ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಲಿತಾ ಪವಾರ್


 ಲಲಿತಾ ಪವಾರ್


ದೂರದರ್ಶನದ ರಾಮಾಯಣದಲ್ಲಿ ಯಾರಿಗೆ ಯಾವ ಪಾತ್ರ ನೆನಪಿಲ್ಲದಿದ್ದರೂ 'ಮಂಥರೆ' ಪಾತ್ರಾ ಮಾತ್ರಾ ಮರೆಯಲು ಸಾಧ್ಯವಿಲ್ಲ.  ಬಹುಶಃ ನಿಜವಾದ ಮಂಥರೆ ಕೂಡಾ ಅಷ್ಟು ಪ್ರಭಾವಯುತಳಾಗಿದ್ದಳೋ ಇಲ್ಲವೋ. ಲಲಿತಾ ಪವಾರ್ ಅಭಿವ್ಯಕ್ತಿಸಿದ ಮಂಥರೆ ಮಾತ್ರಾ ಅವಿಸ್ಮರಣೀಯ.

ಮಹಾನ್ ಕಲಾವಿದೆ ಲಲಿತಾ ಪವಾರ್ 1916ರ ಏಪ್ರಿಲ್ 18ರಂದು ನಾಸಿಕ್ ಬಳಿಯ ಯೆವೋಲ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಅಂಬಾ ಲಕ್ಷ್ಮಣ್ ರಾವ್ ಶಾಗುನ್ ರೇಷ್ಮೆ ಮತ್ತು ಹತ್ತಿ ಉತ್ಪನ್ನಗಳ ಶ್ರೀಮಂತ ವ್ಯಾಪರಸ್ಥರಾಗಿದ್ದರು.

ಬಾಲಕಿ ಲಲಿತಾಗೆ ಏಳು ವರ್ಷವಿದ್ದಾಗ ಪುಣೆಯಲ್ಲಿ ಒಂದು ಚಿತ್ರೀಕರಣ ನಡೆಯುತ್ತಿತ್ತು.  ಆ ಚಿತ್ರೀಕರಣ ನೋಡಲು ಇವರು ಒಂದು ಗೋಡೆ ಹತ್ತಿ ಜಿಗಿದರು.  ಇದು ಆ ಸಿನಿಮಾದ ನಿರ್ದೇಶಕರ ಕಣ್ಣಿಗೆ ಬಿತ್ತು.  ನಿರ್ದೇಶಕರು ಆಕೆಗೆ ಆ ಸಿನಿಮಾದಲ್ಲಿ ಒಂದು ಪಾತ್ರವನ್ನು ಕೊಟ್ಟರಂತೆ.  ಹೀಗೆ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದವರು ಲಲಿತಾ ಪವಾರ್.  ಅವರು 1928ರಲ್ಲಿ ತೆರೆಕಂಡ ರಾಜಾ ಹರಿಶ್ಚಂದ್ರ ಚಿತ್ರದಲ್ಲಿ ಪಾತ್ರ ವಹಿಸಿದರು.  ಮೂಕಿ ಚಿತ್ರಗಳ ಯುಗದಲ್ಲಿ ಪ್ರಧಾನ ಪಾತ್ರಧಾರಿಯಾಗಿದ್ದ ಅವರು ಮುಂದಿನ 7 ದಶಕಗಳ ಕಾಲದಲ್ಲಿ ಹಿಂದೀ, ಮರಾಠಿ ಮತ್ತು ಗುಜರಾಥಿಯ ಸುಮಾರು 700 ಚಿತ್ರಗಳಲ್ಲಿ ನಟಿಸಿದರು. 1938ರಲ್ಲಿ ಅವರು ನಟಿಸಿದ ನೇತಾಜಿ ಪಲ್ಕರ್, ಸಂತ ದಮಾಜಿ, ಗೋರ ಕುಂಬಾರ್, ಅಮೃತ್ ಮುಂತಾದವು ಭವ್ಯ ಯಶಸ್ಸು ಕಂಡವು.  ಅನಾರಿ, ಶ್ರೀ 420, ಮಿಸ್ಟರ್ ಅಂಡ್ ಮಿಸಸ್ 55, ಪ್ರೊಫೆಸರ್ ಮುಂತಾದ ಚಿತ್ರಗಳಲ್ಲಿನ ಅವರ ಪಾತ್ರ ನಿರ್ವಹಣೆಗಳು ಸ್ಮರಣೀಯವೆನಿಸಿವೆ. 

ಲಲಿತಾ ಪವಾರ್ ಅವರು ತಾವು 1932ರಲ್ಲಿ ನಟಿಸಿದ್ದ ಮೂಕಿ ಚಿತ್ರ 'ಕೈಲಾಶ್' ಅನ್ನು ಮತ್ತು1938ರ ಟಾಕಿ ಚಿತ್ರ 'ದುನಿಯಾ ಕ್ಯಾ ಹೈ' ಅನ್ನು ನಿರ್ಮಿಸಿದ್ದರು.

1942ರಲ್ಲಿ 'ಜುಂಗ್ ಎ ಆಜಾದಿ' ಚಿತ್ರದಲ್ಲಿ ಮಾಸ್ಟರ್ ಭಗವಾನ್ ನಟಿಸುತ್ತಿದ್ದು, ಸನ್ನಿವೇಶವೊಂದರ ಚಿತ್ರೀಕರಣದಲ್ಲಿ ನಟಿ ಲಲಿತಾ ಪವಾರ್ ಅವರ ಕೆನ್ನೆಗೆ ಹೊಡೆಯಬೇಕಿತ್ತು.  ಹೊಸದಾಗಿ ಬಂದ ಭಗವಾನ್ ಅವರಿಗೆ ಹೇಗೆ ಹೊಡೆಯಬೇಕೆಂದು ಗೊತ್ತಿರಲಿಲ್ಲ.  ಹೀಗಾಗಿ ಲಲಿತಾ ಅವರ ಕೆನ್ನೆಗೆ ನಿಧಾನವಾಗಿ ಹೊಡೆಯುವ ಬದಲು ಜೋರಾಗಿ ಹೊಡೆದರು.  ತಕ್ಷಣ ಕೆಳಗೆ ತಿರುಗಿಬಿದ್ದ ಲಲಿತಾ ಅವರ ಕಿವಿಯಿಂದ ರಕ್ತ ಹರಿದು ಅವರ ಎಡಗಣ್ಣಿನ ದೃಷ್ಟಿ ಮಂಕಾಯಿತು. ಇದರಿಂದ ಚೇತರಿಸಿಕೊಳ್ಳಲು ಲಲಿತಾ ಪವಾರ್ ಅವರಿಗೆ ಸುಮಾರು ಮೂರು ವರ್ಷ ಬೇಕಾಯಿತು.   ಹೀಗಾಗಿ ಅವರು  ಪೋಷಕ ನಟಿಯಾಗಿ ಅಭಿನಯಿಸತೊಡಗಿದರು. ಅದರಲ್ಲೂ ಗಡುಸಾದ ಹಿರಿಯ ಸ್ತ್ರೀ ಪಾತ್ರಗಳನ್ನು ಅವರಂತೆ ನಟಿಸಿದವರು ಮತ್ತೊಬ್ಬರಿಲ್ಲ. ರಮಾನಂದ ಸಾಗರ್ ಅವರ ದೂರದರ್ಶನದ 'ರಾಮಾಯಣ' ಧಾರಾವಾಹಿಯಲ್ಲಂತೂ ಆಕೆಯ ಮಂಥರೆ ಪಾತ್ರ ನಿರ್ವಹಣೆ ಅವಿಸ್ಮರಣೀಯ.

ಲಲಿತಾ ಪವಾರ್ ಅವರು ಅನಾರಿ ಚಿತ್ರದ ಅಭಿನಯಕ್ಕಾಗಿ ಫಿಲಂಫೇರ್ ಪೋಷಕ ನಟಿ ಪ್ರಶಸ್ತಿ ಗಳಿಸಿದರು.  1961ರಲ್ಲಿ ಅವರಿಗೆ ಭಾರತ ಸರ್ಕಾರದಿಂದ ಭಾರತೀಯ ಸಿನಿಮಾರಂಗದ ಪ್ರಥಮ ಮಹಿಳೆ ಎಂಬ ಪುರಸ್ಕಾರ ಸಂದಿತು. ಅವರಿಗೆ ಸಂಗೀತ ನಾಟಕ ಅಕಾಡೆಮಿ ಗೌರವವೂ ಸಂದಿತು.

ಲಲಿತಾ ಪವಾರ್ 1998ರ ಫೆಬ್ರವರಿ 24ರಂದು ನಿಧನರಾದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ