ಮಾಯಾ ಏಂಜೆಲೊ
ಮಾಯಾ ಏಂಜೆಲೊ
ಬದುಕೆಂಬ ಕೆಸರ ಗೆದ್ದೆಯಲಿ ಹಲವಾರು ಬಾರಿ ತುಳಿತಕ್ಕೊಳಗಾಗಿ, ನೋವುಗಳಿಗೊಳಗಾಗಿ ನಶಿಸಿಹೋಗುತ್ತಿದ್ದ ಸಂದರ್ಭದಲ್ಲೂ ಪುನಃ ಪುನಃ ಮೇಲೆದ್ದು ಲೋಕಕ್ಕೆ ಸ್ಪೂರ್ತಿ ತುಂಬಿದ ಅನೇಕ ಚೇತನಗಳಿವೆ. ಮಾಯಾ ಏಂಜೆಲೋ ಅಂತಹ ಚೇತನಗಳಲ್ಲಿ ಒಬ್ಬರು.
ಕೆಲವು ದಿನಗಳ ಹಿಂದೆ ಬ್ರೆನೆ ಬ್ರೌನ್ ಎಂಬುವರ ‘Braving the wilderness’ ಎಂಬ ಪುಸ್ತಕ ಓದುತ್ತಿದ್ದೆ. ಮೊದಲು ನಾನು ಮಾಯಾ ಏಂಜೆಲೊ ಅವರ ಹೆಸರು ಕಂಡದ್ದು ಅಲ್ಲಿ.
"ನೀನು ಎಲ್ಲಿಗೂ ಸೇರಿಲ್ಲ - ಎಲ್ಲಕ್ಕೂ ಸೇರಿರುವೆ - ಯಾವುದೇ ಒಂದಕ್ಕೂ ಅಲ್ಲ. ಇದನ್ನು ಅರಿತಾಗ ಮಾತ್ರವೇ ನೀನು ಸ್ವತಂತ್ರ ವ್ಯಕ್ತಿ. ಅದಕ್ಕೆ ನೀಡಬೇಕಾದ ಬೆಲೆ ಅಪಾರ. ಅದರ ಲಾಭ ಮಾತ್ರಾ ಅಮೂಲ್ಯವಾದದ್ದು" ಎಂದು ಹೇಳುವ ಮಾಯಾ ಏಂಜೆಲೊ ಅವರ ಮಾತು ಬ್ರೆನೆ ಬ್ರೌನ್ ಅವರನ್ನು ತೀವ್ರವಾಗಿ ಕಾಡುತ್ತದೆ. ಈ ಮಾತನ್ನು ಆಧ್ಯಾತ್ಮದ ಎಳೆಯಲ್ಲಿ ನಾನು ಆಗಾಗ ಯೋಚಿಸಿದ್ದಿದೆ.
ಇಂದು ಮಾಯಾ ಏಂಜೆಲೊ ಹುಟ್ಟಿದ ದಿನ ಎಂದು ಅವರ ಕುರಿತು ಓದಿದಂತೆಲ್ಲ ಅಲುಗಾಡಿ ಹೋದೆ. ನಾನು ಕಲ್ಪಿಸಿದ್ದ ಒಂದು ಮಾತಿನ ಹಿಂದೆ ಇಂತಹ ವ್ಯಕ್ತಿ ಇದ್ದಿರಬಹುದು ಎಂಬ ಕಲ್ಪನೆ ಕೂಡಾ ನನಗಿರಲಿಲ್ಲ. ಓಹ್ ನಾನೆಷ್ಟೊಂದು ತಿಳಿದಿಲ್ಲ ಎಂದು ವ್ಯಥಿತನಾದೆ.
ಮಾರ್ಕ್ರೈಟ್ ಆನ್ ಜಾನ್ಸನ್ 1928ರ ಏಪ್ರಿಲ್ 4 ರಂದು ಅಮೆರಿಕ ಸಂಯಕ್ತ ಸಂಸ್ಥಾನದ, ಸೇಂಟ್ ಲೂಯಿಸ್, ಮಿಸ್ಸೌರಿಯಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿ ಆಕೆಯ ಸಹೋದರ ಮಾಯಾ ಏಂಜೆಲೊ ಎಂದು ಕರೆಯುತ್ತಿದ್ದ. ಅದೇ ಆಕೆಯ ಪ್ರಸಿದ್ಧ ಹೆಸರಾಯಿತು. ಆಕೆಯ ತಂದೆ ಬೈಲೆಯ್ ಜಾನ್ಸನ್ ನೌಕಾಪಡೆಯ ವೈದ್ಯರಾಗಿದ್ದರು. ತಾಯಿ, ವಿವಿಯನ್ ಬ್ಯಾಕ್ಸ್ಟರ್ ಜಾನ್ಸನ್ ನರ್ಸ್ ಮತ್ತು ಕಾರ್ಡ್ ವ್ಯಾಪಾರಿ.
ಏಂಜೆಲೋ ಮೂರು ವರ್ಷದವಳಾಗಿದ್ದಾಗ, ಮಾಯಾ ಏಂಜೆಲೊ ಹೆತ್ತವರು ವಿಚ್ಛೇದನ ಪಡೆದರು. ಅವಳು ಮತ್ತು ಅವಳ ಸಹೋದರ ಅರಕಾನ್ಸಾಸ್ ಪ್ರದೇಶದ ಸ್ಟ್ಯಾಂಪ್ಸ್ ಎಂಬಲ್ಲಿ ಇದ್ದ ಅಜ್ಜಿಯ ಬಳಿ ವಾಸಿಸಲು ಹೋದರು.
ಪುನಃ ನಾಲ್ಕು ವರ್ಷಗಳಲ್ಲಿ ಸೇಂಟ್ ಲೂಯಿಸ್ನಲ್ಲಿ ತಮ್ಮ ತಾಯಿಯೊಂದಿಗೆ ವಾಸಿಸಲು ಹಿಂದಿರುಗಿದರು. ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾಗ ಎಂಟು ವರ್ಷದ ಬಾಲಕಿ ಮಾಯಾ ಏಂಜೆಲೋ ತನ್ನ ತಾಯಿಯ ಗೆಳೆಯನಿಂದ ಅತ್ಯಾಚಾರಕ್ಕೊಳಗಾದಳು. ಈ ವಿಷಯವನ್ನು ತನ್ನ ಸಹೋದರನಿಗೆ ತಿಳಿಸಿದಾಗ, ಅದು ಸುದ್ಧಿಯಾಗಿ ತಪ್ಪು ಮಾಡಿದವನನ್ನು ಎಲ್ಲರ ಕಣ್ಣೆದುರಿನಲ್ಲೆ ಕೊಂದುಹಾಕಲಾಯಿತು. ತನ್ನ ಎದುರಲ್ಲೇ ನಡೆದ ಆತನ ಬರ್ಬರ ಹತ್ಯೆ ಮಾಯಾ ಏಂಜೆಲೊ ಮುಂದೆ ಸುಮಾರು ಐದು ವರ್ಷಗಳವರೆಗೆ ಮೌನವಾಗಿರಲು ಕಾರಣವಾಯಿತು.
ಕುಟುಂಬದ ಗೆಳತಿ ಮತ್ತು ಶಿಕ್ಷಕಿಯಾಗಿದ್ದ ಬೆರ್ತಾ ಫ್ಲವರ್ಸ್ ಎಂಬಾಕೆ ಮಾಯಾ ಏಂಜೆಲೊ ಪುನಃ ಮಾತನಾಡಲು ಒತ್ತಾಸೆಯಾದರು. ಫ್ಲವರ್ಸ್ ಅವರು ಮಾಯಾ ಏಂಜೆಲೋ ಅವರಿಗೆ ಚಾರ್ಲ್ಸ್ ಡಿಕನ್ಸ್, ವಿಲಿಯಮ್ ಶೇಕ್ಸ್ ಪಿಯರ್, ಎಡ್ಗರ್ ಅಲ್ಲನ್ ಪೋ, ಡೌಗ್ಲಸ್ ಜಾನ್ಸನ್, ಜೇಮ್ಸ್ ವೆಲ್ಡನ್ ಜಾನ್ಸನ್ ಮುಂತಾದ ಬರಹಗಾರರ ಕುರಿತಷ್ಟೇ ಅಲ್ಲದೆ ಬರಹಗಾರ್ತಿಯರಾದ ಫ್ರಾನ್ಸೆಸ್ ಹಾರ್ಪರ್, ಆನ್ ಸ್ಪೆನ್ಸರ್ ಮತ್ತು ಜೆಸ್ಸಿ ಫಾಸೆಟ್ ಮುಂತಾದವರ ಕುರಿತಾಗಿ ಸಹಾ ಆಸಕ್ತಿ ಹುಟ್ಟಿಸಿದರು. ಎಲ್ಲರೂ ಮನುಷ್ಯರೇ, ಅವರಲ್ಲಿ ಒಳ್ಳೆಯವರು, ಕೆಟ್ಟವರು ಇರುತ್ತಾರೆ ಎಂಬ ಪಾಠವನ್ನು ಮಾಯಾಳಿಗೆ ಡಿಕನ್ಸ್ ಓದು ಮೌನವಾಗಿ ಬೋಧಿಸಿತು. ಮಾಯಾ ಅವರ ಜೀವನ ಕಲ್ಲು ಮುಳ್ಳಿನಿಂದ ಕೂಡಿತ್ತು. ಮುಂದೆ ಅವರ ಅನುಭವಗಳೇ ಅವರನ್ನು ಸೂಕ್ಷ್ಮ ಸಂವೇದನೆಗಳ ಮಹಾನ್ ಬರಹಗಾರ್ತಿಯನ್ನಾಗಿ ರೂಪಿಸಿತು
ಏಂಜೆಲೋ 14 ವರ್ಷದವಳಿದ್ದಾಗ ತನ್ನ ತಾಯಿಯೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸಲು ಹೋದರು. ವಿಶ್ವ ಮಹಾಯುದ್ಧದ ಸಮಯದಲ್ಲಿ ಕ್ಯಾಲಿಫೋರ್ನಿಯಾ ಲೇಬರ್ ಶಾಲೆಯಲ್ಲಿ ಓದಿದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ನಗರದ ಕೇಬಲ್ ಕಾರ್ ಸಂಚಾರಿ ಸಂಸ್ಥೆಯಲ್ಲಿ ಮೊಟ್ಟ ಮೊದಲ ಮಹಿಳಾ ಕಂಡಕ್ಟರ್ ಎನಿಸಿದರು. ಶಾಲಾ ವಿದ್ಯಾಭ್ಯಾಸ ಮುಗಿಸಿದ ಮೂರು ತಿಂಗಳ ಅವಧಿಯೊಳಗೆ ತಮ್ಮ 17 ನೇ ವಯಸ್ಸಿನಲ್ಲಿ ಏಂಜಲೋ ತನ್ನ ಮಗ ಗೈ ಜಾನ್ಸನ್ಗೆ ಜನ್ಮ ನೀಡಿದರು.
ಬರಹಗಾರ್ತಿಯಾಗುವುದಕ್ಕೆ ಮುಂಚೆ ಅಡುಗೆಯವಳಾಗಿ, ವೇಶ್ಯೆಯಾಗಿ, ಕ್ಲಬ್ ನರ್ತಕಿಯಾಗಿ ಹೀಗೆ ಮಾಯಾ ಏಂಜೆಲೋ ಹಲವು ಕಸಬುಗಳಲ್ಲಿ ತನ್ನ ಜೀವ ತೇಯ್ದರು.
1950 ರ ವೇಳಗೆ ನೃತ್ಯ ಶಾಲೆ ಆರಂಭಿಸಿ ಹಲವರೊಂದಿಗೆ ನೃತ್ಯ ಕಾರ್ಯಕ್ರಮ ನೀಡಲು ಯತ್ನಿಸಿ ಸೋತರು. ಕಡೆಗೆ ರಾತ್ರಿ ಕ್ಲಬ್ಗಳಲ್ಲಿ ನರ್ತಕಿಯಾದರು.ಮುಂದೆ ಕ್ಯಾಲಿಪ್ಸೋ ಸಂಗೀತದ ನರ್ತನ ಕಲಾವಿದೆಯಾಗಿ ಹಲವಾರು ದೇಶಗಳಲ್ಲಿ ಸಂಚರಿಸಿ ಪ್ರದರ್ಶನ ನೀಡಿದ್ದಲ್ಲದೆ ವಿವಿಧ ದೇಶಭಾಷೆಗಳನ್ನು ಕಲಿತರು.
1959ರಲ್ಲಿ ಮಾಯಾ ಏಂಜೆಲೋ ಅವರು ಪ್ರಖ್ಯಾತ ಕಾದಂಬರಿಕಾರ ಜಾನ್ ಆಲಿವರ್ ಕಿಲ್ಲೆನ್ಸ್ ಅವರನ್ನು ಭೇಟಿ ಆದಾಗ, ಅವರು ಮಾಯಾಗೆ ಬರಹಗಳತ್ತ ಗಮನ ಹರಿಸಬೇಕೆಂದು ಪ್ರೇರೇಪಿಸಿದರು. ಮಾಯಾ ಏಂಜೆಲೋ ಅವರು ಹರ್ಲೆಮ್ ರೈಟರ್ಸ್ ಗಿಲ್ಡ್ ಸೇರಿದರು. 1960ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಭೇಟಿ ಮತ್ತು ಮಾತುಗಳಿಂದ ಪ್ರಭಾವಿತರಾಗಿ ಸದರ್ನ್ ಕ್ರಿಶ್ಚಿಯನ್ ಲೀಡರ್ಶಿಪ್ ಕಾನ್ಫರೆನ್ಸ್ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರಧಾರಿ ಆದರು.
1961ರಲ್ಲಿ ಮಾಯಾ ಏಂಜೆಲೋ ಅವರು ಜೀನ್ ಗೆನೆಟ್ಸ್ ಅವರ ರಂಗ ಪ್ರಯೋಗವಾದ 'ದಿ ಬ್ಲ್ಯಾಕ್ಸ್' ಅಲ್ಲಿ ಅಬ್ಬೆ ಲಿಂಕನ್, ರೋಸೋ ಲೀ ಬ್ರೌನ್, ಜೇಮ್ಸ್ ಅರ್ಲ್ ಜೋನ್ಸ್, ಲೂಯಿ ಗೊಸೆಟ್, ಗಾಡ್ಫ್ರೀ ಕೇಂಬ್ರಿಡ್ಜ್ ಮತ್ತು ಸಿಸಿಲಿ ಟೈಸನ್ ಮುಂತಾದವರೊಂದಿಗೆ ಪಾತ್ರವಹಿಸಿದರು. ಮುಂದೆ ತಾವೇ ಅನೇಕ ನಿರ್ದೇಶನಗಳನ್ನು ಮಾಡಿದರು.
ಕಪ್ಪು ಜನರು ತಮ್ಮ ಭಾಷೆ, ಸಂಗೀತ, ಅಸ್ಮಿತೆ ಯಾವುದನ್ನೂ ಕಳೆದುಕೊಳ್ಳಬಾರದು. ಬಿಳಿಯರಿಂದ ಆಗಿರುವ ಹಿಂಸೆಯನ್ನು ಎದುರಿಸಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಜಗತ್ತಿನ ಉಳಿದ ಜನಾಂಗದ ಜನರು ಅವರನ್ನು ವಿಸ್ಮಯ, ಗೌರವಗಳಿಂದ ನೋಡುವಂತೆ ಮಾಡಬೇಕೆಂದು ಮಾಯಾ ಏಂಜೆಲೋ ಕಂಡ ಕನಸು ನನಸಾಗುವತ್ತ ಹೀಗೆ ಸಾಗಿತು.
ಮಾಯಾ ಏಂಜೆಲೊ ತಮ್ಮ ಬದುಕಿನಲ್ಲಿ ತಾವುಂಡ ಯಾವುದೇ ಕಷ್ಟಗಳನ್ನೂ ತಿರಸ್ಕರಿಸದೆ ಸವಾಲಾಗಿ ತೆಗೆದುಕೊಂಡರು.
ಅವರನ್ನು ಸಂದರ್ಶಿಸಿದ ಪ್ರಸಿದ್ಧರನೇಕರು ಆಕೆಯ ಅಪಾರ ಆತ್ಮವಿಶ್ವಾಸವನ್ನು ಶ್ಲಾಘಿಸುತ್ತಾರೆ.
ಕವಿಯಾಗಿ, ಹಾಡುಗಾರ್ತಿಯಾಗಿ, ನರ್ತಕಿಯಾಗಿ, ನಟಿಯಾಗಿ ಹೆಸರು ಮಾಡಿದ ಮಾಯಾ ಏಂಜೆಲೋ ಅವರ ಜೀವನ ದರ್ಶನ ಹಲವು ಸಂಪುಟಗಳ ಆತ್ಮಕತೆಯಾಗಿ ಹೊರಬಂತು. ಅದರಲ್ಲಿ ಒಂದರ ಹೆಸರು ‘ಸೆರೆ ಹಕ್ಕಿ ಹಾಡುವುದು ಏಕೆಂದು ನಾ ಬಲ್ಲೆ.’ (I Know Why the Caged Bird Sings "On the Pulse of Morning" 1969).
ಅವರ ಆತ್ಮಚರಿತ್ರೆಯ ಇತರ ಕೃತಿಗಳೆಂದರೆ
Gather Together in My Name (1974), Singin' and Swingin' and Gettin' Merry Like Christmas (1976),
The Heart of a Woman (1981),
All God's Children Need Traveling Shoes (1986), A Song Flung Up to Heaven (2002), Mom & Me & Mom (2013).
ಮಾಯಾ ಏಂಜೆಲೊ ಅವರ ಕಾವ್ಯ ಕೃತಿಗಳಲ್ಲಿ Just Give Me a Cool Drink of Water 'fore I Diiie (1971), Oh Pray My Wings Are Gonna Fit Me Well (1975), And Still I Rise (1978), Shaker, Why Don't You Sing? (1983), Poems (1986).
Now Sheba Sings the Song (1987),
I Shall Not Be Moved (1990),
On the Pulse of Morning (1993),
The Complete Collected Poems of Maya Angelou (1994),
Phenomenal Woman: Four Poems Celebrating Women (1995),
A Brave and Startling Truth (1995),
"From a Black Woman to a Black Man"1995, Amazing Peace 2005,
Mother: A Cradle to Hold Me 2006,
"Celebrations, Rituals of Peace and Prayer" (2006), Poetry for Young People (2007), We Had Him 2009,
His Day is Done 2013 ಮುಂತಾದವು ಇವೆ.
ಮಾಯಾ ಏಂಜೆಲೋ ಅವರ ಪ್ರಬಂಧಗಳಲ್ಲಿ
Wouldn't Take Nothing for My Journey Now (1993),
Even the Stars Look Lonesome (1997), Letter to My Daughter (2008) ಮುಂತಾದವು ಇವೆ. ಅಡುಗೆ ಪುಸ್ತಕಗಳು, ಮಕ್ಕಳಿಗಾಗಿ ಪುಸ್ತಕಗಳು ಹೀಗೆ ಇನ್ನಿತರ ಬರಹಗಳೂ ಇವೆ. ಅವರ ವೈವಿಧ್ಯ ಮಾಧ್ಯಮಗಳ ಬರಹಗಳು, ಮಾತುಗಳು, ಸಂದರ್ಶನಗಳೂ ಅಸಂಖ್ಯಾತ.
ಜಗತ್ತಿನ ಲಕ್ಷಾಂತರ ಜನರ ಜೀವನದ ಮೇಲೆ ಮಾಯಾ ಏಂಜೆಲೋ ಅವರ ಕೃತಿ ಮತ್ತು ಬದುಕು ಇಂದಿಗೂ ಪ್ರಭಾವ ಬೀರುತ್ತಿವೆ. ಜೀವನದ ಹೋರಾಟ ಮತ್ತು ಕಪ್ಪು ಜನರ ಪರವಾಗಿ ಕೈಗೊಂಡ ಹೋರಾಟ ಅವರನ್ನು ಬೇರೆ ಬೇರೆ ದೇಶಗಳಿಗೆ ಕರೆದುಕೊಂಡು ಹೋಯಿತು. ಅಮೆರಿಕ, ಆಫ್ರಿಕಾದ ಅನೇಕ ಮಹಾನ್ ಹೋರಾಟಗಾರರೊಂದಿಗೆ ಮತ್ತು ಸಮಾಜ ಸೇವಕರೊಂದಿಗೆ ಕೆಲಸ ಮಾಡುವಂತೆ ಮಾಡಿತು. ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ (ಜೂನಿಯರ್) ಮತ್ತು ಆಫ್ರಿಕಾದ ಮಾಲ್ಕಂ ಜತೆ ಮಾಯಾ ಕೆಲಸ ಮಾಡಿದ್ದರು.
ಮಾಯಾ ಏಂಜೆಲೋ ಶಿಕ್ಷಕಿಯಾಗಿ, ಲೇಖಕಿಯಾಗಿ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಮಾಯಾ ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ ಒಮ್ಮೆ ಅಮೆರಿಕದ ಬಾಕ್ಸಿಂಗ್ ಪಟು ಮೈಕ್ ಟೈಸನ್ ಸೆರೆವಾಸದಲ್ಲಿದ್ದಾಗ ಮಾಯಾ ಅವರನ್ನು ನೋಡಬೇಕು ಎಂದು ಆಸೆ ಪಟ್ಟರು. ಜೈಲಿನ ಅಧಿಕಾರಿಗಳು ಇವರಿಬ್ಬರ ಭೇಟಿಗೆ ಏರ್ಪಾಡು ಮಾಡಿದರು. ಆ ದಿನಗಳಲ್ಲಿ ಟೈಸನ್ ಬಹಳ ಓದಲು ಆರಂಭಿಸಿದ್ದರು. ಮಾಯಾ ಅವರಿಗೆ ಅನೇಕ ಒಳ್ಳೆಯ ಲೇಖಕರನ್ನು ಓದಲು ಹುರಿದುಂಬಿಸಿದರು.
1993ರಲ್ಲಿ ಬಿಲ್ ಕ್ಲಿಂಟನ್ ಅಮೆರಿಕದ ಆಧ್ಯಕ್ಷ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾಯಾ ಏಂಜೆಲೊ ತಮ್ಮ”on the pulse of the morning” ಕವನವನ್ನು ವಾಚಿಸಿದರು.
ಫೆಬ್ರುವರಿ 2011ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾಯಾ ಏಂಜೆಲೊ ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪ್ರೆಸಿಡೆಂಟಲ್ ಮೆಡಲ್ ಆಫ್ ಫ್ರೀಡಂ’ ನೀಡಿ ಗೌರವಿಸಿದ್ದರು.
ಅಂತರಂಗದ ದನಿಗೆ ಕಿವಿಗೊಡಿ ಎಂದು ಮತ್ತೆಮತ್ತೆ ಹೇಳುತ್ತಿದ್ದ ಮಾಯಾ "ನಿಮ್ಮ ಒಳದನಿಗೆ ಕಿವಿಗೊಡಿ. ಆ ಶಾಂತಿಯಲ್ಲಿ ನಿಮಗೆ ದೇವರು ಕಾಣಬಹುದು” ಎಂದು ನುಡಿದಿದ್ದರು
ಮಾಯಾ ಏಂಜೆಲೋ 2014ರ ಮೇ 28 ರಂದು ನಿಧನರಾದರು.
On the birth anniversary of poet, singer, memoirist, and civil rights activist Maya Angelou
ಕಾಮೆಂಟ್ಗಳು