ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣಭಟ್ ಅರ್ತಿಕರ್ಜೆ


 ಕನ್ನಡದ ರಾಯಭಾರಿ ಪ್ರೊ.ಶ್ರೀ ಕೃಷ್ಣ ಭಟ್ ಅರ್ತಿಕಜೆ

- ಡಾ.ರುಕ್ಮಿಣಿ ರಘುರಾಮ್
      
ಮದರಾಸಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ನನ್ನ ವಿದ್ಯಾ ಗುರುಗಳಾದ ಡಾ.ಶ್ರೀ ಕೃಷ್ಣಭಟ್ ಅರ್ತಿಕಜೆ ಅವರು ಮದರಾಸಿನ ಕನ್ನಡಿಗರಿಗೆಲ್ಲ ಚಿರಪರಿಚಿತರು.

ಡಾ. ಕೃಷ್ಣಭಟ್ ಅರ್ತಿಕಜೆ ಅವರು 1945ರ ಏಪ್ರಿಲ್ 19ರಂದು ಪುತ್ತೂರು ತಾಲೂಕಿನಲ್ಲಿರುವ ಅರ್ತಿಕಜೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಶಾಮ್ ಭಟ್.  ತಾಯಿ ಸಾವಿತ್ರಮ್ಮ. ಕುಟುಂಬ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದರು.  ಆರ್ಥಿಕ ಪರಿಸ್ಥಿತಿ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ತೋಟಕ್ಕೆ ನೀರು ಹಾಯಿಸುವುದು ಅಡಿಕೆ ಬಾಳೆ ತೋಟಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆಗ ಹಳ್ಳಿಗಳಲ್ಲಿ ಶಾಲೆಯ ವ್ಯವಸ್ಥೆಯು ಸಮರ್ಪಕವಾಗಿರಲಿಲ್ಲ. ಅವರು ನದಿಯನ್ನು ದಾಟಿಕೊಂಡು ಶಾಲೆಗೆ ಹೋಗಬೇಕಾಗುತ್ತಿತ್ತು. ಆದರೆ ಬಾಲ್ಯದಿಂದಲೂ ಅವರಿಗೆ ವಿದ್ಯಾಭ್ಯಾಸ ಪಡೆಯಬೇಕು ಎಂಬ ಉತ್ಸಾಹ ಇತ್ತು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಅವರ ಹಳ್ಳಿಯಲ್ಲಿ ಮುಗಿಸಿ ಪ್ರೌಢಶಾಲೆಗೆ ಕಾಸರಗೋಡಿನ ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಹೈಸ್ಕೂಲಿಗೆ ಹೋದರು. ಅನಂತರ ಇದೇ ಮಠದಲ್ಲಿ ಸುಮಾರು ಮೂರು ವರ್ಷ ಕಾಲ ಅಕೌಂಟೆಂಟ್ ಆಗಿ ಕೆಲಸ ಮಾಡಿದರು.  1969 ರಲ್ಲಿ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಪದವಿಯನ್ನು ಪಡೆದರು.  ಇದೇ ಕಾಲೇಜಿನಲ್ಲಿ 1971 ರಲ್ಲಿ ಕನ್ನಡ ಎಂ.ಎ ಪದವಿಯನ್ನೂ ಕೂಡ ಪಡೆದರು. 1975ರ ವರೆಗೆ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1975 ರಲ್ಲಿ ಅವರು ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಉಪನ್ಯಾಸಕರಾಗಿ  ಅನಂತರ ವಿಭಾಗದ ಪ್ರಾಧ್ಯಾಪಕರಾಗಿ 1991ರಿಂದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. 1999 ರಿಂದ 2000 ವರೆಗೆ ಮದರಾಸು ವಿಶ್ವವಿದ್ಯಾನಿಲಯದ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿದ್ದರು.  2004ರಲ್ಲಿ ಕನ್ನಡ  ವಿಭಾಗದ ಪ್ಲಾಟಿನಂ  ಜುಬಿಲಿ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿದ  ಕೀರ್ತಿಯೂ ಅವರಿಗೆ ಸಲ್ಲುತ್ತದೆ. 2005ರಲ್ಲಿ ನಿವೃತ್ತ ಯ ನಂತರವೂ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದರು.
 
ಕನ್ನಡಕ್ಕೆ ಸಂಬಂಧಿಸಿದ ಹಾಗೆ ಪ್ರೊ. ಕೃಷ್ಣಭಟ್ ಅರ್ತಿಕಜೆ ಅವರ ಜೀವನದಲ್ಲಿ ಮೂರು ಬಗೆಯಾದ ಕ್ಷೇತ್ರಗಳನ್ನು ಗುರುತಿಸಬಹುದು. ಮೊದಲನೆಯದು ಮದರಾಸು ವಿಶ್ವವಿದ್ಯಾನಿಲಯದ ಅವರ ಪ್ರಾಧ್ಯಾಪಕ ವೃತ್ತಿ. ಎರಡನೆಯದು  ಲೇಖಕರಾಗಿ ಅವರು ಹಲವು ಭಾಷೆಗಳಲ್ಲಿ  ರಚಿಸಿರುವ  ಗ್ರಂಥಗಳು, ಮೂರನೆಯದಾಗಿ ಕನ್ನಡ ಭಾಷೆಯ  ಸಂಘಟಕರಾಗಿ ಕ್ರಿಯಾಶೀಲತೆಯಿಂದ ತನ್ಮಯತೆಯಿಂದ ಕೆಲಸಮಾಡಿದ್ದು.

ಮದರಾಸು ವಿಶ್ವವಿದ್ಯಾನಿಲಯ ಒಂದು ಪ್ರತಿಷ್ಠಿತವಾದ ವಿದ್ಯಾ ಕೇಂದ್ರ.ಸುಮಾರು 80 -85 ವರ್ಷಗಳ ಹಿಂದೆಯೇ ಅಲ್ಲಿ ಕನ್ನಡ ವಿಭಾಗ ಪ್ರಾರಂಭಿಸಲಾಯಿತು ಎಂಬುದು ಅಚ್ಚರಿಯ ವಿಷಯ. ಕನ್ನಡದ ಡಾ.ಆರ್.ನರಸಿಂಹಾಚಾರ್ಯರು ಕನ್ನಡ ಎಂ.ಎ. ಪಡೆದ ಮೊದಲ ವಿದ್ಯಾರ್ಥಿ.ಕನ್ನಡ ವಿಭಾಗದಲ್ಲಿ ದುಡಿದವರಲ್ಲಿ ನಿಘಂಟು ತಜ್ಞ ಮರಿಯಪ್ಪ ಭಟ್ಟರು, ಪ್ರೊ. ಶಂಕರ ಕೆದಿಲಾಯ, ಡಾ.ಕುಶಾಲಪ್ಪ ಗೌಡರು ಪ್ರಮುಖರು.  ಕೃಷ್ಣಭಟ್ಟ ಅರ್ತಿಕಜೆ ಅವರು ಎಂ.ಎ. ತರಗತಿಯಲ್ಲಿರುವಾಗ ಡಾ. ಮರಿಯಪ್ಪ ಭಟ್ಟರು ಮೌಖಿಕ ಪರೀಕ್ಷೆಗೆ ಬಂದಿದ್ದರು. ಹಾಗಾಗಿ ಮದರಾಸಿನ ಕನ್ನಡ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಬಂದಾಗ ಉಪನ್ಯಾಸಕರಾಗಿ ಸೇರಿದರು. 1981ರಲ್ಲಿ  ಪ್ರೊ. ಶಂಕರ ಕೆದಿಲಾಯ  ಅವರ ಮಾರ್ಗದರ್ಶನದಲ್ಲಿ "ಕನ್ನಡದಲ್ಲಿ ಶತಕ ಸಾಹಿತ್ಯ" ಎಂಬ ಪ್ರಬಂಧವನ್ನು ಮಂಡಿಸಿ  ಮದರಾಸು ವಿಶ್ವವಿದ್ಯಾನಿಲಯದ  ಪಿ ಎಚ್.ಡಿ. ಪದವಿಯನ್ನು  ಪಡೆದರು. ತಮಿಳು ಮತ್ತು  ತೆಲುಗಿನ  ಶತಕ ಸಾಹಿತ್ಯದ ವಿಷಯವನ್ನೂ ಇಲ್ಲಿ  ಪ್ರಸ್ತಾಪಿಸಿದ್ದಾರೆ. ಕನ್ನಡದ  ಮೊದಲ  ಶತಕ ಚಂದ್ರ ಚೂಡಾಮಣಿ  ಶತಕದಿಂದ  ಹಿಡಿದು ಶತಕ ಸಾಹಿತ್ಯದ ಉಗಮ, ಬೆಳವಣಿಗೆ, ಅದರಲ್ಲಿ ಬರುವ  ಭಕ್ತಿ,ಜ್ಞಾನ, ವೈರಾಗ್ಯಗಳ ವಿಷಯವನ್ನು   ವಿವರವಾಗಿ ವಿಶ್ಲೇಷಿಸಿದ್ದಾರೆ. ಅವರು ಕನ್ನಡ ವಿಭಾಗದಲ್ಲಿದ್ದ ಸಮಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿಚಾರ ಸಂಕೀರ್ಣಗಳನ್ನು ,ಸಾಹಿತ್ಯ ಶಿಬಿರಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ.  ಎಂ.ಎ.,ಎಂ.ಫಿಲ್ .,ಪಿ .ಎಚ್ ಡಿ. ವಿದ್ಯಾರ್ಥಿಗಳಿಗೆ ಪ್ರಬಂಧಗಳ ಮಾರ್ಗದರ್ಶಕರಾಗಿದ್ದರು. ಮುಂಬಯಿ, ಆಂಧ್ರ ಹಾಗೂ ಕರ್ನಾಟಕದ ಹಲವು ವಿ.ವಿಗಳ ಸ್ನಾತಕೋತ್ತರ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಸದಸ್ಯರಾಗಿ, ಪಠ್ಯಪುಸ್ತಕ ರಚನಾ ಸಮಿತಿ ಆಡಳಿತ ಮಂಡಳಿಯ ಸದಸ್ಯರಾಗಿ, ಕೆಲಸ ಮಾಡಿದ್ದಾರೆ. ಕುಶಾಲಪ್ಪ  ಗೌಡರ  ನಂತರ ಕನ್ನಡ  ವಿಭಾಗವನ್ನು ಬಹಳ  ಸಮರ್ಥವಾಗಿ ಮುನ್ನಡೆಸಿದರು. ಮದರಾಸು ವಿವಿಗೆ
 ಕನ್ನಡ ಕಲಿಯಲು ಬಂದ ಅನೇಕ ವಿದ್ಯಾರ್ಥಿಗಳಿಗೆ  ಆಕಾಶವಾಣಿಯಲ್ಲಿ ಭಾಷಣಗಳನ್ನು  ನೀಡುವುದು, ಪತ್ರಿಕೆಗಳಲ್ಲಿ ಲೇಖನ ಬರೆಯುವುದು, ಗೋಷ್ಠಿಯನ್ನು ನಡೆಸುವುದು, ಹೀಗೆ ವಿವಿಧ ಕನ್ನಡ ಸಾಹಿತ್ಯಕ ಚಟುವಟಿಕೆಗಳಲ್ಲಿ ಅವಕಾಶ ನೀಡಿ,ಪ್ರೋತ್ಸಾಹಿಸಿರುವುದು ಅವರ ಮುಖ್ಯ ಸಾಧನೆಗಳಲ್ಲಿ ಒಂದು. ಈಗಲೂ ತಮ್ಮ  ಎಲ್ಲ  ವಿದ್ಯಾರ್ಥಿಗಳ ಬರವಣಿಗೆಯನ್ನು ಓದಿ ಉತ್ತೇಜನ  ನೀಡುತ್ತಾರೆ ಎಂಬುದು ಹೆಮ್ಮೆಯ  ವಿಷಯ.

ಪ್ರೊ. ಕೃಷ್ಣಭಟ್ ಅರ್ತಿಕಜೆ ಅವರು ಕನ್ನಡದಲ್ಲಿಯೇ ಅಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಹವ್ಯಕ ಭಾಷೆಗಳಲ್ಲಿಯೂ ಪಾಂಡಿತ್ಯವನ್ನು ಪಡೆದಿದ್ದಾರೆ.  ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಪ್ಲೊಮಾ ಸರ್ಟಿಫಿಕೇಟ್‍ಗಳನ್ನು ಕೂಡ ಪಡೆದರು. ಅವರು ಅಯ್ಯಪ್ಪ ಮಲಯಾಳಂ ಕಾದಂಬರಿಯ ಅನುವಾದ, ವಿಷಕನ್ನಿಕೆ ಎಂಬ ಮಲಯಾಳಂ ಕಾದಂಬರಿಯ ಕನ್ನಡ ಅನುವಾದ, ಸಮಾಜ ವಿಜ್ಞಾನಿ ಪೆರಿಯಾರ್ ತಮಿಳಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  ಅಲ್ಲದೆ ಗಾನ ಮಂಜರಿ, ಸಾಹಿತ್ಯ ಸಂಬಂಧ ಎಂಬ ಪುಸ್ತಕಗಳನ್ನೂ ಬರೆದಿದ್ದಾರೆ.  ಪ್ರೊ.  ಎಂ.ಮರಿಯಪ್ಪ ಭಟ್ಟರ ಸಂಸ್ಕರಣ ಗ್ರಂಥ "ಸಾರ್ಥಕ " ಸಂಪಾದನೆ ಮಾಡಿದ್ದಾರೆ. ಹವ್ಯಕ ಗಾದೆಗಳು, ತುಳು ಗಾದೆಗಳು, ಹವ್ಯಕ ನಡೆ-ನುಡಿ ಕೋಶ ಇವುಗಳ ಸಂಪಾದನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕನ್ನಡ ಭಾಷೆ ಅಲ್ಲದೆ ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಸಣ್ಣ ಕಥೆಗಳನ್ನು ರಚಿಸಿದ್ದಾರೆ. ತಮಿಳು ಸಾಹಿತ್ಯದ ಮೇಲೆ ಶಂಕರ ಅದ್ವೈತ ಸಿದ್ಧಾಂತದ ಪ್ರಭಾವ ಎಂಬ ಪುಸ್ತಕವನ್ನು ಬರೆದಿದ್ದಾರೆ.  ಸುಮಾರು15 ವಿಮರ್ಶಾತ್ಮಕ ಹಾಗೂ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ.  ಪ್ರೊ. ಮರಿಯಪ್ಪ ಭಟ್ಟ, ಶ್ರೇಷ್ಠ ಮಲೆಯಾಳಿ ಸಾಹಿತಿ ಶಿವಶಂಕರ ಪಿಳ್ಳೈ, ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳು, ಹೋಟೆಲ್ ಉದ್ಯಮದ ಭೀಷ್ಮ ವುಡ್ಲ್ಯಾಂಡ್ ಕೃಷ್ಣರಾವ್, ಪನ್ನಾಲಾಲ್ ಪಟೇಲ್, ಎ.ಎನ್ .ಶ್ರೀನಿವಾಸರಾವ್, ನಾ.ಕಸ್ತೂರಿ , ಶೇಣಿ ಗೋಪಾಲಕೃಷ್ಣ ಭಟ್, ರಸಋಷಿ ದೇರಾಜೆ ಸೀತಾರಾಮಯ್ಯ ಮುಂತಾದ 33 ವ್ಯಕ್ತಿ ಚಿತ್ರಗಳನ್ನು ಬರೆದಿದ್ದಾರೆ. ಜಾನಪದ ಸಾಹಿತ್ಯ ವನ್ನು ಕುರಿತು ಹವ್ಯಕರ ಹಾಡುಗಳು, ಕರಾವಳಿ  ಯಕ್ಷಗಾನ, ಹವ್ಯಕ  ಜಾನಪದ  ಸಾಹಿತ್ಯ, ಕಾವಡಿಯಾಟ್ಟಂ ಮುಂತಾದ  20 ಜಾನಪದ ಲೇಖನಗಳನ್ನು ಬರೆದಿದ್ದಾರೆ. ಹೀಗೆ ಅಧ್ಯಾಪನ ಅಲ್ಲದೆ ಅನುವಾದಕರಾಗಿ, ವಿಮರ್ಶಕರಾಗಿ, ಸಂಪಾದಕರಾಗಿ ಸಾಹಿತ್ಯಕ್ಕೆ ಅವರು ನೀಡಿರುವ  ಕೂಡುಗೆ ವಿದ್ವತ್ ಪೂರ್ಣವಾದದ್ದು.  ಹೀಗೆ ಹಲವಾರು  ಭಾಷಾ ಸಂಸ್ಕೃತಿಗಳ ಸಾಮರಸ್ಯ  ಮತ್ತು  ಸಮನ್ವಯತೆಯ ಮೂಲಕವೇ ಕನ್ನಡ  ಸಂಸ್ಕೃತಿಯನ್ನು ಸಮೃದ್ಧ ಗೂಳಿಸಲು ಸಾಧ್ಯ ಎಂಬ ತಾತ್ವಿಕತೆಯು  ಅರ್ತಿಕಜೆಯವರ ಒಟ್ಟುಬರಹಗಳ ಹಿಂದೆ  ಕ್ರಿಯಾಶೀಲವಾಗಿದೆ ಎಂದು  ಡಾ.ಚೆನ್ನಪ್ಪ ಗೌಡ ಅವರು "ಅನನ್ಯ" ಗ್ರಂಥದ ಸಂಪಾದಕರೂ, ಡಾ .ಅರ್ತಿಕಜೆ ಅವರ ಶಿಷ್ಯರು ಬರೆದಿದ್ದಾರೆ. 

ಅರ್ತಿಕಜೆಯವರ ಬರವಣಿಗೆಯ  ಶೈಲಿ ಬಹಳ  ಆಕರ್ಷಕವಾದದ್ದು. ಬಹಳಷ್ಟು ವಿಚಾರಗಳನ್ನು ಸಂಗ್ರಹಿಸಿ ಸರಳವಾದ ನಿರೂಪಣೆಯ  ಮೂಲಕ ಓದುಗರನ್ನು ತಲುಪುವುದು ಅವರ ಬರವಣಿಗೆಯ  ವೈಶಿಷ್ಟ್ಯ. ವಿಮರ್ಶಾತ್ಮಕ  ಲೇಖನಗಳಲ್ಲಿಯೂ ಅವರು ಸಂಬಂಧಿಸಿದ  ವಿಷಯವನ್ನು ವಿವರವಾಗಿ ಮೊದಲು ಪ್ರಸ್ತಾಪಿಸಿ ಅನಂತರ  ತಮ್ಮ  ಅಭಿಪ್ರಾಯವನ್ನು ತಿಳಿಸುತ್ತಾರೆ. ಸಂದಿಗ್ಧ ಹೇಳಿಕೆ ಕೊಡುವುದು, ಕಟುಟೀಕೆ  ಮಾಡುವುದು ಅವರ ಮಾರ್ಗವಲ್ಲ.  ಅದರಲ್ಲಿನ  ನ್ಯೂನತೆಯನ್ನು ಗುರುತಿಸುತ್ತಾರೆ, ಒಟ್ಟಿನಲ್ಲಿ ಅವರ ವಿಮರ್ಶೆ ಉತ್ತಮ  ಸಹೃದಯ ಅನಿಸಿಕೆ.

ಕನ್ನಡ ಭಾಷೆಯ ಸಂಘಟಕರಾಗಿ, ಕನ್ನಡದ ಕಂಪನ್ನು ಚೆನ್ನೈ ನಗರದಲ್ಲಿ ಪಸರಿಸುವ ಕಾರ್ಯ  ಅವ್ಯಾಹತವಾಗಿ ನಡೆಸುತ್ತಿದ್ದಾರೆ. ಅಲ್ಲಿ ಕನ್ನಡ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದರು.  ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಹೊರನಾಡು ಕನ್ನಡ ಪ್ರತಿನಿಧಿಯಾಗಿ ಕಾರ್ಯಕಾರಿ ಸಮಿತಿಯಲ್ಲಿ 1980ರಿಂದ 2007 ರವರೆಗೆ ನೇಮಕಗೊಂಡಿದ್ದರು.  ಮದರಾಸಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರತಿ ವರ್ಷವೂ ಕರ್ನಾಟಕ ಸಂಘವು ಅದ್ದೂರಿಯಾಗಿ ರಾಜ್ಯೋತ್ಸವವನ್ನು ನಡೆಸುತ್ತದೆ. ಹವ್ಯಕ ಸಂಘದ ಉಪಾಧ್ಯಕ್ಷರಾಗಿ ನಂತರ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
 
ವಿದ್ಯಾರ್ಥಿ ದೆಸೆಯಲ್ಲಿಯೇ ಎಡನೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನ, ನಾಟ್ಯ ಹಾಗೂ ಗಾಯನವನ್ನು ಕಲಿತು ಒಂದು ವರ್ಷದೊಳಗೆ ಆಟದ ವೇಷಧಾರಿಯಾಗಿ ಮಠದ ವೃಂದದಲ್ಲಿ ಪಾತ್ರವಹಿಸಿದರು. ಹಾಗೆಯೇ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಅವರಿಗೆ ಆಸಕ್ತಿ. ಅವರಿಗೆ ಮದರಾಸಿನ ಸಂಗೀತಗಾರರೆಲ್ಲರೊಂದಿಗೂ ಆತ್ಮೀಯ ಸಂಬಂಧವಿದೆ. ಕೇಂದ್ರಫಿಲಂ ಸೆನ್ಸಾರ್  ಮಂಡಳಿಯ ಕನ್ನಡ ಭಾಷಾ ಸಲಹಾ ಸಮಿತಿಯ ಸದಸ್ಯರಾಗಿ  ಕಾರ್ಯನಿರ್ವಹಿಸಿದ್ದಾರೆ.
 
ಮದರಾಸಿನಲ್ಲಿ ಓದಿದ ಅವರ ವಿದ್ಯಾರ್ಥಿಗಳೆಲ್ಲ ಕನ್ನಡ ನಾಡಿನ ಎಲ್ಲೆಡೆ ಕಾಲೇಜಿನ ಮುಖ್ಯಸ್ಥರಾಗಿ, ಕವಿಗಳಾಗಿ, ಸಾಹಿತಿಗಳಾಗಿ ಜನಪ್ರಿಯತೆಯನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಬಹಳ ಆದರದಿಂದ ಪ್ರೀತಿಯಿಂದ ಸಲಹಿದ ಗುರುಗಳು.  ಪ್ರತಿಯೊಬ್ಬ ವಿದ್ಯಾರ್ಥಿಯ ಮಹಾಪ್ರಬಂಧವನ್ನು ಬಹಳ ತಾಳ್ಮೆಯಿಂದ ಓದಿ, ತಪ್ಪುಗಳಿದ್ದರೆ ಕೆಂಪು ಶಾಯಿಯಲ್ಲಿ ಗುರುತು ಮಾಡುತ್ತಿದ್ದರು.  ನಮ್ಮ ಬರವಣಿಗೆ ಸುಲಭವಾಗಿ ಓದುಗರಿಗೆ ಅರ್ಥವಾಗುವ ಹಾಗೆ ಸ್ಪಷ್ಟವಾಗಿರಬೇಕು, ಭಾಷೆ ಸುಲಭವಾಗಿರಬೇಕು ಎಂದು ಪದೇ ಪದೇ ಹೇಳಿ ನಮ್ಮ ಬರವಣಿಗೆಯ ಶೈಲಿಯನ್ನು ತಿದ್ದುತ್ತಿದ್ದರು.

ಹಲವಾರು ಭಾಷೆಗಳಿಗೆ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಲಭಿಸಿದೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ 1997ರಲ್ಲಿ ಮದರಾಸು ಅಮೃತೋತ್ಸವ ಸಮಾರಂಭದಲ್ಲಿ ಗೌರವಿಸಿತು. 1997ರಲ್ ಲಿಕಂಚಿ ಕಾಮಕೋಟಿ ಸ್ವಾಮೀಜಿ ವಜ್ರಮಹೋತ್ಸವ  ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು. ಮುನ್ಷಿ ಪ್ರೇಮಚಂದ್ ಸನ್ಮಾನ 2000ರಲ್ಲಿ ದೊರೆಯಿತು. ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿಗೆ2004 ರಲ್ಲಿ ಭಾಜನರಾದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸುವರ್ಣ ಕನ್ನಡಿಗ ಎಂಬ ಪ್ರಶಸ್ತಿ 2006 ನೀಡಿ ಗೌರವಿಸಿತು.1991ರಲ್ಲಿ ಮದರಾಸಿನ ಕನ್ನಡ ಬಳಗದ ರಜತೋತ್ಸವ  ಸಮಾರಂಭದಲ್ಲಿ ಪ್ರೊ. ಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ಎಲ್ಲಕ್ಕಿಂತ ಕಿರೀಟ ಪ್ರಾಯವಾದದ್ದು ಅವರ ಶಿಷ್ಯರು, ಸ್ನೇಹಿತರು, ಅಭಿಮಾನಿಗಳು ಸೇರಿ ಅವರಿಗೆ "ಅನನ್ಯ" ಎಂಬ ಅಭಿನಂದನ ಗ್ರಂಥವನ್ನು, 2008 ರಲ್ಲಿ ಮದರಾಸಿನಲ್ಲಿ ನಡೆದ ಸಮಾರಂಭದಲ್ಲಿ ಸಮರ್ಪಿಸಿದರು. ಇದರಲ್ಲಿ ಸುಮಾರು 81 ಲೇಖನಗಳು ಅವರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಒಳಗೊಂಡಿದೆ.  ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಈ ಅಭಿನಂದನ  ಗ್ರಂಥದಲ್ಲಿ ಅವರಿಗೆ  ಆಸಕ್ತಿಯಿರುವ ಹಲವಾರು ಇತರ ವಿಷಯಗಳನ್ನು ಕುರಿತು ಕನ್ನಡ  ಸಾಹಿತ್ಯದ ದಿಗ್ಗಜರ 18 ಲೇಖನಗಳು  "ಅನನ್ಯ"ದಲ್ಲಿದೆ .

ಸದಾ ಹಸನ್ಮುಖಿ, ಸ್ನೇಹಮಯಿ ಹಾಗೂ ಮೃದು ಭಾಷಿಯಾದ ಪ್ರೊ.ಶ್ರೀ ಕೃಷ್ಣ ಭಟ್ ಅರ್ತಿಕಜೆ ಅವರ ಸ್ನೇಹ ವಲಯ ಬಹಳ ದೊಡ್ಡದು. ಕರ್ನಾಟಕದ  ಸಾಹಿತಿಗಳಿಂದ, ಕಲಾವಿದರಿಂದ  ಕಾರ್ಯಕ್ರಮಗಳನ್ನು  ಯಾವಾಗಲೂ ಆಯೋಜಿಸುವುದು ಅವರಿಗೆ  ಬಹಳ ಪ್ರಿಯವಾದ ಕೆಲಸ. ಅವರೆಲ್ಲರನ್ನೊ ಮನೆಗೆ ಆಹ್ವಾನಿಸುತ್ತಿದ್ದರು. ಅವರ ಮನೆ ಆತಿಥ್ಯಕ್ಕೆ ಹೆಸರಾದದ್ದು. ಅವರ  ಪತ್ನಿ ಶ್ರೀಮತಿ  ಸರಸ್ವತಿಯವರ ಆತ್ಮೀಯತೆಯನ್ನು ಮರೆಯಲಾಗುವುದಿಲ್ಲ. ಅವರ ಸುಪುತ್ರ ಶ್ಯಾಮ್ ಪ್ರಕಾಶ  ಶಾಸ್ತ್ರೀಯ  ಸಂಗೀತದಲ್ಲಿ ವಿಶೇಷ  ಸಾಧನೆ ಮಾಡಿದ್ದಾರೆ. ಚಿಕ್ಕ  ಹಳ್ಳಿಯಿಂದ  ಬಂದು ಅವರು ತಮ್ಮದೇ ಆದ ಪರಿಶ್ರಮ ಹಾಗೂ ಪ್ರತಿಭೆಯಿಂದ ಉನ್ನತ  ಹುದ್ದೆ ಮತ್ತು ಜನಪ್ರಿಯತೆ ಗಳಿಸಿದರು. ಬೇರೆ  ಊರುಗಳಿಂದ ಬಂದವರ ಬವಣೆ ಅವರಿಗೆ ತಿಳಿದಿತ್ತು.  ಹಾಗಾಗಿ ಪರವೂರುಗಳಿಂದ ಮದರಾಸಿಗೆ ಓದಲು ಬಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ವಸತಿ ದೊರೆಯುವವರೆಗೆ ಅವರಿಗೆ ವಸತಿ ಕಲ್ಪಿಸುತ್ತಿದ್ದರು. ಅನಾರೋಗ್ಯವಾದಾಗ ವಿದ್ಯಾರ್ಥಿಗಳನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಈಗ ನಿವೃತ್ತಿಯ ನಂತರವೂ ಮದರಾಸಿನಲ್ಲಿ ಓದು ಬರವಣಿಗೆಯಲ್ಲಿ ನಿರತರಾಗಿದ್ದಾರೆ.  ಇತ್ತೀಚೆಗೆ ಮುದ್ದು ತಮ್ಮ ಎಂಬ ಅಂಕಿತದೊಂದಿಗೆ ನೂರು ತ್ರಿಪದಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ನನ್ನ ವಿದ್ಯಾ ಗುರುಗಳ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಅವರಿಗೆ ಸಂತೋಷ, ಆಯಸ್ಸು ಮತ್ತು ಆರೋಗ್ಯವನ್ನು ಕೊಟ್ಟು ಇನ್ನೂ  ಅವರು ಕನ್ನಡ  ಸಾಹಿತ್ಯಕ್ಕೆ  ಹೆಚ್ಚಿನ ಕೊಡುಗೆ ನೀಡಲೆಂದು ಹಾರೈಸುತ್ತೇನೆ.

ಕೃತಜ್ಞತೆ: ಮೇಲ್ಕಂಡ ಬರಹದ ಲೇಖಕಿ ಡಾ. ರುಕ್ಮಿಣಿ ರಘುರಾಮ್ ಮತ್ತು Raghuram Nittoor 🌷🙏🌷
ಚಿತ್ರವಿವರ:. ನಾಲ್ಕನೆಯ ಚಿತ್ರದಲ್ಲಿ ಈ ಬರಹದ ಲೇಖಕಿ ಡಾ. ರುಕ್ಮಿಣಿ ರಘುರಾಮ್ ತಮ್ಮ ಗುರು ಕೃಷ್ಣ ಭಟ್ ಅರ್ತಿಕಜೆ ಮತ್ತು ತಮ್ಮ ಇತರ ಪಿಎಚ್.ಡಿ ಸಹಪಾಠಿಗಳೊಂದಿಗಿದ್ದಾರೆ

Krishna Bhat Arti Karje 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ