ಅಳಸಿಂಗಾರಾಚಾರ್ಯ
ಅಳಸಿಂಗರಾಚಾರ್ಯ
ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರ್ಯರು ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ರಾಮಾಯಾಣ, ಭಾರತ, ಭಾಗವತಗಳನ್ನು ಬ್ರಹತ್ ಗಾತ್ರದಲ್ಲಿ ಕನ್ನಡಾನುವಾದ ಮತ್ತು ಸುಂದರವಾದ ಪ್ರಕಾಶನ ಮಾಡಿಕೊಟ್ಟ ಮಹನೀಯರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.
ಆತ್ಮೀಯ ಪ್ರಸಿದ್ಧ ಬರಹಗಾರರಾದ ವಸುಧೇಂದ್ರ Vasudhendra ಅವರು ಅಳಸಿಂಗರಾಚಾರ್ಯರ ಅದ್ಭುತ ಕಾರ್ಯದ ಬಗ್ಗೆ ಹೇಳಿ ಅವರ ಕುರಿತು ಬರೆಯಲು ಪ್ರೇರಣೆ ಇತ್ತರು. ಜೊತೆಗೆ ದಿವಾಕರ್ Somathanahalli Diwakar ಸಾರ್ ಅವರ ಮಾತುಗಳನ್ನೂ ಹೇಳಿದರು. ಹಾಗಾಗಿ ದಿವಾಕರ್ ಸಾರ್ ಅವರಿಗೆ ಕರೆ ಮಾಡಿದಾಗ ಅವರೂ ಅಳಸಿಂಗಾಚಾರ್ಯರ ಕುರಿತು ಕೆಲವು ಮಹತ್ವದ ವಿಚಾರ ಹೇಳಿದರು.
ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರ್ಯ 'ದ್ವಯೀ ವೃತ್ತಿರ್ಮನಸ್ವಿನಃ' ಎಂಬುದಕ್ಕೆ ಉದಾಹರಣೆ. ಹೂ ಇದ್ದರೆ ದೇವರ ತಲೆಯಮೇಲೇ ವಿರಾಜಿಸಬೇಕು. ಇಲ್ಲವಾದರೆ ಕಾಡಿನಲ್ಲೇ ಉದುರಿ ಒಣಗಬೇಕು. ಕಲಿತರೆ ಸರಿಯಾಗಿ ಕಲಿಯಿರಿ, ಇಲ್ಲವಾದರೆ ಕಲಿಯಲೇಬೇಡಿ ಎಂದು ತಮ್ಮ ಮಕ್ಕಳಿಗೂ, ಶಿಷ್ಯರಿಗೂ ಹೇಳುತ್ತಿದ್ದರಂತೆ. ದೇವರಸ್ತೋತ್ರ ಏನಾದರೂ ಸ್ವಲ್ಪ ತಪ್ಪು ಹೇಳಿದರೆ ಇವರಿಗಾಗದು. ಎಲ್ಲವೂ ಇವರ ಬರವಣಿಗೆಯಂತೆ ಶುದ್ಧ ಮಾರ್ಗದಲ್ಲೇ ಇರಬೇಕು.
ಅಳಸಿಂಗಾಚಾರ್ಯರು 1877ರ ಏಪ್ರಿಲ್ 18ರಂದು ಜನಿಸಿದರು.
ಪ್ರಸಿದ್ದ ಕರಿಬಸಪ್ಪ ಶಾಸ್ತ್ರಿಗಳಿಗೆ ಅಭಿನವ ಕಾಳಿದಾಸ ಎಂದು ಹೆಸರು. ಇವರ ಚಂಡಕೌಶಿಕ ನಾಟಕ ಅನುವಾದ ಅಪೂರ್ಣವಾಗಿದ್ದಾಗ ಮೈಸೂರಿನ ಮಹಾರಾಜರು ಅದನ್ನು ಪೂರ್ಣಗೊಳಿಸಲು ಅಳಸಿಂಗರಾಚಾರ್ಯರನ್ನೇ ನಿಯಮಿಸಿದರು ಎಂದರೆ, ಅಳಸಿಂಗರಾಚಾರ್ಯರ
ಪ್ರಾಮಾಣಿಕವಾದ ಪಾಂಡಿತ್ಯ ಅರಿವಾದೀತು.
"ಶಾಕುಂತಳಾನುವಾದದಿಂದ ಕರಿಬಸಪ್ಪ ಶಾಸ್ತ್ರಿಯವರು 'ಅಭಿನವ ಕಾಳಿದಾಸ' ಎಂಬ ಸತ್ಕೀರ್ತಿಗೆ ಪಾತ್ರರಾದಂತೆ,
ಅಳಸಿಂಗರಾಚಾರ್ಯರು "ಸ್ವಪ್ನವಾಸವದತ್ತ"ದ ಅನುವಾದದಿಂದ "ಅಭಿನವಭಾಸ' ಎನ್ನಲು ಏನೂ ಅಡ್ಡಿಯಿಲ್ಲ" ಎಂದು ಮರಿಯಪ್ಪಭಟ್ಟರು ತಮ್ಮ ಸಾಹಿತ್ಯ ಚರಿತ್ರ ಸಂಗ್ರಹದಲ್ಲಿ ಬರೆದಿದ್ದಾರೆ.
ಇವರು ಮದ್ರಾಸಿನಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ಉಪಾಧ್ಯಾಯರಾಗಿದ್ದು "ಆನಂದ ಪ್ರೆಸ್", "ಶ್ರೀವತ್ಸ ಪ್ರೆಸ್'ಗಳಿಗೆ ಸಹಾಯಕರಾಗಿದ್ದು, ತಮಿಳುನಾಡಿನ ಕನ್ನಡಿಗರಿಗೆ ಮಾತ್ರವಲ್ಲ ಕನ್ನಡನಾಡಿನ ಜನತೆಯೆಲ್ಲರಿಗೂ ಪ್ರಾತಃಸ್ಮರಣೀಯರಾಗಿದ್ದುದಕ್ಕೆ ಕಾರಣ ಇವರು ಅನುವಾದಿಸಿ ಪ್ರಕಟಿಸಿದ ರಾಮಾಯಾಣ, ಮಹಾಭಾರತ, ಭಾಗವತ ಪುರಾಣಗಳ ಕನ್ನಡ ಗದ್ಯಾನುವಾದಗಳು. ನವರಾತ್ರಿಯ ಸರಸ್ವತೀ ಪೂಜೆಯಲ್ಲಿ ಎಲ್ಲರ ಮನೆಯಲ್ಲೂ ಇರುತ್ತಿದ್ದುದು ಈ ಪುಸ್ತಕಗಳೇ. ಈ ಅನುವಾದಗಳಿಂದ ಕನ್ನಡಿಗರ ಆಧ್ಯಾತ್ಮಿಕ ನೈತಿಕ ಮತ್ತು ಭಾಷಾಮಟ್ಟವು ಉನ್ನತಿಗೇರಿದವು. ಇವುಗಳ ಪ್ರಕಾಶನಕ್ಕಾಗಿ ರಾಮಾಯಣದ ಹಕ್ಕನ್ನು ಆನಂದ
ಪ್ರೆಸ್‌ನವರಿಗೆ ಮಾರಿ ಅದರಿಂದ ಬಂದ ಹಣದಿಂದಲೇ ಭಾರತ, ಭಾಗವತಗಳನ್ನು ಇವರು ಅಚ್ಚು ಮಾಡಿಸಿದರು. ಇವರು ಸಂಸ್ಕೃತ ವಿದ್ವತ್ ಪರೀಕ್ಷೆ ಮಾಡದೆ ಕನ್ನಡ ಪಂಡಿತ ಪರೀಕ್ಷೆ ಮಾಡಿದ್ದರಿಂದ ಇವರು 'ಪಂಡಿತ ದೇವಶಿಖಾಮಣಿ' ಎಂದೇ ಹೆಸರುವಾಸಿಯಾದರು. 1864ಕ್ಕೆ ಹಿಂದೆ ಸಂಸ್ಕೃತ ವಿದ್ವತ್ ಪರೀಕ್ಷೆಗಳಿರಲಿಲ್ಲ. ಇವರ ಹಿಂದಿನವರಾರೂ ಪರೀಕ್ಷೆ ಬರೆದು
ಪಾಸಾದ ವಿದ್ವಾಂಸರಲ್ಲ. ಸ್ವತಃ ವಿದ್ವತ್ ಗೋಷ್ಠಿಯಲ್ಲಿ, ರಾಜಸಭೆಗಳಲ್ಲಿ, ಹಾಗೂ
ಜನರಲ್ಲಿ ವಿದ್ವಾಂಸರೆನಿಸುತ್ತಿದ್ದರು. 1864ರ ನಂತರ ಹೀಗೆ ಸುಮಾರು ಅರ್ಧ ಶತಮಾನಗಳ ಕಾಲದಲ್ಲಿ ಸಂಸ್ಕೃತ ವಿದ್ದಾಂಸರೆನಿಸಿದ ಕೆಲವೇ ಕೆಲವರಲ್ಲಿ ಅದ್ವಿತೀಯ ಪ್ರತಿಭೆಯ ಮತ್ತು ಪ್ರಾಮಾಣಿಕತೆಯ ಅಳಸಿಂಗಾರಾಚಾರ್ಯರೂ ಒಬ್ಬರು. ಇತರರೆಂದರೆ ಅವರ ತಂದೆಯವರು ಮತ್ತು ಪು.ತಿ.ನ.ರವರ ತಂದೆಯವರಾದ ಜಗ್ಗು ಶಿಂಗಪ್ಪೆಯ್ಕಂಗಾರ್ಯರೂ ಮತ್ತು ಆನೂರಿನ ಅನಂದಾಳ್ವಾರ್ ಸ್ವಾಮಿಗಳ ಶಿಷ್ಯರಾದ ಪಂಡಿತ ಯುವ ಚಕ್ರವರ್ತಿಯವರು ಮಾತ್ರ.
ಇವರ ಚಲುವ ನಾರಾಯಣ ಶತಕವು ಸೋಮೇಶ್ವರ ಶತಕದಂತೆ ಚಲುವಾಗಿದೆ. ಇದರ ಮಾದರಿಯನ್ನು ಜಗ್ಗು ಶಿಂಗಪ್ಪೆಯ್ಕಂಗಾರ್ಯರು ಅನುಸರಿಸಿದ್ದಾರೆ. ಇವರ ಸಂಸ್ಕೃತ ಕವಿತಾಚಾತುರ್ಕಕ್ಕೆ ಅಲಂಕಾರ-ರಸ, ಧ್ವನಿಗಳ ಗಾಂಭೀರ್ಯಕ್ಕೆ ಇವರೇ ಪ್ರಕಟಪಡಿಸಿರುವ ಸ್ವಂತಕೃತಿ "ಪಾರ್ಥಸಾರಥಿ ಶತಕ" ಶತಾಲಂಕಾರ ಗ್ರಂಥವು ಸಾಕ್ಷಿಯಾಗಿದೆ.
ಇವರ ಸಂಗೀತ, ನಾಟ್ಯ, ನಾಟಕ, ಸಾಹಿತ್ಯ, ಕವಿತಾ, ಪ್ರವಚನಗಳನ್ನು ಅನುಭವಿಸುವ ಭಾಗ್ಯ ಕೆಲವು ಕಾಲ ಮೇಲ್ಕೋಟೆಗೆ ಲಭ್ಯವಾಗಿದ್ದು, ಅದರ ಪೂರ್ಣ ಉಪಯೋಗ ಮದರಾಸಿನ ಕನ್ನಡಿಗರಿಗೇ ಸಿಕ್ಕಿತು. ಉಭಯ ಭಾಷಾ ಪಂಡಿತರಾದ ಇವರ ಉದ್ದನೆಯ ವ್ಯಕ್ತಿತ್ವವೂ, ಆಕಾರವೂ ಇವರನ್ನು ನೋಡಿದ್ದ ಅಂದಿನ ಕನ್ನಡಿಗರ ಮನದಲ್ಲಿ ಮರೆಯಲಾಗದಂತಿದ್ದವು. ಇವರು ಸ್ಕೂಲಿನಲ್ಲಿ ಓದುವಾಗ ಬರೆದುಕೊಂಡಿದ್ದ 'ನೋಟ್ಸ್' ಪುಸ್ತಕ, ಇದರಲ್ಲಿ ಬೀಜಗಣಿತ, ಪ್ರಾಣಿಶಾಸ್ತ್ರ, ಭೂಗೋಳಶಾಸ್ತ್ರ, ಇತಿಹಾಸ ಮುಂತಾದ ಪಾಠಗಳ ಟಿಪ್ಪಣಿಗಳು ಇವರ ಹಸ್ತಾಕ್ಷರದ ಜೊತೆಗೆ ಇದೆ. ಇದರಲ್ಲೇ ಚಿಕ್ಕ ದೇವರಾಜ ಒಡೆಯರ ಪ್ರಧಾನಿ ತಿರುಮಲೆಯಾರ್ಯರ ಯದುಗಿರಿ ನಾರಾಯಣಸ್ತವ ಮತ್ತು ಇದಕ್ಕೆ ಅವರ ತಮ್ಮ ಸಿಂಗರಾರ್ಯರು ಮಾಡಿರುವ ವಿಸ್ತೃತವಾದ ವ್ಯಾಖ್ಯಾನವು ಅಳಸಿಂಗರಾಚಾರ್ಯರ ಸ್ವಂತ ಕೈಬರಹದಲ್ಲಿ
ಉಪಲಬ್ದವಿದೆ. ಇದರಲ್ಲೇ ಇವರ ತಂದೆ ತಿರುಮಲೈಂಗಾರ್ಯರು ಬರೆದಿರುವ ಪ್ರಾಸಂಗಿಕ ಶ್ಲೋಕಸಂಗ್ರಹವೂ ಇದೆ. ಇವರು ವಾಸಿಸುತ್ತಿದ್ದ ಮದ್ರಾಸ್‌ನಲ್ಲಿರುವ ತಿರುವಲ್ಲಿಕ್ಕೇಣಿಯ ಮನೆಯ ಮುಂಬಾಗಿಲ ಮೇಲೆ “ವೈರಮುಡಿ ಚೆಲುವರಾಯ” ಗಾರೆ ವಿಗ್ರಹವು ರಾರಾಜಿಸುತ್ತಿತ್ತು. ಇವರು ಬರೆಯುವಾಗಲೆಲ್ಲ ಕುಕ್ಕುಟಾಸನದಲ್ಲಿ ಕುಳಿತು ನೆಲದಮೇಲೆ ಕಾಗದ ಹರಡಿಕೊಂಡು ಬಾಗಿಯೇ ಬರೆಯುತ್ತಿದ್ದರಂತೆ. ಇದು ಪ್ರಾಚೀನರು ತಾಳಪತ್ರದಲ್ಲಿ ಕಂಟಕದಿಂದ ಬರೆಯುತ್ತಿದ್ದ ಭಂಗಿ. ಇವರು ಯಾವಾಗಲೂ ಸ್ನಾನಕ್ಕೆ ಉಗುರು ಬೆಚ್ಚಗಿರುವಷ್ಟು ಬಿಸಿನೀರನ್ನೇ ಉಪಯೋಗಿಸುತ್ತಿದ್ದರು. ಅತಿ ತಣ್ಣೀರೂ, ಅತಿ ಬಿಸಿನೀರೂ ಇವರಿಗಾಗದು. ಹೀಗೇಕೆ ಎಂದು ಕೇಳಿದರೆ ಇದು ಯೋಗಿಗಳಿಗೆ ಹಿತ ಎನ್ನುತ್ತಿದ್ದರಂತೆ. ಇವರ ಅಂತರಂಗದ ಆಚರಣೆಯ ಯೋಗ ಯಾವುದೋ ತಿಳಿಯದು. ಇವರು ಮೇಲುಕೋಟೆಯ ಕಚ್ಚೆ-ಪಂಚೆ, ಕೋಟು, ಮೈಸೂರು ಪೇಟ ಮತ್ತು ಕೋಲು
ಹಿಡಿದು ಕಾಲೇಜಿಗೆ ಹೊರಟರೆ ಬೀದಿಗಳಲ್ಲಿ ಜಗಲಿಯ ಮೇಲೆ ಕುಳಿತ ಹೆಂಗಸರೆಲ್ಲರೂ
ಎದ್ದು ನಮಸ್ಕರಿಸಿ ಕೂರುತ್ತಿದ್ದರಂತೆ.
ಇವರ ಈ ವೈಯಕ್ತಿಕ ವಿಷಯಗಳನ್ನು ಇವರ ಮಗಳು ಭೂಲೋಕಂ ವೇದವಲ್ಲಿಯವರು
ಮತ್ತೂರು ಕೃಷ್ಣಮೂರ್ತಿಯವರಿಗೆ ತಿಳಿಸಿದರಂತೆ.
ಅಳಸಿಂಗರಾಚಾರ್ಯರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಯೋಗಮ್ಮಾಳ್
ಮತ್ತು ವೇದವಲ್ಲಿ. ಇನ್ನೊಬ್ಬರಿಗೆ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು,
ಎಂ.ಡಿ. ತಿರುಮಲೈ, ಎಂ.ಡಿ. ಪಾರ್ಥಸಾರಥಿ, ಎಂ.ಡಿ. ನರಸಿಂಹನ್ ಮತ್ತು ಶ್ರೀರಂಗು,
ರುಕ್ಮಿಣಿ, ರಾಧಾ. ಇವರಲ್ಲಿ ಪಾರ್ಥಸಾರಥಿ ಎಂಬವರು ಸಂಸ್ಕೃತಜ್ಞರಾಗಿ ಆಚಾರ್ಯರ ಸಾಹಿತ್ಯ ಪುಸ್ತಕಗಳಿಗೆ ಜವಾಬ್ದಾರರಾಗಿದ್ದರು.
ಮೇಲುಕೋಟೆಯ ದೊಡ್ಡಯಾಮುನಾಚಾರ್ಯರ ಬೀದಿಯಲ್ಲಿದ್ದ ಇವರ ಮನೆಯ ಶಿಥಿಲವಾದ
ಬಾಗಿಲಿನ ಕಲಾತ್ಮಕ ಒಂದು ಶಿರೋಭಾಗವು ಅಕಾಡೆಮಿ ಆಫ್ ಸಂಸ್ಕೃತ ರಿಸರ್ಚಿನ
ಮ್ಕೂಸಿಯಂನಲ್ಲಿರಬಹುದು.
1940 ಮೇ ತಿಂಗಳ ಅಖಿಲ ಕರ್ನಾಟಕ ಸಂಸ್ಕೃತ ಪಂಡಿತರ ಆರನೆಯ ಸಮ್ಮೇಳನದಲ್ಲಿ ಪ್ರಥಮ ಶ್ರೇಣಿಯಲ್ಲಿ ಭಾಗವಹಿಸಿದ್ದ ಇವರು ಅದೇ ಶ್ರೇಣಿಯಲ್ಲಿದ್ದ ಡಿ.ವಿ.ಜಿ.ಯವರೊಡನೆ ಕನ್ನಡ ಅಭಿವೃದ್ಧಿಯ ಬಗ್ಗೆ ಮಾತುಕತೆ ನಡೆಸಿದ್ದನ್ನು
ಡಿ.ವಿ.ಜಿ.ಯವರು ಜ್ಞಾಪಿಸಿಕೊಳ್ಳುತ್ತಿದ್ದರು.
ಈ ಪಂಡಿತ ಮಂಡಲಿಯ ನೂರಾರು
ಪಂಡಿತರ ಸಾಮೂಹಿಕ ಫೋಟೋ ಮೇಲುಕೋಟೆಯ ಸಂಸ್ಕೃತ ಕಾಲೇಜಿನಲ್ಲಿದೆ.
ಅಳಸಿಂಗಾಚಾರ್ಯರು 1940ರ ಡಿಸೆಂಬರ್ 5ರಂದು ತಮ್ಮ 64ನೇ ವಯಸ್ಸಿನಲ್ಲಿ ತೀರಿಕೊಂಡರು.
ಅಳಸಿಂಗಾಚಾರ್ಯರ ಅನುವಾದ ಶೈಲಿ ಮೂಲಕ್ಕೆ ಅತಿಹತ್ತಿರವಾಗಿ ಶ್ಲೋಕಗಳ ಪದಾನ್ವಯಕ್ಕೆ ತಕ್ಕಂತೆ ಇದ್ದು, ಪ್ರತಿಪದಾರ್ಥ ಮಾತ್ರ ಎನಿಸದಷ್ಟು ನವಿರಾಗಿದ್ದೂ, ಸಮಸ್ತ ವಾಕ್ಯಾರ್ಥ ಭಾವಾರ್ಥಗಳನ್ನೂ ಸುಲಭವಾಗಿ ತಿಳಿಸಿ, ಸಂಸ್ಕೃತಕ್ಕೆ ಮಾರುಹೋಗದೆ ಕನ್ನಡದ ನೈಜತೆ,
ಭಾಷಾಮಾರ್ಯದೆಗಳನ್ನುಳಿಸಿಕೊಂಡಿದೆ. ಉದಾ: ಮಹಾಭಾರತದಲ್ಲಿ ಭಗವದ್ಗೀತೆಯ
ಅನುವಾದ. ನ್ಯೂನಾತಿರೇಕಗಳಿಲ್ಲದ ಯಥಾವತ್ ಅನುವಾದ ಇವರದು.
ಸ್ವಪ್ನವಾಸವದತ್ತ, ಪಾಂಚರಾತ್ರ ಮುಂತಾದವುಗಳ ಅನುವಾದ, ಸ್ವತಂತ್ರವಾದ ಶ್ರೀಮತಿ ಪರಿಣಯ, ಪಂಚಭಾಷಾಪ್ರಹಸನ ಮುಂತಾದ ಕನ್ನಡ ನಾಟಕಗಳೂ, ಕೆಲವು ಕೀರ್ತನೆಗಳೂ, ಬಿಡಿಪದ್ಯಗಳೂ ಇವರ ಕೃತಿಗಳಾಗಿವೆ. ಶ್ರೀಮತಿ ಪರಿಣಯವನ್ನು ಮಣಿಮಾಲಿನೀ ಕರ್ನಾಟಕ ನಾಟಕ ಸಭೆಯವರು ಅನೇಕ ಸಲ ಆಡಿದ್ದಾರೆ. ಪಂಚಭಾಷಾ ಪ್ರಹಸನವನ್ನು ಮದರಾಸಿನ ಕನ್ನಡಿಗರು ಅನುಭವಿಸಿದ್ದಾರೆ.
ಇವರ ಜೀವಿತಾವಧಿಯ ಪ್ರಧಾನ ಮಹತ್ಕಾರ್ಯವೆಂದರೆ ರಾಮಾಯಾಣ, ಭಾರತ, ಭಾಗವತಗಳ ಕನ್ನಡಾನುವಾದ ಮತ್ತು ಸುಂದರವಾದ ಪ್ರಕಾಶನ.
ದೇವಶಿಖಾಮಣಿ ತಿರುಮಲೈಂಗಾರ್ ಮತ್ತು ದೇವಶಿಖಾಮಣಿ ಅಳಸಿಂಗಾರಾಚಾರ್ಯರ ಕುರಿತಾದ ಲೇಖನಗಳು ಮೇಲುಕೋಟೆಯ ಅರೆಯರ್ ಶ್ರೀರಾಮಶರ್ಮ ಅವರ 'ಜ್ಞಾನಮಂಟಪದ ಕೆಲವು ಹಿರಿಯರು' ಎಂಬ ಪ್ರಕಟಿತ ಗ್ರಂಥದಲ್ಲಿದೆ. ನನಗೆ ಈ ಮಾಹಿತಿ ದಕ್ಕಿದ್ದು ಭಾರತೀಯ ವಿದ್ಯಾಭವನವು ಪ್ರಕಟಿಸಿರುವ ನನ್ನಲ್ಲಿರುವ ಮಹಾಭಾರತಗಳ ಸಂಪುಟಗಳಲ್ಲಿ.
On the birth anniversary of Pandit Devashikhamani Alasingacharya
ಕಾಮೆಂಟ್‌ಗಳು