ಎಂ. ಪ್ರಭಾಕರ್
ಎಂ.ಪ್ರಭಾಕರ್
ಎಂ. ಪ್ರಭಾಕರ್ ಸುಗಮ ಸಂಗೀತ ಕ್ಷೇತ್ರದಲ್ಲಿ ಹಿರಿಯ ಹೆಸರು.
ಎಂ. ಪ್ರಭಾಕರ್ 1922ರ ಏಪ್ರಿಲ್ 15ರಂದು ಭಟ್ಕಳದಲ್ಲಿ ಜನಿಸಿದರು. ಪ್ರಭಾಕರ್ ಅವರ ತಂದೆ ಎಂ. ರಂಗರಾವ್ ಸಂಗೀತ, ಸಾಹಿತ್ಯ, ಅಭಿನಯ ಹಾಗೂ ಚಿತ್ರಕಲೆಯಲ್ಲಿ ಅಭಿರುಚಿ ಉಳ್ಳವರಾಗಿದ್ದರು. ಹೀಗಿದ್ದರೂ ಒಂದು ಭದ್ರನೆಲೆ ಕಾಣದವರಾಗಿದ್ದು, ಹತ್ತು ಮಕ್ಕಳ ದೊಡ್ಡ ಸಂಸಾರದ ಹೊರೆ ಶಾಲಾ ಶಿಕ್ಷಕಿಯಾಗಿದ್ದ ತಾಯಿ ಕಾವೇರಿಬಾಯಿಯವರ ಮೇಲೆ ಬಿದ್ದಿತ್ತು. ಹೀಗೆ ಬಾಲ್ಯವನ್ನು ಪ್ರಭಾಕರ್ ಕಷ್ಟಕೋಟಲೆಗಳ ನಡುವೆ ಕಳೆದರು. ನಾಲ್ಕನೇ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ತಂದೆ ಮತ್ತು ಅಣ್ಣ ವಿಮಲಾನಂದದಾಸ್ ಜೊತೆಗೆ ಊರಿಗೆ ಬಂದನಾಟಕ ಮಂಡಲಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಹಾಡುವ ಗೀಳು, ಸಂಗೀತದಲ್ಲಿ ಆಸಕ್ತಿ ಅವರಿಗೆ ಹುಟ್ಟಿನಿಂದಲೇ ಬಂದಿತ್ತು. ನಾಟಕಗಳಲ್ಲಿ ಅಣ್ಣನಿಗೆ ಹಾರ್ಮೋನಿಯಂ ನುಡಿಸುವುದು, ಹಾಡುವುದು ಅವರ ಪರಿಪಾಠವಾಯಿತು.
ಪ್ರಭಾಕರ್ ಅವರ ಹಿರಿಯ ಅಣ್ಣ ವಿಮಲಾನಂದದಾಸರು ಪ್ರಖ್ಯಾತ ಕೀರ್ತನಕಾರರು. ಮತ್ತೊಬ್ಬ ಅಣ್ಣ ಜಗನ್ನಾಥರಾವ್ ಹಾರ್ಮೋನಿಯಂ ತಯಾರಕರು. ಇಬ್ಬರು ಸಹೋದರಿಯರಾದ ಪಂಡರಿಬಾಯಿ ಮತ್ತು ಮೈನಾವತಿ ಚಿತ್ರಲೋಕದ ತಾರೆಯರಾಗಿ ಕಂಗೊಳಿಸಿದವರು. ಹೀಗೆ ಇವರದ್ದ ಕಲಾಶ್ರೀಮಂತಿಕೆಯ ಕುಟುಂಬ.
ನಾಟಕ ಮಂಡಲಿಯಲ್ಲಿ ಕಾಳಿಂಗರಾಯರು ಸ್ತ್ರೀ ಪಾತ್ರಧಾರಿಯಾಗಿ ಹಾಡುಗಳನ್ನು ಹಾಡುತ್ತಿದ್ದರು. ಪ್ರಭಾಕರ್ ಅವರಿಗೆ ಅವರ ಜೊತೆ ಸ್ನೇಹ ಬೆಳೆದದ್ದು ಮುಂದೆ ಸುಗಮಸಂಗೀತದಲ್ಲಿ ಉಪಯೋಗಕ್ಕೆ ಬಂದಿತು. ನಾಟಕ ಮಂಡಲಿಯ ಜೊತೆ ರಾಜ್ಯದೆಲ್ಲೆಡೆ ಪ್ರಯಾಣ ಮಾಡಿ ರಂಗಗೀತೆಗಳು, ದೇವರನಾಮಗಳು ಹಾಗೂ ಕೀರ್ತನೆಗಳನ್ನು ಹಾಡಿ ಜನಮೆಚ್ಚುಗೆ ಪಡೆದರು. ತಿರುಗಾಟ ಬೇಸರ ತಂದಿತು. ಸಂಗೀತವನ್ನು ಗುರುವಿನ ಮಾರ್ಗದರ್ಶನದಲ್ಲಿ ಕಲಿಯಬೇಕೆಂಬ ಹಂಬಲದಿಂದ ಶಿವಮೊಗ್ಗೆಗೆ ಬಂದರು.
ಸಂಗೀತ ವಿದ್ವಾನ್ ಬಿ.ಎಸ್. ರಾಮಯ್ಯನವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ನಂತರ ಬೆಂಗಳೂರಿನ ವಿದ್ವಾನ್ ಎಲ್. ಎಸ್. ನಾರಾಯಣ ಸ್ವಾಮಿ ಭಾಗವತರಲ್ಲಿ ಪ್ರೌಢ ಶಿಕ್ಷಣ ಪಡೆದರು. ಪ್ರಭಾಕರ್ ಅವರ ಆಸ್ಥಿ ಅವರ ಸಿರಿಕಂಠ ಮತ್ತು ಭಾವಪೂರ್ಣ ಹಾಡುಗಾರಿಕೆ. ತಾವು ಭಾವಪರವಶರಾಗಿ ಹಾಡುತ್ತಿದ್ದಾಗ ಕಣ್ಣೀರಿಡುತ್ತಿದ್ದ ಸಭಿಕರು, ಪಿಟೀಲನ್ನು ಕೆಳಗಿಟ್ಟು ಕಣ್ಣೊರೆಸಿಕೊಳ್ಳುತ್ತಿದ್ದ ಪಕ್ಕವಾದ್ಯದವರನ್ನು ಅವರು ಅಭಿಮಾನ ಗೌರವಗಳಿಂದ ನೆನೆಯುತ್ತಾರೆ. ಕಲಿತಿದ್ದ ಸಂಗೀತವನ್ನು ಜೀವನಾಧಾರವಾಗಿಸಿಕೊಂಡು ಶಿಷ್ಯರಿಗೆ ಧಾರೆಯೆರೆಯಲು ಪ್ರಾರಂಭಿಸಿದರು. ಮುಂದೆ ಹಿಂದುಸ್ತಾನಿ ಶೈಲಿಯಲ್ಲಿ ಆಸಕ್ತಿ ಮೂಡಿ ಬೊಂಬಾಯಿಗೆ ಪ್ರಯಾಣ ಬೆಳೆಸಿದರು. ಸಂಗೀತ ಪಾಠಗಳನ್ನು ಮಾಡಿ ಜೀವನ ಸಾಗಿಸಿದರು. ಒಬ್ಬ ಪ್ರಸಿದ್ಧ ಗವಾಯಿಗಳ ಬಳಿ ಕಲಿಯಲು ವಿಚಾರಿಸಿದಾಗ ಪಾಠಕ್ಕೆ 30 ರೂಪಾಯಿಗಳು ಎಂದಾಗ ಜೀವನವೇ ಕಷ್ಟಕರವಾಗಿದ್ದಾಗ ಅದು ಬಹಳ ದುಬಾರಿ ಎನಿಸಿ ಆ ಕನಸನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿದರು. ನಂತರ ತಾವೇ ಪುಸ್ತಕಗಳನ್ನು ಕೊಂಡು ಕೀರ್ತನೆಗಳನ್ನು, ವರ್ಣಗಳನ್ನು ಕಲಿತರು. ಸಂಗೀತ ಪಾಠವನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ಯಾವುದೋ ಸಂಸ್ಕಾರ ನನ್ನನ್ನು ಹಾಡಲು ಪ್ರೇರೇಪಿಸಿದೆ ಎನ್ನುತ್ತಿದ್ದರು.
ಆಕಾಶವಾಣಿ ಪ್ರಾರಂಭವಾದ ದಿನಗಳಲ್ಲಿ ಪ್ರಭಾಕರ್ ಕೀರ್ತನೆಗಳು ಮತ್ತು ದೇವರನಾಮಗಳನ್ನು ಹಾಡುತ್ತಿದ್ದರು. ರಾಜ್ಯದೆಲ್ಲೆಡೆ ಹಾಗೂ ಮುಂಬಯಿ, ಚೆನ್ನೈ, ಆಂಧ್ರಪ್ರದೇಶ, ಕೇರಳ ಎಲ್ಲ ಕಡೆ ಅನೇಕ ಬಾರಿ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿದರು. ಆಗ ಗೋಟುವಾದ್ಯ ಕಲಾವಿದರಾಗಿದ್ದ ವರಾಹಸ್ವಾಮಿ ಅವರು "ನಿನ್ನ ಶಾರೀರ ಬಹಳ ಚೆನ್ನಾಗಿದೆ ಬಹಳ ಅನುಭವಿಸಿ ಹಾಡುತ್ತೀಯ ಕನ್ನಡ ಗೀತೆಗಳನ್ನು ಹಾಡು" ಎಂದು ಪ್ರೇರೇಪಿಸಿದರು. ಹೀಗೆ ಸುಗಮ ಸಂಗೀತ ಹಾಡಲು ಪ್ರಾರಂಭಿಸಿದ ಇವರು ದೊರೆಸ್ವಾಮಿ ಅಯ್ಯಂಗಾರ್, ಎಂ.ಡಿ. ಪಾರ್ಥಸಾರಥಿ, ಎ.ವಿ.ಕೃಷ್ಣಮಾಚಾರ್, ಎಚ್.ಆರ್. ಲೀಲಾವತಿ ಮುಂತಾದವರ ಸಂಗೀತ ನಿರ್ದೇಶನದಲ್ಲಿ ಕನ್ನಡಗೀತೆಗಳನ್ನು ಹಾಡಿದರು. ಹಾಗೆಯೇ ಸ್ವತಃ ತಾವೂ ಕೂಡ ರಾಗಸಂಯೋಜನೆ ಮಾಡತೊಡಗಿದರು. ಕುವೆಂಪು ಅವರ ಗೀತೆಗಳು ಇವರಿಗೆ ಬಹಳ ಅಚ್ಚುಮೆಚ್ಚು.
ಪ್ರಭಾಕರ್ ಅವರ ಕಂಠಶ್ರೀಯಿಂದ ಹೊರಹೊಮ್ಮಿದ ಹಾಡುಗಳಿಗೆ ಲೆಕ್ಕವಿಲ್ಲ. ‘ನೂರು ಸಲ ಜುಮ್ಮೆನುವುದೀ ಮನ’, ‘ನೀ ಬರುವ ದಾರಿಯಲಿ’, ‘ಅಧರದಿ ನಸುನಗೆ’, ‘ಪಡುವಣ ಬಾನಿನ ನೀಲಿಯ ಹಣೆಯಲಿ’, 'ಶುಭನುಡಿಯೆ ಶಕುನದ ಹಕ್ಕಿ’, ‘ಹಾಡು ಹಳೆಯದಾದರೇನು ಭಾವ ನವನವೀನ’, ‘ನಗುನಗುತ ಹಗುರವಾಗು’, ‘ಕವಿದ ಕತ್ತಲೆಯಲ್ಲಿ ಕೈಹಿಡಿದು ನಡೆಸಯ್ಯ’ ಹೀಗೆ ಇವರ ಕಂಠ ಸಿರಿಯಿಂದ ಹೊಮ್ಮಿದ ಹಾಡುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎಚ್.ಆರ್. ಲೀಲಾವತಿಯವರೊಂದಿಗೆ ಎನ್.ಕೆ. ಕುಲಕರ್ಣಿ ಅವರ ಕವನಗಳನ್ನಾಧರಿಸಿದ ‘ನವತಾರಾ ಮಂಡಲ’ ಎಂಬ ಸಂಗೀತ ರೂಪಕದಲ್ಲಿ ಮತ್ತು ಎಚ್. ಆರ್. ಲೀಲಾವತಿಯವರ ಸಂಗೀತ ನಿರ್ದೇಶನದಲ್ಲಿ ‘ವರ್ಷ ವೈಭವ’ ಎಂಬ ಸಂಗೀತ ರೂಪಕದಲ್ಲಿ ಹಾಡಿ ಪ್ರಭಾಕರ್ ಜನಮನ್ನಣೆ ಪಡೆದರು. ಡಿ.ಎಸ್.ಕರ್ಕಿ ಅವರ ಕವನದ ಸಾಲು "ಎಲ್ಲಿಹುದೆನಲೇಕೆ ಜೇನು? ನೀ ಪಾನಗೈಯಲು ಬಲ್ಲೆಯಾದರೆ ಜಾಣ ಎಲ್ಲೆಲ್ಲೂ ಇಹುದದು" ಅವರಿಗೆ ತುಂಬಾ ಪ್ರಿಯವಾದದ್ದು. ಪ್ರಭಾಕರ್ ಅವರ ರಾಗಸಂಯೋಜನೆಯಲ್ಲಿ ಶಾಸ್ತ್ರೀಯ ಸಂಗೀತದ ಸೊಗಡು ಎದ್ದು ಕಾಣುತ್ತದೆ.
ಪ್ರಭಾಕರ್ ಅವರಿಗೆ ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಎರಡೂ ಕ್ಷೇತ್ರಗಳಲ್ಲಿ ಅನೇಕ ಪ್ರಶಸ್ತಿಗಳು ಸಂದಿವೆ. 1980ರಲ್ಲಿ ಮೈಸೂರಿನಲ್ಲಿ ದಿವಂಗತ ಡಾ.ಬಿ. ದೇವೇಂದ್ರಪ್ಪನವರು ಪ್ರಭಾಕರ್ ಅವರಿಗೆ ‘ಗಾಯಕ ರತ್ನ’ ಎಂಬ ಬಿರುದನ್ನು ನೀಡಿ ಆಶೀರ್ವದಿಸಿದರು. 1986ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ತು ಶಿವಮೊಗ್ಗೆಯಲ್ಲಿ ನಡೆದ ಸಂಗೀತ ವಿದ್ವಾಂಸರ 16ನೇ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾನಿಸಿತು. 1988-89ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಹಾಗೂ 2001ನೇ ಸಾಲಿನ ಸುಗಮಸಂಗೀತದ ಅತ್ಯುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್ ಪ್ರಶಸ್ತಿಗಳೇ ಅಲ್ಲದೆ, ಅನೇಕ ಸ್ಥಳೀಯ ಸಂಘ ಸಂಸ್ಥೆಗಳು ಬಿರುದು ಬಾವಲಿಗಳನ್ನು ನೀಡಿ ಗೌರವಿಸಿದವು.
ದೀರ್ಘಾವಧಿಯ ಸಂಗೀತ ಶಿಕ್ಷಕ ವೃತ್ತಿಯಿಂದಾಗಿ ನೂರಾರು ಜನ ಶಿಷ್ಯರನ್ನು ತಯಾಸಿದ ಕೀರ್ತಿ ಪ್ರಭಾಕರ್ ಅವರದು.
ಎಂ. ಪ್ರಭಾಕರ್ ಅವರು 2020ರ ಕೊನೆಯಲ್ಲಿ ಈ ಲೋಕವನ್ನಗಲಿದರು.
On the birth day of singer M. Prabhakar

ಕಾಮೆಂಟ್‌ಗಳು