ಆನಂದಿ ಜೋಶಿ
ಆನಂದಿ ಗೋಪಾಲ್ ಜೋಶಿ
ಆನಂದಿಬಾಯಿ ಜೋಶಿ, ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕಲಿಯಲು ಅವಕಾಶಗಳಿಲ್ಲದಿದ್ದ ಕಾಲದಲ್ಲಿ, ವಿದೇಶಕ್ಕೆ ತೆರಳಿ ಅಧ್ಯಯನ ಮಾಡಿ, ಭಾರತದ ಮೊಟ್ಟ ಮೊದಲ ಅಲೋಪಥಿ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.
ಆನಂದಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‍ನಲ್ಲಿ 1865ರ ಮಾರ್ಚ್ 31ರಂದು ಜನಿಸಿದರು. ಇವರ ಹುಟ್ಟು ಹೆಸರು ಯಮುನಾ. ಕಲ್ಯಾಣ್‍ನಲ್ಲಿ ಭೂಮಾಲೀಕರಾಗಿದ್ದ ಈಕೆಯ ಪೋಷಕರು, ಆರ್ಥಿಕವಾಗಿ ನಷ್ಟಕ್ಕೆ ಗುರಿಯಾಗಿದ್ದರು. ಯಮುನಾ 9ನೇ ವಯಸ್ಸಿಗೆ ಗೋಪಾಲ್ ರಾವ್ ಜೋಶಿ ಜತೆ ಹಸೆಮಣೆ ಏರಿದರು. ರಾವ್ ವಯಸ್ಸಿನಲ್ಲಿ ಈಕೆಗಿಂತ 20 ವರ್ಷ ಹಿರಿಯವರಾಗಿದ್ದರು. ಮದುವೆ ಬಳಿಕ ಪತಿ, ಯಮುನಾ ಹೆಸರನ್ನು ಆನಂದಿ ಎಂದು ಬದಲಾಯಿಸಿದ್ದರು.
ಗೋಪಾಲ್ ರಾವ್ ಕಲ್ಯಾಣ್ ಅಂಚೆ ಕಚೇರಿಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮುಂದೆ ಅವರು ಆಲಿಬಾಗ್ ಎಂಬಲ್ಲಿ, ನಂತರ ಕೊಲ್ಕತ್ತಾದಲ್ಲಿ ಕಾರ್ಯನಿರ್ವಹಿಸಿದರು.
ಆನಂದಿಬಾಯಿ 14ನೇ ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಸಮರ್ಪಕ ಚಿಕಿತ್ಸೆಯ ಕೊರತೆಯಿಂದಾಗಿ ಮಗು 10 ದಿನಗಳ ಕಾಲ ಮಾತ್ರ ಬದುಕಿತ್ತು.ಈ ಘಟನೆಯೇ ಆನಂದಿಬಾಯಿ ಜೀವನದ ಪ್ರಮುಖ ತಿರುವಿಗೆ ಕಾರಣವಾಯಿತು. ತಮ್ಮ ಪತ್ನಿ ಓದಬೇಕೆಂದು ಪತಿ ಗೋಪಾಲರಾವ್ ಜೋಷಿ ತಾವಿದ್ದ ಊರುಗಳಲ್ಲಿನ ಮಿಷಿನರಿ ಶಾಲೆಗಳಲ್ಲಿ ಆನಂದಿಬಾಯಿಗೆ ಓದಲು ಅವಕಾಶ ಅರಸಿ ಸಫಲರಾಗದೆ, ಕಡೆಗೆ ಕೊಲ್ಕತ್ತಾಗೆ ಬಂದರು. ಅಲ್ಲಿ ಆನಂದಿಬಾಯಿ ಇಂಗ್ಲಿಷ್ ಮತ್ತು ಸಂಸ್ಕೃತವನ್ನು ಕಲಿತರು.
1880ರಲ್ಲಿ ವೈದ್ಯ ಶಿಕ್ಷಣಕ್ಕಾಗಿ ಪತ್ನಿಗೆ ಗೋಪಾಲ್ ರಾವ್ ಪ್ರೋತ್ಸಾಹ ನೀಡಿ ಅಮೆರಿಕದಲ್ಲಿ ಹಲವರೊಂದಿಗೆ ಸಂಪರ್ಕವನ್ನೂ ಮಾಡಿದರು.
ತನ್ನ ಮುಂದಿನ ಗುರಿಯನ್ನು ಕಂಡುಕೊಂಡ ಆನಂದಿ ವೈದ್ಯ ಶಿಕ್ಷಣ ಪಡೆಯಲು 1883ರಲ್ಲಿ ಅಮೆರಿಕಕ್ಕೆ ತೆರಳಿದರು. ಅಮೆರಿಕದ ನೆಲದಲ್ಲಿ 2 ವರ್ಷಗಳ ವಿದ್ಯಾಭ್ಯಾಸ (ಡಿಪ್ಲೊಮಾ ಮೆಡಿಸಿನ್ ತರಬೇತಿ) ಪಡೆದ ಭಾರತದ ಪ್ರಥಮ ಮಹಿಳೆಯಾದರು.
ಪದವಿ ಪಡೆದು 1886ರಲ್ಲಿ ಭಾರತಕ್ಕೆ ಮರಳಿದ ಆನಂದಿ ಕೊಲ್ಲಾಪುರದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳ ವಿಭಾಗದ ಮುಖ್ಯಸ್ಥೆಯಾಗಿ ವೃತ್ತಿ ಪ್ರಾರಂಭಿಸಿದ್ದರು. ವೃತ್ತಿ ಆರಂಭಿಸಿದ ಒಂದೇ ವರ್ಷದಲ್ಲಿ ಕ್ಷಯರೋಗಕ್ಕೆ ತುತ್ತಾಗಿ 22ನೇ ವಯಸ್ಸಿನಲ್ಲಿ ಆನಂದಿಬಾಯಿ 1887ರಲ್ಲಿ ಸಾವನ್ನಪ್ಪಿದ್ದರು.
On the birth anniversary of first female physician of India Anandibai Gopalarao Joshi
ಕಾಮೆಂಟ್‌ಗಳು