ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುಖೇಶ್ ಅಂಬಾನಿ


 ಮುಖೇಶ್ ಅಂಬಾನಿ


ಭಾರತದ ಮಹಾನ್ ಉದ್ಯಮಗಳಲ್ಲಿ ಮತ್ತು  ಕಣ್ಣು ಕೋರೈಸುವ ಶ್ರೀಮಂತಿಕೆಯಲ್ಲಿ ಮುಖೇಶ್ ಅಂಬಾನಿ ಇಂದು ಪ್ರಮುಖ ಹೆಸರು.  ಭಾರತದ ಮಹಾನ್ ಸಾಹಸಿಗ ಉದ್ಯಮಿಗಳಲ್ಲಿ ಒಬ್ಬರಾದ  ದಿವಂಗತ ಧೀರಾಬಾಯಿ ಅಂಬಾನಿಯವರ ಹಿರಿಯ ಪುತ್ರರಾದ ಈತ ತಮ್ಮ ಕಿರಿಯ ಸಹೋದರ   ಅನಿಲ್ ಅಂಬಾನಿಯೊಂದಿಗೆ ರಿಲಾಯೆನ್ಸ್ ಸಂಸ್ಥೆಯನ್ನು ಎರಡು ಭಾಗ ಮಾಡಿಕೊಂಡಿದ್ದಾರಾದರೂ, ತಮ್ಮ ಸಂಸ್ಥೆಯಾದ ರಿಲೆಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಮೂಹವನ್ನು ಅತ್ಯಂತ ಶಕ್ತಿಯುತವಾಗಿ ಮತ್ತು ಶ್ರೀಮಂತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.   

ಮುಖೇಶ್ ಅಂಬಾನಿ, ಧೀರೂಬಾಯಿ ಅಂಬಾನಿ ಮತ್ತು ಕೋಕಿಲಾಬೆನ್ ಅಂಬಾನಿ ಅವರ ಮಗನಾಗಿ 1957ರ ಏಪ್ರಿಲ್ 18ರಂದು ಯೆಮೆನ್ ದೇಶದ ಏಡನ್ ಎಂಬಲ್ಲಿ ಜನಿಸಿದರು.  ಸಹೋದರ ಅನಿಲ್ ಅಂಬಾನಿ ಅವರಲ್ಲದೆ ಅವರಿಗಿಬ್ಬರು ಸಹೋದರಿಯರು ಇದ್ದಾರೆ. ಮುಂಬೈನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಮುಖೇಶ್ ಮುಂದೆ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆಯಲು ಹೋದರಾದರೂ ಅದನ್ನು ಅರ್ಧಕ್ಕೇ ಬಿಟ್ಟು ಹಿಂದಿರುಗಿದರು.  1980ರ ದಶಕದಲ್ಲಿ ಇಂದಿರಾ ಗಾಂಧಿ ಸರ್ಕಾರ ಪಾಲಿಯೆಸ್ಟರ್ ತಂತ್ರಜ್ಞಾನವನ್ನು  ಭಾರತದಲ್ಲಿ ಉದ್ಯಮವನ್ನಾಗಿಸಿಕೊಳ್ಳಲು ಖಾಸಗಿ ಉದ್ಯಮಗಳಿಗೆ ಪರವಾನಗಿ ನೀಡಿದಾಗ ಅಲ್ಲಿ ಟಾಟಾ ಬಿರ್ಲಾ ಮುಂತಾದವರು ಸ್ಪರ್ಧೆಯಲ್ಲಿದ್ದರೂ ಅದು ದಕ್ಕಿದ್ದು ಧೀರೂಬಾಯಿ ಅಂಬಾನಿಗೆ.  ಹೀಗಾಗಿ ಧೀರೂಬಾಯಿ ಅಂಬಾನಿ ಒಂದು ರೀತಿಯಲ್ಲಿ ಭಾರತದ ಉದ್ಯಮಗಳಲ್ಲಿ ಎಂತಹ ರಾಜಕೀಯ ಕುಳಗಳನ್ನೂ ಕೈಗೊಂಬೆಯಾಗಿ ಮಾಡಿಕೊಂಡು ಆಡಿಸಿದ ಗಾರುಡಿಗ.  ಪಾಲಿಯೆಸ್ಟರ್ ಉತ್ಪನ್ನದ ಕೈಗಾರಿಕೆಯನ್ನು ನಿರ್ಮಿಸುವುದಕ್ಕಾಗಿ ತಮ್ಮ ತಂದೆಗೆ ಸಹಾಯ ಮಾಡಲು ಮುಖೇಶ್ ಅಂಬಾನಿ ತಮ್ಮ ಎಂ.ಬಿ.ಎ ಓದಿಗೆ ತಿಲಾಂಜಲಿ ಹೇಳಿ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಹಿಂದಿರುಗಿದರು.    ಮುಂದೆ ಅಂಬಾನಿಗಳ ಉದ್ಯಮ ಜವಳಿ, ಪಾಲಿಯೆಸ್ಟರ್ ಫೈಬರ್ಸ್ ಮತ್ತು ಪೆಟ್ರೋಕೆಮಿಕಲ್ ಉದ್ಯಮಗಳಲ್ಲಿ ದಾಪುಗಾಲಿಟ್ಟಿತು.  2010ರ ವರ್ಷದಲ್ಲಿ ಬರೋಡಾ ವಿಶ್ವವಿದ್ಯಾಲಯವು ಮುಖೇಶ್ ಅಂಬಾನಿ ಅವರಿಗೆ ವಿಜ್ಞಾನದ ಗೌರವ ಡಾಕ್ಟರೇಟ್ ಪದವಿಯಿತ್ತು ಸಂಮಾನಿಸಿತು.

1981ರಲ್ಲಿ ರಿಲೆಯನ್ಸ್ ಉದ್ಯಮವನ್ನು ಸೇರಿದ ಮುಖೇಶ್ ಅಂಬಾನಿ ಆ ಸಂಸ್ಥೆಯ ಜವಳಿ, ಫೈಬರ್ಸ್, ಪೆಟ್ರೋಕೆಮಿಕಲ್ ಉತ್ಪನ್ನಗಳಲ್ಲಿ ಮಾತ್ರವಲ್ಲದೆ, ಪೆಟ್ರೋಲಿಯಂ ಸಂಸ್ಕರಣ, ಪೆಟ್ರೋಲ್ ಮತ್ತು ಗ್ಯಾಸ್ ಅನ್ವೇಷಕ ಉದ್ಯಮಗಳವರೆಗೆ ಮೂಡಿಬಂದ ವ್ಯಾಪಕ ವಿಸ್ತರಣೆಯಲ್ಲಿ  ಪ್ರಮುಖ ಪಾತ್ರಧಾರಿ.   ರಿಲೆಯೇನ್ಸ್ ಕಂಮ್ಯೂನಿಕೇಶನ್ ಎಂಬ ಉದ್ಯಮವನ್ನೂ ಸ್ಥಾಪಿಸಿದ್ದಾರೆ.  ತಮ್ಮ ತಂದೆಯ ನಿಧನಾನಂತರದಲ್ಲಿ ಅಂಬಾನಿ ಸಹೋದರರಾದ ಮುಖೇಶ್ ಮತ್ತು ಅನಿಲ್ ಸಂಸ್ಥೆಯನ್ನು ಇಬ್ಭಾಗವಾಗಿಸಿಕೊಂಡು ಕೆಲವೊಮ್ಮೆ ತಮ್ಮ ಜಗಳವನ್ನು ರಸ್ತೆಗೆ ತಂದಿದ್ದರಾದರೂ, ಈ ಈರ್ವರೂ ತಮ್ಮ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮುಂದುವರೆಸಿದ್ದಾರೆ.  ಅನಿಲ್ ಅಂಬಾನಿ ತಮ್ಮ ಸಮೂಹವನ್ನು ರಿಲೆಯನ್ಸ್ ಗ್ರೂಪ್ ಎಂದು ಮಾಡಿಕೊಂಡಿದ್ದಾರೆ.  ಇತ್ತೀಚೆಗೆ ಜಗಳವಾಡದೆ ಗಂಭೀರವಾಗಿ ಪೂರಕವಾಗಿ ನಡೆದುಕೊಳ್ಳುವಲ್ಲಿನ ಲಾಭಗಳನ್ನೂ ಕಂಡುಕೊಂಡಿದ್ದಾರೆ. ಅನಿಲ್ ಅಂಬಾನಿ ಕಷ್ಟಕ್ಕೆ ಸಿಲುಕಿದಾಗ ಆತನಿಗೆ ಮುಖೇಶ್ ದೊಡ್ಡ ಸಹಾಯವನ್ನೂ ಮಾಡಿದ್ದಾರೆ.

ಶೇರು ಮಾರುಕಟ್ಟೆ ಎಂಬ ಭ್ರಮಾನಕ ಪ್ರಪಂಚದಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎಂಬುದು ತರ್ಕಕ್ಕೆ ನಿಲುಕದ ಒಂದು ಸೋಜಿಗ. ಸುದ್ಧಿ ಮಾಧ್ಯಮಗಳ ಲೆಕ್ಕಾಚಾರದ ಪ್ರಕಾರ ಇಂದು ರಿಲೆಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ಮುಖೇಶ್ ಏಷ್ಯಾ ಖಂಡದಲ್ಲಿ ಚೀಣಾದ ಜಾಕ್ ಮಾ ನಂತರದಲ್ಲಿ ಎರಡನೇ ಅತಿ ದೊಡ್ಡ ಉದ್ಯಮಿ ಎನಿಸಿದ್ದಾರೆ. 

ತಮ್ಮ ಸಂಸ್ಥೆಯನ್ನು ಭಾರತೀಯ ಮಾರುಕಟ್ಟೆಯ ಆರ್ಥಿಕ ಮೌಲ್ಯಗಳ ನಿಟ್ಟಿನಲ್ಲಿ ಪ್ರಥಮ ಸ್ಥಾನಕ್ಕೂ, ವಹಿವಾಟಿನಲ್ಲಿ ಎರಡನೆಯ ಬೃಹತ್ ಸ್ಥಾನಕ್ಕೂ ಏರಿಸಿದ್ದಾರೆ.  ಈ ಬೃಹತ್ ರಿಲೆಯನ್ಸ್  ಉದ್ಯಮದಲ್ಲಿ ಇವರ ವೈಯಕ್ತಿಕ ಪಾಲು ಶೇಕಡಾ 45ರ ಸಮೀಪದ್ದು ಎಂದ ಮೇಲೆ ಇವರ ಶ್ರೀಮಂತಿಕೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ.  ಫೋರ್ಬ್ಸ್ ಸಂಸ್ಥೆ ಹೆಸರಿಸಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಇವರ ಶ್ರೀಮಂತಿಕೆಯ ಮೌಲ್ಯ ಸುಮಾರು 39.7 ಸಹಸ್ರ ಕೋಟಿ ಡಾಲರ್ ಮೌಲ್ಯವನ್ನು ಮೀರಿದ್ದು.  ಮುಂಬೈ ಐಪಿಎಲ್ ತಂಡವನ್ನೂ ಒಳಗೊಂಡಂತೆ ಅವರಿಗೆ ಅನೇಕ ಕ್ರೀಡೆಗಳ ಕುರಿತಾದ ಸ್ವಾಮ್ಯವಿದೆ.  

ಮುಖೇಶ್ ಅಂಬಾನಿ ಇತ್ತೀಚೀನ ವರ್ಷದಲ್ಲಿ  ನಿರ್ಮಿಸಿಕೊಂಡಿರುವ ಬೃಹತ್ ಅರಮನೆ  ಹಲವಾರು ಚರ್ಚೆಗಳಿಗೆ ಗ್ರಾಸವಾಗಿದೆ.  ವಿಶ್ವದಲ್ಲಿ ಯಾವ ಪ್ರಸಿದ್ಧ ಸಿನಿಮಾ ವ್ಯಕ್ತಿ, ಉದ್ಯಮಿ, ಕ್ರೀಡಾಳು ಎಷ್ಟೆಷ್ಟು ದೊಡ್ಡ ಅರಮನೆ ಉಳ್ಳವ ಎಂಬುದನ್ನು ಕಥಾನಕವಾಗಿ ಹೇಳುವ; ಎಂತೆಂಥಹ ಮಹಾರಾಜರು ಎಷ್ಟೆಷ್ಟು ಭವ್ಯವಾದ ಅರಮನೆ ಕಟ್ಟಿದ್ದರು, ಪ್ರೇಯಸಿಗಾಗಿ ತಾಜ್ ಮಹಲ್ ಕಟ್ಟಿದ್ದರು ಎಂದು ಹೇಳಿ ಅದನ್ನು ಭವ್ಯ ಸಂಸ್ಕೃತಿಯಂತೆ ಸ್ತುತಿಸುವ ಈ ದೇಶದಲ್ಲಿ ಇಂದಿನ ಒಬ್ಬ ಉದ್ಯಮಿ ಒಂದು ಶ್ರೀಮಂತ ಅರಮನೆ ಕಟ್ಟಿದಾಗ ಆತನನ್ನು ಧೂರ್ತನಂತೆ ಕಾಣುತ್ತದೆ.  

ಇಷ್ಟೊಂದು ಬಡತನದ ಮುಂದೆ ಇಷ್ಟೊಂದು ಶ್ರೀಮಂತಿಕೆಯ ಪ್ರದರ್ಶನವೇ ಎಂಬ ಮಾತು ಒಪ್ಪತಕ್ಕಂತದ್ದು.  ಇವೆಲ್ಲಾ ಇತಿಹಾಸದ ತುಂಬಾ ತುಂಬಿಕೊಂಡಿರುವ ವೈಪರೀತ್ಯಗಳೇ.  ಶ್ರೀಮಂತಿಕೆ ಸೃಷ್ಟಿಸಲಾರದವರು, ಅದು ಬೇಕೆಂದು ಮರುಗುವವರು, ಅದು ನನಗೆ ಕಡಿಮೆ ಇದೆ ಮತ್ತೊಬ್ಬನಿಗೆ ಹೆಚ್ಚಿದೆ ಎನ್ನುವವರು, ಸಮಾಜವಾದಿಗಳು ಹೀಗೆ ಬಹಳಷ್ಟು ಜನ ಇಂತಹ ವಾದಗಳಲ್ಲಿ ಮೂಡಿಬಂದಿದ್ದಾರೆ.  ಒಂದಂತೂ ನಿಜ ನಾವು ಶ್ರೀಮಂತಿಕೆಯನ್ನು ಕಾಣುವಷ್ಟು ನಿಚ್ಚಳವಾಗಿ ಆ ಗಳಿಕೆಯ ಹಿಂದಿನ ಶ್ರಮ-ಸಾಮರ್ಥ್ಯ-ಪ್ರಾಜ್ಞತೆಗಳನ್ನು ಕಾಣಹೋಗುವುದಿಲ್ಲ.   ಸಾಮಾನ್ಯರಾಗಿ ಬದುಕುವ ನಮಗೆ   ವಾದಗಳೆಲ್ಲವೂ ಬುದ್ಧಿವಂತಿಕೆಯದ್ದಾಗಿಯೇ ಕೇಳಿಸುತ್ತವೆ.   ಕೆಲವೊಮ್ಮೆ ಬುದ್ಧಿವಂತಿಕೆ ಅಂದರೆ ಏನು? ಸಮಾನತೆ ಅಂದರೆ ಎಲ್ಲರನ್ನೂ ಬಡವರನ್ನಾಗಿಸುವುದೋ?  ಎಲ್ಲರನ್ನೂ ಶ್ರೀಮಂತವಾಗಿಸುವುದು ಹೇಗೆ?  ಯಾವುದೇ ಅರ್ಹತೆ ಇಲ್ಲದಿದ್ದಾಗ್ಯೂ, ಯಾವುದೇ ಕೆಲಸ ಮಾಡದೆಯೂ, ದೇಶದ ಅತೀ ದೊಡ್ಡ ಹುದ್ದೆಯಲ್ಲಿದ್ದ ಒಬ್ಬಾಕೆ ತನ್ನ ಪ್ರವಾಸಕ್ಕೆ ಇನ್ನೂರು ಮುನ್ನೂರು ಕೋಟಿ ಖರ್ಚು ಮಾಡಿದ್ದು ನಮಗೆ ಗೊತ್ತಿದೆ. ಹೀಗಿರುವಾಗ  ಒಬ್ಬ ಸಂಪಾದನೆ ಮಾಡಿರುವವ ಶ್ರೀಮಂತಿಕೆಯನ್ನು ಅನುಭವಿಸಬಾರದೆ?   ಇತ್ಯಾದಿ ಗೊಂದಲಗಳೇ ನಮಗೆ ಬುದ್ಧಿವಂತಿಕೆಯಾಗಿಬಿಟ್ಟಿರುತ್ತದೆ.    ಆದರೆ ಇಂಥಹ ಅದಮ್ಯ ಶ್ರೀಮಂತಿಕೆಯ ಗಳಿಸುವಿಕೆಯಂತೂ ಹೆಚ್ಚು ಬುದ್ಧಿವಂತಿಕೆಯಲ್ಲಿ ಆಗಿರುತ್ತದೆ ಎಂಬುದು ನಿಜ.  ಈ ನಿಟ್ಟಿನಲ್ಲಿ ಮುಖೇಶ್ ಅಂಬಾನಿ ಇಂದಿನ ಯುಗದ ಒಬ್ಬ ಮಹಾನ್ ಬುದ್ಧಿವಂತ ಎನ್ನಲಡ್ಡಿಯಿಲ್ಲ.  

ಒಬ್ಬ ಉದ್ಯಮಿ ತಾನು ನಿರ್ಮಿಸುವ ಉದ್ಯೋಗಗಳಿಂದ ಹಲವಾರು ಜನರ ಪಾಲಿಗೆ ಬದುಕನ್ನು ನೀಡಿರುತ್ತಾನೆ ನಿಜ.  ಆದರೆ ಅದು ಅಹಂಮಿಕೆಯಾದಾಗ ತನಗೂ ತನ್ನ ಪ್ರಪಂಚಕ್ಕೂ ಒಂದು ತೆಳು ಪರದೆಯನ್ನು ನಿರ್ಮಿಸಿಕೊಂಡಿರುತ್ತಾನೆ.  ಈ ತೆಳುಪರದೆಯನ್ನು ಹೋಗಲಾಡಿಸಿಕೊಳ್ಳುವುದು ಅವರವರ ವೈಯಕ್ತಿಕ ಮನೋಧರ್ಮ.    ಆ ಮನೋಧರ್ಮವನ್ನು ಆತ್ಮೀಕರಿಸಿಕೊಂಡ ವ್ಯಕ್ತಿ ಇನ್ನೂ ಹೆಚ್ಚು ಶ್ರೀಮಂತನಾಗಿರುತ್ತಾನೆ.  ಮುಖೇಶ್ ಅಂಬಾನಿ ಹೇಗೆ ಎಂಬುದನ್ನು ಕಾಲ ಮಾತ್ರ ನಿರ್ಣಯಿಸಬಲ್ಲದು.   ಅಂತಹ ಶ್ರೀಮಂತಿಕೆ ಕೂಡಾ ಈತನಿಗೆ ಸಿಗಲಿ ಎಂದು ಆತನ ಜನ್ಮದಿನದಂದು ಆಶಿಸೋಣ.

On the birth day big name in India industries Mukesh Ambani 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ