ಕಮಲಾದೇವಿ
ಕಮಲಾದೇವಿ ಚಟ್ಟೋಪಾಧ್ಯಾಯ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರಧಾರಿಗಳೂ ಹಾಗೂ ಸ್ವಾತಂತ್ರ್ಯಾನಂತರ ಸಾಮಾನ್ಯ ಜನರ ಬದುಕಿಗಾಗಿ ಮತ್ತು ಕಲಾಪೋಷಣೆಗಾಗಿ ದುಡಿದವರಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಮುಖರು.
ಕಮಲಾದೇವಿ ಚಟ್ಟೋಪಾಧ್ಯಾಯ 1903ರ ಏಪ್ರಿಲ್ 3ರಂದು ಮಂಗಳೂರಿನಲ್ಲಿ ಜನಿಸಿದರು. ಕಮಲಾದೇವಿ ಅವರ ತಂದೆ ಅನಂತಯ್ಯ ಧಾರೇಶ್ವರ ಮಂಗಳೂರಿನ ಜಿಲ್ಲಾ ಕಲೆಕ್ಟರ್ ಆಗಿದ್ದವರು. ತಾಯಿ ಗಿರಿಜಾಬಾಯಿ. ಕಮಲಾದೇವಿ ಅವರಿಗೆ ಇನ್ನೂ 7 ವರ್ಷ ಪ್ರಾಯದ ಸಂದರ್ಭದಲ್ಲಿ ಅವರ ತಂದೆ ತಿರಿಕೊಂಡಿದ್ದರು.
ಕಮಲಾದೇವಿ ಮಂಗಳೂರಿನ ಕೆಥೊಲಿಕ್ ಕಾನ್ವೆಂಟ್ ಮತ್ತು ಸೇಂಟ್ ಮೇರೀಸ್ ಕಾಲೇಜಿನಲ್ಲೂ ಆಮೇಲೆ ಲಂಡನ್ನಿನ ಬೆಡ್ಫರ್ಡ್ ಕಾಲೇಜು ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲೂ ವಿದ್ಯಾಭ್ಯಾಸ ಮಾಡಿದರು.
ಬಾಲ್ಯದಲ್ಲೆ ಕಮಲಾದೇವಿ ಅವರ ವಿವಾಹವಾಗಿ ಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ವೈಧವ್ಯ ಪ್ರಾಪ್ತವಾಯಿತು. ಹಳೆಯ ಕಂದಾಚಾರವನ್ನು ಮುರಿದು ಸರೋಜಿನಿ ನಾಯಡು ಅವರ ಸಹೋದರ ಕವಿ ನಾಟಕಕಾರ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರನ್ನು ಮದುವೆಯಾದರು. ಪತಿಯೊಂದಿಗೆ ಯುರೋಪಿನಲ್ಲಿ ಪ್ರವಾಸಮಾಡಿ ಕಲಾವಿದರನ್ನು ಸಂದರ್ಶಿಸುತ್ತ ರಂಗಭೂಮಿಯ ಅಧ್ಯಯನ ಮಾಡಿದರು. ಅದರ ಪ್ರಯೋಗತಂತ್ರವನ್ನು ಕಲಿತರು. ಅಲ್ಲಿ ಬೆಡ್ ಪೋರ್ಡ್ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಅಧ್ಯಯನ ಮಾಡಿದ ಅವರು ಅಲ್ಲಿ 'ಎ ಟ್ರೂ ಕರ್ಮಯೋಗಿ' ಎಂಬ ಪುಸ್ತಕವನ್ನು ಬರೆದರು.
1923ರ ಸಂದರ್ಭ ಭಾರತಕ್ಕೆ ಬಂದ ಕಮಲಾದೇವಿ ದಂಪತಿಗಳು ಮಹಾತ್ಮಾಗಾಧಿ ಅವರ ಸ್ವಾಂತಂತ್ರ್ಯ ಹೋರಾಟದಿಂದ ಪ್ರೇರಿತರಾಗಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ತಾವೇ ಮುಖ್ಯಪಾತ್ರಗಳನ್ನು ವಹಿಸಿ, ಕಲಾತ್ಮಕ ನಾಟಕಗಳನ್ನು ರಂಗಭೂಮಿಯ ಮೇಲೆ ತರಲು ತಮ್ಮ ಪತಿಯೊಂದಿಗೆ ಶ್ರಮಿಸಿದರು. ಗಾಂಧೀಜಿ, ಜವಹರಲಾಲ್ ನೆಹರೂ, ಸರೋಜಿನಿ ನಾಯ್ಡು, ಕಸ್ತೂರ ಬಾ ಮುಂತಾದವರ ಪ್ರಭಾವ ಕಮಲಾದೇವಿಯ ಮೇಲೆ ವಿಶೇಷವಾಗಿ ಆಯಿತು.
ಕಮಲಾದೇವಿ ಕಾಲೇಜು ವಿದ್ಯಾಭ್ಯಾಸ ತೊರೆದು ಅಸಹಕಾರ ಚಳವಳಿಯಲ್ಲಿ ಧುಮುಕಿದರು. ಯರವಾಡಾ, ಬೆಳಗಾಂವಿ ಮತ್ತು ವೆಲ್ಲೂರುಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದರು. ಅನಂತರವೂ ಅನೇಕ ಸಾರಿ ಸೆರೆಮನೆ ಶಿಕ್ಷೆಗೆ ಗುರಿಯಾದರು. ಕರ್ನಾಟಕದ ಯುವಕರಲ್ಲಿ ರಾಷ್ಟ್ರಸೇವೆಯ ಜಾಗೃತಿ ಉಂಟುಮಾಡುವುದರಲ್ಲಿ ಇವರ ಪಾತ್ರ ಹಿರಿದು. ಕೃಷಿಕರ ಸಮಸ್ಯೆಗಳ ಪರಿಹಾರವಿಲ್ಲದೆ ಜನತೆಯ ಉದ್ಧಾರ ಸಾಧ್ಯವೆಂದು ನಂಬಿ ಕೃಷಿ ಕ್ಷೇತ್ರದಲ್ಲಿ ತೀವ್ರ ಆಸಕ್ತಿ ತಳೆದರು. ಜಮೀನುದಾರಿ ಪದ್ಧತಿ ರದ್ದಾಗಿ ಭೂಮಿ ಸಮಾನವಾಗಿ, ನ್ಯಾಯಸಮ್ಮತವಾಗಿ ಹಂಚಿಕೆಯಾಗಬೇಕೆಂಬುದು ಇವರ ಆಶಯವಾಗಿತ್ತು. ಕಾಂಗ್ರೆಸ್ಸಿನ ಭೂಸುಧಾರಣೆಯ ಕ್ರಮಗಳು ಇವರಿಗೆ ಸಮರ್ಪಕವೆನಿಸಲಿಲ್ಲ.
ಕಮಲಾದೇವಿಯವರು 1948ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸೇರಿದರು. ಬಡತನದ ವಿರುದ್ಧ ಘೂೕಷಣೆಗಳನ್ನು ಕೂಗುವುದಕ್ಕಿಂತ ಸುಖಮಯ ಮಾನವ ಸಂಬಂಧಗಳಿಗಾಗಿ ಕ್ರಿಯಾ ಶೀಲವಾದ ಕಳಕಳಿಯೇ ಸಮಾಜವಾದದ ಸತ್ತ್ವವೆಂಬುದು ಇವರ ನಂಬಿಕೆ. ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ವಿರುದ್ಧ ಹೋರಾಡುವುದಕ್ಕಾಗಿ ಕಾಂಗ್ರೆಸ್ಸನ್ನು ಬಲಪಡಿಸುವ ಕರೆ ಕೊಟ್ಟ ಇವರು ಸಮಾಜವಾದದ ಧ್ಯೇಯ ನಿರೂಪಣೆಯಿಂದ ಒಮ್ಮೆಲೆ ಭಾರತದ ಮುಂಚೂಣಿ ನಾಯಕರ ಮಟ್ಟಕ್ಕೇರಿದರು. ಕಾರ್ಮಿಕರ ಹಿತರಕ್ಷಣೆಗಾಗಿ ಕಾರ್ಮಿಕ ಸಂಸ್ಥೆಗಳಲ್ಲಿ ಸಂಘಟನೆಗೂ ಚಳವಳಿಗೂ ನಾಯಕತ್ವ ನೀಡಿ ಉತ್ತೇಜನ ನೀಡಿದರು.
ಪಾಕಿಸ್ತಾನದಿಂದ ಬಂದ 50,000 ನಿರಾಶ್ರಿತರಿಗಾಗಿ ದಿಲ್ಲಿಯಿಂದ ಹೊರಗೆ ಫರೀದಾಬಾದ್ ಇಂಡಸ್ಟ್ರಿಯಲ್ ಟೌನ್‌ಶಿಪ್ ನಿರ್ಮಿಸುವಲ್ಲಿ ಕಮಲಾದೇವಿ ಪ್ರಮುಖ ಪಾತ್ರ ವಹಿಸಿದ್ದರು. ಕೈಮಗ್ಗ ಸೀರೆ, ಸಾಂಪ್ರದಾಯಿಕ ಆಭರಣ ತೊಡುತ್ತಿದ್ದ ಕಮಲಾ ದೇವಿ, ಥಿಯೇಟರ್ ಕ್ರಾಫ್ಟ್ ಮ್ಯೂಸಿಯಂ ನಿರ್ಮಾಣಕ್ಕಾಗಿ ಮಂಗಳೂರಿನ ಆಸ್ತಿಯನ್ನೇ ಮಾರಿದ್ದರು.
ಕಮಲಾದೇವಿ ಭಾರತದ ಮಹಿಳಾ ಆಂದೋಲನದ ಪ್ರಮುಖ ಮುಂದಾಳಾಗಿ ದೇಶಾದ್ಯಂತ ಸಂಚರಿಸಿ, ಭಾಷಣಗಳಿಂದ, ಸಂದರ್ಶನಗಳಿಂದ ಸ್ಫೂರ್ತಿ ನೀಡಿ, ಅಖಿಲ ಭಾರತ ಮಹಿಳಾ ಸಮ್ಮೇಳನವನ್ನು ಬೆಳೆಸಿದರು. ಬಿಳಿಯ ಒರಟು ಖಾದಿಗೆ ಕಲಾತ್ಮಕತೆ ತಂದುಕೊಟ್ಟು, ಅರಿವೆಗೆ ಬಣ್ಣ ಹಾಕುವ ಭಾರತೀಯ ಕಲೆಗೆ ಸ್ಫೂರ್ತಿ ನೀಡಿದರು. ಯಾಂತ್ರೀಕರಣದಿಂದ ಕರಕುಶಲ ಕೈಗಾರಿಕೆಗೆ ತೊಂದರೆಯಾಗುವುದನ್ನು ಗಮನಿಸಿ ಹಲವು ಕರಕುಶಲ ಸಂಗ್ರಹಾಲಯಗಳನ್ನು ಸ್ಥಾಪಿಸಿದರು. ಅಲ್ಲದೆ ಕಲೆ ಸಂಗೀತ ನಾಟಕಗಳಿಗೆ ಆದ್ಯತೆ ನೀಡಿದ ಇವರು ಅದರ ಏಳಿಗೆಗಾಗಿ ಶ್ರಮಿಸಿದ್ದರು.
ಕಮಲಾದೇವಿ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಸಂಗೀತ ಅಕಾಡೆಮಿ, ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಮ್ ಹಾಗೂ ಕ್ರ್ಯಾಫ್ಟ್ಸ್ ಕೌಂನ್ಸಿಲ್ ಆಫ್ ಇಂಡಿಯಾವನ್ನು ಸ್ಥಾಪಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ, ಅಖಿಲ ಭಾರತ ಮಹಿಳಾ ಸಮ್ಮೇಳನದ ಸಂಘಟನಾ ಕಾರ್ಯದರ್ಶಿತ್ವ, ಉಪಾಧ್ಯಕ್ಷತೆ ಮತ್ತು ಅಧ್ಯಕ್ಷತೆ, ಭಾರತೀಯ ಸಹಕಾರ ಯೂನಿಯನ್ನಿನ ಅಧ್ಯಕ್ಷತೆ, ವರ್ಲ್ಡ್ ಕ್ರಾಫ್ಟ್ ಕೌನ್ಸಿಲ್ನ ಉಪಾಧ್ಯಕ್ಷತೆ, ಅಖಿಲ ಭಾರತ ಕರಕುಶಲ ಮಂಡಳಿಯ ಅಧ್ಯಕ್ಷತೆ, ಅಖಿಲ ಭಾರತ ಡಿಸೈನ್ ಸೆಂಟರಿನ ಅಧ್ಯಕ್ಷತೆ ಮುಂತಾದವು ಕಮಲಾದೇವಿಯವರು ನಿರ್ವಹಿಸಿದ ಕೆಲವು ಅಧಿಕಾರಗಳು.
ಕಮಲಾದೇವಿ ಅವರು ಇಂಗ್ಲಿಷಿನಲ್ಲಿ ಹತ್ತು ಪುಸ್ತಕಗಳನ್ನು ಬರೆದಿದ್ದಾರೆ: ಭಾರತೀಯ ಕರ ಕುಶಲ ಕೈಗಾರಿಕೆಗಳು, ಭಾರತೀಯ ಕಂಬಳಿಗಳು ಮತ್ತು ನೆಲಾವರಣಗಳು, ಸಮಾಜವಾದ ಮತ್ತು ಸಮಾಜ, ಭಾರತೀಯ ಮಹಿಳಾ ಜಾಗೃತಿ, ರಾಷ್ಟ್ರೀಯ ರಂಗಭೂಮಿ ಮುಂತಾದವು ಇವರ ವೈವಿಧ್ಯಪುರ್ಣ ಆಸಕ್ತಿಯನ್ನು ಪ್ರತಿ ಫಲಿಸುತ್ತವೆ. ಸಾಮಾಜಿಕ ಧುರೀಣತ್ವಕ್ಕಾಗಿ ವಾಟ್ಟುಮಲ್ (1962) ಮತ್ತು ಮ್ಯಾಗ್ಸೇಸೇ (1966) ಪ್ರಶಸ್ತಿಗಳನ್ನು ಗಳಿಸಿದರು. 1970ರಲ್ಲಿ ಶಾಂತಿ ನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ದೇಶಿಕೋತ್ತಮಾ ಪ್ರಶಸ್ತಿ ದತ್ತವಾಯಿತು. ಭಾರತ ಸರ್ಕಾರ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
ಕಮಲಾದೇವಿ ಚಟ್ಟೋಪಾಧ್ಯಾಯ ಅವರು ತಮ್ಮ 85ನೇ ವಯಸ್ಸಿನಲ್ಲಿ 1988 ವರ್ಷದ ಅಕ್ಟೋಬರ್ 29 ರಂದು ನಿಧನರಾದರು.
On the birth anniversary of Kamaladevi Chattopadhyay
ಕಾಮೆಂಟ್‌ಗಳು