ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾಮಿ ಸುಖಬೋಧಾನಂದ


 ಸ್ವಾಮಿ ಸುಖಬೋಧಾನಂದರು


ಇಂದು ನನಗೆ ಬದುಕನ್ನು ಹೊಸ ಕಣ್ಣಿನಿಂದ ನೋಡುವುದಕ್ಕೆ ಪ್ರೇರೇಪಿಸಿದ ಸ್ವಾಮಿ ಸುಖಬೋಧಾನಂದರ ಜನ್ಮದಿನ. 

ಮೊದಲಿಗೆ ಇಲ್ಲಿ ನಾನು ಹೇಳುತ್ತಿರುವುದು ಒಂದು ವೈಯಕ್ತಿಕ ಅನುಭವ ಎಂದು ನಿವೇದಿಸ ಬಯಸುತ್ತೇನೆ. ಏಕೆಂದರೆ ನಮ್ಮ ದೇಶದಲ್ಲಿ ಅಧ್ಯಾತ್ಮ ಮತ್ತು ಧರ್ಮಗಳ ಬಗ್ಗೆ ಹೇಳುವುದು ಕಗ್ಗಂಟಿನ ವಿಷಯ ಎಂಬುದು ತಮಗೆಲ್ಲ ತಿಳಿದಿರುವ ಸಂಗತಿ! ಅದರಲ್ಲೂ ಯಾವುದಾದರೂ ಸ್ವಾಮಿಜಿ ವಿಚಾರ ಅಂದರೆ ಅದು ಇನ್ನೂ ಕ್ಲಿಷ್ಟ. ನಾವು ಅವರ ಬಗ್ಗೆ ಒಳ್ಳೆಯದು ಯೋಚಿಸುವ ಮಾರನೆಯ ದಿನವೇ ಅದಕ್ಕೆ ವ್ಯತಿರಿಕ್ತ ನೂರಾರು ಕಥೆಗಳು ಹಲವು ‘...ಶ್’, ‘ಹಾಯ್’, ‘ಬಯ್’ ಪತ್ರಿಕೆಗಳಲ್ಲಿ ಬಂದಿರುತ್ತದೆ. ವಿಚಿತ್ರ ಬಟ್ಟೆಬರೆ, ನಡಾವಳಿ, ಜಟೆಗಳ ಸ್ವಾಮೀಜಿಗಳನ್ನು ಓದಿ, ನೋಡಿ, ಕೇಳಿ ಸಾಕು ಸಾಕೆನಿಸುವಂತಹ ಯುಗಗಳನ್ನು ಭಾರತ ದೇಶ ಸಾಕಷ್ಟು ಕಂಡಿದೆ.

‘ಮನಸ್ಸೇ ರಿಲ್ಯಾಕ್ಸ್ ಪ್ಲೀಸ್’ ಎಂಬ ಪುಸ್ತಕ ನನ್ನ ಮೇಲೆ ಪ್ರಭಾವ ಬೀರಿದ ರೀತಿ ವಿಶಿಷ್ಟವಾದದ್ದು.   ಅದನ್ನು  ಬರೆದಿರುವವರು ಬೆಂಗಳೂರಿನ ಸ್ವಾಮಿ ಸುಖಬೋಧಾನಂದರು. ನನಗೆ ಅವರ ಈ ಪುಸ್ತಕ ಇಷ್ಟವಾಗಿದೆ. ಅವರ ಕಾರ್ಯಾಗಾರಕ್ಕೆ ಹೋದಾಗ ಅದರಲ್ಲಿ ನನಗೆ ಸಂತಸ ಸಿಕ್ಕಿದೆ ಎಂದು ಮಾತ್ರ ಹೇಳಬಯಸುತ್ತೇನೆ. ಅವರ ಬಗ್ಗೆ ವ್ಯಾಖ್ಯಾನಿಸ ಹೋಗುವುದಿಲ್ಲ. ಕಾರಣ ಅದು ನನಗೆ ಮುಖ್ಯವಲ್ಲ. ನನಗೆ ಅನ್ನಿಸುವುದು ಹೀಗೆ: “ನಮ್ಮ ಬದುಕಿನಲ್ಲಿ ಹಲವು ವ್ಯಕ್ತಿಗಳನ್ನು ನೋಡುತ್ತೇವೆ. ನಾವು ಅವರನ್ನು ಇಷ್ಟ ಪಡುತ್ತೇವೆ ಅಥವ ಇಲ್ಲ ಎಂಬುದು ನಾವು ಅವರೊಡನೆ ಇದ್ದ ಸೀಮಿತ ಕ್ಷಣಗಳಲ್ಲಿ ನಾವು ಅವರಿಂದ ಪಡೆದ ಅನುಭವಗಳಿಗೆ ಮಾತ್ರ ಸೀಮಿತವಾಗಿರುತ್ತದೆಯೇ ವಿನಹಃ ಅದು ಆ ವ್ಯಕ್ತಿಯ ಬಗೆಗೆ ಇರುವ ಪೂರ್ಣ ಅರಿವಾಗಿರಲು ಸಾಧ್ಯವಿಲ್ಲ. ಅಂತಹ ಅರಿವು ಬಹುಶಃ ಯೋಗಿಗಳಿಗೆ ಮಾತ್ರ ಸಾಧ್ಯವೇನೊ!”. 

ಸ್ವಾಮಿ ಸುಖಬೋಧಾನಂದರು 1955ರ ಏಪ್ರಿಲ್ 25ರಂದು ಜನಿಸಿದರು. ಅವರ ‘ನಿರ್ಗುಣ ಮಂದಿರ’ದಲ್ಲಿ, ಅವರ ಉಪನ್ಯಾಸಗಳಲ್ಲಿ; ಮತ್ತು  ಅವರ ‘ಲೈಫ್ ಪ್ರೋಗ್ರಾಮ್’, ‘ಎಕ್ಸಿಸ್ಟ್ಯಾನ್ಶಿಯಲ್ ಲ್ಯಾಬ್ ಅಥವಾ ಇ-ಲ್ಯಾಬ್’, ‘ಮಂತ್ರ ಯೋಗ’ ಶಿಬಿರಗಳಿಂದ ನಾನು ವೈಯಕ್ತಿಕವಾಗಿ ಅಪಾರವಾದ ಲಾಭ ಪಡೆದಿದ್ದೇನೆ.  

2002ವರ್ಷದಲ್ಲಿ   ಒಮ್ಮೆ ನಾನು ನಡೆಸುತ್ತಿದ್ದ ಸಂಸ್ಥೆಯಿಂದ, ವೆಬ್ ಸೈಟ್ ಮಾಡುವ ಬಗೆಗೆ ತಿಳಿದುಕೊಳ್ಳಬೇಕೆಂದು ಬಯಸಿದ್ದ ಚಾಮರಾಜ ಪೇಟೆಯಲ್ಲಿರುವ ರಾಷ್ಟ್ರೋತ್ಥಾನದ ಮುಖ್ಯಸ್ಥರ ಕಚೇರಿಗೆ ಹೋಗಿದ್ದೆ. ಅವರನ್ನು ನೋಡಿ ಹೊರಬಂದಾಗ ಪುಸ್ತಕಗಳನ್ನು ಕೊಳ್ಳುವ ಹವ್ಯಾಸ ಇರುವ ನನಗೆ ರಾಷ್ಟ್ರೋತ್ಥಾನದ್ದವರದೇ ಆದ ‘ಪುಸ್ತಕ ಮಳಿಗೆಗಳ ಶೋಕೇಸ್’ ಕಂಡಿತು. ಅಲ್ಲಿ ಪುಸ್ತಕಗಳನ್ನು ನೋಡುವಾಗ ಚಿಟ್ಟೆ ಚಿತ್ರದ ಸುಂದರ ಹೊದಿಕೆ ಇರುವ ‘ಮನಸ್ಸೇ ರಿಲ್ಯಾಕ್ಸ್ ಪ್ಲೀಸ್!’ ಪುಸ್ತಕದ ಹೊರನೋಟ ನನ್ನನ್ನು ಆಕರ್ಷಿಸತೊಡಗಿತು. ಆದರೆ, ಇದನ್ನು ಬರೆದವರು ಒಬ್ಬರು ಸ್ವಾಮಿ. ನನ್ನ ಅಂದಿನ ದಿನದವರೆಗಿನ ಬದುಕಿನಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಹೊರತು ಬೇರೆ ಸ್ವಾಮಿಗಳ ಬಗೆಗೆ ಓದದ ಮತ್ತು ಬೇರೆಯ ಸ್ವಾಮಿಗಳ ಬಗೆಗೆ ನಕಾರಾತ್ಮಕ ಕಥೆಗಳನ್ನೇ ಕೇಳಿದ್ದ ನನಗೆ ಈ ಪುಸ್ತಕದ ಆಕರ್ಷಕ ಹೊದಿಕೆ ಮತ್ತು ಸ್ವಾಮಿ ಎಂಬ ಪದಗಳು ಸಂದಿಗ್ಧತೆ ಉಂಟು ಮಾಡಿಬಿಟ್ಟವು. ಆ ಒಂದು ಕ್ಷಣದಲ್ಲಿ ನನಗೆ ರಾಷ್ಟ್ರೋತ್ತಾನದ ಬಾಬು ಕೃಷ್ಣಮೂರ್ತಿ ಅವರ ‘ಅಜೇಯ’, ಪುರುಷೋತ್ತಮ್ ಎನ್ ಓಕ್ ಅವರ ‘ಇತಿಹಾಸದ ಮೇಲೆ ಬೆಳಕು’ ಮತ್ತು ಹಲವಾರು ಭಾರತೀಯ ಸಂಸ್ಕೃತಿಗಳ ಮೇಲೆ ಚೆಲ್ಲುವ ಕಿರು ಪುಸ್ತಕಗಳನ್ನು ಓದಿದ ನೆನಪಾಯಿತು. ಆ ಓದಿನ ನಂತರ ನನಗೆ ರಾಷ್ಟ್ರೋತ್ಥಾನದ ಪುಸ್ತಕಗಳು ಎಂದರೆ ಏನೋ ಅಭಿಮಾನ. ಆಗ ಮನಸ್ಸಿನಲ್ಲಿ ಮೂಡಿದ ಒಂದು ಚಿಂತನೆ ಅಂದರೆ “ರಾಷ್ಟ್ರೋತ್ಥಾನದವರು ಪ್ರಕಾಶನ ಮಾಡಿರುವ ಪುಸ್ತಕ ಅಂದರೆ ಅದು ಒಂದಿಷ್ಟು ಉತ್ತಮವೂ  ಆಗಿರಬಹುದಲ್ಲವೇ?”. ಆ ನಿರ್ಧಾರ ಮೂಡಿದ್ದೇ ತಡ ಹೆಚ್ಚಿಗೆ ಯೋಚಿಸದೆ ಎಪ್ಪತ್ತು  ರೂಪಾಯಿ ಕೊಟ್ಟು ಪುಸ್ತಕ ತೆಗೆದುಕೊಂಡು ಹೊರಟುಬಿಟ್ಟೆ. ಅದರ ಮಾರನೇ ದಿನವೇ ಮೈಸೂರಿಗೆ ಪ್ರಯಾಣ ಮಾಡಬೇಕಾದ ಸಂದರ್ಭ ಒದಗಿ ಬಂದಾಗ ಈ ಪುಸ್ತಕ ಮತ್ತು ಒಂದು ವಾರಪತ್ರಿಕೆಯನ್ನು ಬ್ಯಾಗಿನೊಳಗೆ ಹಾಕಿಕೊಂಡೆ. ಬಸ್ಸಿನೊಳಗೆ ಕುಳಿತು ಸ್ವಲ್ಪ ಹೊತ್ತಿನಲ್ಲೇ ಈ ಪುಸ್ತಕದ ಎರಡು ಪುಟಗಳ ಕಥೆಯನ್ನು ಓದುತ್ತಿದ್ದಂತೆಯೇ ನಾನೆಲ್ಲೋ ಬದಲಾಗುತ್ತ ಹೋದಂತ ಅನುಭವ. ಮುಂದೆ ಆ ಪುಸ್ತಕ ಸಂಜೆಯ ಪಯಣದ ವೇಳೆಗೆ ಓದಿ ಮುಗಿದಿತ್ತು. ಸಾಮಾನ್ಯವಾಗಿ ಬಸ್ಸಿನಲ್ಲಿ ಕುಳಿತ ತಕ್ಷಣದಿಂದಲೇ ಅಯ್ಯೋ ಇನ್ನೆಷ್ಟು ಹೊತ್ತಪ್ಪ ಎಂಬಂತಹ ಬೇಸರ, ಅತೃಪ್ತಿಯ ಜೀವನ ನಡೆಸುತ್ತಿದ್ದ ನನಗೆ ಅಂದು ಬಸ್ಸಿನಲ್ಲಿ ಬೆಂಗಳೂರಿಗೆ ಹಿಂದಿರುಗುವಾಗ ಅಂತಹ ಯಾವುದೇ ಕ್ಷೋಭೆಗಳಿಲ್ಲದೆ ನಾನು ಯಾವುದೋ ಶಕ್ತಿಯ ಸಂಚಲನದ ಒಂದು ವಸ್ತು ಎಂಬ ಅನುಭಾವದಲ್ಲಿದ್ದೆ. ಮುಂದೆ ಸುಖಬೋಧಾನಂದರ ಹಲವು ಪುಸ್ತಕಗಳನ್ನು ಓದಿದೆ. ನನ್ನ ಹಲವು ಬಂಧುಗಳಿಗೆ ಈ ಪುಸ್ತಕವನ್ನು ಕೊಡುಗೆಯಾಗಿ ಹಂಚಿದೆ. ಸುಖಬೋಧಾನಂದರ ಹಲವು ಶಿಬಿರಗಳಲ್ಲೂ ಪಾಲ್ಗೊಂಡೆ. ಈ ಅನುಭವಗಳು ನನಗೆ, ಅಂತರಾಳಕ್ಕೆ ಬೇಕಾದಾಗ ಹೋಗಿ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡು, ಗೊತ್ತು ಗುರಿ ಇಲ್ಲದ ಅಂದಿನ ಜೀವನದಿಂದ ಇಂದಿನ ಸಮಾಧಾನಕರ ಬದುಕಿಗೆ ಬರಲು ಸಹಾಯ ಮಾಡಿದೆ. ಇಂತಹ ಅನುಭವಗಳು ಎಲ್ಲರದ್ದೂ ಆಗಿರಲೇಬೇಕೆಂದೇನಿಲ್ಲ. ಕೆಲವೊಮ್ಮೆ ಅಧ್ಯಾತ್ಮ ಎಂದು ಅದನ್ನೇ ಹುಚ್ಚು ಹುಚ್ಚಾಗಿ ಹಚ್ಚಿಕೊಂಡು ವೈಪರೀತ್ಯದ ಬದುಕು ನಡೆಸುವ ಜನ ಕೂಡ ಇದ್ದಾರೆ. ನಾನು ಹೇಳಿದ್ದು ನನ್ನ ಅನುಭವ ಮಾತ್ರ. ಅದು ಕೂಡ ಹುಚ್ಚಿದ್ದರೂ ಇರಬಹುದು. ಆದ್ದರಿಂದ ಎಲ್ಲರೂ ಬದುಕು ನಡೆಸುವಾಗ ನಾವು ವೈಪರೀತ್ಯದ ದಾರಿಯಲ್ಲಿಲ್ಲವಷ್ಟೇ ಎಂದು ಪರೀಕ್ಷಿಸಿಕೊಳ್ಳುವುದು ಕೂಡ ಅತ್ಯಗತ್ಯ ಎಂಬ ಮಾತನ್ನು ಒತ್ತಿ ಹೇಳಬಯಸುತ್ತೇನೆ. 

ಅವರ ಪುಸ್ತಕದಲ್ಲಿರುವ ಹಲವು  ಪ್ರಭಾವಿ ಅಂಶಗಳಲ್ಲಿ ಇದು ಪ್ರಮುಖವಾದುದು.   “ದೇವರೇ! ನನ್ನಿಂದ ಏನೆಲ್ಲವನ್ನೂ ಬದಲಾಯಿಸಲು ಸಾಧ್ಯವೋ ಅದನ್ನು ಬದಲಾಯಿಸುವ ಶಕ್ತಿಯನ್ನು ನನಗೆ ಕೊಡು! ನನ್ನಿಂದ ಬದಲಾಯಿಸಲು ಸಾಧ್ಯವಾಗದ್ದು ಯಾವುದು ಎಂದು ತಿಳಿದುಕೊಳ್ಳುವ ಅರಿವನ್ನು ನನಗೆ ಕೊಡು! ನನ್ನಿಂದ ಬದಲಾಯಿಸಲು ಸಾಧ್ಯವಾಗುವುದು, ಸಾಧ್ಯವಾಗದಿರುವುದು – ಇವೆರಡಕ್ಕೂ ನಡುವೆ ಇರುವ ವೆತ್ಯಾಸವನ್ನು ವಿಂಗಡಿಸಿ ನೋಡಿ ತಿಳಿದುಕೊಳ್ಳುವ ಪಕ್ವತೆಯನ್ನು ನನಗೆ ಕೊಡು!”

ಸ್ವಾಮಿ ಸುಖಬೋಧಾನಂದರು ಪ್ರಭಾವಿ ವಾಗ್ಮಿಗಳೆಂದೂ, ಕಾರ್ಪೋರೇಟ್ ಗುರು ಎಂದೂ ಹೆಸರು ಪಡೆದಿದ್ದಾರೆ.  ಅವರ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ವಿಶ್ವದ ಕೆಲವೊಂದು ಭಾಷೆಗಳಲ್ಲೂ ಪ್ರಸಿದ್ಧ.  ಅವರ ಇನ್ನಿತರ ನೂರಾರು ಪುಸ್ತಕಗಳೂ, ಶ್ರವ್ಯ ಮಾಧ್ಯಮಗಳಲ್ಲಿನ ಉಪನ್ಯಾಸಗಳೂ ಲಭ್ಯ. ವರ್ಲ್ಡ್ ಎಕನಾಮಿಕ್ ಫೋರಂ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಅವರ ಉಪನ್ಯಾಸಗಳ ಖ್ಯಾತಿ ಹಬ್ಬಿದೆ.   ಅವರ ಕಾರ್ಯಾಗಾರಗಳಲ್ಲಿ ಅವರ ಸುಲಲಿತ ವಾಗ್ವೈಖರಿ, ಹಾಸ್ಯಪೂರ್ಣ ಮಾತುಗಾರಿಕೆ, ಧ್ಯಾನ ವಿಧಾನಗಳಲ್ಲಿನ ಲವಲವಿಕೆ, ಅವರು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೆ, ಉತ್ತರಗಳನ್ನು ಕಂಡುಕೊಳ್ಳುವಂತೆ ಮಾಡುವ ರೀತಿ, ಅವರಿಗಿರುವ ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ, ಸಾಮಾನ್ಯ ಮತ್ತು ವೈಜ್ಞಾನಿಕ ರೀತಿಯ ಚಿಂತನೆಗಳಲ್ಲಿರುವ ಅಭಿರುಚಿ ಉಲ್ಲಾಸ ತರಿಸುವಂತದ್ದು.  ಅವರ ಕಾರ್ಯಾಗಾರಗಳಲ್ಲಿ ಸಂಗೀತ ಮತ್ತು ನೃತ್ಯ ಮುಖೇನ ಸಿಗುವ ಧ್ಯಾನದ ಸ್ವಾದ  ಮರೆಯಲಾಗದ್ದು.  

ಅವರಿಂದ ಉಪಯೋಗ ಪಡೆದಿರುವ ಒಬ್ಬ ವ್ಯಕ್ತಿಯಾಗಿ ಪೂಜ್ಯ ಸ್ವಾಮಿ ಸುಖಬೋಧಾನಂದರಿಗೆ ಆತ್ಮೀಯವಾಗಿ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಸಲ್ಲಿಸುತ್ತೇನೆ. 

On the birth day of ‘Oh Mind Relax please’ fame Swami Sukhabodhananda 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ