ಅಂಜಲಿ ರಾಮಣ್ಣ
ಅಂಜಲಿ ರಾಮಣ್ಣ
ಅಂಜಲಿ ರಾಮಣ್ಣ ನಮ್ಮ ನಡುವಿನ ವಿಶಿಷ್ಟ ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಕಾನೂನು ತಜ್ಞೆ, ವಿಶ್ವಸಂಚಾರಿ ಮತ್ತು ಹಲವು ಪ್ರತಿಭೆಗಳ ಸಂಗಮರು.
ಅಂಜಲಿ ರಾಮಣ್ಣ ಅವರು ಚಿಂತಿಸದ ವಿಷಯವಿಲ್ಲ, ಕಾಣದಿರುವ ಊರಿಲ್ಲ. ಅವರ ಹಲವು ಬರಹಗಳಲ್ಲಿ ಸೋದರತ್ತೆಯ ಪಾತ್ರವೊಂದು ಸಾಕ್ಷೀಪ್ರಜ್ಞೆಯಾಗಿ ನಿಲ್ಲುತ್ತದೆ. ಮತ್ತೊಂದು ನಿಟ್ಟಿನಲ್ಲಿ ಕಾಣುವುದಾದರೆ, ಸ್ವಯಂ ಅಂಜಲಿ ಅವರೇ ತಮ್ಮ ಕಣ್ಮುಂದೆ ನಡೆಯುವ ಸಾಮಾಜಿಕ, ಸಾಂಸ್ಕೃತಿಕ, ಕೋರ್ಟು, ಕಚೇರಿ, ಆಡಳಿತ, ವ್ಯವಸ್ಥೆ -ಅವ್ಯವಸ್ಥೆ, ಉಳ್ಳವರು-ಇಲ್ಲದಿರುವವರು, ವಿಶ್ವವಿಸ್ಮಯ ಇವುಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ತಮ್ಮ ಬರಹದಲ್ಲಿ ತೆರೆದಿಡುತ್ತಾ ಬಂದಿದ್ದಾರೆ. ಪ್ರವಾಸ, ಅಡುಗೆ ಮಾಡುವುದು, ವೀಣೆ ನುಡಿಸುವುದು, ಹಾಡುವುದು, ರಾಜಕೀಯ ವಿದ್ಯಮಾನಗಳು ಹೀಗೆ ಎಲ್ಲದರಲ್ಲೂ ಅವರಿಗೆ ಆಸಕ್ತಿ.
ಅಂಜಲಿ ರಾಮಣ್ಣ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಹಾಗೂ ಮಾನವ ಹಕ್ಕುಗಳು ವಿಷಯದಡಿ ಸ್ನಾತಕೋತ್ತರ ಕಾನೂನು ಪದವೀಧರರಾಗಿದ್ದಾರೆ. ಜೊತೆಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಡಿಪ್ಲೊಮಾ, ಆಪ್ತ ಸಮಾಲೋಚನೆ ಮತ್ತು ಮಕ್ಕಳ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಹಾ ಅಧ್ಯಯನ ಮಾಡಿದ್ದಾರೆ.
ವಕೀಲ ವೃತ್ತಿಯೊಂದಿಗೆ, ಅಂಕಣಗಳ ರೂಪದಲ್ಲಿ ಮತ್ತು ಕೃತಿಗಳ ರೂಪದಲ್ಲಿ ಕವಿತೆ, ಕಥೆ, ನಾಟಕ, ಚಿಂತನೆ, ಕಳಕಳಿ, ಪ್ರಬಂಧ, ಪ್ರವಾಸಾನುಭವ ಮತ್ತು ತಮ್ಮ ಕಾರ್ರ್ಯಕ್ಷೇತ್ರವಾದ ಕಾನೂನಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿರುವ ಅಂಜಲಿ ರಾಮಣ್ಣ ಅವರು ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಿಸಿದ್ದಾರೆ.
ಮಹಿಳೆ ಹಾಗೂ ಮಕ್ಕಳ ಹಕ್ಕುಗಳು, ಶಿಕ್ಷಣ, ಕಾನೂನು, ಆರ್ಥಿಕ ಪ್ರಗತಿಗೆ ನೆರವು ಮತ್ತು ಎಚ್.ಐ.ವಿ. ಪೀಡಿತ ಮಹಿಳೆಯರ ಸಮೂಹದಲ್ಲಿ ಜಾಗೃತಿ ಮೂಡಿಸಲು ಹೋರಾಡುತ್ತಿರುವ ಅಂಜಲಿ ರಾಮಣ್ಣ, ಕರ್ನಾಟಕ ಸರ್ಕಾರದ ಬಾಲಕಿಯರ ಕಲ್ಯಾಣ ಸಮಿತಿಯ (ಬೆಂಗಳೂರು ನಗರ ವ್ಯಾಪ್ತಿ) ಅಧ್ಯಕ್ಷರೂ ಆಗಿದ್ದಾರೆ. ಮಹಿಳೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ 500ಕ್ಕೂ ಆಧಿಕ ಹಾಗೂ ಸಮಾಜದ ವಿವಿಧ ಸಮಸ್ಯೆಗಳ ಕುರಿತು 350ಕ್ಕೂ ಅಧಿಕ ಲೇಖನಗಳು ಮತ್ತು 150ಕೂ ಆಧಿಕ ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ಮಹಿಳೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸಿದ್ದಾರೆ. ‘ಏಷ್ಯಾದ ದಕ್ಷಿಣ-ಪೂರ್ವ ಭಾಗದಲ್ಲಿ ಕೌಟುಂಬಿಕ ಹಿಂಸೆ’ ಕುರಿತು ಸಂಯುಕ್ತ ರಾಷ್ಟ್ರಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಸರ್ಕಾರಿ ಸೇವೆಯಲ್ಲಿಯ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಕುರಿತು (ಅಕ್ಕಮಹಾದೇವಿ ವಿ.ವಿ) ಹಾಗೂ ಜಾಗತೀಕರಣ ಹಾಗೂ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ (ಕರ್ನಾಟಕ ರಾಜ್ಯ ಮಹಿಳಾ ಆಯೋಗ) ಮತ್ತು ಕಾನೂನು-ಮನಃಶಾಸ್ತ್ರದ ವಿವಿಧ ಮಹತ್ವದ ಪ್ರಕಟಣೆಗಳಲ್ಲಿ ಪ್ರಬಂಧಗಳನ್ನು ಬರೆದಿದ್ದಾರೆ.
ಗಗನಸಖಿ, ಜೀನ್ಸ್ ಟಾಕ್, ನಾರೀಪಥ, ತಂತಾನೆ ಮುಂತಾದವು ವಿವಿಧ ಕನ್ನಡ ಪತ್ರಿಕೆಗಳಲ್ಲಿ ಅಂಜಲಿ ರಾಮಣ್ಣ ಅವರು ಬರೆದ ಅಂಕಣಗಳ ಶೀರ್ಷಿಕೆಗಳು. 'ಲೀಗಲೀ ಯುವರ್ಸ' ಆಂಗ್ಲ ಪತ್ರಿಕೆಗೆ ಬರೆದ ಅಂಕಣದ ಶೀರ್ಷಿಕೆ. ಅಂಜಲಿ ರಾಮಣ್ಣ ಅವರ ಕೃತಿಗಳಲ್ಲಿ ಪ್ರಸಿದ್ಧ ಅಂಕಣಗಳ ಸಂಕಲನಗಳೇ ಅಲ್ಲದೆ, ಕಾಯುವೆಯಾ ಕಾಲ (ಕವನ ಸಂಕಲನ), ರಷೀತಿಗಳು (ಪ್ರಬಂಧಗಳ ಸಂಕಲನ), ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ‘ಚೌಕಟ್ಟು’ - ಕೃತಿ, ಭ್ರೂಣ ಹತ್ಯೆ ವಿರೋಧದ ‘ಹೂವಿನ ಹಾಡು’-ಕೃತಿ, ಅರುಣಾಚಲದ ಪ್ರವಾಸ ಕಥನ-ಬೆಳಕಿನ ಸೆರಗು, ಹೆಸರಿಲ್ಲದವಳು, ಕೋರ್ಟ್ ಏನ್ಹೇಳ್ತು, ಗುಲಾಬಿ ಗ್ಯಾಂಗ್, ಕಥೆ ಹೇಳುತ್ತಿದೆ ಇಸ್ರೇಲ್, ಕಂಡಷ್ಟೂ ಪ್ರಪಂಚ ಮುಂತಾದ ವೈವಿಧ್ಯಮಯ ಬರಹಗಳು ಸೇರಿವೆ.
ಅಂಜಲಿ ಅವರು ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ಜಾಗೃತಿ ಮೂಡಿಸಲು ‘ನಾನು ಯಾಕೆ ಬೇಡ’ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ-ಶೀರ್ಷಿಕೆಯ ಸಾಕ್ಷ್ಯಚಿತ್ರವು ಭಾರತೀಯ ಏಳು ಭಾಷೆ ಸೇರಿದಂತೆ ನೇಪಾಳಿಯ ಭಾಷೆಯಲ್ಲಿ ಚಿತ್ರೀಕರಣಗೊಂಡಿದೆ. ಮೈಸೂರಿಗೆ ಬಾರದ ಸ್ವಾತಂತ್ಯ್ರ, ದೃಷ್ಟಿಹೀನರು, ಏನಾದರಾಗಲಿ ಮುಂದೆ ಸಾಗು, ಸಿದ್ಧ ಉಡುಪು ತಯಾರಿಕಾ ವಲಯದ ಮಹಿಳಾ ಕಾರ್ಮಿಕರ ಪರವಾಗಿ ‘ಬನ್ನಿ ಹೋರಾಡೋಣ’, ಬಾಲ್ಯ ವಿವಾಹ ತಡೆಯೋಣ ಹೀಗೆ ವಿವಿಧ ವಲಯದಲ್ಲಿಯ ಸಮಸ್ಯೆಗಳ ವಿರುದ್ಧ ಜಾಗೃತಿ ಮೂಡಿಸುವ ಹಲವು ಸಾಕ್ಷ್ಯಚಿತ್ರಗಳನ್ನೂ ತಯಾರಿಸಿದ್ದಾರೆ. ಈ ಕುರಿತು ದೂರದರ್ಶನದಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಓ ಸಖಿಯಾಗಿ ಹಾಗೂ ಹಲೋ ಗೆಳತಿ ವಾರಪತ್ರಿಕೆಗಳ ಮಂಡಳಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ದೂರದರ್ಶನ ಹಾಗೂ ಬಾನುಲಿಯಲ್ಲಿ ನೂರಾರು ನಾಟಕಗಳನ್ನು ಬರೆದು ನಿರ್ದೇಶಿಸಿರುವುದರ ಜೊತೆಗೆ ನಟಿಸಿದ್ದಾರೆ.
ಅಂಜಲಿ ರಾಮಣ್ಣ ಅವರಿಗೆ ಬೆಂಗಳೂರು ಮಹಾಪಾಲಿಕೆ ವರ್ಷದ ವ್ಯಕ್ತಿ (2010), ಇಂದಿರಾ ಪ್ರಿಯದರ್ಶಿನಿ ಮಹಿಳಾ ಸಾಧಕಿ, ಕಮಲಾ ರಾಮಸ್ವಾಮಿ ದತ್ತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಪ್ರವಾಸ ಅನುದಾನ, ವಿಯನ್ನಾದಲ್ಲಿ ವಿಶ್ವಸಂಸ್ಥೆಯಲ್ಲಿ ಮಕ್ಕಳ ಹಕ್ಕುಗಳ ಚರ್ಚೆಯಲ್ಲಿ ಅತಿಥಿ ವೀಕ್ಷಕರಾಗಿ ಅಹ್ವಾನ, ಮಕ್ಕಳ ಕ್ಷೇಮಾಭಿವೃದ್ಧಿ ಕುರಿತ ಲಂಡನ್ನಿನ ಯೂನಿಸೆಫ್ ಕೇಂದ್ರದಲ್ಲಿ ವಿಚಾರ ಸಂಕಿರಣದ ಪ್ರತಿನಿಧಿಗಳಾಗಿ ಆಹ್ವಾನ ಮುಂತಾದ ಅನೇಕ ಗೌರವಗಳು ಸಂದಿವೆ.
ಅಂಜಲಿ ರಾಮಣ್ಣ ನಮ್ಮೆಲ್ಲರ ಆತ್ಮೀಯರು ಎಂಬ ಹೆಮ್ಮೆ ನಮ್ಮದು.
Anjali Ramanna
ಕಾಮೆಂಟ್‌ಗಳು