ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಹನಾ ಎಸ್. ವಿ.


 ಎಸ್.ವಿ. ಸಹನಾ 


ವಿದುಷಿ ಎಸ್.ವಿ. ಸಹನಾ ಪ್ರಸಿದ್ಧ ವೀಣಾ ಕಲಾವಿದರಲ್ಲಿ ಒಬ್ಬರು.  ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಬಿಸ್ಮಿಲ್ಲಾ ಖಾನ್ ಯುವ ಪ್ರತಿಭಾ ಪುರಸ್ಕಾರ ಗಳಿಸಿದ ಮಹತ್ವದ ಸಾಧಕಿ. 

ಏಪ್ರಿಲ್ 4 ಸಹನಾ ಅವರ ಜನ್ಮದಿನ. ಅವರ ಊರು ಮೈಸೂರು.  ತಾಯಿ ತಂದೆಯರಾದ ಶೈಲಜಾ - ಟಿ. ಎಸ್. ವೇಣುಗೋಪಾಲ್ ದಂಪತಿಗಳು ಶಿಕ್ಷಣ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಸಂಗೀತ ಮತ್ತು ನೃತ್ಯ ಲೋಕದ ಮಹಾನ್ ಸಾಧಕರ  ಕುರಿತಾದ ಮಹತ್ವದ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಸಂಗೀತದ ಅಪಾರ ಒಲವುಳ್ಳ ಈ ಕುಟುಂಬದಲ್ಲಿ ಜನಿಸಿದ ಸಹನಾ ಯುವ ವಯಸ್ಸಿನಲ್ಲೇ  ಪ್ರಬುದ್ಧ ಸಂಗೀತಗಾರ್ತಿಯಾಗಿ ರೂಪುಗೊಂಡರು.  

ಸಹನಾ ಅವರು ಮಹಾನ್ ವೀಣಾ ವಿದ್ವಾಂಸರಾದ  ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ ಅವರ ಶಿಷ್ಯೆಯಾಗಿ ತಮ್ಮ ಹದಿನಾಲ್ಕನೇ ವಯಸ್ಸಿನಲ್ಲೇ ಸಂಗೀತ ಕಛೇರಿ ಕಲಾವಿದೆಯಾಗಿ ಹೊರಹೊಮ್ಮಿದರು. ವೀಣಾ ಮತ್ತು ಗಾಯನ ವಿದ್ವಾಂಸರಾದ ಪದ್ಮಭೂಷಣ ಟಿ.ಎನ್. ಶೇಷಗೋಪಾಲನ್ ಅವರ ಆಯ್ದ ಶಿಷ್ಯರಲ್ಲಿ ಸಹನಾ ಕೂಡ ಒಬ್ಬರು. ಮುಂದೆ ಅವರು  ಪದ್ಮಭೂಷಣ ಡಾ. ಟಿ.ವಿ.ಗೋಪಾಲಕೃಷ್ಣನ್ ಅವರಲ್ಲಿ ಉನ್ನತ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಸಹನಾ ಅವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ನಡೆಸಿದ ವೀಣಾ ವಿದ್ವತ್ ಪರೀಕ್ಷೆಯಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಸಾಧನೆ ಮಾಡಿದವರು. ಅವರು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕರ್ನಾಟಕ ಸಂಗೀತದ ವೀಣಾ ವಾದನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. NET- UGC ಅರ್ಹತೆ ಗಳಿಸಿದ್ದ ಅವರು UGC ಯಿಂದ ಜೂನಿಯರ್ ಮತ್ತು ಸೀನಿಯರ್ ಸಂಶೋಧನಾ ಫೆಲೋಶಿಪ್ ಪಡೆದಿದ್ದ ಪ್ರತಿಭಾನ್ವಿತೆ. ಮೈಸೂರು ವಿಶ್ವವಿದ್ಯಾನಿಲಯದಿಂದ "ಕರ್ನಾಟಕ ವಾದ್ಯಸಂಗೀತದ ಮೇಲೆ ಸುಧಾರಿತ ತಂತ್ರಜ್ಞಾನದ ಪ್ರಭಾವ: ಒಂದು ಅಧ್ಯಯನ" ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿದ್ದಾರೆ. ಮೈಸೂರಿನ ಲಲಿತಕಲಾ ವಿಶ್ವವಿದ್ಯಾಲಯದ ವೀಣಾ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಅವರ ಸೇವೆ ಸಂದಿದೆ. 

ಸಹನಾ ಅವರು ಆಕಾಶವಾಣಿ ಮತ್ತು ದೂರದರ್ಶನದ "ಎ" ದರ್ಜೆಯ ಕಲಾವಿದರಾಗಿದ್ದಾರೆ.   ಅವರು ಪ್ರತಿಷ್ಠಿತ ನಿಯತಕಾಲಿಕೆಗಳು ಮತ್ತು ಸುದ್ದಿ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ  ಪ್ರಬಂಧ ಮಂಡಿಸಿದ್ದಾರೆ.

ಸಹನಾ ಅವರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಚೇರಿ ನಡೆಸಿಕೊಡುತ್ತ ಬಂದಿದ್ದಾರೆ.  ಐಐಟಿ ಚೆನ್ನೈ, ನಾದ ಇಂಬಮ್ ಸಭಾ, ಮೈಲಾಪುರ ಫೈನ್ ಆರ್ಟ್ಸ್, ಚೆನ್ನೈನ ಶ್ರೀ ಕೃಷ್ಣ ಗಾನ ಸಭಾ, ಅನನ್ಯಾ, ಗಾಯನ ಸಮಾಜ, ತಾಳವಾದ್ಯ ಕಲಾ ಕೇಂದ್ರ, ದೇವಗಿರಿ ಸಂಗೀತ ಸಭಾ, ಬೆಂಗಳೂರು ಉತ್ಸವ, ಮೈಸೂರು ಅರಮನೆ, ಗಾನಭಾರತಿ, ಜೆಎಸ್ಎಸ್ ಸಂಗೀತ ಸಭಾ ಸೇರಿದಂತೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕಚೇರಿ ನೀಡಿದ್ದಾರೆ.  ವಿದೇಶಗಳಲ್ಲೂ ಅವರ ಸಂಗಿತ ಕಚೇರಿಗಳು ನಡೆದಿವೆ. 

ಸಹನಾ ಪ್ರಖ್ಯಾತ ಪಿಟೀಲು ವಾದಕರೂ ಆಗಿರುವ ತಮ್ಮ ಪತಿ ಎ.ಪಿ.ಶ್ರೀನಿವಾಸ್ ಅವರೊಂದಿಗೆ ಅನೇಕ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ಈ ಯುವ ದಂಪತಿಗಳು  'ನಾದ್ ನಿನಾದ್' ಎಂಬ ಸಮಗ್ರ ತಂಡವನ್ನೂ ಸ್ಥಾಪಿಸಿದ್ದಾರೆ. ಇದು ಅನೇಕ  ಮಹತ್ವದ ವೃತ್ತಿಪರ ಸಂಗೀತಗಾರರನ್ನು ಒಳಗೊಂಡಿದ್ದು ಸಂಗೀತದ ಹೊಸಹೊಳಹುಗಳ ಸಾಧ್ಯತೆಗಳ ಕುರಿತು ಗಮನ ಹರಿಸಿದೆ. 

ಪ್ರತಿಭಾನ್ವಿತ ಸಂಗೀತ ಸಾಧಕಿ ಸಹನಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

 Happy birthday Sahana Sv

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ