ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೇಶವ ಕರ್ವೆ


 ಭಾರತರತ್ನ ಧೊಂಡೊ ಕೇಶವ ಕರ್ವೆ 


ಭಾರತರತ್ನ  ಮಹರ್ಷಿ ಧೊಂಡೊ ಕೇಶವ ಕರ್ವೆ ಅವರು ಭಾರತದಲ್ಲಿ ಸ್ತ್ರೀ ಶಿಕ್ಷಣ ಮತ್ತು ಸಮಾಜಸುಧಾರಣೆಗೆ ಮಹತ್ವದ ಕೊಡುಗೆ ನೀಡಿದವರು. 

ಧೊಂಡೊ ಕರ್ವೆ ಅವರು 1858ರ ಏಪ್ರಿಲ್ 18ರಂದು ರತ್ನಗಿರಿ ಜಿಲ್ಲೆಯ ಶೇರವಲಿಯಲ್ಲಿ ಜನಿಸಿದರು. ತಂದೆ ಕೇಶವ ಕರ್ವೆ ಅವರ ವಾಸಸ್ಥಳ ಅದೇ ಜಿಲ್ಲೆಯ ಮುರೂಡ್ ಗ್ರಾಮ. ಈ ಮನೆತನದವರು ಪೇಶ್ವೆಗಳ ಕಾಲದಲ್ಲಿ ಪುಣೆ ಯಲ್ಲಿ ಸಾಹುಗಾರಿಕೆ ಮಾಡುತ್ತಿದ್ದರಾದರೂ ಕೇಶವ ಕರ್ವೆ ಬಡತನದ ಜೀವನ ನಡೆಸುತ್ತಿದ್ದರು. ಧೋಂಡೊ ಕರ್ವೆಗೆ ಪ್ರಾಥಮಿಕ ಶಿಕ್ಷಣ ಮುರೂಡ್ನಲ್ಲೇ ದೊರಕಿತು. ಬಹಳ ಅಡಚಣೆಗಳನ್ನು ಎದುರಿಸಿ ವಿದ್ಯಾಭ್ಯಾಸವನ್ನು ಮುಂದುವರಿಸಿ 1881ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದೆ ಗಣಿತವನ್ನಾರಿಸಿಕೊಂಡು 1885ರಲ್ಲಿ ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಪದವಿ ಪಡೆದರು. ಎಂ.ಎ. ವಿದ್ಯಾಭ್ಯಾಸವನ್ನು  ಪ್ರಾರಂಭಿಸಿದರಾದರೂ ಸಮಯಾಭಾವದಿಂದ ಪದವಿಯ ಆಸೆ ಕೈಬಿಡಬೇಕಾಯಿತು.

ತಾರುಣ್ಯದಿಂದಲೂ ಶಾಲಾ ಅಧ್ಯಾಪಕ ವೃತ್ತಿಯಲ್ಲಿ ದುಡಿದ ಕರ್ವೆಯವರಿಗೆ ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆ ಸ್ವೀಕರಿಸಬೇಕೆಂದು, ಸಹಪಾಠಿ ಗೋಪಾಲಕೃಷ್ಣ ಗೋಖಲೆಯವರಿಂದ ಆಮಂತ್ರಣ ಬಂತು. 1891ರಿಂದ 1914ರವರೆಗೆ ಅಲ್ಲಿ ಸೇವೆ ಸಲ್ಲಿಸಿದ ಕರ್ವೆ ಅವರು ತಮ್ಮ ಬಾಳನ್ನು ಸಮಾಜಸೇವೆಗೆ ಮುಡಿಪಾಗಿಟ್ಟರು. 

14ನೇ ವರ್ಷದಲ್ಲೇ ವಿವಾಹವಾಗಿದ್ದ ಕರ್ವೆಯವರಿಗೆ ತಾರುಣ್ಯದಲ್ಲೇ ವಿಧುರತ್ವ ಸಂಭವಿಸಿತು. ಇದೇ ಕಾಲದಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಬಲವಾಗಿದ್ದ ಆರ್ಯಸಮಾಜ, ಬ್ರಹ್ಮಸಮಾಜ ಮುಂತಾದ ಚಳವಳಿಗಳು ಕರ್ವೆಯವರ ಮೇಲೆ ಪ್ರಭಾವ  ಬೀರಿದ್ದವು. 1893ರಲ್ಲಿ ಅವರು ಬಾಲವಿಧವೆಯಾಗಿದ್ದ ಗೋದುಬಾಯಿಯನ್ನು ಮದುವೆಯಾದರು. ಅದೇ ವರ್ಷ ಅವರು ವಿಧವಾ ಪುನರ್ವಿವಾಹ ಸಂಸ್ಥೆಯನ್ನು ಸ್ಥಾಪಿಸಿದರು.  ಇದಲ್ಲದೆ 1896ರಲ್ಲಿ ಅನಾಥ ಬಾಲಿಕಾಶ್ರಮ ಸಂಘ, 1907ರಲ್ಲಿ ಪುಣೆಯ ಮಹಿಳಾ ವಿದ್ಯಾಲಯ ಮುಂತಾದ ಸಂಸ್ಥೆಗಳನ್ನೂ ಸ್ಥಾಪಿಸಿದರು.

ಕರ್ವೆ ಅವರು ಸ್ಥಾಪಿಸಿದ ಮಹಿಳಾ ವಿದ್ಯಾಲಯ ಬೆಳೆದು ಮುಂದೆ 1916ರಲ್ಲಿ ಮುಂಬಯಿಯಲ್ಲಿ ಶ್ರೀಮತಿ ಸಾಥಿಬಾಯಿ ದಾಮೋದರ ಥ್ಯಾಕರ್ಸಿ ಮಹಿಳಾ ವಿದ್ಯಾ ಪೀಠದ ಸ್ಥಾಪನೆಗೆ ಹಾದಿಮಾಡಿಕೊಟ್ಟಿತು. ಈ ವಿದ್ಯಾಪೀಠಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದಲೇ ಕರ್ವೆ 1927ರಲ್ಲಿ ಫ್ರಾನ್ಸ್‌, ಇಂಗ್ಲೆಂಡ್, ಹಾಲೆಂಡ್, ಅಮೆರಿಕ, ಜಪಾನ್, ಚೀನ, ಮಲಯ ಮುಂತಾದ ದೇಶಗಳನ್ನೂ ಮುಂದೆ ದಕ್ಷಿಣ ಆಫ್ರಿಕವನ್ನೂ ಸುತ್ತಿಬಂದರು.

ಕರ್ವೆ ಅವರು 1915ರಲ್ಲಿ ಮುಂಬಯಿಯಲ್ಲಿ ನಡೆದ ಸಮಾಜಸುಧಾರಣ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1936ರಲ್ಲಿ ಮಹಾರಾಷ್ಟ್ರ ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಸ್ಥಾಪನೆಮಾಡಿದರು. 

ಫ್ರೆಡರಿಕ್ ಜೆ. ಗೌಲ್ಡ್‌  1934ರಲ್ಲಿ ಲಂಡನಿನಲ್ಲಿ ಸ್ಥಾಪಿಸಿದ ಸೊಸೈಟಿ ಫಾರ್ ದಿ ಪ್ರಮೋಶನ್ ಆಫ್ ಹ್ಯೂಮನ್ ಈಕ್ವ್ಯಾಲಿಟಿ ಕರ್ವೆ ಅವರ ಮೇಲೆ ಪ್ರಭಾವ ಬೀರಿತು.  ಈ ಪ್ರೇರಣೆಯಿಂದ ಮಾನವರಲ್ಲಿ ಸಮಾನತೆ ಇರಬೇಕೆಂಬ ತತ್ತ್ವವನ್ನು ಎತ್ತಿಹಿಡಿಯಲು 1944 ರಲ್ಲಿ  ಸಮತಾಸಂಘದ ಸ್ಥಾಪನೆ ಮಾಡಿದರು. 1948ರಲ್ಲಿ ಜಾತಿ ನಿರ್ಮೂಲನ ಸಂಸ್ಥೆಯನ್ನು ಪ್ರಾರಂಭಿಸಿದರು.

1942 ವರ್ಷದಲ್ಲಿ  ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಕರ್ವೆಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಾಪ್ತವಾಯಿತು. ಪುಣೆ ವಿಶ್ವವಿದ್ಯಾಲಯ, ಪುಣೆ ಮಹಿಳಾ ವಿದ್ಯಾಪೀಠ ಹಾಗೂ ಮುಂಬಯಿ ವಿಶ್ವವಿದ್ಯಾಲಯಗಳೂ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದುವು. 

ಕರ್ವೆಯವರು ಮರಾಠಿಯಲ್ಲಿ ಬರೆದ ಆತ್ಮಚರಿತ್ರೆ 'ಆತ್ಮವೃತ್ತ' ಎಂಬ ಹೆಸರಿನಿಂದ 1915ರಲ್ಲಿ ಪ್ರಕಟವಾಯಿತು. ಲುಕಿಂಗ್ ಬ್ಯಾಕ್ ಎಂಬ ಹೆಸರಿನಿಂದ 1936ರಲ್ಲಿ ಇಂಗ್ಲಿಷಿನಲ್ಲೂ, ಮುಂದೆ ಸಿಂಹಾವಲೋಕನ ಎಂದು ಕನ್ನಡದಲ್ಲೂ ಈ ಕೃತಿ ಪ್ರಕಟಗೊಂಡಿತು.

ಸ್ತ್ರೀಶಿಕ್ಷಣ, ಸಮಾಜ ಸುಧಾರಣೆಗಳ ಕ್ಷೇತ್ರಗಳಿಗೆ ಸಲ್ಲಿಸಿದ ಅವಿಶ್ರಾಂತ ಸೇವೆಗಾಗಿ  ಕರ್ವೆ ಅವರಿಗೆ 1955ರಲ್ಲಿ ಪದ್ಮವಿಭೂಷಣ,  ಹಾಗೂ ಅವರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ 1958ರಲ್ಲಿ  ಭಾರತರತ್ನ ಪ್ರಶಸ್ತಿಗಳನ್ನು ನೀಡಿ ದೇಶ ಗೌರವಿಸಿತು.

ಭಾರತರತ್ನ ಧೊಂಡೊ ಕೇಶವ ಕರ್ವೆ 1962ರ  ನವೆಂಬರ್ 9ರಂದು ತಮ್ಮ 105 ನೇ  ಮಯಸ್ಸಿನಲ್ಲಿ ನಿಧನರಾದರು.

On the birth anniversary of social reformer Dhondo Keshav Karve

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ