ಕಾನನ್ ದೇವಿ
ಕಾನನ್ ದೇವಿ
ಚಲನ ಚಿತ್ರಗಳ ಆರಂಭಿಕ ಯುಗದ ಗಾಯಕಿ ಮತ್ತು ನಟಿ ಕಾನನ್ ದೇವಿ ಭಾರತೀಯ ಚಿತ್ರರಂಗದ ಮಹಾನ್ ಹೆಸರು.
ಕಾನನ್ ದೇವಿ ಚಿತ್ರರಂಗದ ಅತ್ಯುಚ್ಚ ಸಾಧನೆಯ ಕುರುಹಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಹಾಗೂ ವಿಶ್ವಭಾರತಿಯ ಗೌರವ ಪದವಿ ಮುಂತಾದ ಗೌರವಗಳನ್ನು ಗಳಿಸಿದವರು. ಬಂಗಾಳಿ ಸಿನಿಮಾದ ಪ್ರಥಮ ತಾರೆ ಎಂದು ಅವರು ಖ್ಯಾತರು.
ಕಾನನ್ ದೇವಿ 1916ರ ಏಪ್ರಿಲ್ 22ರಂದು ಪಶ್ಚಿಮ ಬಂಗಾಳದ ಹೌರಾಹ್ ಅಲ್ಲಿ ಜನಿಸಿದರು. ಅಂದಿನ ಅವರ ಹೆಸರು ಕಾನನ್ ದಾಸಿ. ತಮ್ಮ ಆತ್ಮಚರಿತ್ರೆಯಲ್ಲಿ ತಮ್ಮ ಹುಟ್ಟಿನ ಕುರಿತಾಗಿ ಮುಕ್ತವಾಗಿ ಹೇಳಿರುವ ಅವರು, ಒಂದಾಗಿ ಬಾಳುತ್ತಿದ್ದ ಸಾಕು ತಂದೆ ರತನ್ ಚಂದ್ರ ದಾಸ್ ಮತ್ತು ರಜೋಬಲಾ ಅವರನ್ನೆ ತಮ್ಮ ತಂದೆ ತಾಯಿ ಎಂದು ಭಾವಿಸಿದ್ದಾಗಿ ಹೇಳಿದ್ದಾರೆ. ರತನ್ ಚಂದ್ರ ದಾಸ್ ಅವರ ನಿಧನದಿಂದಾಗಿ ಕಾನನ್ ದಾಸಿ ಮತ್ತು ಅವರ ತಾಯಿ ಹೊಟ್ಟೆಪಾಡಿಗಾಗಿ ಹಲವು ಚಾಕರಿ ಮಾಡುತ್ತಾ ದಿನ ದೂಡುತ್ತಿದ್ದರು.
ಬಾಲಕಿ ಕಾನನ್ ದಾಸಿಗೆ ಕೇವಲ ಹತ್ತು ವರ್ಷ ವಯಸ್ಸಾಗಿದ್ದಾಗ, ಆಕೆ ಕಾಕ ಬಾಬು ಎಂದು ಕರೆಯುತ್ತಿದ್ದ ಹಿತೈಷಿಗಳಾದ ತುಳಸಿ ಬ್ಯಾನರ್ಜಿ ಅವರು, ಆಕೆಯನ್ನು ಮದನ್ ಥಿಯೇಟರ್ಸ್ ಅವರ ಜ್ಯೋತಿ ಸ್ಟುಡಿಯೊಗೆ ಕರೆತಂದರು. 1926 ವರ್ಷದಲ್ಲಿ ಆಕೆ ಬಾಲನಟಿಯಾಗಿ 'ಜೈದೇವ್' ಎಂಬ ಚಿತ್ರದಲ್ಲಿ ನಟಿಸಿದರು. 1927ರಲ್ಲಿ 'ಶಂಕರಾಚಾರ್ಯ'ದಲ್ಲಿ ನಟಿಸಿದರು. 1926-31 ಅವಧಿಯಲ್ಲಿ ಮದನ್ ಥಿಯೇಟರ್ಸ್ ಸಂಸ್ಥೆಯ ರಿಷಿರ್ ಪ್ರೇಮ್, ಜೋರ್ಬರತ್, ವಿಷ್ಣುಮಾಯಾ ಮತ್ತು ಪ್ರಹ್ಲಾದ್ ಚಿತ್ರಗಳಲ್ಲಿ ನಟಿಸಿದರು.
1933-36 ಅವಧಿಯಲ್ಲಿ ಕಾನನ್ ದೇವಿ ರಾಧಾ ಫಿಲಂಸ್ ಲಾಂಛನದಲ್ಲಿ, 1937-41ರಲ್ಲಿ ನ್ಯೂ ಥಿಯೇಟರ್ಸ್ನಲ್ಲಿ ಹಾಗೂ 1942ರಿಂದ 1948ರಲ್ಲಿ ಎಂಪಿ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ಗಾಯಕಿ ಮತ್ತು ನಟಿಯಾಗಿದ್ದರು. ಮುಂದೆ ಅವರು ತಮ್ಮದೇ ಆದ ಶ್ರೀಮತಿ ಪಿಕ್ಚರ್ಸ್ ಅನ್ನು 1949ರಿಂದ 1965 ಅವಧಿಯವರೆಗೆ ನಡೆಸಿದರು.
ಕಾನನ್ ದೇವಿ ಅವರು ಮೂಕಿ ಚಿತ್ರಗಳ ಬಾಲನಟಿ ಪಾತ್ರದಿಂದ ಮೊದಲುಗೊಂಡು ಟಾಕಿ ಚಿತ್ರಗಳ ಬದಲಾವಣೆಯ ಕಾಲಘಟ್ಟದ ಜೋರ್ಬರತ್, ಮಾನೋಮೊಯಿ ಗರ್ಲ್ಸ್ ಸ್ಕೂಲ್, ಖೂನಿ ಕೌನ್, ಮಾ, ಜೊಯ್ದೇವ್, ರಿಷಿರ್ ಪ್ರೇಮ್, ವಿಷ್ಣುಮಾಯಾ, ಶ್ರೀ ಗೌರಂಗ, ಚಾರ್ ದರ್ವೇಶ್, ಮಾ, ಹರಿ ಭಕ್ತಿ, ಕಾಂತಹಾರ್, ಕೃಷ್ಣ ಸುಧಾಮ, ಬಿಷಬ್ರಿಕ್ಷಾ ಮುಂತಾದ ಚಿತ್ರಗಳಲ್ಲಿ ನಟಿಸಿದರು.
ಬಿರೇನ್ ಸಿರಕಾರ್ ಅವರ ನ್ಯೂ ಥಿಯೇಟರ್ಸ್ ಸಂಸ್ಥೆಯ ಚಿತ್ರಗಳು ಕಾನನ್ ದೇವಿ ಅವರನ್ನು ಸೂಪರ್ ಹಿಟ್ ಗಾಯಕಿ ಮತ್ತು ನಟಿಯನ್ನಾಗಿಸಿತು. ಆಕೆಯ ಚಿತ್ರಗಳೆಲ್ಲ ಭರ್ಜರಿ ಯಶಸ್ಸು ಕಂಡವು. 1937ರಲ್ಲಿ ತೆರೆಕಂಡ 'ಮುಕ್ತಿ'ಯಲ್ಲಿ ಆಕೆಯ ಅಭಿನಯ ಉತ್ಕೃಷ್ಟವೆನಿಸಿತು. ಮುಂದೆ ವಿದ್ಯಾಪತಿ, ಸಾತಿ, ಸ್ಟ್ರೀಟ್ ಸಿಂಗರ್, ಸಪೇರಾ, ಜವಾನಿ ಕಿ ರೀತ್, ಪರಾಜಯ್, ಅಭಿನೇತ್ರಿ, ಲಗಾನ್, ಪರಿಚಯ್, ಜಾವಾಬ್ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದರು.
ಸಂಗೀತ ವಿದ್ವಾಂಸರಾದ ರಾಯ್ ಚಂದ್ ಬೊರಾಲ್ ಅವರು ಕಾನನ್ ದೇವಿಗೆ ಸಂಗೀತ ಹೇಳಿಕೊಟ್ಟದ್ದರ ಜೊತೆಗೆ ಹಿಂದೀ ಉಚ್ಛಾರಗಳನ್ನು ಕಲಿಸಿಕೊಟ್ಟರು. ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಗೀತಗಳಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡ ಬೊರಾಲ್ ಅವರ ನಿರ್ದೇಶನದಲ್ಲಿ ಕಾನನ್ ದೇವಿ ಅನೇಕ ಮಾದರಿಯ ಸಂಗೀತಗಳನ್ನು ಅಭಿವ್ಯಕ್ತಿಸಿದರು. ಕಾನನ್ ದೇವಿ ಅಲ್ಲಾ ರಖಾ ಅವರಲ್ಲಿ ಸಂಗೀತ ಕಲಿತರು. ಮೇಗಾಫೋನ್ ಗ್ರಾಮಾಫೋನ್ ಸಂಸ್ಥೆಯಲ್ಲಿ ಗಾಯಕಿಯಾಗಿ ಕರಾರು ಹೊಂದಿದ್ದ ಆಕೆಗೆ ಭೀಷ್ಮದೇವ್ ಚಟರ್ಜಿ ಅವರಿಂದ ಹೆಚ್ಚಿನ ಸಂಗೀತ ಮಾರ್ಗದರ್ಶನ ದೊರೆಯಿತು. ಆನಂದಿ ದಸ್ತಿದಾರ್ ಅವರಲ್ಲಿ ರಬೀಂದ್ರ ಸಂಗೀತವನ್ನೂ ಕಲಿತರು. 1941ರಲ್ಲಿ ನ್ಯೂ ಥಿಯೇಟರ್ಸ್ ಸಂಸ್ಥೆಯ ಕರಾರಿನಿಂದ ಬಿಡುಗಡೆಗೊಂಡ ಕಾನನ್ ದೇವಿ ಹಿಂದೀ ಮತ್ತು ಬಂಗಾಳಿ ಚಿತ್ರಗಳಲ್ಲಿ ಸ್ವತಂತ್ರ ನಟಿಯಾದರು.
ಕಾನನ್ ದೇವಿ ಅವರು ಚಿತ್ರರಂಗದ ಪ್ರಸಿದ್ಧರಾದ ಕೆ. ಎಲ್. ಸೈಗಲ್, ಪಂಕಜ್ ಮಲ್ಲಿಕ್, ಪ್ರಮಥೇಶ್ ಬರುವ, ಪಹಾರಿ ಸನ್ಯಾಲ್, ಛಾಬಿ ಬಿಸ್ವಾಸ್ ಮತ್ತು ಅಶೋಕ್ ಕುಮಾರ್ ಅವರುಗಳ ಜೊತೆ ಕಾರ್ಯ ನಿರ್ವಹಿಸಿದರು.
ಹಿಂದೀ ಚಿತ್ರರಂಗದಲ್ಲಿ 'ಜವಾಬ್' ಕಾನನ್ ದೇವಿ ಅವರ ಬಹು ಯಶಸ್ವಿ ಚಿತ್ರ. ಅವರು ಹಾಡಿದ 'ದುನಿಯಾ ಯೇಹ್ ದುನಿಯಾ, ಹೈ ತೂಫಾನ್ ಮೈಲ್' ಗೀತೆ ತುಂಬಾ ಪ್ರಸಿದ್ಧಿ ಪಡೆಯಿತು. ಹಾಸ್ಪಿಟಲ್, ಬನ್‍ಫೂಲ್, ರಾಜ್‍ಲಕ್ಷ್ಮಿ ಮುಂತಾದವೂ ಯಶಸ್ಸು ಪಡೆದವು. ಅಶೋಕ್ ಕುಮಾರ್ ಅವರೊಂದಿಗೆ 1948ರಲ್ಲಿ ನಟಿಸಿದ 'ಚಂದ್ರಶೇಖರ್' ಕಾನನ್ ದೇವಿ ಅವರ ಕೊನೆಯ ಹಿಂದೀ ಚಿತ್ರ.
1949ರಲ್ಲಿ ಕಾನನ್ ದೇವಿ ಅವರು ಶ್ರೀಮತಿ ಪಿಕ್ಚರ್ಸ್ ಎಂಬ ತಮ್ಮದೇ ಸಂಸ್ಥೆ ಸ್ಥಾಪಿಸಿ ನಿರ್ಮಾಪಕಿಯಾದರು. 1949ರಲ್ಲಿ
ಸಭ್ಯಸಾಚಿ ಕಲೆಕ್ಟಿವ್ ಲಾಂಛನದಲ್ಲಿ ಅನನ್ಯಾ ಚಿತ್ರ ನಿರ್ಮಿಸಿದರು. ಆಕೆ ನಿರ್ಮಿಸಿದ ಬಹುತೇಕ ಚಿತ್ರಗಳು ಶರತ್ಚಂದ್ರ ಚಟ್ಟೋಪಾಧ್ಯಾಯ ಅವರ ಕಥೆಗಳನ್ನು ಅಧರಿಸಿತ್ತು.
ಕಾನನ್ ದೇವಿ ಅವರು ಮಹಿಳಾ ಶಿಲ್ಪಿ ಮಹಲ್ ಎಂಬ ಸಂಸ್ಥೆ ಸ್ಥಾಪಿಸಿ ಹಿರಿಯ ಕಲಾವಿದೆಯರಿಗೆ, ಅಶಕ್ತರಿಗೆ ಸಹಾಯ, ಹಾಗೂ ಬಂಗಾಳಿ ಸಿನಿಮಾದ ಒಳಿತಾಗಿನ ಕಾರ್ಯಗಳನ್ನು ಕೈಗೊಂಡರು.
ಬಂಗಾಳಿ ಸಿನಿಮಾದ ಪ್ರಥಮ ಮಹಿಳೆಯಾದ ಕಾನನ್ ದೇವಿ ಅವರಿಗೆ 1968ರಲ್ಲಿ ಪದ್ಮಶ್ರೀ, 1976ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿತು.
ಕಾನನ್ ದೇವಿ 1992 ವರ್ಷದ ಜುಲೈ 17ರಂದು ಕೋಲ್ಕತ್ತಾದಲ್ಲಿ ನಿಧನರಾದರು.
On Remembrance Day of great singer and actress Kannan Devi
ಕಾಮೆಂಟ್‌ಗಳು