ಅಲಿ ಅಕ್ಬರ್ ಖಾನ್
ಅಲಿ ಅಕ್ಬರ್ ಖಾನ್
ಮಹಾನ್ ಸರೋದ್ ವಾದಕರಾಗಿದ್ದ ಉಸ್ತಾದ್ ಅಲಿ ಅಕ್ಬರ್ ಖಾನ್ ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ಪ್ರಸಿದ್ಧಿಪಡಿಸಿದವರಲ್ಲಿ ಒಬ್ಬರು.
ಅಲಿ ಅಕ್ಬರ್ ಖಾನ್ ಅವರು 1922ರ ಏಪ್ರಿಲ್ 14ರಂದು ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಶಿವಪುರ ಜಿಲ್ಲೆಯ ಕೊಮಿಲ್ಲಾ ಎಂಬಲ್ಲಿ ಜನಿಸಿದರು. ತಂದೆ ಬಾಬಾ ಅಲ್ಲಾವುದ್ದೀನ್ ಖಾನರು ಅನೇಕ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರಲ್ಲದೆ, ತಮ್ಮ ಜೀವಿತಾವಧಿಯಲ್ಲಿ ಸೇನಿಯಾ ಮೈಹರ್ ಘರಾಣೆಯ ರೂಪರೇಷೆಯನ್ನೇ ಬದಲಿಸಿದವರೆಂದು ಖ್ಯಾತರಾದರು. ತಾಯಿ ಮದೀನಾ ಬೇಗಮ್.
ಅಲಿ ಅಕ್ಬರ್ ಖಾನ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಂದೆ ಅಲ್ಲಾವುದ್ದೀನ್ ಖಾನರಿಂದ
ಗಾಯನ ಮತ್ತು ವಾದ್ಯ ವಾದನದ ಶಿಕ್ಷಣವನ್ನು ಪಡೆದರು. ಚಿಕ್ಕಪ್ಪನಾದ ಫಕೀರ್ ಅಫ್ತಾಬುದ್ದೀನರ ಹತ್ತಿರ ತಬಲಾ ವಾದನವನ್ನು ಕೂಡಾ ಕಲಿತರು. ಮೊದಲು ಅಲ್ಲಾವುದ್ದೀನ್ ಖಾನರು ಅಲಿ ಅಕ್ಬರರಿಗೆ ಅನೇಕ ವಾದ್ಯ ವಾದನವನ್ನು ಕಲಿಸಿದರು, ನಂತರ ಕೇವಲ ಸರೋದನ್ನು ಅತ್ಯುತ್ತಮ ರೀತಿಯಲ್ಲಿ ಕಲಿಯಲು ತಿಳಿಸಿದರು. ಅನೇಕ ವರ್ಷಗಳ ಕಠಿಣ ತರಬೇತಿಯ ನಂತರ ಅಲಿ ಅಕ್ಬರ್ ಖಾನರು ಸುಮಾರು ಇಪ್ಪತ್ತನೆಯ ವಯಸ್ಸಿನ ಆಸುಪಾಸಿನಲ್ಲಿ ತಮ್ಮ ಮೊದಲ ಸಂಗೀತ ಕಛೇರಿಯನ್ನು ನೀಡಿದರು. ತಮ್ಮ 22ನೇ ವಯಸ್ಸಿನಲ್ಲಿ ಜೋಧಪುರದ ಮಹಾರಾಜರ ಆಸ್ಥಾನದಲ್ಲಿ ಆಸ್ಥಾನ ಸಂಗೀತ ವಿದ್ವಾಂಸರಾಗಿ ನೇಮಕಗೊಂಡರು.
ಅಲಿ ಅಕ್ಬರ್ ಖಾನರು ಭಾರತದ ಉದ್ದಗಲವಲ್ಲದೆ ವಿದೇಶಗಳಲ್ಲೂ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟು ಪ್ರಪಂಚದಾದ್ಯಂತ ಸರೋದ್ ವಾದ್ಯವನ್ನು ಜಗತ್ತಿಗೆ ಪರಿಚಯಿಸಿದರು. 1956ರಲ್ಲಿ ಕಲ್ಕತ್ತಾದಲ್ಲಿ 'ಅಲಿ ಅಕ್ಬರ್ ಖಾನ್ ಕಾಲೇಜ್ ಆಫ್ ಮ್ಯೂಸಿಕ್'ನ್ನು ಸ್ಥಾಪಿಸಿದರು. 1958ರಲ್ಲಿ ಅಮೆರಿಕದಲ್ಲಿ ಹಾಗೂ 1985ರಲ್ಲಿ ಸ್ವಿಟ್ಜರ್ಲ್ಯಾಂಡ್ನಲ್ಲಿಯೂ ಶಾಖೆಗಳನ್ನು ತೆರೆದು ಸಂಗೀತ ಪ್ರಸಾರ ಮಾಡಿದರು.
ಸರೋದ್ ವಾದನೆದಲ್ಲಿ ಒಂದು ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದ ಖಾನರು, ಭಾರತೀಯ ಸಂಗೀತದ ಪ್ರಥಮ ಎಲ್.ಪಿ ರೆಕಾರ್ಡನ್ನು ಪಾಶ್ಚಾತ್ಯ ದೇಶದಲ್ಲಿ ದ್ವನಿ ಮುದ್ರಿಸಿದವರೆಂಬ ಖ್ಯಾತಿ ಪಡೆದವರು.
ಅಲಿ ಅಕ್ಬರ್ ಖಾನರು ತಮ್ಮ ಸಮಕಾಲೀನರಾದ ಪಂಡಿತ್ ರವಿಶಂಕರ್, ಪಂಡಿತ್ ನಿಖಿಲ್ ಬ್ಯಾನರ್ಜಿ, ಡಾ.ಎಲ್.ಸುಬ್ರಹ್ಮಣ್ಯಂ ಮುಂತಾದವರೊಂದಿಗೆ ನಡೆಸಿದ ಜುಗಲ್ಬಂದಿ ಕಾರ್ಯಕ್ರಮಗಳು ಅತ್ಯಂತ ಪ್ರಸಿದ್ಧವಾಗಿವೆ.
ಅಲಿ ಅಕ್ಬರ್ ಖಾನರಿಗೆ 1989ರಲ್ಲಿ ಪದ್ಮ ವಿಭೂಷಣ, 1991ರಲ್ಲಿ ಮೆಕಾರ್ಥರ್ ಫೆಲೋಷಿಪ್, 1991-92ರಲ್ಲಿ ಕಾಳಿದಾಸ ಸಮ್ಮಾನ್ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಅಲಿ ಅಕ್ಬರ್ ಖಾನರು 2009ರ ಜೂನ್ 18ರಂದು ಈ ಲೋಕವನ್ನಗಲಿದರು.
Great musician Ali Akbar Khan
ಕಾಮೆಂಟ್‌ಗಳು