ಎ. ಪಂಕಜ
ಎ. ಪಂಕಜ
ಎ. ಪಂಕಜ ಬರಹಗಾರರಾಗಿ ಮತ್ತು ಸಮಾಜಸೇವಕರಾಗಿ ಮಹತ್ವದ ಸೇವೆ ಸಲ್ಲಿಸಿದವರು. ಪಂಕಜಾ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಬ್ಯಾಂಕ್ ಅನ್ನು ಸ್ಥಾಪಿಸಿದ ಧೀಮಂತೆ.
ಮೂಲತಃ ತುಮಕೂರು ಜಿಲ್ಲೆಯ ಪಾವಗಡದವರಾದ ಪಂಕಜ 1932ರ ಏಪ್ರಿಲ್ 20ರಂದು ಜನಿಸಿದರು. ತಾಯಿ ವಕುಳಮ್ಮ. ತಂದೆ ಶ್ರೀನಿವಾಸಾಚಾರ್. ಓದುವ ದಿನಗಳಲ್ಲೇ ಕ್ರಿಯಾಶೀಲರಾಗಿದ್ದ ಪಂಕಜಾ ಆಶುಭಾಷಣ, ಚರ್ಚಾಕೂಟ, ನಾಟಕಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದರು. ಓದಿದ್ದು ಇಂಟರ್ ಮೀಡಿಯಟ್. ಮುಂದೆ ಹಿಂದಿಯಲ್ಲಿ ವಿದ್ವಾನ್ ಪದವಿ ಪಡೆದಿರು.
ಪಂಕಜ ಅವರ ಮೊದಲ ಕವನ ‘ಜ್ಯೋತಿ ನಂದಿತು’. ಬಹುಭಾಷಾ ಪ್ರವೀಣರಾಗಿದ್ದ ಪಂಕಜಾ ಇಂಗ್ಲಿಷ್, ಹಿಂದಿ, ತೆಲುಗು ಭಾಷೆಯಿಂದ ಹಲವಾರು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
ಪಂಕಜ ಅವರ ಮೊದಲ ಕಥೆ ‘ತಾಯಿನಾಡು’ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ನಂತರ ‘ಸೋದರಿ’, ‘ವಿಶ್ವಬಂಧು’ ಮುಂತಾದ ಪತ್ರಿಕೆಗಳಿಗೂ ಬರೆಯತೊಡಗಿದರು.
ಪಂಕಜ ಅವರು ನಾದಭಂಗ, ವಿಜಯಗೀತ, ಸೊಗಸುಗಾತಿ, ಬಂಗಾರದ ಬಲೆ, ಕಾಗದದ ದೋಣಿ, ಬಲಿಪಶು, ಮಧು, ನಾಗರ ನೆರಳು, ಅನುರಾಗ ಬಂಧನ, ಅವನೇ ಕಾರಣ, ನೀನಾ (ಪತ್ತೇದಾರಿ), ನೋವು ನಲಿವು, ಪ್ರೇಮಸಂಗಮ, ಬಯಕೆಯ ಬೆಂಕಿ, ಮಮತೆಯ ಮಡಿಲಲ್ಲಿ, ರಾಗಸುಧಾ, ವಿಜಯಗೀತ, ಸುಖಸ್ವಪ್ನ, ಸೊಗಸುಗಾತಿ, ಸ್ನೇಹಸಂಬಂಧ, ಹೊಸ ಹಾದಿಯಲ್ಲಿ ಮುಂತಾದ ಅನೇಕ ಕಾದಂಬರಿಗಳನ್ನು ಪ್ರಕಟಿಸಿದ್ದರು. 'ಊರ್ಮಿಳಾ' ಅಂತಹ ನಾಟಕ, 'ಕಥಾಗುಚ್ಚ' ಕಥಾಸಂಕಲನ, ಮದುವೆ ಮತ್ತು ಸ್ತ್ರೀ' ಎಂಬಂತಹ ವಿಚಾರ ಸಾಹಿತ್ಯ, ಭಾಗವತಾಮೃತ, ರಾಮಪ್ರಿಯ ಮುಂತಾ ವೈವಿಧ್ಯ ಕೂಡಾ ಅವರ ಬರವಣಿಗೆಗಳಲ್ಲಿ ಮೂಡಿತ್ತು.
ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಿಳೆಯರ ಉನ್ನತಿಗಾಗಿ ಬ್ಯಾಂಕೊಂದರ ಅವಶ್ಯಕತೆಯನ್ನು ಮನಗಂಡು ಬೆಂಗಳೂರಿನ ಮಲ್ಲೇಶ್ವರದಲ್ಲಿ 'ಮಹಿಳಾ ಕೋ ಆಪರೇಟಿವ್ ಬ್ಯಾಂಕ್’ ಅನ್ನು ಸ್ಥಾಪಿಸಿದ ಕೀರ್ತಿ ಪಂಕಜ ಅವರದು. ಈ ಬ್ಯಾಂಕ್ ಮೂಲಕ ಬಹಳಷ್ಟು ಮಹಿಳೆಯರು ಸಾಲ ಪಡೆದು ಸ್ವಾವಲಂಬಿಗಳಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಅನುವಾಯಿತು.
ಎ. ಪಂಕಜ ಅವರ ಸಮಾಜಮುಖಿ ಹಾಗೂ ಸಾಹಿತ್ಯ ಸೇವೆಗಳಿಗಾಗಿ ಬಿ. ಸರೋಜಾದೇವಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ನೇತಾಜಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿದ್ದವು. ಬೇರೆ ಮಾತೃಭಾಷೆಯವರು ಇತರ ಭಾಷಾ ಸಾಹಿತ್ಯ ರಚಿಸಿದ್ದಕ್ಕಾಗಿ ಕೇಂದ್ರ ಸರಕಾರ ನೀಡುವ ಬಹುಮಾನ ಅವರ ‘ಸೊಗಸುಗಾತಿ’ ಮತ್ತು ‘ಕಾಗದದ ದೋಣಿ’ ಕೃತಿಗಳಿಗೆ ಸಂದಿದ್ದವು.
ಪಂಕಜ ಅವರು 2020ರ ಡಿಸೆಂಬರ್ 12ರಂದು ಈ ಲೋಕವನ್ನಗಲಿದರು. ಅವರು ಹಿರಿಯ ವಯಸ್ಸಿನಲ್ಲಿ ನರ್ಸ್ ಸಹಾಯದಿಂದ ಒಂಟಿಯಾಗಿದ್ದರಂತೆ. ವೃದ್ದಾಪ್ಯ ನೋವು ತರುವ ವರ್ಷಗಳಲ್ಲಿ ಸಾವೆಂಬುದು ಬದುಕಿಗಿರುವ ನಿಜವಾದ ಬಿಡುಗಡೆ. ಸಕ್ರಿಯರಾಗಿ ಬಾಳಿ ಹೋದ ಈ ಮಹಾನ್ ತಾಯಿಗೆ ನಮನ.
On the birth anniversary of writer and social worker A. Pankaja
ಕಾಮೆಂಟ್‌ಗಳು