ಹರಿಹರನ್
ಹರಿಹರನ್
ಹರಿಹರನ್ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ, ಘಜಲ್ ಮತ್ತು ಫ್ಯೂಷನ್ ಸಂಗೀತಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಪ್ರಮುಖ ಹೆಸರು.
ಹರಿಹರನ್ಲ 1955ರ ಏಪ್ರಿಲ್ 3ರಂದು ಕೇರಳದ ತಿರುವನಂತಪುರಂನಲ್ಲಿ ಜನಿಸಿದರು. ಅವರು ಬೆಳೆದದ್ದು ಮುಂಬೈನಲ್ಲಿ. ಸಿನಿಮಾದಲ್ಲಿ ಮೊದಲಿಗೆ ಹೆಚ್ಚು ಜನಪ್ರಿಯರಾಗಿದ್ದು ತಮಿಳಿನಲ್ಲಿ. ಘಜಲ್ ಸಂಗೀತದಿಂದ ಜನಪ್ರಿಯರಾಗಿದ್ದು ಉತ್ತರ ಭಾರತದಲ್ಲಿ. ಮುಂದುವರೆದ ಸಿನಿಮಾ ಜನಪ್ರಿಯತೆಯಿಂದ ವ್ಯಾಪಿಸಿದ್ದು ಇಡೀ ಭಾರತದಲ್ಲಿ. ಜೊತೆಗೆ ವಿಶ್ವಸಂಗೀತವನ್ನು ಭಾರತೀಯ ಸಂಗೀತಕ್ಕೆ ಬೆಸೆಯುವ ಪ್ರಯತ್ನವಾದ ಫ್ಯೂಷನ್ ಸಂಗೀತದಿಂದ ಇಂದು ಹರಿಹರನ್ ಇಡೀ ಸಂಗೀತಲೋಕಕ್ಕೇ ಪ್ರಿಯರಾಗಿ ಬೆಳೆದಿದ್ದಾರೆ.
ಹರಿಹರನ್ ಓದಿದ್ದು ಮುಂಬೈನ ಎಸ್. ಐ. ಇ. ಎಸ್ ಕಾಲೇಜಿನಲ್ಲಿ. ಹರಿಹರನ್ ಅವರ ತಾಯಿ ತಂದೆಯರಾದ ಅಲಮೇಲು ಮತ್ತು ಎಚ್. ಅನಂತ ಸುಬ್ರಮಣಿ ಅಯ್ಯರ್ ದಂಪತಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಖ್ಯಾತರು. ತಂದೆ ತಾಯಂದಿರಿಂದ ಕರ್ನಾಟಕ ಸಂಗೀತ ಕಲಿತ ಹರಿಹರನ್ ಕಾಲಕ್ರಮೇಣದಲ್ಲಿ ಮೆಹದಿ ಹಸನ್ ಮತ್ತು ಜಗಜಿತ್ ಸಿಂಗ್ ಅವರ ಹಿಂದೂಸ್ಥಾನಿ ಸಂಗೀತಕ್ಕೆ ಮಾರುಹೋದರು. ಮುಂದೆ ಗಜಲ್ ಸಂಗೀತ ಪ್ರಕಾರದೆಡೆಗೆ ಅಪಾರವಾಗಿ ಸೆಳೆಯಲ್ಪಟ್ಟ ಹರಿಹರನ್ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅವರಲ್ಲಿ ಶಾಸ್ತ್ರೀಯ ಸಂಗೀತದ ಅಭ್ಯಾಸ ನಡೆಸಿದರು. ದಿನಕ್ಕೆ ಸುಮಾರು ಹದಿಮೂರು ಗಂಟೆಗಳ ಕಾಲ ಪ್ರತಿನಿತ್ಯ ಅವರು ಅಭ್ಯಾಸ ನಡೆಸುತ್ತಿದ್ದರಂತೆ. ಗಜಲ್ ಸಂಗೀತದಲ್ಲಿ ಅವರ ಆಸಕ್ತಿ ಎಷ್ಟಿತ್ತೆಂದರೆ ಆ ಸಂಗೀತಕ್ಕೆ ನ್ಯಾಯ ಒದಗಿಸಲು ಉರ್ದೂ ಭಾಷೆಯನ್ನೂ ಸಂಪೂರ್ಣವಾಗಿ ಮತ್ತು ಶಾಸ್ತ್ರೀಯವಾಗಿ ಶ್ರದ್ಧೆಯಿಂದ ಕಲಿತರು.
ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ದೂರದರ್ಶನದ ‘ಜುನೂನ್’ ಅಂತಹ ರಾಷ್ಟ್ರೀಯ ಧಾರಾವಾಹಿಗಳಿಗೆ ಹಾಡುತ್ತಿದ್ದ ಹರಿಹರನ್, 1977ರ ವರ್ಷದಲ್ಲಿ ಅಖಿಲ ಭಾರತ ಸುರ ಸಿಂಗಾರ್ ಪ್ರಶಸ್ತಿಯನ್ನು ಗೆದ್ದರು. ಇವರ ಪ್ರತಿಭೆಗೆ ಮನಸೋತ ಅಂದಿನ ಪ್ರಖ್ಯಾತ ಸಿನಿಮಾ ಸಂಗೀತ ನಿರ್ದೇಶಕ ಜೈ ದೇವ್, ಹರಿಹರನ್ ಅವರನ್ನು ತಮ್ಮ ಚಿತ್ರ ‘ಗಮನ್’ ಮೂಲಕ ಹಿನ್ನೆಲೆ ಗಾಯಕನನ್ನಾಗಿ ಪರಿಚಯಿಸಿದರು. ಆ ಚಿತ್ರದ 'ಅಜೀಬ್ ಸಾನೆ ಹೇ ಮುಜ ಪರ ಕರಾರ್’ ಹಾಡು ಅದ್ಭುತವಾದ ಯಶಸ್ಸನ್ನು ಕಂಡುದು ಮಾತ್ರವಲ್ಲದೆ, ಹರಿಹರನ್ ರಾಷ್ಟ್ರಪ್ರಶಸ್ತಿಯ ಕದವನ್ನು ಕೂಡಾ ತಟ್ಟಿದ್ದಲ್ಲದೆ ಅವರಿಗೆ ಉತ್ತರ ಪ್ರದೇಶ ಸರ್ಕಾರದ ಶ್ರೇಷ್ಠ ಗಾಯಕ ಪ್ರಶಸ್ತಿಯನ್ನೂ ತಂದುಕೊಟ್ಟಿತು.
1992ರಲ್ಲಿ ಎ. ಆರ್. ರೆಹಮಾನ್ ತಾವು ಸಂಗೀತ ನೀಡಿದ ಪ್ರಥಮ ಚಿತ್ರ ‘ರೋಜಾ’ದಲ್ಲಿ ಹರಿಹರನ್ ಅವರಿಂದ ‘ತಮಿಳಾ ತಮಿಳಾ’ ಗೀತೆಯನ್ನು ಹಾಡಿಸಿದರು. 1995ರ ‘ಬಾಂಬೆ’ ಚಿತ್ರದ ‘ಉಯಿರೆ ಉಯಿರೆ’ ಅವರಿಗೆ ಪಶಸ್ತಿ ಮತ್ತು ಜನಪ್ರಿಯತೆಗಳನ್ನು ಇಮ್ಮಡಿಸಿತು. ಇಲ್ಲಿಂದ ಪ್ರಾರಂಭಗೊಂಡ ಎ. ಆರ್. ರೆಹಮಾನ್ ಮತ್ತು ಹರಿಹರನ್ ಸಂಬಂಧ ಇಂದಿಗೂ ಮುಂದುವರೆದಿದೆ. ಎ. ಆರ್. ರೆಹಮಾನ್ ಅವರ ಆಪ್ತ ಗಾಯಕರ ಪಟ್ಟಿಯಲ್ಲಿ ಹರಿಹರನ್ ಯಾವಾಗಲೂ ಮೊದಲ ಸ್ಥಾನದಲ್ಲಿರುವ ಗಾಯಕ ಎನ್ನುವ ಖ್ಯಾತಿ ನಿರಂತರವಾಗಿ ಅವರ ಬೆನ್ನಿಗಿದೆ.
ಹೀಗೆ ಮುಂದುವರಿದ ಹರಿಹರನ್ ಅವರ ಚಲನಚಿತ್ರ ಜನಪ್ರಿಯತೆ ‘ಮುತ್ತು’, ‘ಮಿನ್ಸಾರ ಕನವು’, ‘ಜೀನ್ಸ್’, ‘ಇಂಡಿಯನ್’, ‘ಮುದಲವನ್’, ‘ತಾಲ್’, ‘ರಂಗೀಲಾ’, ‘ಇಂದಿರಾ’, ‘ಇರುವರ್’, ‘ಅನ್ಬೆ ಆರುಯಿರೆ’, ‘ಶಿವಾಜಿ’, ‘ಅಲೈ ಪಾಯುದೆ’, ‘ಗುರು’, ‘ಎಂದೀರನ್’ ಹೀಗೆ ಸಾಗುತ್ತಲೇ ಇದೆ.
1998ರ ವರ್ಷದಲ್ಲಿ ಹರಿಹರನ್ ಅವರು ಅನು ಮಲಿಕ್ ಸಂಗೀತ ನಿರ್ದೇಶನದ ಬಾರ್ಡರ್ ಚಿತ್ರದ ‘ಮೇರೆ ದುಷ್ಮನ್ ಮೇರಾ ಬಾಯ್’ ಗೀತೆಯ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದರು. 2009ರ ವರ್ಷದಲ್ಲಿ ಅವರು ಮರಾಠಿ ಚಿತ್ರ ‘ಜಾಗ್ವಾ’ ದ ‘ಜೀವ್ ರಂಗ್ಲಾ'ಗಾಗಿ ಮತ್ತೊಂದು ರಾಷ್ಟ್ರ ಪ್ರಶಸ್ತಿ ಪಡೆದರು
ಇದುವರೆಗೂ ಸುಮಾರು 500 ತಮಿಳು, ಸಾವಿರಕ್ಕೂ ಹೆಚ್ಚು ಹಿಂದಿ ಹಾಡುಗಳಲ್ಲದೆ, ಮಲಯಾಳಂ, ತೆಲುಗು, ಕನ್ನಡ, ಮರಾಠಿ ಮತ್ತು ಬೆಂಗಾಳಿ ಚಿತ್ರಗಳಿಗೂ ಹರಿಹರನ್ ಹಾಡಿದ್ದಾರೆ. ಕೆಲವೊಂದು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.
ಗಜಲ್ ಸಂಗೀತದಲ್ಲಿ ಅಪಾರ ಹೆಸರು ಮಾಡಿರುವ ಹರಿಹರನ್ ಇದುವರೆಗೂ 30ಕ್ಕೂ ಹೆಚ್ಚು ಆಲ್ಬಂಗಳನ್ನು ಹೊರತಂದಿದ್ದಾರೆ. ಈ ಅಲ್ಬಂಗಳು ಗಳಿಸಿರುವ ಅಪಾರ ಜನಪ್ರಿಯತೆಯ ಜೊತೆಗೆ ಹಲವಾರು ಪ್ರಶಸ್ತಿ ಗೌರವಗಳನ್ನೂ ಗಳಿಸಿವೆ. ಅವರು 1994ರಲ್ಲಿ ಆಶಾ ಬೊಂಸ್ಲೆ ಅವರ ಜತೆಯಲ್ಲಿ ಹಾಡಿದ ‘ಅಬಾಸರ್ ಈ - ಗಜಲ್’ ಎನ್ನುವ ಆಲ್ಬಂ ಈಗಲೂ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. 2008ರಲ್ಲಿ ಬಂದ ‘ಲಾಫ್ಸ್’ ಗಜಲ್ ಆಲ್ಬಂ ನಂತರ ಹರಿಹರನ್ ಗಜಲ್ ಗಾಯನದಿಂದ ಹೊರಗೆ ಫ್ಯೂಶನ್ ಸಂಗೀತದ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ.
1996ರಲ್ಲಿ ಲೆಸ್ಲಿ ಲೂಯಿಸ್ ಅವರ ಜೊತೆಗೂಡಿ ‘ಕಲೋನಿಯಲ್ ಕಸೀನ್ಸ್’ ಎನ್ನುವ ಆಲ್ಬಂ ಮೂಲಕ ದೇಶದಲ್ಲಿ ಮೊತ್ತ ಮೊದಲ ಬಾರಿಗೆ ‘ಫ್ಯೂಶನ್’ ಸಂಗೀತಕ್ಕೆ ಅಡಿಪಾಯ ಹಾಕಿಕೊಟ್ಟ ಹರಿಹರನ್ ನಂತರದ ದಿನಗಳಲ್ಲಿ ‘ಕಲೋನಿಯಲ್ ಕಸೀನ್ಸ್’ ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡು ದೇಶ- ವಿದೇಶದ ಅಭಿಮಾನಿಗಳ ಕಿವಿಗಳನ್ನು ತಣಿಸುತ್ತಿದ್ದಾರೆ. ಈ ಬೆಳವಣಿಗೆಯ ಕುರಿತು ಹರಿಹರನ್ ಹೀಗೆ ಅಭಿಪ್ರಾಯಪಡುತ್ತಾರೆ. “ಭಾರತೀಯ ಸಂಗೀತವನ್ನು ಹೊಸ ಪೀಳಿಗೆಯವರು ನೇರವಾಗಿ ಸ್ವೀಕರಿಸುವ ಧೈರ್ಯ ತೋರಲಿಲ್ಲ. ಈ ಸಂದರ್ಭದಲ್ಲಿ ಲೆಸ್ಲಿ ಲೂಯಿಸ್ ನನಗೊಂದು ಉಪಾಯ ಹೇಳಿದರು. ಪಾಶ್ಚಿಮಾತ್ಯ ಸಂಗೀತವನ್ನು ಭಾರತೀಯ ಸಂಗೀತದ ಜತೆ ಲಿಂಕ್ ಕೊಟ್ಟು ಹಾಡಿದಲ್ಲಿ ಹೊಸ ಪರಂಪರೆಯೊಂದು ಸೃಷ್ಟಿಯಾದಂತಾಗುತ್ತದೆ ಎಂದರು. ನಾನು ಒಪ್ಪಿದೆ. ಅದಕ್ಕಾಗಿ ಫ್ಯೂಶನ್ ಆಲ್ಬಂವೊಂದನ್ನು ಮಾರುಕಟ್ಟೆಯಲ್ಲಿ ಬಿಟ್ಟು ತಮಾಷೆ ನೋಡಿದೆವು. ಯುವಜನತೆ ಫ್ಯೂಶನ್ ಸಂಗೀತವನ್ನು ಬಹಳವಾಗಿ ಇಷ್ಟಪಟ್ಟಿತು. ಮುಂದೆ ಟೀಮ್ ಬೆಳೆಯುತ್ತಾ ಹೋಯಿತು.”
ಸಂಗೀತದ ಹೊರತು ಹರಿಹರನ್ ಇನ್ನೇನು ಮಾಡುತ್ತಾರೆ ಎಂಬುದಕ್ಕೆ ಅವರ ಉತ್ತರ ಹೀಗಿದೆ “ಈ ಪ್ರಶ್ನೆ ನನ್ನನ್ನು ಬಾಲ್ಯದಿಂದಲೂ ಕಾಡುತ್ತಾ ಬಂದಿದೆ. ಹೆತ್ತವರು ಸಂಗೀತವನ್ನು ಒಪ್ಪಿ ಅಪ್ಪಿಕೊಂಡಿದ್ದರು. ನಾನು ಕೂಡ ಇದೇ ಸಂಗೀತವನ್ನು ಅಪ್ಪಿಕೊಂಡೇ ನಡೆದಿದ್ದೇನೆ. ಬದುಕಿನಲ್ಲಿ ನನಗೆ ಬೇರೆಯೇನೂ ಬೇಕಾಗಿರಲಿಲ್ಲ. ಸಂಗೀತಗಾರನ ಹೊರತು ನಾನು ಏನೂ ಆಗಲೂ ಬಯಸುತ್ತಿರಲಿಲ್ಲ, ಬಯಸುತ್ತಿಲ್ಲ.” ಇದು ತನ್ನ ಕಾಯಕವನ್ನು, ತನ್ನ ‘ಪ್ರೀತಿ’ಯನ್ನು ಪ್ರೀತಿಸುವ ಒಬ್ಬ ಮಹಾನ್ ಕಲಾವಿದ ತನ್ನ ಬದುಕನ್ನು ನಡೆಸುತ್ತಿರುವ ರೀತಿ.
ಈ ಮಹಾನ್ ಸಂಗೀತಗಾರನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.
On the birth day of singer Hariharan
ಕಾಮೆಂಟ್‌ಗಳು