ಪ್ರಭುದೇವ
ಪ್ರಭುದೇವ
ಪ್ರಭುದೇವ ಭಾರತೀಯ ಚಿತ್ರರಂಗ ಕಂಡ ಅಪೂರ್ವ ನೃತ್ಯಪ್ರತಿಭೆ.
ಪ್ರಭುದೇವ 1973ರ ಏಪ್ರಿಲ್ 3ರಂದು ಮೈಸೂರಿನಲ್ಲಿ ಜನಿಸಿದರು. ನಾಟ್ಯದಲ್ಲಂತೂ ಆತ ಮಾಡದಂತಹ ನಾಟ್ಯವೇ ಇಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆತ ಹೆಜ್ಜೆ ಇಟ್ಟದ್ದೆಲ್ಲಾ ನಾಟ್ಯವೇ. ಸಾಮಾನ್ಯವಾಗಿ ಒಬ್ಬ ನಟ ಜನಪ್ರಿಯನಾದಾಗ ಅದಕ್ಕೆ ಹೋಲಿಕೆಗಳೂ ಹುಟ್ಟಿಕೊಳ್ಳುತ್ತವೆ. ಪ್ರಭುದೇವನನ್ನು ಕುರಿತು ಹೇಳುವಾಗ ಮೈಖೆಲ್ ಜಾಕ್ಸನ್ ಹೆಸರನ್ನು ಭಾರತೀಯರು ಯೋಚಿಸುವುದು ಅಘೋಷಿತ ವಾಡಿಕೆಯೇ ಆಗಿದೆ. ಅದೇನೇ ಇರಲಿ ಪ್ರಭುದೇವ ಭಾರತೀಯ ಚಿತ್ರರಸಿಕರ ಮನದಲ್ಲಿ ಮೂಡಿಸಿರುವ ನಾಟ್ಯದ ಕ್ರೇಜನ್ನಂತೂ ಅಲ್ಲಗೆಳೆಯುವಂತಿಲ್ಲ. ಸಾಮಾನ್ಯವಾಗಿ ಇಂಥಹ ಕ್ರೇಜ್ ಎಂಬುದು ಕೆಲವೊಂದು ಕಲಾವಿದರ ಬಗ್ಗೆ ಕೆಲವೊಂದು ಸೀಮಿತ ಅವಧಿಗೆ ಕೇಳಿ ಬರುವಂತಹ ಮಾತಾಗಿರುತ್ತದೆ. ಆದರೆ ಪ್ರಭುದೇವ 1988ರ ವರ್ಷದಲ್ಲಿ ಚಿತ್ರರಂಗಕ್ಕೆ ಬಂದಾಗಲಿಂದ ಸುದೀರ್ಘ ಅವಧಿಯವರೆಗೆ ತಮ್ಮ ಪ್ರತಿಭೆ ಮತ್ತು ಜನಪ್ರಿಯತೆಗಳೆರಡನ್ನೂ ಅಪೂರ್ವವೆಂಬಂತೆ ಕಾಯ್ದುಕೊಂಡಿದ್ದಾರೆಂಬುದು ಅವರ ಹೆಗ್ಗಳಿಕೆ. ಭಾರತದ ಇಂದಿನ ಎಲ್ಲ ಜನಪ್ರಿಯ ಹೀರೋಗಳ ನೃತ್ಯ ಹೆಜ್ಜೆಗಳಿಗೆ ಈತನ ಮಾರ್ಗದರ್ಶನವಿದೆ.
ಪ್ರಭುದೇವರ ತಂದೆ ಮೂಗೂರು ಸುಂದರ್ ಕನ್ನಡವೂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಪ್ರಸಿದ್ಧರು. ತಮ್ಮ ತಂದೆಯಿಂದ ಪ್ರೇರೇಪಣೆ ಪಡೆದ ಪ್ರಭುದೇವ ಭರತ ನಾಟ್ಯ ಮತ್ತು ಇತರ ಭಾರತೀಯ ನೃತ್ಯ ಕಲೆಗಳ ಜೊತೆಗೆ ಪಾಶ್ಚಿಮಾತ್ಯ ನೃತ್ಯ ಕಲೆಗಳಲ್ಲೂ ಅಭ್ಯಾಸ ನಡೆಸಿದರು. ನೃತ್ಯ ಕಲೆ ಅವರ ಆಸ್ಥೆ ಮತ್ತು ವೃತ್ತಿ ಎರಡೂ ಆದವು. ಚಿತ್ರರಂಗದಲ್ಲಿ ನೃತ್ಯದ ಅಳವಡಿಕೆಗಳ ಸ್ವರೂಪದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರಭುದೇವ, ಮುಂದೆ ಚಿತ್ರರಂಗದ ಶ್ರೇಷ್ಠ ಕೋರಿಯಾಗ್ರಫರುಗಳಲ್ಲಿ ಒಬ್ಬರು ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರು ‘ಮಿನ್ಸಾರ್ ಕನವು’, ‘ಲಕ್ಷ್ಯ’ ಚಿತ್ರಗಳಿಗೆ ಪಡೆದ ರಾಷ್ಟ್ರಪ್ರಶಸ್ತಿ ಇದನ್ನು ಸ್ಪಷ್ಟೀಕರಿಸುತ್ತದೆ. ಮಾಧುರಿ ದೀಕ್ಷಿತ್ ಅಂತಹ ಕಲಾವಿದೆಯನ್ನೂ ಒಳಗೊಂಡಂತೆ ‘ಪುಕಾರ್’ ಚಿತ್ರದಲ್ಲಿನ ನೃತ್ಯ ಸನ್ನಿವೇಶವನ್ನು ಅದ್ಭುತವಾಗಿ ಮೂಡಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಮಲ ಹಾಸನ್ ಅಂತಹ ಶ್ರೇಷ್ಠ ನಟನ ಜೊತೆ ಕೂಡಾ ಸರಿ ಸಮಾನ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನನ ಯಶಸ್ವೀ ಚಿತ್ರ ‘ವಾಂಟೆಡ್’, ಅಕ್ಷಯ್ ಕುಮಾರನ ‘ರೌಡಿ ರಾಥೋಡ್’, ‘ಸಿಂಗ್ ಈಸ್ ಬ್ಲಿಂಗ್’ ಚಿತ್ರಗಳ ನಿರ್ದೇಶನ ಕೂಡಾ ಈತನದೇ. ಇಂದು ಪ್ರಭುದೇವ ಕೋರಿಯಾಗ್ರಫಿ, ನಿರ್ದೇಶನ, ನಿರ್ಮಾಣ ಮತ್ತು ನಟನೆಗಳಲ್ಲಿ ಅಪಾರ ಹೆಸರಾಗಿದ್ದಾರೆ. ತಮಿಳು, ತೆಲುಗು, ಹಿಂದೀ ಭಾಷೆಗಳೆಲ್ಲದರಲ್ಲಿ ಅವರು ವ್ಯಾಪಿಸಿದ್ದು ಈ ಎಲ್ಲಾ ಭಾಷೆಗಳಲ್ಲಿ ಅವರು ಜನಪ್ರಿಯ ಚಿತ್ರಗಳನ್ನು ನೀಡಿದ್ದಾರೆ ಎಂಬುದು ಗಮನಾರ್ಹವಾದದ್ದು. ನಟನೆಯ ಬಗ್ಗೆ ಹೇಳುವುದಾದರೆ ನೃತ್ಯ ಸನ್ನಿವೇಶಗಳಲ್ಲಿ ಹೇಗೆ ಆಕರ್ಷಕರಾಗಿ ನಟಿಸುತ್ತಾರೋ ಅಷ್ಟೇ ಆಕರ್ಷಕವಾಗಿ ಹಾಸ್ಯ ಪಾತ್ರಗಳಲ್ಲಿ ಕೂಡಾ ಅಭಿನಯಿಸುವ ಅವರ ಪ್ರತಿಭೆ ಮೆಚ್ಚುವಂತದ್ದು.
ಪ್ರಭುದೇವ ಚಿತ್ರರಂಗಕ್ಕೆ ಬಂದದ್ದು ವೇಟ್ರಿ ವಿಯಾ ಎಂಬ ಚಿತ್ರದಿಂದ. ಅಲ್ಲಿಂದೀಚೆಗ. ಮೂರು ದಶಕಗಳ ಅವಧಿಯಲ್ಲಿ ಅವರು ನೂರಾರು ಚಿತ್ರಗಳಿಗೆ ಕೋರಿಯಾಗ್ರಫಿ ನೀಡಿದ್ದಾರೆ. ಅಂದು ಅಗ್ನಿ ನಕ್ಷತ್ತಿರಂ ಚಿತ್ರದಲ್ಲಿ ಕಾಣದಂತೆ ನೃತ್ಯ ಮಾಡಿ ಹೋದ ಪ್ರಭುದೇವ ಮುಂದೆ ನೂರಾರು ಚಿತ್ರಗಳ ಹೀರೋ. ಕಾದಲನ್, ಜೆಂಟಲ್ ಮ್ಯಾನ್, ಮಿನ್ಸಾರ ಕನವು, ಪುಕಾರ್, ವಾನತ್ತೈ ಪೋಲ, ಎಂದೀರನ್ ಮುಂತಾದ ಚಿತ್ರಗಳಲ್ಲಿ ಆತನ ಕೈಚಳಕ ಮತ್ತು ಸಾಮರ್ಥ್ಯಗಳನ್ನು ಮೆಚ್ಚದವರೇ ಇಲ್ಲ. 1999ರ ವರ್ಷದಲ್ಲಿ ಪ್ರಭುದೇವ, ಶೋಭನ ಮತ್ತು ಎ. ಆರ್. ರೆಹಮಾನ್ ಜೊತೆಗೂಡಿ ಜರ್ಮನಿಯ ಮ್ಯೂನಿಚ್ಚಿನಲ್ಲಿ ‘ಮೈಖೆಲ್ ಜಾಕ್ಸನ್ ಅಂಡ್ ಫ್ರೆಂಡ್ಸ್’ ಕೂಟದಲ್ಲಿ ಪ್ರದರ್ಶನ ನೀಡಿದ್ದರು. ಅವರು ತಮ್ಮ ಸಹೋದರರ ಜೊತೆಗೂಡಿ ಕನ್ನಡವನ್ನೊಳಗೊಂಡಂತೆ ಕೆಲವು ಭಾಷೆಗಳಲ್ಲಿ 123 ಎಂಬ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ಪುನೀತ್ ರಾಜ್ ಕುಮಾರ್ ನಡೆಸುತ್ತಿರುವ ಕೋಟ್ಯಾಧಿಪತಿಯಲ್ಲಿ ಸಹಾ ಪಾಲ್ಗೊಂಡಿದ್ದರು. ಭಾರತದಲ್ಲಿ ಅವರು ನಡೆಸುತ್ತಿರುವ ಸೇವೆಯೇ ಅಲ್ಲದೆ ಸಿಂಗಪುರದಲ್ಲಿ ಪ್ರಭುದೇವ ಡ್ಯಾನ್ಸ್ ಅಕಾಡೆಮಿ ಸ್ಥಾಪಿಸಿದ್ದಾರೆ. ಇಟ್ ಈಸ್ ಬೋರಿಂಗ್ ಎಂಬ ಅವರ ವಿಡಿಯೋ ಆಲ್ಬಂ ಸಹಾ ಹೊರಬಂದಿದೆ. ಪ್ರಸಿದ್ಧ ನೃತ್ಯಪಟು ‘ಲಾರೆನ್ ಗೊಟ್ಟಿಲೆಬ್’ ಜೊತೆಗೂಡಿ ಭಾರತದ ಪ್ರಥಮ 3D ಚಿತ್ರ “ABCD – Any Body Can Dance” ಚಿತ್ರದಲ್ಲಿ ನಟಿಸಿದ್ದಾರೆ. ಅವರ ಹಲವಾರು ನಿರ್ದೇಶನ, ನೃತ್ಯ ನಿರ್ದೇಶನ ಮತ್ತು ನಟನಾ ಚಿತ್ರಗಳು ಬರುತ್ತಿವೆ. ಹೀಗೆ ಅವರು ಪ್ರಾರಂಭದಿಂದ ಪ್ರಸಕ್ತದವರೆಗೆ ಅತ್ಯಂತ ಬೇಡಿಕೆಯಲ್ಲಿದ್ದಾರೆ. ಈ ಬೇಡಿಕೆ ಇನ್ನೂ ಬಹಳಷ್ಟು ಕಾಲ ಮುಂದುವರೆಯುವ ಎಲ್ಲ ಸೂಚನೆಗಳೂ ಇವೆ. ಸಿನಿಮಾ ಲೋಕದ ಪ್ರಶಸ್ತಿಗಳಲ್ಲದೆ ಪದ್ಮಶ್ರೀ ಪ್ರಶಸ್ತಿ ಸಹಾ ಇವರನ್ನರಸಿ ಬಂದಿದೆ.
On the birth day of our great dancing talent Prabhu Deva
ಕಾಮೆಂಟ್‌ಗಳು