ಸರ್ವಮಂಗಳ ಶಂಕರ್
ಡಾ. ಸರ್ವಮಂಗಳ ಶಂಕರ ಅವರು ಸಂಗೀತ ಕ್ಷೇತ್ರದ ಮಹತ್ಸಾಧಕರಾಗಿ ಸಂಗೀತ ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನ ನಿರ್ವಹಿಸಿದವರು.
ಸರ್ವಮಂಗಳ ಶಂಕರ ಅವರು 1954ರ ಮಾರ್ಚ್ 30ರಂದು ಜನಿಸಿದರು. ಇವರು ಮೂಲತಃ ಶ್ರೀರಂಗಪಟ್ಟಣದವರು. ತಂದೆ ಎಸ್.ಸಿ. ರಾಜಶೇಖರ. ತಾಯಿ ಪಾರ್ವತಮ್ಮ. ಬೆಂಗಳೂರು ವಿ.ವಿ.ಯಿಂದ ಎಂ.ಎ.(ಸಂಗೀತ) ಪೂರ್ಣಗೊಳಿಸಿ ಎಂ.ಫಿಲ್ ಪದವಿಗಾಗಿ 'ಸಂಗೀತ ಕ್ಷೇತ್ರಕ್ಕೆ ವಚನಕಾರರ ಕೊಡುಗೆ’ ಮಹಾ ಪ್ರಬಂಧ ಮಂಡಿಸಿದರಲ್ಲದೆ, ‘ಸ್ವರ ವಚನಗಳು : ಒಂದು ಸಂಗೀತಾತ್ಮಕ ಅಧ್ಯಯನ’ ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಗಳಿಸಿದರು.
ಸರ್ವಮಂಗಳ ಶಂಕರ ಅವರು ಬೆಂಗಳೂರು ಮಹಾರಾಣಿ ಕಲಾ ಕಾಲೇಜಿನಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸಿದರು
ಸರ್ವಮಂಗಳ ಶಂಕರ ಅವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಕಚೇರಿಗಳಲ್ಲಿ ಶಾಸ್ತ್ರೀಯ ಸಂಗೀತ, ವಚನ ಸಂಗೀತ, ಭಕ್ತಿ ಸಂಗೀತ, ಸುಗಮ ಸಂಗೀತದ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಆಕಾಶವಾಣಿ ‘ಬಿ ಹೈ’ ಕಲಾವಿದೆ. ಪತಿ ಶಂಕರ್ ಪಟೇಲರು ಸ್ಥಾಪಿಸಿರುವ ‘ರಮ್ಯ ಸಂಸ್ಥೆ’ಯ ಸಾಂಸ್ಕೃತಿಕ ಕೇಂದ್ರದ ಮುಖ್ಯಸ್ಥರಾಗಿದ್ದು, ಭಾರತವಲ್ಲದೆ, ಇಂಗ್ಲೆಂಡಿನ ಬರ್ಮಿಂಗ್ ಹ್ಯಾಂ, ಲೀಡ್ಸ್, ನ್ಯೂ ಕಾಸೆಲ್ಸ್, ಆಕ್ಸ್‌ಫರ್ಡ್, ವೇಕ್ ಫೀಲ್ಡ್ ಇತರೆಡೆ ಗಾಯನ ಕಚೇರಿ, ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.
ಡಾ. ಸರ್ವಮಂಗಳ ಶಂಕರ ಅವರಿಗೆ ನಿಡುಮಾಮಿಡಿ ಕ್ಷೇತ್ರದಿಂದ ‘ಗಾನಗಂಗಾ’, ಹೊನ್ನಪ್ಪ ಶಾಂತಿ ಪ್ರತಿಷ್ಠಾನದಿಂದ ‘ಗಾನ ಸರಸ್ವತಿ’, ಸುತ್ತೂರು ಸಂಸ್ಥಾನ ಮಠದ ‘ಕದಳಿಶ್ರೀ’, ಬಸವ ವೇದಿಕೆಯ 'ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಅಲ್ಲದೆ ಆದಿಚುಂಚನಗಿರಿ ಮಠ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಶ್ರೀ ಸಿದ್ಧಗಂಗಾ ಕ್ಷೇತ್ರ, ಸ್ನೇಹ ಟ್ರಸ್ಟ್, ಶ್ರೀ ಉಮಾದೇವಿ ಸ್ತ್ರೀ ಸಮಾಜ, ಕನ್ನಡ ಸಾಹಿತ್ಯ ಪರಿಷತ್ತು-ಶಿವಮೊಗ್ಗ, ಕುವೆಂಪು ಮುಂತಾದ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಗಳು ಸಂದಿವೆ.
ಡಾ. ಸರ್ವಮಂಗಳ ಶಂಕರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Dr. Sarvamangala Shankar 🌷🙏🌷
ಕಾಮೆಂಟ್‌ಗಳು