ಹೆಡ್ಗೆವಾರ್
ಕೇಶವ ಬಲಿರಾಂ ಹೆಡ್ಗೆವಾರ್
ಕೇಶವ ಬಲಿರಾಂ ಹೆಡ್ಗೆವಾರ್ ರಾಷ್ಟ್ರಭಕ್ತರಾಗಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾಗಿ ಸ್ಮರಣೀಯರಾಗಿದ್ದಾರೆ.
ಕೇಶವ ಬಲಿರಾಂ ಹೆಡ್ಗೆವಾರ್ 1889ರ ಏಪ್ರಿಲ್ 1ರಂದು ಜನಿಸಿದರು. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿನ ಬೋಧನ್ ಎಂಬುದು ಅವರ ಹುಟ್ಟೂರು. ಸ್ವಾಮಿ ವಿವೇಕಾನಂದರು, ಅರವಿಂದರು, ವಿನಾಯಕ್ ದಾಮೋದರ್ ಸಾವರ್ಕರ್ ಅವರ ಬೋಧನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ಆದರ್ಶಗಳಾಗಬೇಕು ಎಂದು ಅವರು ಕನಸು ಕಂಡವರು.
ಹೆಡ್ಗೆವಾರ್ ಕಲ್ಕತ್ತೆಯಲ್ಲಿ ವೈದ್ಯಕೀಯ ಪದವಿ ಪಡೆದ ಡಾಕ್ಟರರು. ಪದವಿ ಪಡೆದ ನಂತರದಲ್ಲಿ ಸ್ವಾತಂತ್ರ ಚಳುವಳಿಗಳಲ್ಲಿ ಕ್ರಾಂತಿಕಾರಿ ನಿಲುವುಗಳನ್ನು ತಳೆದಿದ್ದ ಅನುಶೀಲನ ಸಮಿತಿ, ಜುಗಂತರ್ ಮುಂತಾದ ಸಂಘಟನೆಗಳ ಆಕರ್ಷಣೆಗೆ ಹೆಡ್ಗೆವಾರ್ ಸೆಳೆಯಲ್ಪಟ್ಟರು. ರಾಮಪ್ರಸಾದ್ ಬಿಸ್ಮಿಲ್ಲಾರಂತಹ ಕ್ರಾಂತಿಕಾರಿಗಳ ಸಂಪರ್ಕ ಅವರಿಗಿತ್ತು. 1921ರಲ್ಲಿ ಒಂದು ವರ್ಷ ಮತ್ತು 1930ರಲ್ಲಿ ಸುಮಾರು 9 ತಿಂಗಳುಗಳ ಕಾಲ ಹೆಡ್ಗೆವಾರ್ ಅವರನ್ನು ಬ್ರಿಟಿಷ್ ಸರ್ಕಾರ ಬಂಧನದಲ್ಲಿರಿಸಿತ್ತು.
ಕ್ರಾಂತಿಕಾರಿ ಹೋರಾಟಗಾರರ ಸಂಪರ್ಕದಲ್ಲಿದ್ದಾಗ್ಯೂ ಅವರು ಸುದೀರ್ಘವಾಗಿ ಹೊಸ ದೃಷ್ಟಿಯಿಂದ ಯೋಚಿಸಲಾರಂಭಿಸಿದರು. ಕ್ರಾಂತಿಕಾರಿಗಳಲ್ಲಿ ಅಚಲ ನಿಷ್ಠೆ ಇದೆ ಎಂಬುದೇನೋ ನಿಜ. ಹಾಗೆಂದ ಮಾತ್ರಕ್ಕೆ ಅಷ್ಟು ಮಾತ್ರದಿಂದಲೇ ಮಿಲಿಟರಿ ಶಕ್ತಿಯನ್ನು ಹೊಂದಿರುವ ಒಂದು ಬೃಹತ್ ವ್ಯವಸ್ಥೆಯ ವಿರುದ್ಧ ಹೋರಾಡುವುದಕ್ಕೆ ಸಾಧ್ಯವಿಲ್ಲ ಎಂಬ ಅರಿವು ಅವರಲ್ಲಿ ಸ್ಪಷ್ಟವಾಗತೊಡಗಿತು. ಹೀಗಾಗಿ ಅವರು ಕ್ರಾಂತಿಕಾರಿ ಮಾರ್ಗಗಳಲ್ಲಿದ್ದ ಸೀಮಿತತೆಯ ಕುರಿತು ನಿರಾಶರಾಗಿ ನಾಗಪುರಕ್ಕೆ ಹಿಂದಿರುಗಿದರು. ಆರ್ಎಸ್ಎಸ್ ಸಂಸ್ಥೆಯ ಪ್ರಮುಖ ಪ್ರವರ್ತಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರು, ಕ್ರಾಂತಿಕಾರಿಗಳ ಜೊತೆಯಲ್ಲಿ ಅಪಾಯದಲ್ಲಿ ಜೀವಿಸುವ ಬದುಕಿನಿಂದ ತಮ್ಮನ್ನು ಹೇಗೆ ಪಾರುಮಾಡಿದರು ಎಂಬುದರ ಕುರಿತು ಹೆಡ್ಗೆವಾರರು ವಿಸ್ತಾರವಾಗಿ ಬರೆದಿದ್ದಾರೆ.
ನಾಗಪುರಕ್ಕೆ ಬಂದ ಹೆಡ್ಗೆವಾರರು ತಿಲಕ್ ಬಣದ ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತರಾಗಿ ದುಡಿಯಲಾರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಮಹಾನ್ ವಿದ್ವಾಂಸರಾದ ಡಾಕ್ಟರ್ ಮೂಂಜೆ ಅವರ ಮಾರ್ಗದರ್ಶನ ದೊರಕಿತು. ಡಾಕ್ಟರ್ ಮೂಂಜೆ ಅವರು ಹೆಡ್ಗೆವಾರರಿಗೆ ಹಿಂದೂಧರ್ಮ ತತ್ವಶಾಸ್ತ್ರದ ಮಾರ್ಗದರ್ಶಕರಾದರು. 1920ರ ಕಾಂಗ್ರೆಸ್ ಅಧಿವೇಶನದಲ್ಲಿ ಡಾಕ್ಟರ್ ಹೆಡ್ಗೆವಾರ್ ಕಾಂಗ್ರೆಸ್ ಅಧಿವೇಶನದ ಸ್ವಯಂಸೇವಕರ ಉಪಮುಖ್ಯಸ್ಥರಾಗಿ ನೇಮಿಸಲ್ಪಟ್ಟರು. ಈ ಅಧಿವೇಶನವು ಒಂದು ರೀತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಚಾಲನೆ ನೀಡಿತ್ತು. ಈ ಸ್ವಯಂಸೇವಕ ಸಂಸ್ಥೆಗೆ ಭಾರತ್ ಸ್ವಯಂಸೇವಕ್ ಮಂಡಲ್ ಎಂದು ಹೆಸರಿತ್ತು. ಈ ಸಂಸ್ಥೆಗೆ ಡಾಕ್ಟರ್ ಲಕ್ಷ್ಮಣ್, ವಿ. ಪರಾಂಜಪೆ, ಮುಖ್ಯಸ್ಥರಾಗಿದ್ದು ಡಾಕ್ಟರ್ ಹೆಡ್ಗೆವಾರ್ ಉಪಮುಖ್ಯಸ್ಥರೆನಿಸಿದ್ದರು. ಅಧಿವೇಶನದಲ್ಲಿ ಎಲ್ಲ ಸ್ವಯಂಸೇವಕರೂ ಮಿಲಿಟರಿ ಮಾದರಿಯ ಸಮವಸ್ತ್ರ ಧರಿಸಬೇಕೆಂದು ಸೂಚಿಸಿದ್ದು ಆ ಸಮವಸ್ತ್ರವು 1925ರಿಂದ 1940ರ ವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧಿಕೃತ ಸಮವಸ್ತ್ರವೆಂದೆನಿಸಿತ್ತು. ಮುಂದೆ ಡಾಕ್ಟರ್ ಮೂಂಜೆ ಮತ್ತು ಡಾಕ್ಟರ್ ಎಲ್ ವಿ ಪರಾಂಜಪೆ ಅವರುಗಳು ಡಾ ಹೆಡ್ಗೆವಾರರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಲು ಎಲ್ಲ ರೀತಿಯ ನೆರವನ್ನೂ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರೂಪುಗೊಳ್ಳಲು ಅಂದಿನ ಕೆಲವೊಂದು ಪ್ರಮುಖ ಘಟನೆಗಳು ಕಾರಣವಾದವು. ಕಾಕೋರಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರವು ಎಲ್ಲಾ ಪೋಲಿಸ್ ಹುದ್ದೆಗಳು ಮತ್ತು ಮ್ಯಾಜಿಸ್ಟ್ರೇಟ್ ಹುದ್ದೆಗಳಿಗೆ ಮುಸ್ಲಿಂ ಅಧಿಕಾರಿಗಳನ್ನು ನೇಮಿಸಿ ತನ್ನ ಕುಯುಕ್ತಿಯನ್ನು ಸಾಧಿಸಿತ್ತು. ಈ ಎಲ್ಲಾ ವಿಚಾರಣೆಗಳಲ್ಲಿ ಕ್ರಾಂತಿಕಾರಿಗಳಿಗೆ ನೇಣು ಅಥವಾ ಕ್ರೂರ ಶಿಕ್ಷೆಗಳು ತಪ್ಪದಂತೆ ಮಾಡುವುದು ಬ್ರಿಟಿಷ್ ಆಡಳಿತದ ಉದ್ಧೇಶವಾಗಿತ್ತು. ಅದು ಹಾಗೆಯೇ ನಡೆಯಿತೆಂಬುದು ಕೂಡಾ ಇತಿಹಾಸದಲ್ಲಿ ಸುಸ್ಪಷ್ಟ. ಪಂಡಿತ ರಾಮ್ ಬಿಸ್ಮಿಲ್ಲಾ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿರುವಂತೆ ಈ ಕುರಿತಂತೆ ಹಿಂದೂಗಳ ಪ್ರತಿಕ್ರಿಯೆಯು ಇಲ್ಲವೇ ಇಲ್ಲವೇನೋ ಎಂಬಷ್ಟು ನಿಷ್ಕ್ರಿಯವಾಗಿತ್ತು. ಇದೇ ಅಭಿಪ್ರಾಯವನ್ನು ಪಂಡಿತ್ ಬನಾರಸಿ ದಾಸ್ ಚತುರ್ವೇದಿ ಅವರು ಕೂಡಾ ತಮ್ಮ ಕಾಕೋರಿ ಕಿ ಶಹೀದ್ ಎಂಬ ಪತ್ರಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಹಿನ್ನೆಲೆಗಳಲ್ಲಿ ತೀವ್ರವಾಗಿ ಚಿಂತಿಸಿದ ಹೆಡ್ಗೆವಾರ್ ಅವರಿಗೆ “ಭಾರತದಲ್ಲಿ ಹಿಂದೂಗಳ ಮೇಲೆ ಹಿಂದಿನಿಂದ ಪ್ರಸಕ್ತದವರೆಗೆ ನಡೆಯುತ್ತಿದ್ದ ವಿದೇಶಿ ದೌರ್ಜನ್ಯದ ಕುರಿತಾದ ಸಹಿಷ್ಣುತಾ ಗುಣ, ಹಿಂದೂಗಳು ಸೃಷ್ಟಿಸಿದ ವರ್ಗೀಕೃತ ಸಮಾಜ, ಅಸ್ಪೃಶ್ಯತೆ ಮುಂತಾದವುಗಳೆಲ್ಲಾ ಹಿಂದೂಗಳ ಮೂಲ ಸ್ವಭಾವದಿಂದಲೇ ಬಂದೊದಗಿರುವಂತದ್ದು” ಎಂಬ ನಿರ್ಧಾರ ದೃಢವಾಗುತ್ತಾ ಬಂತು. ಇವಕ್ಕೆಲ್ಲಾ ಅವರಿಗೆ ಕಂಡ ಪರಿಹಾರವೆಂದರೆ “ಹಿಂದೂಗಳನ್ನು ಒಂದಾಗಿ ಬೆಸೆಯುವಂತಹ, ಶಿಸ್ತು ಮತ್ತು ರಾಷ್ಟ್ರೀಯ ಸ್ವರೂಪವನ್ನು ಹೊಂದಿರುವ ಒಂದು ಸಾಂಸ್ಕೃತಿಕ ಒಕ್ಕೂಟವನ್ನು ಸ್ಥಾಪಿಸುವುದು”. ಈ ಕಾರ್ಯಕ್ಕೆ ಅವರಿಗೆ ಅಂದು ರತ್ನಗಿರಿ ಕಾರಾಗೃಹದಲ್ಲಿದ್ದ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಅಶೀರ್ವಾದವೂ ದೊರಕಿತು.
ಈ ಹಿಂದೆ ಹೆಡ್ಗೆವಾರ್ ತಾವಿದ್ದ ಹಿಂದೂಸ್ಥಾನ್ ರಿಪಬ್ಲಿಕನ್ ಒಕ್ಕೂಟದ ಸಂವಿಧಾನವನ್ನೇ ರಾಷ್ಟ್ರೀಯ ಸ್ವಯಂ ಸಂಘಕ್ಕೂ ಅನ್ವಯಿಸುವಂತೆ ಮಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಮೊದಲಬಾರಿಗೆ 1925ರ ವರ್ಷದಲ್ಲಿ ಕಾಕೋರಿ ರೈಲು ದರೋಡೆ ಪ್ರಕರಣವಾದ ಒಂದು ತಿಂಗಳ ಅವಧಿಯಲ್ಲಿ ವಿಜಯದಶಮಿಯಂದು ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಸ್ವರೂಪವೆಂದರೆ ಪ್ರತಿಯೊಂದು ಗ್ರಾಮ ಇಲ್ಲವೇ ಹಳ್ಳಿಯಲ್ಲೂ ಶಾಖೆಯನ್ನು ಹೊಂದುವುದು ಮತ್ತು ಆ ಶಾಖೆಯಲ್ಲಿ ಸ್ವಯಂ ಸೇವಕರು ಒಂದಾಗಿ ವ್ಯಾಯಾಮ ನಡೆಸುವುದು, ಘೋಷಣೆಗಳನ್ನು ಉದ್ಘರಿಸುವುದು ಇವೇ ಮುಂತಾಗಿ ಕಡೇಪಕ್ಷ ಒಂದು ಗಂಟೆಯ ಅವಧಿಯವರೆಗಿನ ಕಾರ್ಯಕ್ರಮಗಳನ್ನು ನಡೆಸುವುದು.
ರಾಷ್ಟ್ರೀಯ ಸ್ವಯಂ ಸಂಘದಲ್ಲಿ ಹೆಡ್ಗೆವಾರ್ ಅವರ ಪ್ರಥಮ ಅನುಯಾಯಿಗಳೆಂದರೆ ಅಪ್ಪಾಜಿ ಜೋಶಿ, ಭಯ್ಯಾಜಿ ದಾನಿ, ಬಾಬಾ ಸಾಹೇಬ್ ಆಪ್ಟೆ, ಗೋಪಾಲ್ ರಾವ್, ಯೆರುಕುಂಟವಾರ್, ದಾದಾ ರಾವ್ ಪರಮಾರ್ಥ್, ಬಾಳಾಸಾಹೇಬ್ ದೇವರಸ್, ಯಾದವ ರಾವ್ ಜೋಶಿ, ಬಹುರಾವ್ ದೇವರಸ್, ಮೊರೆಶ್ವರ್ ಮುಂಜೆ, ಕೆ.ಡಿ. ಜೋಶಿ, ರಾಜಾ ಭಾವ್ ಪತುರ್ಕರ್, ಬಾಬು ರಾವ್ ಬಿಷಿಕರ್, ಅಬಾಜಿ ಹೆಡ್ಗೆವಾರ್, ಮಧುಕರ್ ರಾವ್ ಭಗವತ್, ವಿತ್ಥಲ್ ರಾವ್ ಪಟ್ಕಿ, ಬಾಪು ರಾವ್ ದಿವಾಕರ್ ಮತ್ತು ಕೆ ಎಸ್ ಪಟೈಟ್.
ಡಾ. ಹೆಡ್ಗೆವಾರ್ ಅವರು 1940ರ ಜೂನ್ 21ರಂದು ನಾಗಪುರದಲ್ಲಿ ನಿಧನರಾದರು.
ಕಾಮೆಂಟ್‌ಗಳು