ್ನು ಮನನ ಮಾಡೋಣ.  ಈ ಪಾರ್ಥನೆಗಳು ನಮಗಾಗಿ ಮಾತ್ರವಲ್ಲ ನಮ್ಮ ಬದುಕಿನ ಭಾಗವಾಗಿರುವ ಎಲ್ಲರಿಗಾಗಿ.  

ಇದು ಭಾರತೀಯ ಪಾರಂಪರಿಕ ಸಂಸ್ಕೃತಿ ನಮಗೆ ದಯಪಾಲಿಸಿರುವ ಮಹಾನ್ ವರದಾನ.  ಈ ಮಹಾನ್ ಸಾಂಸ್ಕೃತಿಕ ಪರಂಪರೆಗೆ ಭಕ್ತಿಯಿಂದ ನಮಿಸೋಣ.  ಆ ಭಕ್ತಿ ನಮ್ಮನ್ನು ನಿರಂತರವಾಗಿ ಕಾಯುತ್ತದೆ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ