ಸಿರಿಗನ್ನಡ ಸಾರಸ್ವತರು
ಸಿರಿಗನ್ನಡ ಸಾರಸ್ವತರು
ಇಂದು ನಮ್ಮನ್ನಗಲಿದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡದ ನವೋದಯ ಕಾಲದ ಪ್ರಾರಂಭದ ಶ್ರೇಷ್ಠ ಕೊಂಡಿಯಾಗಿ ನಮ್ಮ ನಮ್ಮ ಕಾಲದಲ್ಲಿದ್ದವರು. ಕಳೆದ ಶತಮಾನದಲ್ಲಿ ಕನ್ನಡಕ್ಕೆ ಪುನಃಶ್ಚೇತನ ತಂದ ಮಹಾನ್ ಚೇತನಗಳಿಂದ ಮೊದಲ್ಗೊಂಡು ಇಂದಿನ ತಲೆಮಾರಿನ ಎಳೆಯ ಲೇಖಕರವರೆಗಿನ ಅವರ ಒಡನಾಟ ಸಂಪರ್ಕ ಅತ್ಯಂತ ಶ್ರೀಮಂತವಾದದುಗಿತ್ತು. ಈ ಶ್ರೀಮಂತಿಕೆ ಕನ್ನಡ ಸಾಹಿತ್ಯಲೋಕದ ಕುರಿತಾದ ಕೇವಲ ಇಣುಕು ನೋಟವಾಗಿರದೆ ಅದರ ಅದಮ್ಯತೆಯನ್ನು ತಮ್ಮೊಳಗೆ ರಕ್ತಗತವಾಗಿರಿಸಿಕೊಂಡಿರುವ ಶ್ರೇಷ್ಠತೆಯಾಗಿತ್ತು. ಈ ಸಿರಿವಂತಿಕೆಯನ್ನು ಅವರು ತಮ್ಮ ‘ಇಗೋ ಕನ್ನಡ’, ‘ಕನ್ನಡವನ್ನು ಉಳಿಸಿ ಬೆಳೆಸಿದವರು’ ಮುಂತಾದ ಶ್ರೇಷ್ಠ ಕೃತಿಗಳ ಮೂಲಕ ಕನ್ನಡಿಗರಿಗೆ ಉಣಬಡಿಸಿದ್ದರು. ವಿಮರ್ಶೆ, ಸಾಹಿತ್ಯ ಚರಿತ್ರೆ, ಶಾಸ್ರ ಸಾಹಿತ್ಯ, ಸಂಪಾದನೆ, ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ಅವರು 130ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದರು.
ಅವರ ‘ಸಿರಿಗನ್ನಡ ಸಾರಸ್ವತರು’ ಕೃತಿಯನ್ನು ಓದುತ್ತಿದ್ದಾಗ ಕನ್ನಡದ ಶ್ರೇಷ್ಠ ಪರಂಪರೆಯೊಂದನ್ನು ಓದುತ್ತಿರುವ ಭಾವ ಮನಸ್ಸು ತುಂಬಿ, ಅನಿರ್ವಚನೀಯ ಆನಂದದಲ್ಲಿ ತೇಲುತ್ತಿದ್ದಂತಹ ಸುಖ ನನ್ನಲ್ಲಿತ್ತು. ಒಂದು ಕಾಲದಲ್ಲಿ ಕನ್ನಡವೆಂದರೆ ಅದಕ್ಕಾಗಿ ಟೊಂಕ ಕಟ್ಟಿ ನಿಂತ ಶ್ರೇಷ್ಠರಲ್ಲಿ ಎಂಥಹ ಭಕ್ತಿಭಾವವಿತ್ತು, ಎಂತೆಂಥಹ ಶ್ರೇಷ್ಠ ಅಧ್ಯಾಪಕರಿದ್ದರು, ಶಿಷ್ಯವೃಂದ ಕೂಡಾ ಎಷ್ಟು ಶ್ರದ್ಧಾಪೂರ್ಣವಾಗಿ ಅದಕ್ಕೆ ಪೂರಕವಾಗಿ ಎಂಥಹ ವಿದ್ವತ್ಪೂರ್ಣ ಕಲಿಕೆಯ ವಾತಾವರಣವನ್ನು ನಿರ್ಮಿಸಿತ್ತು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಂಥೆಂತಹ ಮಹಾನುಭಾವರು ಬಂದು ಎಷ್ಟು ನಿಸ್ಪೃಹವಾಗಿ ಪಾಂಡಿತ್ಯಪೂರ್ಣವಾಗಿ, ಒಗ್ಗಟ್ಟಿನಿಂದ ಕೆಲಸ ಮಾಡುವುದಕ್ಕಾಗಿ ಒಂದಾಗಿ ನಿಂತಿದ್ದರು, ಒಬ್ಬರು ಮತ್ತೊಬ್ಬರನ್ನು ಎಷ್ಟೊಂದು ಪೂರಕವಾಗಿ, ಗೌರವದಿಂದ, ಪ್ರೀತಿ ಆತ್ಮೀಯತೆಗಳಿಂದ ಗೌರವಿಸುತ್ತಿದ್ದರು.... ಇದನ್ನೆಲ್ಲಾ ಓದುವಾಗ ನಮ್ಮ ಹಿಂದಿನ ಒಂದೆರಡು ತಲೆಮಾರು ಇಷ್ಟು ಚೆನ್ನಿತ್ತು, ನಾವೇಕೆ ಹೀಗೆ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಅಂದಿನ ಮೈಸೂರಿನ ವಾತಾವಾರಣ, ಮಹಾರಾಜಾ ಕಾಲೇಜು, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ದೊಡ್ಡವರ ಹೃದಯಾಂತರಾಳದಲ್ಲಿನ ಪರಿಶುದ್ಧತೆ ಮುಂತಾದ ವಾತಾವರಣಗಳ ಬಗ್ಗೆ ಈ ಪುಸ್ತಕದಲ್ಲಿ ಓದುತ್ತಿದ್ದರೆ ಆ ಹಿಂದಿನ ಕಾಲದಂತಹ ಭವ್ಯ ಬದುಕಿನಲ್ಲಿ ನಮಗೂ ಬಾಳುವುದಕ್ಕೆ ವಾಂಛೆ ಹುಟ್ಟುತ್ತದೆ.
ಈ ಮೇಲ್ಕಂಡ ಮಾತಿಗೆ ನಿದರ್ಶನವಾಗಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಈ ಪುಸ್ತಕದಲ್ಲಿ ಅಂದಿನ ಮೈಸೂರನ್ನು ಕುರಿತು ಹೇಳಿರುವ ಈ ಮಾತನ್ನು ಇಲ್ಲಿ ಬಳಸಲು ಇಷ್ಟವಾಗುತ್ತಿದೆ – “ಕಳೆದ ಶತಮಾನದ ಮಧ್ಯಕಾಲದಲಿ (1925-1950) ಮೈಸೂರು ನಗರ ಒಟ್ಟು ಭಾರತ ರಾಷ್ಟ್ರವೇ ಅಸೂಯೆಪಡಬಹುದಾದ ಸಾಂಸ್ಕೃತಿಕ ವೈಭವದಿಂದ ಮೆರೆಯುತ್ತಿತ್ತು. ಸಾಹಿತ್ಯ, ಸಂಗೀತ, ನೃತ್ಯ, ನಾಟಕಾಭಿನಯ, ಚಿತ್ರಕಲೆ ಮುಂತಾದ ಎಲ್ಲ ಕುಶಲಕಲೆಗಳಿಗೆ ನೆಲೆವನೆಯಾಗಿ ರಸಾಸ್ವಾದನ ಪಟುಗಳಿಗೆ ಪವಿತ್ರವಾದ ಯಾತ್ರಾಸ್ಥಳವಾಗಿತ್ತು. ಮೈಸೂರು ಮಹಾರಾಜರ ಆಸ್ಥಾನವು ಇಂಥ ಸಂಸ್ಕೃತಿಯ ವರ್ಧನೆಗೆ ಅನೇಕ ಬಗೆಯಲ್ಲಿ ಪ್ರೋತ್ಸಾಹದಾಯಕವಾದ ಆಶ್ರಯ ಸ್ಥಾನವಾಗಿತ್ತು. ಯಾವ ಕಲೆಯ ಹೆಸರನ್ನು ಹೇಳಿದರೂ ಆ ಕ್ಷೇತ್ರದಲ್ಲಿ ಅತ್ಯುನ್ನತಿಯನ್ನು ಪಡೆದ ಮಹಿಮಾವಂತರ ಹೆಸರು ಮೈಸೂರು ನಗರಕ್ಕೆ ಸೇರಿರುತ್ತಿತ್ತು. ಐತಿಹಾಸಿಕ ಪುರುಷನಾದ ಭೋಜರಾಜನ ಧಾರಾನಗರಿಯನ್ನು ಮೈಸೂರು ನೆನಪಿಗೆ ತರುತ್ತಿತ್ತು”. ಇದು ಆ ಕಾಲದ ವರ್ಣನೆ ಮಾತ್ರವಾಗಿರದೆ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಈ ಪುಸ್ತಕದಲ್ಲಿ ತಾವು ಕಂಡ ಶ್ರೇಷ್ಠ ವಾತಾವರಣ ಮತ್ತು ವ್ಯಕ್ತಿಗಳು, ಅವರ ಕೊಡುಗೆ – ಕೃತಿ ಶ್ರೇಷ್ಟತೆ – ಸಜ್ಜನಿಕೆ - ಸಂಸ್ಕಾರಗಳನ್ನು ಪರಿಚಯ ಮಾಡಿಕೊಡುವ ಅಪ್ಯಾಯಮಾನವಾದ ಬರವಣಿಗೆಯೂ ಆಗಿ ಈ ಪುಸ್ತಕದ ರೂಪದಲ್ಲಿ ಮೈದಳೆದಿದೆ.
ಈ ಪುಸ್ತಕದ ಮೊದಲ ಮಾತಿನಲ್ಲಿ ಈ ಕೃತಿಯ ಬಗ್ಗೆ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಹೀಗೆ ಹೇಳುತ್ತಾರೆ: “ಕೆಲವು ವರ್ಷಗಳ ಹಿಂದೆ ‘ಕನ್ನಡವನ್ನು ಉಳಿಸಿ ಬೆಳೆಸಿದವರು’ ಎಂಬ ಪುಸ್ತಕವನ್ನು ರಚಿಸಿದ್ದೆ. ಅದರಲ್ಲಿ ಹದಿನೈದು ಜನ ವಿದ್ವಾಂಸರ ವ್ಯಕ್ತಿಚಿತ್ರಗಳಿದ್ದುವು. ಆ ಬಳಿಕ ಆ ಪುಸ್ತಕಗಳಲ್ಲಿದ್ದ ವ್ಯಕ್ತಿಚಿತ್ರಗಳ ಮಾದರಿಯಲ್ಲಿಯೇ ಇತರ ಪರಿಚಿತ ಲೇಖಕರ ಬಗ್ಗೆ ಲೇಖನಗಳನ್ನು ಪ್ರಕಟಿಸಿದ್ದೆ. ಈಗ ಅವೆಲ್ಲವನ್ನೂ ಸೇರಿಸಿ ಈ ಪುಸ್ತಕವನ್ನು ರಚಿಸಿದ್ದೇನೆ. ಇದರಲ್ಲಿ ನಲವತ್ತೊಂಬತ್ತು ಜನ ಹಿರಿಯ ಲೇಖಕರನ್ನು ಕುರಿತು ಕಿರು ಲೇಖನಗಳಿವೆ. ಇವರೆಲ್ಲರೂ ನನಗೆ ಚಿರಪರಿಚಿತರಾದವರು; ಎಲ್ಲರೂ ಪ್ರಸಿದ್ಧರೇ! ಆದುದರಿಂದ ಈ ಪುಸ್ತಕಕ್ಕೆ ‘ಸಿರಿಗನ್ನಡ ಸಾರಸ್ವತರು’ ಎಂದು ಹೆಸರನ್ನು ಇಟ್ಟಿದ್ದೇನೆ”.
ಈ ಪುಸ್ತಕದಲ್ಲಿ ಮೂಡಿ ಬಂದಿರುವ ಮಹನೀಯರೆಂದರೆ ರೆವರೆಂಡ್ ಜಾನ್ ಹ್ಯಾಂಡ್ಸ್, ಎಫ್ ಕಿಟ್ಟೆಲ್, ರಾವ್ ಬಹದ್ದೂರ್ ಚಿತ್ತವಾಡಿಗೆ ಹನುಮಂತಗೌಡರು, ರಾ. ನರಸಿಂಹಾಚಾರ್ಯರು, ಮಂಜೇಶ್ವರದ ಗೋವಿಂದ ಪೈ, ಬಿ. ಎಂ. ಶ್ರೀ, ಟಿ. ಪಿ. ಕೈಲಾಸಂ, ಟಿ. ಎಸ್. ವೆಂಕಣ್ಣಯ್ಯ, ಎ. ವೆಂಕಟಸುಬ್ಬಯ್ಯ, ಡಿ. ವಿ. ಗುಂಡಪ್ಪ, ಎ. ಆರ್. ಕೃಷ್ಣಶಾಸ್ತ್ರಿ, ಪಂಡಿತ ತಾರಾನಾಥರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುರಾತತ್ವ ಶಾಸ್ತ್ರಜ್ಞ ಡಾ. ಎಂ. ಎಚ್. ಕೃಷ್ಣ, ರಾಳ್ಲಪಳ್ಳಿ ಅನಂತಕೃಷ್ಣ ಶರ್ಮ, ಸಿ. ಕೆ. ವೆಂಕಟರಾಮಯ್ಯ, ಆಕಾಶವಾಣಿಗೆ ಪ್ರಾರಂಭಕೊಟ್ಟ ಎಂ. ವಿ. ಗೋಪಾಲಸ್ವಾಮಿ, ನಾ. ಕಸ್ತೂರಿ, ಶಾಸನತಜ್ಞ ಎನ್. ಲಕ್ಷ್ಮೀನಾರಾಯಣ, ಸಂಸ, ಜಿ. ಹನುಮಂತರಾವ್, ವಿ.ಸೀ, ಎ. ಎನ್. ಮೂರ್ತಿರಾವ್, ಎಚ್. ಸಿ. ಕಪಿನೀಪತಿ ಭಟ್ಟರು, ಸೇಡಿಯಾಪು ಕೃಷ್ಣಭಟ್ಟರು, ಶಿವರಾಮ ಕಾರಂತರು, ಎಲ್. ಗುಂಡಪ್ಪ, ಕುವೆಂಪು, ಸಿದ್ಧವನ ಹಳ್ಳಿ ಕೃಷ್ಣಶರ್ಮ, ಎಸ್. ಶ್ರೀಕಂಠಶಾಸ್ತ್ರಿಗಳು, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಕಡೆಂಗೋಡ್ಲು ಶಂಕರಭಟ್ಟರು, ಪು. ತಿ. ನರಸಿಂಹಾಚಾರ್ಯ, ಡಿ. ಎಲ್. ನರಸಿಂಹಾಚಾರ್ಯ, ತೀ. ನಂ. ಶ್ರೀಕಂಠಯ್ಯ, ಟಿ. ಎನ್. ಶ್ಯಾಮರಾಯರು, ಕೆ. ವಿ. ರಾಘವಾಚಾರ್, ಅ. ನ. ಕೃ, ಪರ್ವತವಾಣಿ, ಪರಮೇಶ್ವರಭಟ್ಟರು, ಕೆ. ಎಸ್. ನರಸಿಂಹಸ್ವಾಮಿ, ಎಚ್. ಎಲ್. ನಾಗೇಗೌಡ, ಜಿ. ವರದರಾಜಾರಾಯರು, ಬಿ.ಜಿ. ಎಲ್. ಸ್ವಾಮಿ, ಕೆ. ನರಸಿಂಹಮೂರ್ತಿ, ಎಚ್. ಕೆ. ರಂಗನಾಥ, ಎಸ್. ಕೆ. ರಾಮಚಂದ್ರರಾಯರು, ಬಿ. ಸಿ. ರಾಮಚಂದ್ರಶರ್ಮ, ನೀರ್ಪಾಜೆ ಭೀಮಭಟ್ಟರು ಮುಂತಾದ ಮಹಾನ್ ದಿಗ್ಗಜಗಳು. ಇಲ್ಲಿನ ಬಹುತೇಕ ಮಹನೀಯರುಗಳ ಜೊತೆ ಪ್ರೊ. ಜಿ. ವೆಂಕಟಸುಬ್ಬಯ್ಯನವರು ನೇರ ಸಂಪರ್ಕದ ಸೌಭಾಗ್ಯವನ್ನು ಅನುಭಾವಿಸಿದವರಾಗಿದ್ದು ಅವರುಗಳ ಕಾರ್ಯವನ್ನು ಆಳವಾಗಿ ಅರ್ಥೈಸಿ ಮೌಲ್ಯಯುತವಾದ ಅಧ್ಯಯನವನ್ನು ಈ ಕೃತಿಯಲ್ಲಿ ನಮಗೆ ಉಣಬಡಿಸಿದ್ದಾರೆ.
ಶ್ರೇಷ್ಠ ಬದುಕೆಂಬುದು ಮರೀಚಿಕೆಯಾಗುತ್ತಿರುವ ಈ ಕಾಲದಲ್ಲಿ ಒಂದು ಕಾಲದ ಶ್ರೇಷ್ಠ ಬಾಳನ್ನು ಬಾಳಿ, ತಮ್ಮ ಬದುಕಿನಲ್ಲಿ ಕಂಡ ವೈವಿಧ್ಯಮಯ ಶ್ರೇಷ್ಠ ಬಾಳನ್ನು ಪ್ರೊ. ಜಿ. ವೆಂಕಟಸುಬ್ಬಯ್ಯನವರು ಈ ‘ಸಿರಿಗನ್ನಡ ಸಾರಸ್ವತರು’ ಕೃತಿಯಲ್ಲಿ ಕನ್ನಡಿಗರಿಗೆ ಕೊಡುಗೆಯಾಗಿ ನೀಡಿದ್ದಾರೆ. ಇದನ್ನು ಸವಿಯುವ ಅದೃಷ್ಟವನ್ನು ನಾವು ನಮಗೆ ಕೊಟ್ಟುಕೊಳ್ಳಬೇಕಷ್ಟೇ. ಅಂತಹ ಸೌಭ್ಯಾಗ್ಯ ನಮ್ಮ ಕನ್ನಡ ಸಂಪದದ ಬಂಧುಗಳದ್ದಾಗಲಿ ಎಂಬುದು ಈ ಪುಸ್ತಕ ಪರಿಚಯದ ಆಶಯ.
ಈ ಪುಸ್ತಕದ ಪ್ರಕಾಶಕರು ವಸಂತ ಪ್ರಕಾಶನ, ಬೆಂಗಳೂರು
Sirigannada Saraswataru
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ಪ್ರತ್ಯುತ್ತರಅಳಿಸಿ