ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಗೀತ ಸಮಯ


 ಸಂಗೀತ ಸಮಯ


ಎಸ್. ಕೃಷ್ಣಮೂರ್ತಿ ಅವರ 'ಸಂಗೀತ ಸಮಯ' ಪುಸ್ತಕವನ್ನು ತಂದಿಟ್ಟುಕೊಂಡು ಹಲವು ವರ್ಷಗಳೇ ಅದರೂ, ಓದುವ ಯೋಗ ಬಂದದ್ದು ಕಳೆದ ಮೂರು ದಿನಗಳಲ್ಲಿ. ಎಸ್. ಕೃಷ್ಣಮೂರ್ತಿ ಅವರು ಮಹಾನ್ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚರ್ಯರ ಮೊಮ್ಮಗನಾಗಿ, ಆಕಾಶವಾಣಿಯಲ್ಲಿ ಅಧಿಕಾರಿಗಳಾಗಿ, ಬರಹಗಾರರಾಗಿ, ಹಲವು ನಿಟ್ಟಿನಲ್ಲಿ ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳಾಗಿ, ಸ್ವಯಂ ಸಂಗೀತಗಾರರಾಗಿ, ಸಂಗೀತ ಸಂಯೋಜಕರಾಗಿ, ಹೀಗೆ ವೈವಿಧ್ಯಪೂರ್ಣರಾಗಿ ಜೀವಿಸಿದ್ದವರು.  

ಕೃಷ್ಣಮೂರ್ತಿಗಳು ಮೈಸೂರಿನ ಸಾಂಸ್ಕೃತಿಕ ಲೋಕದ ಶ್ರೇಷ್ಠ ಕಾಲ ಘಟ್ಟದಲ್ಲಿ ಬಾಲಕನಾಗಿ, ವಿದ್ಯಾರ್ಥಿಯಾಗಿ, ಅಧ್ಯಯನ ಶಿಲನಾಗಿ, ಸಾಧಕನಾಗಿ, ಸಾಂಸ್ಕೃತಿಕ ಪ್ರತಿನಿಧಿಯಾಗಿ ಮತ್ತು ಇವೆಲ್ಲಕ್ಕೂ ಮೀರಿ ಒಬ್ಬ ದೃಷ್ಟಾರರಾಗಿ ತಾವು ಕಂಡ ಪ್ರಪಂಚವನ್ನು, ಸರಳ ಸುಂದರ ಆಕರ್ಷಕ ನವಿರು ತಿಳಿ ಹಾಸ್ಯ ಪ್ರಜ್ಞೆಯಲ್ಲಿ ತೆರೆದಿಟ್ಟಿರುವ ರೀತಿ, ನಾವೇ ಅಂದಿನ ಮಹಾನ್ ಕಾಲಘಟ್ಟದಲ್ಲಿ ಭಾಗಿಗಳಾಗುತ್ತಿದ್ದೇವೇನೋ ಎಂಬ ಹೃದಯ ಸಂವೇದನೆಯ, ಪ್ರಶಾಂತ ರೋಮಾಂಚನದಲ್ಲಿ ಈ ಪುಸ್ತಕದ ಓದು ನಮ್ಮನ್ನಾವರಿಸುತ್ತದೆ.

ಮೈಸೂರರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದ ಸಂಗೀತ ಲೋಕವನ್ನು ಹೆಳುವುದರ ಜೊತೆ ಜೊತೆಗೆ ಕೆಲವು ಶತಮಾನಗಳ ಹಿಂದಿನ ಚಿಕ್ಕದೇವರಾಜ ಒಡೆಯರ್ ಕಾಲದವರೆಗೂ ಅದರ ಮಾರ್ಗವನ್ನು  ಕೃತಿ ಗುರುತಿಸುತ್ತದೆ.

ಮೈಸೂರು ಸಂಸ್ಥಾನಕ್ಕೆ ಕಳೆದ ಶತಮಾನದಲ್ಲಿ ಇತರೆಡೆಗಳಿಂದ ಬರದಿದ್ದ ಶ್ರೇಷ್ಠ ಸಂಗೀತಗಾರರೇ ಇರಲಿಲ್ಲ. ಜೊತೆಗೆ ಸ್ಥಳೀಯವಾಗಿಯೂ ಮಹತ್ವದ ಸಂಗೀತಗಾರರಿದ್ದರೂ.  ಈ ಎಲ್ಲ ಸಂಗೀತಗಾರರ ಸ್ವಾರಸ್ಯಗಳೆಲ್ಲವೂ ಸಂಗೀತ ಸಮಯವಾಗಿ ಕೃಷ್ಣಮೂರ್ತಿಗಳ ಬರಹದಲ್ಲಿ ಕಂಗೊಳಿಸಿದೆ.  ನಾಲ್ವಡಿಯವರ ಸಂಗೀತ ವಿಲಾಸ, ವೈಣಿಕ ಪ್ರವೀಣ ವೆಂಕಟಗಿರಿಯಪ್ಪ, ಸಂಗೀತರತ್ನ ಚಿಕ್ಕರಾಮರಾಯರು, ಟೈಗರ್ ವರದಾಚಾರ್ಯ - ಎಂ. ಡಿ. ರಾಮನಾಥನ್ ಅನುಪಮ ಜೋಡಿ, ಕಾರೈಕುಡಿ ಸಹೋದರರು, ಗಾನಶಿಲ್ಪಿ ಅರಯಾಕ್ಕುಡಿ ರಾಮಾನುಜಯ್ಯಂಗಾರ್, ನಾದಯೋಗಿ ದ್ವಾರಂ ವೆಂಕಟಸ್ವಾಮಿ ನಾಯ್ಡು, ಯುಗಪುರುಷ ಟಿ ಚೌಡಯ್ಯ, ವಿಶ್ವಕೋಗಿಲೆ ಎಂ. ಎಸ್. ಸುಬ್ಬುಲಕ್ಷ್ಮಿ, ವೀಣಾ ವರಪ್ರಸಾದಿ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್, ಸಿರಿಕಂಠದ ಶ್ರೀಕಂಠನ್, ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯ, ರಾಜರಚನ ಚತುರ ಜಯಚಾಮರಾಜ ಒಡೆಯರ್ ಮತ್ತು ಆಕಾಶವಾಣಿಯಲ್ಲಿ ಸಂಗೀತ-ಸರಸ ಎಂಬ ಈ ಕೃತಿಯಲ್ಲಿರುವ ಅಧ್ಯಾಯಗಳಲ್ಲಿ ಅಸಂಖ್ಯಾತ ಸಂಗೀತ ಶ್ರೇಷ್ಠರುಗಳ ಸಂಗೀತದ ಬದುಕಿನ ದಿವ್ಯ ಘಳಿಗೆಗಳ ಬೆಳಕು ನಮಗೆ ಆಪ್ತವೆಂಬಂತೆ ಸಿಗುತ್ತದೆ.

ಇಷ್ಟು ದಿನ ಜೊತೆಗಿದ್ದರೂ ಓದದೆ ಈಗ ಓದಿ ಫುಳಕಗೊಂಡಾಗ‍ ಅನಿಸಿತು "ಎಲ್ಲಕ್ಕೂ ಕಾಲ ಮತ್ತು ಯೋಗ ಬರಬೇಕು". 

Sangeetha Samaya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ