ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುದರ್ಶನ್ ಪಟ್ನಾಯಕ್


 ಸುದರ್ಶನ್ ಪಟ್ನಾಯಕ್


ಮರಳಿನ ಮೇಲೆ ಹೊಸ ಲೋಕವನ್ನು ತೆರೆದಿಡುವ ಸುದರ್ಶನ್ ಪಟ್ನಾಯಕ್ ಇಂದು ವಿಶ್ವ ಪ್ರಸಿದ್ಧರು. 

ಕೊರೊನಾ ಸಮಯದಲ್ಲಿ ಕ್ಷೇಮವಾಗಿರಿ ಸಂದೇಶದವರೆಗೆ ವಿವಿಧ ಕಲಾಕೃತಿಗಳು, ಸ್ಮರಣೀಯ ವ್ಯಕ್ತಿಗಳು, ಘಟನಾವಳಿಗಳು, ಪ್ರಾಕೃತಿಕ ಸೌಂದರ್ಯ, ಕಲಾ ವೈಭವ ಹೀಗೆ ಎಲ್ಲವನ್ನೂ ರಮಣೀಯವಾಗಿ ಮರಳಿನಲ್ಲಿ ಮೂಡಿಸುವ ಸುದರ್ಶನ್ ಅವರ ಕಲೆ ವಿಶ್ವದೆಲ್ಲೆಡೆ ಗೌರವವನ್ನು ಗಳಿಸುತ್ತಾ ಕಲಾರಸಿಕರ ಮನತಣಿಸುತ್ತಿದೆ.

ಸುದರ್ಶನ್ ಒಂದು ಕಾಲದಲ್ಲಿ ಹೊಟ್ಟೆ ಹೊರೆಯಲು ಬಾಲ ಕಾರ್ಮಿಕನಾಗಿ ದುಡಿಯುತ್ತಿದ್ದವರು.

ಸುದರ್ಶನ್ ಪಟ್ನಾಯಕ್ 1977ರ ಏಪ್ರಿಲ್ 15ರಂದು ಒದಿಶಾದ ಪುರಿಯಲ್ಲಿ ಜನಿಸಿದರು. ಬಡತನದಲ್ಲಿ ಹುಟ್ಟಿದ ಸುದರ್ಶನ್ ಅವರಿಗೆ ಶಾಲಾ ಓದು ಕೈಗೆಟುಕದ ಹಾಗಿತ್ತು.  ಆದರೆ, ಈ ವಿಸ್ಮಯ ಜಗತ್ತು ಅವರಿಗಾಗಿ ಹೊಸ ಲೋಕವನ್ನು ಕಾದಿರಿಸಿತ್ತು. ಇದು ಈ 'ಮರುಳು' ಜಗತ್ತನ್ನು  'ಮರಳು ಕಲಾಜಗತ್ತು' ಎಂಬ ವಿಸ್ಮಯ ಲೋಕಕ್ಕೆ ತೆರೆದಿರುವ ಸುದರ್ಶನ್ ಪಟ್ನಾಯಕ್ ಅವರ ಪರಿ.

ಸುದರ್ಶನ್ ಅವರಿಗೆ ಎಳೆಯ ವಯಸ್ಸಿನಿಂದಲೂ ಚಿತ್ರಗಳನ್ನು ಬರೆಯುವದೆಂದರೆ ಏನೋ ಖುಷಿ, ಸಂತೋಷ. ಆದರೆ ಬಣ್ಣಗಳನ್ನು ಕೊಳ್ಳಲು ಹಣವಾದರೂ ಎಲ್ಲಿಯದು. ಆಗಲೇ ಕಂಡಿದ್ದು ಮನೆಯ ಮುಂದಿನ ಸಮುದ್ರ ತೀರದಲ್ಲಿದ್ದ ಮರಳು. ಅದನ್ನೇ ಬಳಸಿಕೊಂಡು ಶಿಲ್ಪಗಳನ್ನು ರಚಿಸಿದರೆ ಹೇಗೆ ಎಂದು ಯೋಚಿಸಿ ಸಣ್ಣ ಪ್ರಯತ್ನವನ್ನು ಆರಂಭಿಸಿದರು.ಆಗ ಸುದರ್ಶನ್‍ಗೆ ಇನ್ನೂ 9 ವರ್ಷ. ವರ್ಷಗಳು ಉರುಳುತ್ತಿದ್ದಂತೆ ಸುದರ್ಶನ್‍ಗೆ ಮರಳು ಶಿಲ್ಪ ರಚನೆ ಸುಲಲಿತವಾಗಿ ಒಲಿಯಿತು. 

"ಮರಳು ಶಿಲ್ಪವನ್ನು ನಾನು ನಿರಂತರ ಅಭ್ಯಾಸದಿಂದ ಕಲಿತಿದ್ದು. ಆದರೆ ಇಂದಿನ ನನ್ನ ಯಶಸ್ಸು ಅದನ್ನೆಲ್ಲಾ ಮುಚ್ಚಿ ಹಾಕಿದೆ. ಒಬ್ಬ ಬಾಲ ಕಾರ್ಮಿಕನಾಗಿ ಜೀವನದ ಬಂಡಿ ಎಳೆಯಲು ಹರಸಾಹಸಪಡುತ್ತಿದ್ದ ದಿನಗಳು ನನ್ನ ಕಣ್ಣ ಮುಂದೆ ಇನ್ನೂ ಹಾಗೇ ಇದೆ. ಇಂದು ನಾನು ಸಾಕಷ್ಟು ಹೆಸರು ಮಾಡಿರುವ ಕಲಾವಿದನಾಗಿರಬಹುದು. ಅದರೆ ಒಂದು ಕಾಲದಲ್ಲಿ ಕಡು ಬಡತನದಿಂದ ಬಳಲಿದ್ದೇನೆ. ಆ ಸಮಯದಲ್ಲಿ ದೇವರು ನನಗೆ ಈ ಕಲೆಯನ್ನು ವರವನ್ನಾಗಿ ನೀಡಿದ. ನಮ್ಮ ದೇಶದಲ್ಲಿ ಪ್ರತಿಭಾವಂತ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತದೆ ಎಂಬುದಕ್ಕೆ ನನಗೆ ದೊರೆತ ಪದ್ಮಶ್ರಿ ಪುರಸ್ಕಾರವೇ ಉದಾಹರಣೆ" ಎನ್ನುತ್ತಾರೆ ಸುದರ್ಶನ್ ಪಟ್ನಾಯಕ್.

ಮರಳಿನ ಶಿಲ್ಪಗಳನ್ನು ಮಾಡುವುದು ಸವಾಲೊಡ್ಡುವಂತಹ  ಕಲೆ. ಶಿಲ್ಪಿಗಳು ಎಚ್ಚರಿಕೆಯಿಂದ ಶಿಲ್ಪಗಳನ್ನು ಕಟ್ಟಿದಂತೆಲ್ಲಾ, ಅದು ಕೆಳಗೆ ಬೀಳುತ್ತಾ ಹೋಗುತ್ತದೆ. ಹವಾಮಾನವೂ ಮರಳು ಕಲೆಗೆ ಸಹಕಾರಿಯಾಗಿರಬೇಕು. ಆ ಕಾರಣಕ್ಕಾಗಿಯೇ ಮರಳು ಕಲಾವಿದರು ವಿಶ್ವದಲ್ಲಿ ಸಾಕಷ್ಟು ಕಡಿಮೆ ಇರುವುದು ಎಂದು ಸುದರ್ಶನ್ ಹೇಳುತ್ತಾರೆ.

ಸುದರ್ಶನ್ ಪಟ್ನಾಯಕ್ ವಿಶ್ವದೆಲ್ಲೆಡೆಯಲ್ಲಿ ಮರಳು ಶಿಲ್ಪಕಲಾ ಪ್ರದರ್ಶನ ಸ್ಪರ್ಧೆಗಳಲ್ಲಿ ಇದುವರೆವಿಗೂ 27 ಬಾರಿ ಪ್ರಶಸ್ತಿ ಗೆದ್ದು ಭಾರತದೇಶಕ್ಕೆ ಕೀರ್ತಿ ತಂದಿದ್ದಾರೆ.  ದೇಶ ಅವರಿಗೆ ಪದ್ಮಶ್ರೀ ಗೌರವ ನೀಡಿ ಸಂಮಾನಿಸಿದೆ. ಗೌರವ ಡಾಕ್ಟೊರೇಟ್, ಲಿಮ್ಕಾ ಪುಸ್ತಕ ದಾಖಲೆಗಳ ಖ್ಯಾತಿ, ಸಿಎನ್‍ಎನ್-ಐಬಿಎನ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಮತ್ತು ವಿಶ್ವದೆಲ್ಲೆಡೆಯ ಗೌರವಗಳು ಅವರಿಗೆ ಸಲ್ಲುತ್ತಾ ಸಾಗಿವೆ.

ಸುದರ್ಶನ್ ತಮ್ಮಲ್ಲಿರು ಕಲೆಯನ್ನು ಇತರರಿಗೂ ಪಸರಿಸುವ ಉದ್ದೇಶದಿಂದ ಪುರಿಯಲ್ಲಿ ಮರಳು ಕಲೆಯನ್ನು ಕಲಿಸುವ ಶಾಲೆ ತೆರೆದಿದ್ದಾರೆ.

On the birth day of great sand artiste Sudarshan Patnaik

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ