ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕ್ಷೀರಸಾಗರ


 ಕ್ಷೀರಸಾಗರ 


'ಕ್ಷೀರಸಾಗರ' ಕಾವ್ಯನಾಮಾಂಕಿತರಾದ  ಬಿ. ಸೀತಾರಾಮ ಶಾಸ್ತ್ರಿಗಳು ಸಾಹಿತ್ಯ, ರಂಗಭೂಮಿ ಮತ್ತು ಶಿಕ್ಷಣದಲ್ಲಿ ಸ್ಮರಣೀಯ ಹೆಸರು.

ಸೀತಾರಾಮ ಶಾಸ್ತ್ರಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ಬೆಳಗೆರೆಯಲ್ಲಿ1906ರ ಏಪ್ರಿಲ್ 30ರಂದು ಜನಿಸಿದರು.  ಅವರದು ಮಹಾನ್ ವಿದ್ವಾಂಸರ ವಂಶ.  ತಂದೆ ಚಂದ್ರಶೇಖರ ಶಾಸ್ತ್ರಿಗಳು ವಿದ್ವಾಂಸರೂ, ಜಾನಪದ ಗೀತೆ ಮತ್ತು ಲಾವಣಿಗಳ ಅದ್ವಿತೀಯ ಹಾಡುಗಾರರೂ ಆಗಿದ್ದರು. ತಾಯಿ ಅನ್ನಪೂರ್ಣಮ್ಮ.  ಸಹೋದರ ಬೆಳಗೆರೆ ಕೃಷ್ಣಶಾಸ್ತ್ರಿಗಳದು ಗ್ರಾಮೀಣ ಶಿಕ್ಷಣ ಅಭಿವೃದ್ಧಿ, ಸಮಾಜ ಸೇವೆ ಮತ್ತು ಸಾಹಿತ್ಯದಲ್ಲಿ ಅಪಾರ ಸಾಧನೆ.  ತಂಗಿಯರಾದ ಬೆಳಗೆರೆ ಜಾನಕಮ್ಮ ಮತ್ತು ಬೆಳಗೆರೆ ಪಾರ್ವತಮ್ಮ ಮಹತ್ವದ ಬರಹಗಾರ್ತಿಯರು. ಕ್ಷೀರಸಾಗರ ಅವರು ತಳುಕಿನ ವೆಂಕಣ್ಣಯ್ಯನವರು ಮತ್ತು ತ. ಸು. ಶ್ಯಾಮರಾಯರ ಸಹೋದರಿ ಸುಂದರಮ್ಮ ಅವರನ್ನು ವರಿಸಿ ಎರಡು ಮಹಾನ್ ಮನೆತನೆಗಳ ಸೇತುವೆಯೂ ಆಗಿದ್ದರು. 


ಕ್ಷೀರಸಾಗರ ಅವರ ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗದಲ್ಲಿ ನಡೆಯಿತು. ಮೈಸೂರಿನಲ್ಲಿ. ಇಂಟರ್ ಮೀಡಿಯೆಟ್ ಓದಿ,  ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಪದವಿ ಮತ್ತು ಕಲ್ಕತ್ತೆಯ ವಿಶ್ವವಿದ್ಯಾಲಯದಿಂದ ಗಣಿತ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. 

ಕ್ಷೀರಸಾಗರ ಅವರು ಕೈತುಂಬ ಸಂಬಳ ತರುವ ಹಲವಾರು ಹುದ್ದೆಗಳಿಗೆ ಆಹ್ವಾನ ಬಂದರೂ ಅಧ್ಯಾಪಕ ವೃತ್ತಿಯನ್ನು ಆರಿಸಿಕೊಂಡರು.  1928ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇರಿ 34 ವರ್ಷಗಳ ಸೇವೆಯ ನಂತರ 1962 ರಲ್ಲಿ ನಿವೃತ್ತಿ ಪಡೆದರು.

ಋಷಿಮೋಹಿನಿ, ನಿಶ್ಚಿತಾರ್ಥ, ಕಾಶಿಯಾತ್ರೆ, ಲಕ್ಕೀ ಲಕ್ಷ್ಮಣನ್, ದೀಪಾವಳಿ ಸೇರಿ ಕ್ಷೀರಸಾಗರರ ನಿತ್ಯನಾಟಕದ ಮೊದಲ ಸಂಪುಟ ಮೂಡಿಬಂತು. ಎರಡನೇ ಸಂಪುಟದಲ್ಲಿ ಕಲಹ ಕುತೂಹಲ, ಅರ್ಧನಾರಿ, ಪಾಟೀಪಾದ, ಅರ್ಧಾಂಗಿ, ರುಪಾಯಿಗಿಡ, ಪರಪಾಟು, ಚೋರ, ಚಪ್ಪಾಳೆ ವೈದ್ಯ, ನಮ್ಮೂರಿನ ಪಶ್ಚಿಮಕ್ಕೆ, ಬೆಸ್ಟ್ ಆಫ್ ತ್ರೀ (ಗಣಿತ ಶಾಸ್ತ್ರದ ನಾಟಕಗಳು) ಮುಂತಾದ ನಾಟಕಗಳನ್ನು ಪ್ರಕಟಿಸಿದರು. 

ಋಷಿಮೋಹಿನಿ ನಾಟಕವು 1967ರಲ್ಲಿ ಎಸ್.ಎಸ್.ಎಲ್.ಸಿ. ತರಗತಿಯ ಐಚ್ಛಿಕ ವಿಷಯವಾಗಿ ಆಯ್ಕೆಯಾಗಿತ್ತು. ಬೆಸ್ಟ್ ಆಫ್ ತ್ರೀ ನಾಟಕವು ಬಾಂಬೆ ವಿಶ್ವವಿದ್ಯಾಲಯದ 1970-72ನೇ ಸಾಲಿನ ಇಂಟರ್ ಮೀಡಿಯೆಟ್ ತರಗತಿಯ ಪಠ್ಯಪುಸ್ತಕವಾಗಿತ್ತು.

ಕ್ಷೀರಸಾಗರ ಅವರ ಕಥಾಸಂಕಲನ 'ವೀಳ್ಯ'; ರಾಧೆ, ಶ್ರೀರಂಗ ನಗರದ ಕೊನೆ ದಿವಸ ಕವಿತಾ  ಸಂಕಲನಗಳು. ನೆಪೋಲಿಯನ್ ಬೊನಪಾರ್ಟೆ ಜೀವನ ಚರಿತ್ರೆ.  ಈ ಪುಸ್ತಕವು 1941ರಲ್ಲೇ ಇಂಟರ್ ಮೀಡಿಯೆಟ್ ತರಗತಿಯ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು. 

ಕ್ಷೀರಸಾಗರ ಅವರು ಹಲವಾರು ದತ್ತಿ ನಿಧಿ ಸ್ಥಾಪನೆ ಮಾಡಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತ್ಯುನ್ನತ ಶ್ರೇಣಿಯ ಪದವಿ ಪಡೆದವರಿಗೆ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ತರಗತಿಯಲ್ಲಿ ಭಾಷಾಶಾಸ್ತ್ರದಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದವರಿಗೆ ‘ಕ್ಷೀರಸಾಗರ ಪ್ರಶಸ್ತಿ.’ ಬೆಳಗೆರೆಯಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ‍್ಯಕ್ರಮವೇರ‍್ಪಡಿಸಲು ಶಾರದಾ ಮಂದಿರ ಕಟ್ಟಡ ನಿರ್ಮಾಣ, ಬೆಳಗೆರೆಯಲ್ಲಿ ಇವರ ಹೆಸರಿನಲ್ಲಿ ಹೈಸ್ಕೂಲು, ಟಿ.ಎಸ್. ವೆಂಕಣ್ಣಯ್ಯ ಮತ್ತು ಬಿ. ಸೀತಾರಾಮಶಾಸ್ತ್ರಿಯವರ ಹೆಸರಿನ ಚಳ್ಳೇಕೆರೆ ಕಾಲೇಜಿನಲ್ಲಿ ಪರ‍್ಯಾಯ ಪಾರಿತೋಷಕ ಮುಂತಾದುವು ಇವುಗಳಲ್ಲಿ ಸೇರಿದ್ದವು.

ಬಹುತೇಕರು ಪ್ರಶಸ್ತಿಗಾಗಿ ಹಪಹಪಿಸಿದರೆ,  ಪ್ರಶಸ್ತಿ ಕೊಡುವುದರಲ್ಲಿ  ಸಂತಸದಿಂದ ದಾನಿಗಳಾಗಿ ಔದಾರ‍್ಯ ಮೆರೆದವರು ಕ್ಷೀರಸಾಗರರು. ಅವರು 1977ರ ಫೆಬ್ರವರಿ 21 ರಂದು ಈ ಲೋಕವನ್ನಗಲಿದರು.

On the birth anniversary of Prof. Belegere Seetharama Shastry 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ