ಯಯಾತಿ
ಯಯಾತಿ
ಯಯಾತಿ
ನನಗೆ ಪುಸ್ತಕಗಳನ್ನೋದುವ ಕ್ಷಣ ನನ್ನನ್ನಿಲ್ಲವಾಗಿಸಿಕೊಳ್ಳುವ ಕ್ಷಣ. ಯಾವುದನ್ನೇ ಓದುವಾಗ, ಅಲ್ಲಿ ಕಾಣುವ ಘಟನೆಗಳು ವಾಸ್ತವದಲ್ಲಿ ಆಗುತ್ತಿರುವ ನೈಜ ಘಟನೆಗಳೇನೋ ಎಂಬಂತಾಗಿ ಓದುವ ದಿನಗಳಲ್ಲಿ ನಾನು ಗಂಭೀರನಾಗಿ ಬಿಡುತ್ತೇನೆ. ಕೆಲವೊಂದು ಓದುಗಳಲ್ಲಿ ಹಿಂಸಾತ್ಮಕ ಅಂಶಗಳು ಕಂಡಾಗ ಆ ಪುಸ್ತಕದ ಓದನ್ನೇ ನಿಲ್ಲಿಸಿದ್ದಿದೆ, ಇಲ್ಲವೇ ಆ ಪುಟಗಳನ್ನು ಹಾರಿಸಿ ಮುಂದೆ ಓದಿದ್ದಿದೆ. ಅದೇ ರಮ್ಯತೆಯನ್ನು ಓದುವಾಗ ಇಡೀ ವ್ಯಕ್ತಿತ್ವವೇ ಪಾಲ್ಗೊಳ್ಳುತ್ತದೆ! ಆ ರಮ್ಯತೆಯ ಹಿಂದೆ ಎಷ್ಟು ಕ್ರೌರ್ಯ ಇರುತ್ತದೆ ಎಂಬುದರ ಸುಳಿವೂ ಹತ್ತದಷ್ಟು ವಿವಶತೆ, ಯಯಾತಿ ಅಂತಹ ಪಾತ್ರಕ್ಕೆ ಹತ್ತಿದಷ್ಟೇ ತೀವ್ರತೆಯಲ್ಲಿ ನಮಗಂಟಿರುತ್ತದೆ.
ಕಚ ಎಂಬ ಪ್ರಕೃತಿ ಪ್ರೇಮಿ ಆ ಹಕ್ಕಿಯಿಂದ ಆದ ತೊಂದರೆ ಏನು? ಅದನ್ಯಾಕೆ ಕೊಲ್ಲಬೇಕು ಎಂದಾಗ "ನಾನು ಕ್ಷತ್ರಿಯ, ಕೊಲ್ಲುವುದು ನನ್ನ ಧರ್ಮ ಎನ್ನುತ್ತಾನೆ" ಯಯಾತಿ. ಯುದ್ಧ ಮಾಡಬೇಕು, ಗೆಲ್ಲಬೇಕು, ಶೌರ್ಯವನ್ನು ಮೆರೆಯಬೇಕು ಎಂಬುದು ಅವನ ಆಶಯವಾಗುತ್ತದೆ. ಶೌರ್ಯಪ್ರದರ್ಶನದಲ್ಲಿ ಮೈಮರೆತ ಯಯಾತಿ, ಅಪಘಾತಕ್ಕೊಳಗಾದಾಗ ಒಂದು ಕ್ಷಣ, ಅಲಕೆಯಿಂದ ಮೊದಲ ಪ್ರೇಮ ಸಿಂಚನದ ಅನುಭವ ಪಡೆಯುತ್ತಾನೆ. ಇನ್ನು ಅಶ್ವಮೇಧ ಪ್ರದರ್ಶನ ಮಾಡಿಬಂದ ನಂತರ, ತಂದೆಯ ಅನಾರೋಗ್ಯ ಸಮಯದಲ್ಲಿ ವಿರಾಮ ತೆಗೆದುಕೊಳ್ಳುವ ಸಂದರ್ಭದಲ್ಲಿ, ಮತ್ತೊಬ್ಬಳು ದಾಸಿಯಿಂದ ಪದೇ ಪದೇ ಲೈಂಗಿಕ ಅನುಭವ ಪಡೆಯುತ್ತಾನೆ. ಮುಂದೆ ಪ್ರೇಯಸಿ ಶರ್ಮಿಷ್ಠೆ ದೂರವಾಗಿ, ಹೆಂಡತಿಯೊಂದಿಗೆ ವಿರಸವಾದಾಗ ಯಾವುದೇ ಎಗ್ಗಿಲ್ಲದೆ ತನ್ನ ಇಡೀ ಸಾಮ್ರಾಜ್ಯದಲ್ಲಿ ತನಗೆ ಗೊತ್ತಿದ್ದ, ಹಿಂದೆ ತನ್ನೊಂದಿಗೆ ಆಡಿದ್ದ ಚಿಳ್ಳೆ, ಪಿಳ್ಳೆ ಹೆಣ್ಣುಮಕ್ಕಳು ಸಹಾ ಈತನ ಹಾಸಿಗೆಗೆ ಬಂದರೂ, ತಾನೊಬ್ಬ ರಾಜ, ತನ್ನ ರಾಜ್ಯದಲ್ಲಿ ಯಾರಿಗೂ ರಕ್ಷೆ ಇಲ್ಲ ಎಂದು ಇವನಿಗನಿಸುವುದೇ ಇಲ್ಲ.
ಯಯಾತಿ ತನ್ನಲ್ಲಿ ಎಲ್ಲವೂ ಇದ್ದೂ ಶಾಪಗ್ರಸ್ಥನಾದ ಮಾತ್ರವಲ್ಲ! ಆತನೇ ತನ್ನ ಸಾಮ್ರಾಜ್ಯಕ್ಕೆ ಶಾಪವಾದ ಎಂಬ ಭಾವನೆ ನನಗೆ ಹುಟ್ಟಿತು. ಇದು ಒಂದು ಕಾಲದ ಕೇಂದ್ರ ಪಾತ್ರಗಳ ದುರಾಚಾರಗಳ ಕಥೆ. ನಹುಷ ಅತೃಪ್ತ. ಆತನ ಹೆಂಡತಿಯಾದ ಯಯಾತಿಯ ತಾಯಿ, ಒಂದೆಡೆ ಗಂಡನಿಂದ ಅತೃಪ್ತಳಾದರೂ, ಆ ಕರುಣೆಗೆ ಪಾತ್ರವಾಗದಿರುವ ಹಾಗೆ ನಡೆದುಕೊಳ್ಳುತ್ತಾಳೆ. ಅಲಕೆಯಂತಹ ಹುಡುಗಿಯನ್ನು ಕೊಲೆ ಮಾಡಿಸುತ್ತಾಳೆ.
ಯಯಾತಿ ಮತ್ತು ದೇವಯಾನಿಯರ ಬದುಕು ಲೋಕದ ಬಹುತೇಕ ದಂಪತಿಗಳ ಕಥೆ. ಪುರುಷನ ಮನ, ದೈಹಿಕ ಲಾಲಸೆ ಮತ್ತು ಪ್ರೀತಿಗಾಗಿ ಹಾತೊರೆಯುತ್ತಿದ್ದರೆ, ಸ್ತ್ರೀಗೆ ಅವಳಿಗೆ ಸಿಗದ ಯಾವುದೋ ಪ್ರೀತಿ, ತನಗೆ ಇರುವ ಅಧಿಕಾರ ಕಳೆದುಹೋಗದಂತೆ ನಿಯಂತ್ರಿಸುವ ಮನ ಕಾಡುತ್ತಿರುತ್ತದೆ. ಅರಸನಾದ ಯಯಾತಿ, ಯಾವುದೋ ಭಯದಲ್ಲಿ, ಪ್ರಾಪಂಚಿಕ ಮರ್ಯಾದೆಯಲ್ಲಿ ಕ್ಷೀಣನಾಗಬಾರದೆಂಬ ಕ್ಷೀಣ ಆಸೆಯಲ್ಲಿ ತೇಲುತ್ತಲೇ ಮತ್ತೊಂದೆಡೆ ತನಗೆ ಬೇಕಿದ್ದನ್ನು, ಬೇರೆಡೆ(ಎಲ್ಲೆಡೆ)ಯಲ್ಲಿ ಅರಸಹೊರಡುತ್ತಾನೆ.
ಒಮ್ಮೆ ಒಬ್ಬರ ಬಳಿ ಹೇಳುತ್ತಿದ್ದೆ. "ಮನುಷ್ಯ ಯಾವುದೇ ಕ್ಷಣದಲ್ಲಿ, ತನ್ನಲ್ಲಿ ಶಾಂತತೆ ಕಂಡುಕೊಳ್ಳದಿದ್ದಾಗ ಅಥವಾ ಸೋಂಬೇರಿ ಆದಾಗ, ಆತನ ದೇಹದಲ್ಲಿರುವ ಪ್ರಾಣಿಗುಣ, ಆತನನ್ನು ಆಳತೊಡಗುತ್ತದೆ. ತಿನ್ನುವುದು, ಕುಡಿಯುವುದು, ಮತ್ತು ಲೈಂಗಿಕ ಲಾಲಸೆಗಳು ಆತನನ್ನು ಕೆಣಕುತ್ತವೆ. ಈ ಅರಿವನ್ನು ಆತ ತನ್ನಲ್ಲಿ ಕಂಡುಕೊಳ್ಳುವುದಕ್ಕೆ ಅಶಕ್ಯನಾದಾಗ ಭೀಕರ ಪ್ರಪಾತಕ್ಕೆ ಇಳಿಯುತ್ತಾನೆ. ಅವನು ಎಷ್ಟು ಶಕ್ತಿ ಗಳಿಸಿರುತ್ತಾನೋ ಅದರಷ್ಟೇ ಎತ್ತರದ ಅಹಂ ಮತ್ತು ಕಾಮೇಚ್ಛೆ ಅವನನ್ನು ಆವರಿಸಿರುತ್ತದೆ. ನಮ್ಮ ದೌರ್ಬಲ್ಯಗಳು ನಮ್ಮನ್ನು ಆಳುವಾಗ, ಯಾವ ಆತ್ಮಸಾಕ್ಷಿಯ ಭಯವೂ ಉಪಯೋಗಕ್ಕೆ ಬರುವುದಿಲ್ಲ. ಪ್ರಸಿದ್ಧರಿಗಂತೂ ಅವರು ಅಮಲಿನಲ್ಲಿದ್ದಾಗ ಅವರ ಅಮಲನ್ನು ಹೆಚ್ಚಿಸುವಂತದ್ದು ಸುಲಭವಾಗಿ ಸಿಗುತ್ತದೆ. ಪಾಪ, ಅವರನ್ನು ಅದು ಹದಗೆಡಿಸುತ್ತದೆ. ಸಾಮಾನ್ಯರಿಗೆ ಅಮಲು ಹತ್ತಿದರೂ ಅದು ಸುಲಭವಾಗಿ ಸಿಗದ ಕಾರಣ, ಒಂದಷ್ಟು ಅನಾಹುತದಿಂದ ಬಚಾವಾಗಿರುತ್ತಾರೆ.”
ಶರ್ಮಿಷ್ಠೆ ಇಲ್ಲಿ ಗಟ್ಟಿಯಾಗಿದ್ದಾಳೆ. ಆಕೆ ತನ್ನ ಮುಂದಿದ್ದ ಅಪಾಯಗಳನ್ನೆಲ್ಲ ಧೈರ್ಯವಾಗಿ ಎದುರಿಸಿದಾಕೆ. ತಾನು ಪ್ರೀತಿಸಿದವನಿಗೆ ಅಮೃತ ಸಿಂಚನ ನೀಡಿದಾಕೆ. ಕಷ್ಟಗಳು ವ್ಯಕ್ತಿಯನ್ನು ಅದ್ಭುತವಾಗಿ ಬೆಳೆಸುತ್ತವೆ. ಅಂತೆಯೇ ಆಕೆಗೆ ಬದುಕಿನಲ್ಲಿ ಅಸಂತೃಪ್ತಿ ಇದ್ದರೂ ಅಡ್ಡಹಾದಿ ಹಿಡಿಯದೆ ಒಂದು ಪ್ರೀತಿಯ ವೃಕ್ಷವಾಗಿ ಹೊರಹೊಮ್ಮಿ, ಪುರುವಿನಂತಹ ಅದ್ಭುತ ಪುಷ್ಪ ಅರಳುತ್ತದೆ. ಅಲಕೆಯಂತಹ ಸಾಮಾನ್ಯಳಾದ ಹುಡುಗಿ, ಶೌರ್ಯವಂತನಾದ ತನ್ನ ಪುತ್ರನ ಕುರಿತಾಗಿ ಕನಸು ಕಾಣುತ್ತಿರುವುದನ್ನು ಸಹಾ, ಆಕೆಗೆ ಸಹಜವಾಗಿ ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ.
"ತಾವು ಹೋರಾಡುವುದಕ್ಕೆ- ಸುಖವನ್ನು ಕಸಿದುಕೊಳ್ಳುವುದಕ್ಕೆಂದೇ ಬದುಕಿದ್ದೇವೆ ಎಂದು ಭ್ರಮಿಸುವ ರಾಕ್ಷಸರು ಒಂದೆಡೆ, ಮತ್ತು ನಾವು ಭೋಗಿಸಲೆಂದೇ ಶಾಶ್ವತವಾಗಿ ಇರುತ್ತೇವೆ ಎಂದು ಭ್ರಮಿಸಿದ ದೇವತೆಗಳ ನಡುವೆ ಹೋರಾಟ ಪ್ರತಿನಿತ್ಯವಾದರೆ ಜಗತ್ತಿನಲ್ಲಿ ಶಾಂತಿ ಎಂದು?" - ಇದು ಕಚ ಎಂಬ ಯೋಗಿಯ ಮನದಲ್ಲಿ ಹುಟ್ಟುವ ಸುಂದರ ಪ್ರಶ್ನೆ. ಅದಕ್ಕಾಗಿ ಆತ ಸಾವನ್ನೇ ಲೆಕ್ಕಿಸದೆ ನಿರಂತರ ಶ್ರಮವಹಿಸುತ್ತಾನೆ. ತನ್ನನೇ ತಾನು ಗೆದ್ದ ಅಸಾಮಾನ್ಯ ಹೃದಯಿಯಾಗಿ ಈ ಕಾಯಕದಲ್ಲಿ ತೊಡಗುತ್ತಾನೆ. ಸತ್ತ ರಾಕ್ಷಸರನ್ನೆಲ್ಲ ಬದುಕಿಸುತ್ತೇನೆ ಎನ್ನುವ ಶುಕ್ರಾಚಾರ್ಯ ಬರೀ ತನ್ನ ಸಿಟ್ಟು, ತನ್ನ ಮಗಳು ದರ್ಪದಲ್ಲಿ ಹೇಗಿದ್ದರೂ ಸರಿ ಎನ್ನುವ ಮೋಹ ಇತ್ಯಾದಿಗಳಲ್ಲಿ ಸಿಲುಕಿ ತನ್ನನ್ನು ತಾನು ಗೆದ್ದುಕೊಳ್ಳದೆ, ತನ್ನ ಸಾಮರ್ಥ್ಯವನ್ನು ವಿನಾಶಗಳ ಉದ್ದೇಶಕ್ಕೆ ಗಳಿಸುತ್ತ , ಮದ್ಯದ ಅಮಲಿನಲ್ಲಿ ಅದನ್ನು ಕಳೆದುಕೊಳ್ಳುತ್ತ, ಬೇಡದ್ದಕ್ಕೆ ಜೀವನವನ್ನು ವ್ಯಯಿಸುತ್ತಿರುತ್ತಾನೆ.
ಈ ಲೋಕವೆಲ್ಲ ಶುಕ್ರಾಚಾರ್ಯನಂತೆ ವಿಜ್ಞಾನದ ಲಾಭದ ತಪಸ್ಸಿನ ಸಾಧನೆಯನ್ನು ಹಲವು ರೂಪದಲ್ಲಿ ಪಡೆದು ವಿನಾಶದ ಕತ್ತಿ ಮಸೆದುಕೊಳ್ಳುತ್ತಿದೆ. ಯಯಾತಿ ಕೇವಲ ಕಾಮದ ಅಸಂತೃಪ್ತಿಗಾಗಿ ಹೀನತನಕ್ಕೆ ಇಳಿದರೆ, ಇಂದಿನ ಲೋಕದ ಅಸಂತೃಪ್ತಿಗಳು ಹಲವು ತೆರೆ ತೆರನಾಗಿ ಹೆಡೆಯೆತ್ತಿವೆ. ಇಂದಿನ ಲೋಕಕ್ಕೆ ಎಷ್ಟು ಗಳಿಸಿದರೂ, ವ್ಯಯಿಸಿದರೂ, ಭೋಗಿಸಿದರೂ ಕಿಂಚಿತ್ತೂ ತೃಪ್ತಿಯಿಲ್ಲ. ಕೆಲವು ದಶಕಗಳ ಹಿಂದೆ ಯಾರಿಗಾದರೂ ಹೆಜ್ಜೆ ತಪ್ಪುವ ಬಯಕೆಯಾದಾಗ, ಅವರಿಗಿದ್ದ ದೈವ ಭಯ, ಸಮಾಜದ ಭಯ, ಬೆಳೆದ ಸಂಸ್ಕೃತಿಯ ಕಡಿವಾಣ ಅವರೊಂದಿಗೆ ಇತ್ತು. ಇಂದು ಅವೆಲ್ಲ ಎಷ್ಟರ ಮಟ್ಟಿಗೆ ಉಳಿದಿವೆ!
'ಅಸಂತೃಪ್ತಿ' ಮಾನವನಿಗೆ ನಿರಂತರ ಜೊತೆಗಿರುವ ಶಾಪ. ಆತನಿಗೆ, ನೀನು ರಮ್ಯತೆಗಳಿಗೆ ಹೊರತಾಗಿ ಬದುಕು ಎಂದರೆ, ಆತನ ಬದುಕಿನಲ್ಲಿ ಏನೂ ಸ್ವಾರಸ್ಯವೇ ಇರಲಾರದು. ಕಚನಂತೆ ಋಷಿಯಾಗಿ ಬದುಕುವುದು, ಶರ್ಮಿಷ್ಠೆಯಂತೆ ಕಷ್ಟಗಳ ನಡುವೆ ನೈಜ ಪ್ರೇಮದಿಂದ ಬದುಕುವುದು ಎಷ್ಟು ಜೀವಿಗಳಿಗೆ ಸಾಧ್ಯ! ಆದರೆ ಪ್ರೀತಿಯನ್ನರಸಿ ಹೊರಟವರಿಗೆ ಪ್ರೀತಿ ಸಿಗುವಂತದಲ್ಲ. ತಮ್ಮಲ್ಲೇ ಪ್ರೀತಿ ಎಂಬುದಿದೆ ಎಂದು ಅರಿತವರಿಗೆ ಮಾತ್ರಾ ಆ ಪ್ರೀತಿ ಎಂಬ ಸ್ವತಂತ್ರದ ಬದುಕು ಸಾಧ್ಯ.
Yayati
ಕಾಮೆಂಟ್‌ಗಳು