ಬಿ.ಎಚ್. ಶ್ರೀಧರ
ಬಿ.ಎಚ್. ಶ್ರೀಧರ
ಕವಿ, ವಿಮರ್ಶಕ, ಚಿಂತಕ ಹೀಗೆ ಹಲವು ರೀತಿಯಲ್ಲಿ ಸಾಹಿತ್ಯಲೋಕದಲ್ಲಿ ಹೆಸರಾದವರು ಬಿ.ಎಚ್.ಶ್ರೀಧರ.
ಶ್ರೀಧರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಬಳಿಯ ಬವಲಾಡಿ ಗ್ರಾಮದಲ್ಲಿ 1918ರ ಏಪ್ರಿಲ್ 24 ರಂದು ಜನಿಸಿದರು. ತಂದೆ ಸೀತಾರಾಮ ಹೆಬ್ಬಾರ್. ತಾಯಿ ನಾಗಮ್ಮ. ಇವರ ವಂಶಸ್ಥರು ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದರು.
ಶ್ರೀಧರ ಅವರ ಪ್ರಾಥಮಿಕ ಶಾಲೆಯಿಂದ ಹೈಸ್ಕೂಲುವರೆಗಿನ ವಿದ್ಯಾಭ್ಯಾಸ, ಸೊರಬ ಮತ್ತು ಸಾಗರಗಳಲ್ಲಿ ನಡೆಯಿತು. ಇಂಟರ್ ಮೀಡಿಯೆಟ್ ಓದಿನ ವೇಳೆಗೆ ಮೈಸೂರು ಸೇರಿದರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್ಶಿಪ್ ಹೀಗೆ
ಅವರ ಇಂಟರ್ ಮೀಡಿಯೆಟ್ ವಿದ್ಯಾರ್ಥಿಜೀವನ ನಡೆಯಿತು.
ಶ್ರೀಧರರು ತಮಗೆ ದೊರೆತ ಶಿಷ್ಯವೇತನ ಮತ್ತು ಮನೆ ಪಾಠ ಹೇಳಿ ನಡೆಸುತ್ತಿದ್ದ ಜೀವನದಲ್ಲಿ ತಮ್ಮ ತಂದೆಯವರಿಗೂ ಕುಟುಂಬದ ಬೆಂಬಲಕ್ಕೆ ಹಣ ಕಳಿಸುತ್ತಾ ಹಲವಾರು ಪದಕ ಬಹುಮಾನ ಗಳಿಕೆಯೊಂದಿಗೆ ಬಿ.ಎ. ಆನರ್ಸ್ ಪಾಸು ಮಾಡಿದರು. ಎಂ.ಎ. ಓದಲು ಹಣದ ಅಡಚಣೆಯಾಗಿ ಬೆಂಗಳೂರಿನ ಪ್ರೆಸ್ ಒಂದರಲ್ಲಿ ಕೆಲಸ ಮಾಡಲಾರಂಭಿಸಿದರು. ಆದರೆ ಎ.ಆರ್. ಕೃಷ್ಣಶಾಸ್ತ್ರಿ, ಎ.ಎನ್. ನರಸಿಂಹಯ್ಯ ಮತ್ತು ಸಿ.ಆರ್. ನರಸಿಂಹಶಾಸ್ತ್ರಿಗಳ ನೆರವಿನಿಂದ ಓದಿ ಎಂ.ಎ. ಪದವಿ ಪಡೆದರು.
ಬಿ.ಎಚ್. ಶ್ರೀಧರ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದರು. ಹದಿನಾಲ್ಕನೇ ವಯಸ್ಸಿನಲ್ಲೇ ಪದ್ಯ ಬರೆದು ಮೆಚ್ಚುಗೆ ಪಡೆದಿದ್ದರು. ಅವರ ಮೊದಲ ಕವನ ಸಂಕಲನ ಮೇಘನಾದ. ನಂತರ ಕನ್ನಡ ಗೀತ, ಅಮೃತಬಿಂದು, ಮಂಜುಗೀತ, ರಸಯಜ್ಞ ಮುಂತಾದುವು ಮೂಡಿಬಂದವು.
ಶ್ರೀಧರ ಅವರ ವಿಮರ್ಶೆಗಳಲ್ಲಿ ಬೇಂದ್ರೆ, ಹೊಸಗನ್ನಡ ಸಾಹಿತ್ಯಶೈಲಿ, ಕವೀಂದ್ರ ರವೀಂದ್ರ, ಕಾವ್ಯಸೂತ್ರ, ಪ್ರತಿಭೆ, ಸಂಸ್ಕೃತ ಕನ್ನಡಗಳ ಬಾಂಧವ್ಯ ಮುಂತಾದ ಕೃತಿಗಳಿವೆ. ಇದಲ್ಲದೆ ಭಾರತೀಯ ವಾಙ್ಞಯ, ಸ್ವಾತಂತ್ರ ಮೀಮಾಂಸೆ, ಮಾತೃಶ್ರೀ, ವೇದರಹಸ್ಯ, ನೆಹರೂ ಉವಾಚ, ರಮಣ ಮಾರ್ಗ, ಕಾಳಿದಾಸನ ಕಾವ್ಯ ಸೌರಭ, ಯಕ್ಷಗಾನ, ಮುಂತಾದ ವೈಚಾರಿಕ ಕೃತಿಗಳೂ ಹೆಸರಾಗಿವೆ. ನಾಟಕ, ಆತ್ಮಕಥೆ ಮತ್ತು ಇತಿಹಾಸ ಕೃತಿ ರಚನೆಗಳನ್ನೂ ಮಾಡಿದ್ದಾರೆ. ಶ್ರೀಧರ ಅವರ ವಿನೋದ ವಿಡಂಬನೆಗಳ ಬರಹಗಳಲ್ಲಿ ಬೇತಾಳ ಕುಣಿತ, ಭಾಷಣ ಭೈರವರ ಒಡ್ಡೋಲಗ ಮಂತಾದವು ಹೆಸರಾಗಿದ್ದವು.
ಬಿ.ಎಚ್. ಶ್ರೀಧರ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ತೀನಂಶ್ರೀ ಸ್ಮಾರಕ ಬಹುಮಾನ, ಮೈಸೂರು ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ ಪ್ರಶಸ್ತಿ, ಮೂರು ಸಾವಿರ ಮಠ ಹುಬ್ಬಳ್ಳಿ, ಲೋಕ ಶಿಕ್ಷಣ ಟ್ರಸ್ಟ್, ಕೇಂದ್ರ ಸರಕಾರದ ರಕ್ಷಣಾ ಶಾಖೆ, ದೇವರಾಜ ಬಹದ್ದೂರ್ ಬಹುಮಾನ ಮುಂತಾದ ಅನೇಕ ಗೌರವಗಳು ಸಂದಿದ್ದವು.
ವಿದ್ವಾಂಸರಾದ ಬಿ.ಎಚ್. ಶ್ರೀಧರ ಅವರು 1990 ವರ್ಷ ತಾವು ಜನಿಸಿದ ಏಪ್ರಿಲ್ 24 ರಂದೇ ಈ ಲೋಕವನ್ನಗಲಿದರು. ತಮ್ಮ ತಂದೆಯ ಹೆಸರನ್ನು ಶಾಶ್ವತಗೊಳಿಸುವಲ್ಲಿ ಮಗ ರಾಜಶೇಖರ ಹೆಬ್ಬಾರರು ಇತರರೊಡಗೂಡಿ ಬಿ.ಎಚ್. ಶ್ರೀಧರ ಪ್ರಶಸ್ತಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಉತ್ತಮ ಕೃತಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಿದ್ದಾರೆ.
On the birth anniversary of great scholar and writer B.H. Sridhara
ಅರ್ಥಪೂರ್ಣ ಲೇಖನ.
ಪ್ರತ್ಯುತ್ತರಅಳಿಸಿ